ನುಡಿನಮನ| ಕುವೆಂಪು ಹಾಡುಗಳಿಗೆ ಜೀವತುಂಬಿದ್ದ ಸಿರಿಕಂಠ ಸ್ತಬ್ಧ

subbanna with kuvempu

ಕುವೆಂಪು ಅವರ ಬಗೆಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ವಿಶೇಷ ಮಮತೆ ಹಾಗೂ ಗೌರವ. ಒಂದು ಸಂದರ್ಶನದಲ್ಲಿ ಅವರು ಕುವೆಂಪು ಬಗೆಗೆ ಮಾತನಾಡುತ್ತ  “ಅವರ ಕಾವ್ಯದಲ್ಲಿ ಐದು ಪ್ರಮುಖ ಕಾಳಜಿಗಳಿದ್ದವು. ಅವೆಂದರೆ- ಪ್ರಕೃತಿ ಪ್ರೇಮ, ಅಧ್ಯಾತ್ಮ, ನಾಡು-ನುಡಿಯ ಬಗೆಗೆ ಪ್ರೀತಿ, ವ್ಯವಸ್ಥೆ ಕುರಿತು ಆಕ್ರೋಶ, ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆ" ಎಂದಿದ್ದರು

ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ನಗರ ಎಂಬ ಸಣ್ಣ ಸ್ಥಳದಲ್ಲಿ 1938ರಲ್ಲಿ ಗಣೇಶರಾಯರು ಮತ್ತು ರಂಗನಾಯಕಿ ದಂಪತಿಯರ ಮಗನಾಗಿ ಜನಿಸಿದ ಜಿ ಸುಬ್ರಹ್ಮಣ್ಯಂ ಸಂಗೀತ ಕ್ಷೇತ್ರದಲ್ಲಿ ಶಿವಮೊಗ್ಗ ಸುಬ್ಬಣ್ಣರಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದುದರ ಹಿಂದೆ ಸ್ವರಲಯ ಸಂಚಾರದ ಶ್ರಮ ಹಾಗೂ ಸಾಧನೆಯ ಕಥೆಯಿದೆ. 

Eedina App

ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಮೊದಲು ತಮ್ಮ ಅಜ್ಜ ಶಾಮಣ್ಣ ನಂತರ ಎಂ ಪ್ರಭಾಕರ ಅವರ ಬಳಿ ಮಾಡಿದರು. ಹೆಸರುವಾಸಿ ಸುಗಮ ಸಂಗೀತ ಗಾಯಕಿ ಬಿ ಕೆ ಸುಮಿತ್ರಾ ಕೆಲವು ವರ್ಷಗಳ ಕಾಲ ಇವರ ಜೊತೆ ಸಂಗೀತಾಭ್ಯಾಸದಲ್ಲಿ ಜೊತೆಗಾರ್ತಿಯಾಗಿದ್ದರು. ಬಿ ಎ, ಬಿ ಕಾಂ, ಎಲ್‌ಎಲ್‌ಬಿ ಪದವಿಯನ್ನು ಪಡೆದು ವಕೀಲವೃತ್ತಿಯಲ್ಲಿ ತೊಡಗಿದರು. ತರುವಾಯ ನೋಟರಿಯೂ ಆಗಿದ್ದರು.

ಕರ್ನಾಟಕದ ಸುಗಮ ಸಂಗೀತದ ಕ್ಷೇತ್ರಕ್ಕೆ ಕಾಳಿಂಗ ರಾವ್‌, ಮೈಸೂರು ಅನಂತಸ್ವಾಮಿ, ಬಿ ಕೆ ಸುಮಿತ್ರಾ, ಕಸ್ತೂರಿ ಶಂಕರ್‌ ಮತ್ತು ಇನ್ನು ಅನೇಕ ಖ್ಯಾತ ಗಾಯಕ-ಗಾಯಕಿರಂತೆ ಶಿವಮೊಗ್ಗ ಸುಬ್ಬಣ್ಣ ಅನುಪಮ ಕೊಡುಗೆಗಳನ್ನು ನೀಡಿದರು. 1970-80ರ ದಶಕ ಸುಗಮ ಸಂಗೀತದ ಪರ್ವಕಾಲ ಎನ್ನಬಹುದು. ಶಿಶುನಾಳ ಷರೀಫ, ಬೇಂದ್ರೆ, ಕುವೆಂಪು, ಕೆ ಎಸ್‌ ನರಸಿಂಹ ಸ್ವಾಮಿ, ಜಿ ಎಸ್‌ ಶಿವರುದ್ರಪ್ಪ, ನಿಸಾರ್‌ ಅಹಮ್ಮದ್‌, ಎನ್‌ ಎಸ್‌ ಲಕ್ಷ್ಮೀನಾರಾಯಣ ಭಟ್ಟ ಮತ್ತಿತರ ಕವಿಗಳ ಕವನಗಳು ನಮ್ಮ ರಾಜ್ಯದ ಮನೆಮನೆಗಳಲ್ಲಿ ರಾರಾಜಿಸಲು ಸುಗಮ ಸಂಗೀತ ಹಾಡುಗಾರರ ಪಾಲು ದೊಡ್ಡದು.

AV Eye Hospital ad

1978ರಲ್ಲಿ ಮೂಡಿ ಬಂದ ʼಕಾಡು ಕುದುರೆʼ ಎಂಬ ಕನ್ನಡ ಚಲನಚಿತ್ರದ ಕಥೆಯನ್ನು ಬರೆದು, ಅದರ ನಿರ್ದೇಶನ ಹಾಗೂ ಸಂಗೀತ ನಿರ್ದೇಶನವನ್ನು ಕವಿ-ನಾಟಕಕಾರ ಚಂದ್ರಶೇಖರ ಕಂಬಾರರು ನಿರ್ವಹಿಸಿದ್ದರು. ಇವರೇ ಈ ಚಲನಚಿತ್ರದ ʼಕಾಡು ಕುದುರೆ ಓಡಿ ಬಂದಿತ್ತ….” ಎಂಬ ಶೀರ್ಷಿಕೆಯ ಗೀತೆಯನ್ನು ಬರೆದಿದ್ದರು. ಇದನ್ನು ಶಿವಮೊಗ್ಗ ಸುಬ್ಬಣ್ಣ ಹಾಡಿದ್ದರು. ಕನ್ನಡ ಚಲನಚಿತ್ರರಂಗದಲ್ಲಿ ಪ್ರಥಮ ಬಾರಿಗೆ ಈ ಹಾಡಿಗೆ ರಾಷ್ಟ್ರೀಯ ರಜತ ಕಮಲ ಪ್ರಶಸ್ತಿ ಲಭ್ಯವಾಯಿತು.  

ಶಿವಮೊಗ್ಗ ಸುಬ್ಬಣ್ಣ ಹಾಡಿದ ಶಿಶುನಾಳ ಷರೀಫರ ʼ ಕೋಡುಗನ ಕೋಳಿ ನುಂಗಿತ್ತಾ..ʼ, ʼಅಳಬೇಡಾ ತಂಗಿ ಅಳಬೇಡಾ….ʼ, ʼಬಿದ್ದೀಯಬ್ಬೇ ಮುದುಕಿ….ʼ, ಕುವೆಂಪು ಅವರ ʼ ಆನಂದಮಯ ಈ ಜಗಹೃದಯ…ʼ,ʼ ಓ ನನ್ನ ಚೇತನ…, ‘ ʼಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು….ʼ, ʼಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ…ʼ  ಮುಂತಾದ ಕವನಗಳು, ʼ ಚಿಂತೆ ಏತಕೆ ಗೆಳತಿʼ, ʼಮೊದಲು ಮಾನವನಾಗುʼ, ʼಜಾತ್ರೆʼ, ʼ ಮಾನವನೆದೆಯಲಿʼ,ʼ ಭಾವಗಂಧರ್ವರು ಮಾಲಿಕೆಯ ಒಮ್ಮೆ ಹೂದೋಟದಲ್ಲಿʼ, ʼಹಾಕಿದ ಜನಿವಾರವʼ ಇತ್ಯಾದಿ ಧ್ವನಿಸುರುಳಿಗಳ ಅವರ ಭಾವಗೀತೆಗಳು ಶೋತೃಗಳ ಭಾವಲೋಕವನ್ನು ಮಧುರವಾಗಿ ಆವರಿಸಿದ್ದವು.

subbanna

ಕುವೆಂಪು ಅಭಿಮಾನಿ

ರಾಷ್ಟ್ರಕವಿ ಕುವೆಂಪುರವರ ಬಗೆಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ವಿಶೇಷ ಮಮತೆ ಹಾಗೂ ಗೌರವವಿದ್ದವು.  ಒಂದು ಸಂದರ್ಶನದಲ್ಲಿ ಅವರು ಕುವೆಂಪು ಬಗೆಗೆ ಮಾತನಾಡುತ್ತ  “ಅವರ ಕಾವ್ಯದಲ್ಲಿ ಐದು ಪ್ರಮುಖ ಕಾಳಜಿಗಳಿದ್ದವು.  ಅವೆಂದರೆ- ಪ್ರಕೃತಿ ಪ್ರೇಮ, ಅಧ್ಯಾತ್ಮ, ನಾಡು-ನುಡಿಯ ಬಗೆಗೆ ಪ್ರೀತಿ, ವ್ಯವಸ್ಥೆ ಕುರಿತು ಆಕ್ರೋಶ ಮತ್ತು ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆ. ಈ ಕಾರಣದಿಂದ ನನಗೆ ಅವರ ಕಾವ್ಯವೆಂದರೆ ಇಷ್ಟ. ಅವರಲ್ಲಿ ಪ್ರಕೃತಿ ಪ್ರೇಮದ ಜೊತೆಗೆ ಸಾಮಾಜಿಕ ಕಾಳಜಿಯೂ ಅಡಕಗೊಂಡಿದ್ದವು ಎಂದಿದ್ದರು.

ಹುಟ್ಟಿನಿಂದ ಯಾರೂ ಮೇಲಲ್ಲ; ಕೀಳೂ ಅಲ್ಲ. ಯೋಗ್ಯತೆಯಿಂದ ವ್ಯಕ್ತಿಯೊಬ್ಬ ದೊಡ್ಡವನಾಗುತ್ತಾನೆ ಎಂದರು ಕುವೆಂಪು. ʼಬಾಗಿಳೊಲು ಕೈ ಮುಗಿದು ಒಳಗೆ ಬಾ ಯಾತ್ರಿಕನೇ ……..ʼ ಗೀತೆ ಮೇಲ್ನೋಟಕ್ಕೆ ದೇವಾಲಯವೊಂದರ ಪ್ರವೇಶಕ್ಕೆ ಆಹ್ವಾನವೆನಿಸುವಂತಿದೆ. ಆದರೆ ಅದು ದೇಗುಲ ಸಂಸ್ಕೃತಿಗೆ ವಿರುದ್ಧವಾದ ಗೀತೆ.  ತಮ್ಮ ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಕುವೆಂಪು ಈ ಗೀತೆಯನ್ನು ಬರೆದರು.ʼ ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ II ಕರ್ಪೂರದಾರತಿಯ ಜ್ಯೋತಿ ಇಲ್ಲ…..ʼ, ಸೋಮನಾಥಪುರದ ದೇವಾಲಯವನ್ನು ವೀಕ್ಷಿಸಿ ಅವರು ಈ ಸಾಲುಗಳನ್ನು ಬರೆದರು.  ಇಲ್ಲಿ ದೇವರಿಗೂ ಮತ್ತು ಭಕ್ತನ ನಡುವೆ ದಳ್ಳಾಳಿ ಇಲ್ಲ. ಶಿಲ್ಪಕಲೆಯಲ್ಲೇ ದೇವರ ಸಾನಿಧ್ಯ ಇದೆ ಎಂದು ಅವರು ಧ್ವನಿಸಿದ್ದಾರೆ. ನಾಡು-ನುಡಿಯ ಬಗೆಗೆ ಬರೆದ ʼಬಾರಿಸು ಕನ್ನಡ ಡಿಂಡಿಮವ ಕರ್ನಾಟಕ ಹೃದಯ ಶಿವ…ʼಎಂಬ ಗೀತೆ ಕನ್ನಡಿಗರನ್ನು ಎಚ್ಚರಿಸುವಂಹದ್ದು. 

ನಾವು ಹೆಚ್ಚಾಗಿ ನವೆಂಬರ್‌ ಕನ್ನಡಿಗರಾಗುತ್ತಿದ್ದೇವೆ.  ನಿದ್ರೆಯಲ್ಲಿರುವವರನ್ನು, ಸತ್ತಂತಿರುವವರನ್ನು ಎಚ್ಚರಿಸಬೇಕು ಎಂಬ ಈ ಗೀತೆಯ ಸಾಲುಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ.  ಅಲ್ಲದೆ, ನಾಡು-ನುಡಿಗಳಿಗೆ ಮಾತ್ರ ಅವರ ಕಾಳಜಿ ಸೀಮಿತವಾಗಿರಲಿಲ್ಲ.  ʼಸರ್ವೋದಯವಾಗಲಿ ಎಲ್ಲರಿಗೂʼ ಎಂಬುದು ಅವರ ವಿಸ್ತೃತ ನೆಲೆಯ ಆಶಯವಾಗಿತ್ತು” ಎಂದಿದ್ದರು.  ಶಿವಮೊಗ್ಗ ಸುಬ್ಬಣ್ಣ ಅವರ ಲೋಕದೃಷ್ಟಿ ಕುವೆಂಪುರವರ ವಿಶ್ವಮಾನವ ಕಲ್ಪನೆಯಿಂದ ಪ್ರಭಾವಗೊಂಡಿತ್ತು. 1970ರ ದಶಕದ ಕೊನೆಯ ವರ್ಷಗಳಲ್ಲಿ ಎಂಎಸ್‌ ಐಎಲ್‌ ಸಂಸ್ಥೆ ಭಾವಗೀತೆಗಳ ವಿಶೇಷ ಕಾರ್ಯಕ್ರಮವನ್ನು ಆಕಾಶವಾಣಿಯಲ್ಲಿ ಆಯೋಜಿಸಿತ್ತು. ಇತರ ಗಾಯಕರ ಜೊತೆ ಶಿವಮೊಗ್ಗ ಸುಬ್ಬಣ್ಣ ಕೂಡ ಈ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದ್ದರು.

ಅವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಷ್ಠಿತ ಶಿಶುನಾಳ ಷರೀಫ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಅಕಾಡೆಮಿಯ ʼಕರ್ನಾಟಕ ಕಲಾ ತಿಲಕʼ ಪ್ರಶಸ್ತಿ, 2003ರಲ್ಲಿ ಬೆಂಗಳೂರಿನ ಗಾಯನ ಸಮಾಜದ ವರ್ಷದ ಕಲಾವಿದ ಪ್ರಶಸ್ತಿ ಮತ್ತು ಇತರ ಅನೇಕ ಪ್ರಶಸ್ತಿಗಳು ಲಭಿಸಿದ್ದವು. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ 2008ರಲ್ಲಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿತ್ತು.

ಇದನ್ನು ಓದಿದ್ದೀರಾ? ರಾಷ್ಟ್ರೀಯ ಶಿಕ್ಷಣ ನೀತಿ| ಪ್ರಭುತ್ವದ ಹಿತಾಸಕ್ತಿ V/S ಸಾರ್ವಜನಿಕ ಹಿತಾಸಕ್ತಿ

ಶಿವಮೊಗ್ಗ ಸುಬ್ಬಣ್ಣ ತಮ್ಮ ಸುಮಾರು ಐದು ದಶಕಗಳ ಸಕ್ರಿಯ ಗಾಯನದ ಅವಧಿಯಲ್ಲಿ ಕುವೆಂಪುರವರ ಧ್ವನಿಯೆಂದೇ ಸುಗಮ ಸಂಗೀತದ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟಿದ್ದರು. ಕುವೆಂಪುರವರು ಸಹ  ಸುಬ್ಬಣ್ಣನವರೇ ತಮ್ಮ ಕವನಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡುತ್ತಾರೆಂದು ಹೇಳಿದ್ದರು. ಅಲ್ಲದೇ, ಯಾರಾದರೂ ಭಾವಗೀತೆಗಳನ್ನು ಹಾಡಿದರೇ ಸುಬ್ಬಣ್ಣರಂತೆ ಹಾಡಬೇಕು ಎಂಬುದು ಅವರ ನೇರ ಅಭಿಮತವಾಗಿತ್ತು. ಕುವೆಂಪುರವರ ಕೃತಿಗಳನ್ನು ಆಳವಾಗಿ ಓದಿದ್ದ ಸುಬ್ಬಣ್ಣ, ಅವರ ಕಾವ್ಯದಲ್ಲಿದ್ದ ಆಧ್ಯಾತ್ಮಿಕ ಹಾಗೂ ತಾತ್ವಿಕ ಆಯಾಮಗಳಿಗೆ ಸಂಗೀತದ ಅನುಭೂತಿಯ ಸ್ಪರ್ಶವನ್ನು ನೀಡಿದರು. 1990ರ ದಶಕದಲ್ಲಿ ರಂಗಭೂಮಿಯ ಜನಪ್ರಿಯ ಕಲಾವಿದರಾಗಿದ್ದ ಸಿ ಆರ್ ಸಿಂಹ ' ರಸಋಷಿ ಕುವೆಂಪು ದರ್ಶನ ' ಎಂಬ ನಾಟಕದಲ್ಲಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದರು. ಇದಕ್ಕೆ ಸಂಗೀತ ನಿರ್ದೇಶನವನ್ನು ನೀಡಿದ್ದವರು ಸುಬ್ಬಣ್ಣ. ಹೀಗೆ ಒಬ್ಬ ಮಹಾಕವಿ ಮತ್ತು ಉತ್ತಮ ಗಾಯಕರ  ಜುಗಲ್ಬಂದಿಯಿಂದ ಸುಗಮ ಸಂಗೀತದ ರಸಾಸ್ವಾದಕರಿಗೆ ರಸದೌತಣ ದೊರಕುತ್ತಿತ್ತು.

ಶಿವಮೊಗ್ಗ ಸುಬ್ಬಣ್ಣ ಅವರಿಗೆ ಸಮಸಮಾಜದ ಆಶಯಗಳಿದ್ದವು. ಮಾನವತೆಯನ್ನು ಎತ್ತಿ ಹಿಡಿಯುವ ಅಪೂರ್ವ ಸಂಗೀತಗಾರರಾಗಿದ್ದರು. ನಮ್ಮ ದೇಶದ ಬಹುಸಂಸ್ಕೃತಿ ಅಂದರೆ ಸಮ್ಮಿಳಿತ ಸಂಸ್ಕೃತಿಯ ಬಗೆಗೆ ವಿಶೇಷ ಆಸ್ಥೆಯಿತ್ತು. ನಮ್ಮಲಿರುವ ದಾರಿದ್ರ್ಯದ ಬಗೆಗೂ ಬೇಸರ ಹಾಗೂ ಕಳವಳ ಇದ್ದವು.  ಅವರನ್ನು ನೆನೆದಾಗ, ಕಣ್ಣ್ಮುಚ್ಚಿ ಕುಳಿತು ಧ್ಯಾನಾಸಕ್ತರಾಗಿ ಹಾಡುವ ಅವರ ಭಂಗಿಯ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಅವರ ಗಾಯನಕ್ಕೆ ಸಾವಿಲ್ಲ. ಅವರಿಗೆ ಭಾವಪೂರ್ಣ ನಮನಗಳು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app