ಸಾರ್ವಜನಿಕ ಲಜ್ಜೆ ಬಿಟ್ಟ ಮುಖ್ಯಮಂತ್ರಿ ಬೊಮ್ಮಾಯಿ

cm bommayi

ರಾಜ್ಯದ ಮುಖ್ಯಮಂತ್ರಿಯೊಬ್ಬರು ತಾನು ಯಾವುದೋ ಸರ್ಕಾರೇತರ ಸಂಘಟನೆಗೆ ತಲೆಬಾಗುವವನು ಎಂದು ಹೇಳುವುದೇ ಅಸಂವಿಧಾನಿಕ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೆಸ್ಸೆಸ್ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಂತೆ ಬೊಮ್ಮಾಯಿ ಅದನ್ನು ನಿರಾಕರಿಸಬೇಕಿತ್ತು

"ಬಿಜೆಪಿಗೂ ಆರೆಸ್ಸೆಸ್‌ಗೂ ಸಂಬಂಧವಿಲ್ಲ" ಎಂದು ಆರೆಸ್ಸೆಸ್‌ ನಾಯಕರೂ, ಬಿಜೆಪಿ ನಾಯಕರೂ ಬಹಿರಂಗವಾಗಿ ಹೇಳುತ್ತಿದ್ದ ಕಾಲವೊಂದಿತ್ತು. ಹಿಂದಿನ ಬಿಜೆಪಿ ರಾಜಕಾರಣಿಗಳಿಗೆ ಅಷ್ಟಾದರೂ 'ಸಾರ್ವಜನಿಕ ಲಜ್ಜೆ' ಇರುತ್ತಿತ್ತು. ಆದರೆ ಕನಿಷ್ಠ ನಾಚಿಕೆಯೂ ಇಲ್ಲದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರು "ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರಧಾರೆಗೆ ತಲೆಬಾಗಿದ್ದೇನೆ. ಆರೆಸ್ಸೆಸ್‌ ಬಗ್ಗೆ ನನಗೆ ತುಂಬಾ ಗೌರವವಿದೆ. ಆ ತತ್ವ ಸಿದ್ಧಾಂತದ ಆಧಾರದ ಮೇಲೆಯೇ ದೇಶ ಕಟ್ಟಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದ್ದಾರೆ.

2008 ಸೆಪ್ಟೆಂಬರ್ 14 ಮಂಗಳೂರಿನಲ್ಲಿ ಚರ್ಚ್ ದಾಳಿಯಾಗಿತ್ತು. ಆರೆಸ್ಸೆಸ್‌ ಕಟ್ಟಾಳು, ಬಾಲ್ಯದಿಂದಲೇ ಶಾಖೆಯಿಂದ ಬೆಳೆದು ಬಂದ ಡಾ ವಿ ಎಸ್ ಆಚಾರ್ಯರವರು ರಾಜ್ಯದ ಗೃಹ ಸಚಿವರಾಗಿದ್ದರು. (ಈಗೇನಾದರೂ ವಿ ಎಸ್ ಆಚಾರ್ಯ ಬದುಕಿದ್ದರೆ ಮುಖ್ಯಮಂತ್ರಿಯಾಗಿರುತ್ತಿದ್ದರು). ಚರ್ಚ್ ದಾಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆಗೆ ಒಳಗಾಗುತ್ತಿದ್ದಾಗ ಗೃಹ ಸಚಿವ ವಿ ಎಸ್ ಆಚಾರ್ಯರ ಆರೆಸ್ಸೆಸ್‌ ಹಿನ್ನಲೆಯ ಬಗ್ಗೆಯೂ ಚರ್ಚೆಯಾಗುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎಕ್ಸಿಕ್ಯೂಷನ್ ವಿಂಗ್ ಆಗಿರುವ ಭಜರಂಗದಳವೇ ಚರ್ಚ್ ದಾಳಿಯನ್ನು ನಡೆಸಿದ್ದರಿಂದ ಕರಾವಳಿ ಮೂಲದ ವಿ ಎಸ್ ಆಚಾರ್ಯರ ಆರೆಸ್ಸೆಸ್‌ ಹಿನ್ನೆಲೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಆಗ ಮಾಧ್ಯಮಗಳ ಜೊತೆ ಮಾತನಾಡುತ್ತಾ "ದಾಳಿ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಆರೆಸ್ಸೆಸ್‌ಗೂ ಬಿಜೆಪಿ ಸರ್ಕಾರಕ್ಕೂ ಸಂಬಂಧವಿಲ್ಲ. ಆರೆಸ್ಸೆಸ್‌ ಪ್ರತ್ಯೇಕವಾಗಿರುವ ಸಂಘಟನೆ. ಅದು ರಾಜಕೀಯ ಪಕ್ಷವೂ ಅಲ್ಲ. ರಾಜಕೀಯ ಪಕ್ಷಕ್ಕೂ ಆರೆಸ್ಸೆಸ್‌ಗೂ ಸಂಬಂಧವೂ ಇಲ್ಲ" ಎಂದಿದ್ದರು. ಈ ಅಷ್ಟೂ ಮಾತುಗಳು ಹಸಿ ಹಸಿ ಸುಳ್ಳಾಗಿದ್ದರೂ ಒಬ್ಬ ಗೃಹ ಸಚಿವನಾಗಿ ಈ ಸುಳ್ಳು ಹೇಳುವುದು ಅನಿವಾರ್ಯವಾಗಿತ್ತು. ಸರ್ಕಾರ ನಡೆಸುವವರ ಲಕ್ಷಣವಿದು. ತಾನೇ ಖುದ್ದು ಆರೆಸ್ಸೆಸ್‌ ಆಗಿದ್ದರೂ ಸಾರ್ವಜನಿಕರ ದೃಷ್ಟಿಯಲ್ಲಿ "ಇದು ಎಲ್ಲರ ಸರ್ಕಾರ" ಎಂದು ತೋರ್ಪಡಿಸಲು ಅವರು ಯತ್ನಿಸಿದ್ದರು. ಯಾಕೆಂದರೆ ಅವರು ರಾಜಕಾರಣದಲ್ಲಿ ಕನಿಷ್ಠ ಲಜ್ಜೆ, ನೈತಿಕತೆಯನ್ನು ಉಳಿಸಿಕೊಂಡಿದ್ದರು.

ಮುತ್ಸದ್ದಿತನ ತೋರದ ಬೊಮ್ಮಾಯಿ

ಸರ್ಕಾರ ನಡೆಸುತ್ತಿರುವ ಪಕ್ಷ ಅಥವಾ ನಾಯಕನೊಬ್ಬ ನಾನು ಯಾವುದೋ ಸರ್ಕಾರೇತರ ಸಂಘಟನೆಯ ಅಡಿಯಾಳು ಅಥವಾ ತಲೆಬಾಗುವವನು ಎಂದು ಹೇಳುವುದೇ ಅಸಂವಿಧಾನಿಕ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆರೆಸ್ಸೆಸ್ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಂತೆ ಬಸವರಾಜ ಬೊಮ್ಮಾಯಿಯವರು ಅದನ್ನು ನಿರಾಕರಿಸಬೇಕಿತ್ತು. ಅಂತದ್ದೊಂದು ಸಣ್ಣ ಮುತ್ಸದ್ದಿತನವನ್ನು ಬೊಮ್ಮಾಯಿಯಿಂದ ಸಿದ್ದರಾಮಯ್ಯ ನಿರೀಕ್ಷೆ ಮಾಡಿದ್ದರು. ಆದರೆ ʼಬೊಮ್ಮಾಯಿ ಆರೆಸ್ಸೆಸ್ʼ ಎಂದು ವಿಪಕ್ಷಗಳು ಆರೋಪಿಸಿದಷ್ಟು ಬೊಮ್ಮಾಯಿ ಖುರ್ಚಿ ಗಟ್ಟಿಯಾಗುತ್ತದೆ. ಆರೆಸ್ಸೆಸ್‌ಗೂ, ಬೊಮ್ಮಾಯಿಗೂ ಅದೇ ಬೇಕಾಗಿರುವುದು..!  

ಭಾರತ ಸ್ವತಂತ್ರವಾದ ಬಳಿಕ ಎರಡು ಬಾರಿ ನಿಷೇಧಿಸಲ್ಪಟ್ಟ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ತಾನು ತಲೆಬಾಗುತ್ತೇನೆ ಎಂದು ಮುಖ್ಯಮಂತ್ರಿಯೊಬ್ಬರು ಸ್ವಾತಂತ್ರ್ಯದ ಅಮೃತೋತ್ಸವದ ವೇದಿಕೆಯಲ್ಲಿ ಹೇಳುತ್ತಾರೆ ಎಂದರೆ ಅದಕ್ಕಿಂತ ದುರಾದೃಷ್ಟ ಇನ್ನೊಂದಿಲ್ಲ.

ಮಂಗಳೂರು ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಶಿವಮೊಗ್ಗ ಎರಡನೇ ಬಾರಿ ಹೊತ್ತಿ ಉರಿದಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ನಡೆದ ಕೋಮು ಹಿಂಸೆಗಳ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದೆ ಎಂದು ಹೇಳುವುದಕ್ಕೆ ಯಾವ ಸಾಕ್ಷ್ಯವೂ ಬೇಕಾಗಿಲ್ಲ. ಇಡೀ ರಾಜ್ಯವನ್ನು ಆತಂಕಕ್ಕೆ ದೂಡಿರುವ ಕೋಮುಗಲಭೆಗಳನ್ನು ನಿಲ್ಲಿಸುವುದು ಮತ್ತು ಎಲ್ಲರಿಗೂ ಸಮಾನ ನ್ಯಾಯ ಸಿಗುತ್ತದೆ ಎಂದು ಜನರಿಗೆ ಖಾತ್ರಿಪಡಿಸುವುದು ಸಂವಿಧಾನಬದ್ದ ಸರ್ಕಾರವೊಂದರ ಕರ್ತವ್ಯ. ಆದರೆ ಸರ್ಕಾರದ ನೇತೃತ್ವ ವಹಿಸಿರುವ ಬಸವರಾಜ ಬೊಮ್ಮಾಯಿಯವರು ತಾನು ಆರೆಸ್ಸೆಸ್‌ಗೆ ತಲೆ ಬಾಗುತ್ತೇನೆ ಎಂದು ಹೇಳುವುದು ಆರೆಸ್ಸೆಸ್ ಪ್ರೇರಿತ ಆರೋಪಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದಂತೆ ಮತ್ತು ಪೊಲೀಸರ ಕೈಯ್ಯನ್ನು ಕಟ್ಟಿ ಹಾಕಿದಂತೆ.

ಇದನ್ನು ಓದಿದ್ದೀರಾ? ಸ್ವಾತಂತ್ರ್ಯ 75 | ವಿಜೃಂಭಿಸುತ್ತಿರುವುದು ಸ್ವಾತಂತ್ರ್ಯ ವಿರೋಧಿ ಪಡೆ

ಕರಾವಳಿಯಲ್ಲಿ ಮೂರು ಕೊಲೆ ಪ್ರಕರಣಗಳ ತನಿಖೆ ನಡೆಯುತ್ತಿದೆ. ಈ ಮೂರೂ ಕೊಲೆ ಪ್ರಕರಣಗಳು ಕೋಮು ಹಿಂಸೆಗೆ ಸಂಬಂಧಿಸಿದವು. ಶಿವಮೊಗ್ಗದಲ್ಲಿ ಒಂದು ಕೊಲೆ ಪ್ರಕರಣ, ಮೂರು ಹಲ್ಲೆ ಪ್ರಕರಣಗಳು ತನಿಖೆಯಲ್ಲಿವೆ. ಇವೂ ಕೂಡಾ ಕೋಮುಹಿಂಸೆಗೆ ಸಂಬಂಧಿಸಿದವುಗಳೇ ಆಗಿವೆ. ಕರಾವಳಿ ಮಲೆನಾಡಿನ ಇಷ್ಟೂ ಪ್ರಕರಣಗಳು ಕರ್ನಾಟಕದ ಕಾನೂನು ಸುವ್ಯವಸ್ಥೆಯನ್ನು ನಿರ್ಧರಿಸುವಷ್ಟು ಪ್ರಭಾವಶಾಲಿಯಾಗಿದೆ. ಈ ಪ್ರಕರಣಗಳ ತನಿಖೆಯಲ್ಲಿ ಆರೆಸ್ಸೆಸ್ ನ ಬಜರಂಗದಳ ಅಥವಾ ಯಾವುದಾದರೊಂದು ಹಿಂದೂ ಸಂಘಟನೆಯನ್ನು ಹೊರಗಿಟ್ಟು ತನಿಖೆಯನ್ನು ಮಾಡಲಾಗುವುದಿಲ್ಲ. ಆದ್ದರಿಂದ ಆರೆಸ್ಸೆಸ್ ಗೆ ನಾನು ತಲೆಬಾಗುತ್ತೇನೆ ಎಂದು ಹೇಳಿಕೆ ಕೊಡುವ ಮುನ್ನ ಬಸವರಾಜ ಬೊಮ್ಮಾಯಿ ನೂರು ಬಾರಿ ಯೋಚಿಸಬೇಕಿತ್ತು. ಆದರೆ ಪರೋಕ್ಷ ಸರ್ಕಾರ ನಡೆಸುತ್ತಿರುವ ಆರೆಸ್ಸೆಸ್ ಅನ್ನು ಮೆಚ್ಚಿಸಲು ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಅದು ಅನಿವಾರ್ಯವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್