ಅಂಬೇಡ್ಕರ್‌ ಹೆಸರಿನ ಪ್ರಶಸ್ತಿಗಳನ್ನು ಮೋದಿ ಸರ್ಕಾರ ನಿಲ್ಲಿಸಿದ್ದೇಕೆ?

Ambedkar Modi
  • ಅಂಬೇಡ್ಕರ್‌ ಪ್ರಶಸ್ತಿ ನೀಡದಿದ್ದರೂ ಏಳು ವರ್ಷಗಳಿಂದ ಅರ್ಜಿ ಆಹ್ವಾನ
  • ಪ್ರಶಸ್ತಿ ಅರ್ಜಿ ಆಹ್ವಾನದ ಜಾಹೀರಾತಿಗೆ ಪ್ರತಿ ವರ್ಷ ₹50 ಲಕ್ಷ ವೆಚ್ಚ

ಅಂಬೇಡ್ಕರ್‌ ಹೆಸರಿನ ರಾಷ್ಟ್ರೀಯ ಪ್ರಶಸ್ತಿಯನ್ನು ನರೇಂದ್ರ ಮೋದಿಯವರ ಸರ್ಕಾರ ಏಳು ವರ್ಷಗಳ ಅಧಿಕಾರವಧಿಯಲ್ಲಿ ಒಮ್ಮೆಯೂ ನೀಡಿಲ್ಲ. ಡಾ.ಅಂಬೇಡ್ಕರ್‌ ದಿನಾಚರಣೆ ಅಂಗವಾಗಿ ವಿತರಿಸಲಾಗುತ್ತಿದ್ದ ʼಅಂಬೇಡ್ಕರ್‌ ರಾಷ್ಟ್ರೀಯ ಪ್ರಶಸ್ತಿʼಯನ್ನು ನೀಡದೆ ಕಡೆಗಣಿಸುವ ನೀತಿಯನ್ನು ಮೋದಿ ಸರ್ಕಾರ ಅಳವಡಿಸಿಕೊಂಡಿದೆ.

ತಮಾಷೆಯ ಸಂಗತಿಯೆಂದರೆ ಅಂಬೇಡ್ಕರ್‌ ಹೆಸರಿನ ಯಾವುದೇ ಪ್ರಶಸ್ತಿಯನ್ನು ಕೊಡದಿದ್ದರೂ ಕೂಡ ಪ್ರತಿ ವರ್ಷ ಈ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸುವ ಜಾಹೀರಾತುಗಳು ಮಾತ್ರ ವಾಡಿಕೆಯಂತೆ ಎಲ್ಲೆಡೆ ರಾರಾಜಿಸುತ್ತವೆ. ಇದಕ್ಕಾಗಿ ಪ್ರತಿವರ್ಷ ಸುಮಾರು₹ 50 ಲಕ್ಷ ರೂಪಾಯಿಗಳ ಬೊಕ್ಕಸದ ಹಣವೂ ವೆಚ್ಚವಾಗುತ್ತಿದೆ. 

ಈ ಬಗ್ಗೆ ಮಾಹಿತಿ ಪಡೆಯಲು ಸಂಸ್ಥೆಯ ನಿರ್ದೇಶಕ ವಿಕಾಸ್‌ ತ್ರಿವೇದಿಯವರನ್ನು ʼದ ವೈರ್‌ʼನ ವರದಿಗಾರರು ಸಂಪರ್ಕಿಸಿದಾಗ ಈ ವರ್ಷ ಕೂಡ ಪ್ರಶಸ್ತಿಗಳನ್ನು ಕೊಡಲಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿದರು. ಅದಕ್ಕೆ ʼಆಡಳಿತಾತ್ಮಕʼ ತೊಡಕುಗಳು ಕಾರಣವಂತೆ! ಕಳೆದ ಏಳು ವರ್ಷಗಳಿಂದಲೂ ಇದೇ ʼಆಡಳಿತಾತ್ಮಕʼ ತೊಡಕುಗಳ ಕಾರಣ ಒಡ್ಡಿ ಪ್ರಶಸ್ತಿಯನ್ನು ಮೂಲೆಗುಂಪು ಮಾಡಲಾಗಿದೆ. ಈ ಫೌಂಡೇಷನ್‌ನ ಆಂತರಿಕ ಮಾಹಿತಿಯ ಪ್ರಕಾರ ಈ ಪ್ರಶಸ್ತಿಗಳನ್ನೇ ಮರುಪರಿಶೀಲಿಸಲಾಗುತ್ತಿದೆ!

ವಿಪರ್ಯಾಸವೆಂದರೆ, ಅರ್ಜಿ ಆಹ್ವಾನಿಸಿ ಜಾಹೀರಾತು ಕೊಟ್ಟಿರುವ ಫೌಂಡೇಷನ್‌ನಿಂದ ಪ್ರಶಸ್ತಿ ಕೊಡದಿರುವ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ ಅಥವಾ ಅವರ ಜಾಲತಾಣದಲ್ಲಿ ಜಾಲಾಡಿದರೂ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ʼದ ವೈರ್‌ʼನಲ್ಲಿ ವರದಿಯಾಗಿರುವಂತೆ, ಜಾಹೀರಾತು ಪ್ರಕಟಿಸಿದ ನಂತರ ಪ್ರಧಾನ ಮಂತ್ರಿಗಳ ಕಚೇರಿಯು ಪ್ರಶಸ್ತಿಗಳಿಗೆ ಸಂಬಂಧಿಸಿ ಹೆಚ್ಚುವರಿ ಮಾಹಿತಿ ಕೋರಿದೆ.

1992ರಲ್ಲಿ ʼಡಾ.ಅಂಬೇಡ್ಕರ್‌ ರಾಷ್ಟ್ರೀಯ ಪ್ರಶಸ್ತಿʼಯನ್ನು ಹಾಗೂ  1995ರಲ್ಲಿ ʼಡಾ.ಅಂಬೇಡ್ಕರ್‌ ಅಂತಾರಾಷ್ಟ್ರೀಯ ಪ್ರಶಸ್ತಿʼಯನ್ನು ಸ್ಥಾಪಿಸಲಾಗಿತ್ತು. ಅಂಬೇಡ್ಕರ್‌ ಅವರ ಆಶಯಗಳ ಈಡೇರಿಕೆಗಾಗಿ ಕೆಲಸ ಮಾಡುವ ವ್ಯಕ್ತಿಗಳು ಅಥವಾ ಸಂಘಟನೆಗಳಿಗೆ ಈ ರಾಷ್ಟ್ರೀಯ ಪ್ರಶಸ್ತಿ ಕೊಡಲಾಗುತ್ತದೆ. ಹಾಗೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ಗಮನಾರ್ಹ ಕೆಲಸ ಮಾಡಿದವರಿಗೆ ಈ ಅಂತಾರಾಷ್ಟ್ರೀಯ ಪ್ರಶಸ್ತಿ ಕೊಡಲಾಗುತ್ತದೆ. ರಾಷ್ಟ್ರೀಯ ಪ್ರಶಸ್ತಿಯು ₹10 ಲಕ್ಷ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಯು ₹15 ಲಕ್ಷ ನಗದು ಬಹುಮಾನ ಒಳಗೊಂಡಿವೆ.

ಒಕ್ಕೂಟ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಡಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಅಂಬೇಡ್ಕರ್‌ ಫೌಂಡೇಷನ್‌ ಈ ಪ್ರಶಸ್ತಿ ಪ್ರದಾನ ಪ್ರಕ್ರಿಯೆಯ ಉಸ್ತುವಾರಿ ಹೊತ್ತಿದೆ. ಇಲಾಖೆಯ ಸಚಿವರು ಈ ಸಂಸ್ಥೆಯ ಚೇರ್ಮನ್‌ ಆಗಿದ್ದು, ಕೆಲವು ಉನ್ನತ ಅಧಿಕಾರಿಗಳು ಹಾಗೂ ಕೆಲವು ನಾಮಾಂಕಿತ ಸದಸ್ಯರು ಕೂಡ ಈ ಸಂಸ್ಥೆಯ ಸದಸ್ಯರಾಗಿರುತ್ತಾರೆ.

ರಾಜಕೀಯ ಲಾಭಕ್ಕಾಗಿ ಅಂಬೇಡ್ಕರ್‌ ಅವರ ಹೆಸರನ್ನು ಬಳಸಿಕೊಳ್ಳುವಲ್ಲಿ ನರೇಂದ್ರ ಮೋದಿಯವರು ಹಿಂದೆ ಬಿದ್ದಿಲ್ಲ. ಸಂದರ್ಭ ಒದಗಿದಾಗೆಲ್ಲಾ ಅಂಬೇಡ್ಕರ್‌ ಪ್ರತಿಮೆಗೆ ಹಾರ ಹಾಕಿ ಫೋಟೋ ತೆಗೆಸಿಕೊಳ್ಳುವುದು, ಬಣ್ಣದ ಮಾತುಗಳಲ್ಲಿ ಹೊಗಳುವುದನ್ನು ಒಂದು ಸಂಪ್ರದಾಯದಂತೆ ಪಾಲಿಸುತ್ತಾ ಬಂದಿದ್ದಾರೆ. ಈ ನಡೆಗಳು ಅಂಬೇಡ್ಕರ್‌ರನ್ನು ದೈವೀಕರಿಸಿ, ಕೇವಲ ಮೂರ್ತಿ ಪೂಜೆಗೆ ಸೀಮಿತಗೊಳಿಸುವ ಹುನ್ನಾರದ ಭಾಗ ಎನ್ನಬಹುದು.

ವಾಸ್ತವದಲ್ಲಿ ಅವರು ಪ್ರತಿನಿಧಿಸುವ ಭಾರತೀಯ ಜನತಾ ಪಕ್ಷ ಹಾಗೂ ಅದರ ಹಿಂದಿನ ಆರೆಸ್ಸೆಸ್‌ ಕೂಟ ಅಂಬೇಡ್ಕರ್‌ ಅವರ ವಿಚಾರಗಳಿಗೆ ಕಳಂಕ ಹಚ್ಚಲು, ಅವರ ನೆನಪನ್ನು ಮರೆಮಾಡಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದೆ. ಯಾಕೆಂದರೆ ಅಂಬೇಡ್ಕರ್‌ ಅವರು ಪ್ರತಿಪಾದಿಸುವ ಸ್ವಾತಂತ್ರ್ಯ, ಸಮಾನತೆಯ ವಿಚಾರಗಳು ಆರೆಸ್ಸೆಸ್‌ ಪ್ರತಿಪಾದಿಸುವ ಮನುವಾದಿ ವಿಚಾರಗಳಿಗೆ ತದ್ವಿರುದ್ಧವಾಗಿವೆ. ಹೀಗಾಗಿ ಅಂಬೇಡ್ಕರ್‌ ಅವರ ವಿಚಾರವನ್ನು ಬಹಳ ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ.  ಉದಾಹರಣೆಗೆ ಭಾರತ ತನ್ನ ಸಂವಿಧಾನವನ್ನು ಅಂಗೀಕರಿಸಿದ ಬೆನ್ನಹಿಂದೆಯೇ ಅಂದರೆ 1949ರ ನವಂಬರ್‌ 30ರಂದು ಆರೆಸ್ಸೆಸ್‌ ತನ್ನ ಮುಖವಾಣಿ ʼಆರ್ಗನೈಸರ್‌ʼನಲ್ಲಿ ಹೀಗೆಂದು ಬರೆದಿತ್ತು: “ಭಾರತದ ಸಂವಿಧಾನದ ಹೀನಾಯ ಸಂಗತಿಯೆಂದರೆ ಇದರಲ್ಲಿ ಭಾರತೀಯ ಎಂಬುದು ಏನೂ ಇಲ್ಲ… ಇದರಲ್ಲಿ ಪ್ರಾಚೀನ ಭಾರತೀಯ ಸಾಂವಿಧಾನಿಕ ಕಾನೂನುಗಳು ಎಲ್ಲಿಯೂ ಕಾಣಿಸುವುದಿಲ್ಲ… ಮನುವಿನ ಕಾನೂನುಗಳು ಬಹಳ ಹಿಂದೆಯೇ ರಚಿತವಾಗಿವೆ. ಮನುಸ್ಮೃತಿಯಲ್ಲಿ ಹೇಳಲಾಗಿರುವ ಈ ಕಾನೂನುಗಳು ಇಂದಿಗೂ ಮಾನ್ಯವಾಗಿವೆ… ಆದರೆ ನಮ್ಮ ಸಂವಿಧಾನದ ಪಂಡಿತರು ಈ ಅಂಶಗಳನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ.”

ಈ ಶಕ್ತಿಗಳು ಅಂಬೇಡ್ಕರ್‌ ಹಾಗೂ ಸಂವಿಧಾನದ ಮೇಲೆ ಅಂದಿನಿಂದಲೂ ದಾಳಿ ಮಾಡುತ್ತಿದ್ದವು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಬಾಬಾ ಸಾಹೇಬರು ನಮ್ಮ ಸಂವಿಧಾನವನ್ನು ರಚಿಸುವ ಎಷ್ಟೋ ವರ್ಷಗಳ ಮುಂಚೆಯೇ ಮನುಸ್ಮೃತಿಯನ್ನು ಬಹಿರಂಗವಾಗಿಯೇ ಸುಟ್ಟುಹಾಕಿ ಪ್ರತಿಭಟಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತ.

ಇದನ್ನೂ ಓದಿದ್ದೀರಾ? | ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ `ಜಾತಿ ವಿನಾಶ' | ಭಾಗ 1 | ಮಾತಾಗಿ ಬೆಳಗಬೇಕಾದ್ದು, ಅಕ್ಷರವಾಗಿ ಉಸಿರಾಯ್ತು

ಬಿಜೆಪಿ ಮತ್ತು ಆರೆಸ್ಸೆಸ್‌ ಕೂಟ ಅಂಬೇಡ್ಕರ್‌ ಅವರ ನೆನಪನ್ನು ಮರೆಮಾಡಲು ಅಥವಾ ಅವರನ್ನು ಕಡೆಗಣಿಸಲು ಅನಾದಿಯಿಂದಲೂ ನಾನಾ ತಂತ್ರಗಳನ್ನು ಹೆಣೆಯುತ್ತಾ ಬಂದಿದೆ. ಅಂಬೇಡ್ಕರ್‌ ಅವರು ನಮ್ಮನ್ನಗಲಿದ  ಡಿಸೆಂಬರ್‌ 6ನೇ ದಿನವನ್ನು ʼಮಹಾಪರಿನಿರ್ವಾಣ ದಿನʼವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ. ಅಂದು ಲಕ್ಷಾಂತರ ಅಂಬೇಡ್ಕರ್‌ ಅಭಿಮಾನಿಗಳು ಅವರ ಸಮಾಧಿ ಸ್ಥಳವಿರುವ ಚೈತ್ಯಭೂಮಿಗೆ ಭೇಟಿ ನೀಡುತ್ತಾರೆ. ಅಂಬೇಡ್ಕರ್‌ ಅವರ ಬದುಕು ಮತ್ತು ಹೋರಾಟವನ್ನು ನೆನೆಯುತ್ತಾರೆ. ಅವರ ವಿಚಾರಗಳಿಂದ ಸ್ಫೂರ್ತಿ ಪಡೆಯುತ್ತಾರೆ.

1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಲು ಆರೆಸ್ಸೆಸ್‌ ಕೂಟ ಆರಿಸಿಕೊಂಡಿದ್ದು ಇದೇ ಡಿಸೆಂಬರ್ ಆರನೇ ದಿನವನ್ನು. ತದನಂತರದಲ್ಲಿ ವಿಶ್ವ ಹಿಂದೂ ಪರಿಷತ್‌, ಭಜರಂಗದಳ ಮುಂತಾದ ಕೇಸರಿ ಕೂಟದ ಸಂಘಟನೆಗಳು ಡಿಸೆಂಬರ್‌ ಆರರಂದು ʼಶೌರ್ಯ ದಿವಸ್‌ʼ ಅಥವಾ ʼವಿಜಯ್‌ ದಿವಸ್‌ʼ ಆಗಿ ಆಚರಿಸುತ್ತಾ ಬಂದಿದ್ದಾರೆ. ಇದು ಕಾಕತಾಳೀಯವೇನಲ್ಲ; ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ನಿಪುಣ ತಂತ್ರ.

ಅಂಬೇಡ್ಕರ್‌ ಅವರ ನೆನಪುಗಳನ್ನು ಮಸುಕುಗೊಳಿಸಿ, ಅವರನ್ನು ನೇಪಥ್ಯಕ್ಕೆ ಸರಿಸುವ ಉದ್ದೇಶ ಒಂದು ಕಾರ್ಯಸೂಚಿಯಾದರೆ, ಅಂಬೇಡ್ಕರ್‌ ಅವರ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಪ್ರಜಾತಂತ್ರದ ವಿಚಾರಗಳನ್ನು ಬದಿಗೆ ಸರಿಸಿ ಒಡೆದು ಆಳುವ ದ್ವೇಷರಾಜಕಾರಣವನ್ನು ಜನಮಾನಸದಲ್ಲಿ ಬಿತ್ತುವುದು ಮತ್ತೊಂದು ಕಾರ್ಯಸೂಚಿ. ಹಾಗೆಯೇ ನಾವು ಸಂವಿಧಾನ ಅಳವಡಿಸಿಕೊಂಡ ನವಂಬರ್‌ 26 ರ ಸುತ್ತಮುತ್ತ ಹಿಂಸೆಗೆ ಪ್ರಚೋದನೆ ನೀಡುವ, ದ್ವೇಷ ಭಾಷಣಗಳಿಗೆ ಕುಖ್ಯಾತವಾಗಿರುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇವುಗಳನ್ನು ʼಧರ್ಮ ಸಂಸತ್‌ʼ ಎಂದು ಕರೆಯಲಾಗುತ್ತದೆ. ಈ ಸಂಸತ್‌ ಎಂಬ ಪದವನ್ನೂ ಕೂಡ ಬಹಳ ತಂತ್ರಗಾರಿಕೆಯಿಂದ ಧರ್ಮದ ಜೊತೆ ಜೋಡಿಸಲಾಗಿದೆ. 
ದೇಶದ ಪ್ರಜಾತಂತ್ರ ಪ್ರೇಮಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವರೆ?

ನಿಮಗೆ ಏನು ಅನ್ನಿಸ್ತು?
5 ವೋಟ್