ವಿಶ್ವ ರಂಗಭೂಮಿ ದಿನ ವಿಶೇಷ ಸಂದರ್ಶನ | ಯಕ್ಷಗಾನ, ವಿಜ್ಞಾನ, ರಂಗಭೂಮಿಗಳ ನಡುವೆ ಜೀಕಾಡುವ ಪ್ರಸಾದ್‌ ಚೇರ್ಕಾಡಿ

ಪ್ರಸಾದ್‌ ಚೇರ್ಕಾಡಿ, ಯುವ ತಲೆಮಾರಿನ ರಂಗ ಕಲಾವಿದ. ಯಕ್ಷಗಾನದೊಂದಿಗೆ ಬೆಳೆದ ಇವರು ವಿಜ್ಞಾನ ಓದುವ ಆಸಕ್ತಿಯಿಂದ ಬೆಂಗಳೂರಿಗೆ ಬಂದವರು, ರಂಗ ಲೋಕದ ಮೋಹಕ್ಕೆ ಬಿದ್ದವರು. ವಿಶ್ವ ರಂಗಭೂಮಿ ದಿನದ ನೆಪದಲ್ಲಿ ಅವರೊಂದಿಗೆ ನಾಲ್ಕು ಮಾತು
Prasad Cherkady

* ನಟನೆಯ ಸೆಳೆತ ಎಲ್ಲಿಂದ ಶುರುವಾಯ್ತು? ಹೇಗೆ ಶುರುವಾಯ್ತು?
ನಾನು ಮೂಲತಃ ಬ್ರಹ್ಮಾವರ ಬಳಿಯ ಚೇರ್ಕಾಡಿಯವನು. ಶಾಲೆಯ ಕಲಿಕೆಯ ಜೊತೆಗೆ ನನಗೆ ಯಕ್ಷಗಾನದ ಬಗ್ಗೆ ತುಂಬಾ ಆಸಕ್ತಿಯಿತ್ತು. ಒಳ್ಳೆ ಅಂಕಗಳು ಬರುತ್ತಿದ್ವು, ಬೇಸಿಗೆಯ ರಜೆ ಸಂದರ್ಭದಲ್ಲಿ ನಮಗೆ ಮನರಂಜನೆಗೆ ಯಾವುದೇ ಕೊರತೆಯಿರುತ್ತಿರಲಿಲ್ಲ. ಯಕ್ಷಗಾನ ಆಟ ನೋಡುವುದಕ್ಕೆ ಹೋಗುತ್ತಿದ್ದೆವು. ನಮ್ಮದು ಜಾಯಿಂಟ್‌ ಫ್ಯಾಮಿಲಿ, ಒಂದು ನಾಟಕ ಮಾಡುವಷ್ಟು ಮಕ್ಕಳಿದ್ವಿ. ಚೇರ್ಕಾಡಿ ಕೃಷ್ಣರಾಯಪ್ರಭು ಎಂಬುವವರು ಮೊದಲು ನನಗೆ ಯಕ್ಷಗಾನ ಕಲಿಸಿದ್ದು, ಅವರು ಕ್ರಮಬದ್ದವಾಗಿ ಕಥೆ ಹೇಳುತ್ತಿದ್ದರು. ನಂತರ ಚೇರ್ಕಾಡಿ ಮಂಜುನಾಥ್‌ ಅವರ ಬಳಿ ಯಕ್ಷಗಾನ ಕಲಿಯಲಾರಂಭಿಸಿದೆ.

* ಓಹ್‌, ಹಾಗಾದ್ರೆ ನಿಮ್ಮದು ಯಕ್ಷಗಾನದಿಂದ ರಂಗಭೂಮಿಯೆಡೆಗೆ ನಿಮ್ಮ ಪ್ರಯಾಣ!
ಹೌದು, ನನಗೆ ಯಕ್ಷಗಾನದ ಬಗ್ಗೆ ಹೆಚ್ಚು ಆಸಕ್ತಿ ಹಾಗಾಗಿ ನಟನೆಗೆ ಆದ್ಯತೆ ನೀಡುತ್ತಿದ್ದೆ, ಈಗ ಅದೇ ಜೀವಾಳ. ಸುರೇಶ್‌ ಆನಗಳ್ಳಿ ಎಂಬುವ ರಂಗಕರ್ಮಿ ಅವರು ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾ, ದೆಹಲಿಯಲ್ಲಿ ಕಲಿತವರು. ಅವರು ನಡೆಸಿದ ಬೇಸಿಗೆ ಶಿಬಿರಕ್ಕೆ ಅಜ್ಜ ನನ್ನನ್ನ ಸೇರಿಸಿದ್ರು. ಆಗ ನನಗೆ 10 ವರ್ಷ. ಮೊದಲನೆ ಬಾರಿಗೆ ಯಕ್ಷಗಾನವನ್ನು ಕ್ರಮಬದ್ಧವಾಗಿ ಕಲಿಯುವುದಕ್ಕೆ ಆರಂಭಿಸಿದೆ.

ಪಿಯುಸಿಯಲ್ಲಿದ್ದಾಗ ಶಾಲಾ ವಾರ್ಷಿಕೋತ್ಸವದಲ್ಲಿ ಮೊದಲ ಬಾರಿಗೆ ರಂಗಭೂಮಿ ಪರಿಚಯ ಆಯ್ತು. `ಕೋಶಿಕಾʼ ಯಕ್ಷಗಾನ ತಂಡದ ಗೀತಾ ಟೀಚರ್‌ ಅವರಿಂದ ರಂಗಭೂಮಿ ಸಂಪರ್ಕ ಬೆಳೆಯಿತು.

ಮೂಡುಬಿದಿರೆಯ ಆಳ್ವಾಸ್‌ನಲ್ಲಿ ಪಿಯುಸಿ, ಡಿಗ್ರಿಯಲ್ಲಿದ್ದಾಗ ಯಕ್ಷಗಾನ ಕಲಿಕೆಯ ಭಾಗವಾಗಿಯೇ ನನಗೆ ಉಚಿತ ಶಿಕ್ಷಣ ದೊರೆಯಿತು. ಕರಾವಳಿ ಭಾಗದ ಯಕ್ಷಗಾನದಲ್ಲಿ ಎರಡು ವಿಧ ಇವೆ. ಉತ್ತರ ದಿಕ್ಕಿನ ಬಡಗುತಿಟ್ಟು (ಉಡುಪಿ, ಆಂಕೋಲಾ, ಭಟ್ಕಳ) ಮತ್ತೊಂದು ಮೂಡುಬಿದಿರೆ, ಕಾಸರಗೋಡು ಕೇರಳದ ಗಡಿಭಾಗದಲ್ಲಿರುವವರು ಆಡುವ ತೆಂಕುತಿಟ್ಟು. ನಾನು ಬಡಗುತಿಟ್ಟು ಯಕ್ಷಗಾನದ ಬಗ್ಗೆ ಹೆಚ್ಚು ಕಲಿಯೊಕೆ ಅವಕಾಶ ಇರತ್ತೆ ಅಂತ ಅಲ್ಲಿ ಸೇರಿದೆ ಆದ್ರೆ, ತೆಂಕುತಿಟ್ಟು ಅಷ್ಟೆ ಇದ್ದಿದ್ದು. ಬಡಗುತಿಟ್ಟು ಕಲಿಕೆಗೆ ಅವಕಾಶವಿಲ್ಲ ಅಂತ ಬೇಜಾರಾಯ್ತು, ಆದ್ರೂ ಯಕ್ಷಗಾನದಲ್ಲಿ ಮುಂದುವರೆಯಬೇಕು ಎಂಬುದು ನನ್ನ ಉದ್ದೇಶ ಹಾಗಾಗಿ ತೆಂಕುತಿಟ್ಟನ್ನೇ ಕಲಿಯಲು ಆರಂಭಿಸಿದೆ. ಅದು ನನ್ನನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ತು.

ಮೂಡುಬಿದರೆಯಲ್ಲಿ ಶೇಖರ್‌ ಡಿ ಶೆಟ್ಟಿಗಾರ್‌ ಎಂಬುವವರು ʼಕಟೀಲು ಯಕ್ಷಗಾನ ಮೇಳʼ ತಂಡದವರು ನಮಗೆ ಯಕ್ಷಗಾನ ಪಾಠ ಮಾಡಲು ಬರುತ್ತಿದ್ದರು.  ನಮ್ಮ ಕಾಟಕ್ಕೆ ಅವರ ಯಕ್ಷಗಾನ ನೋಡಲು ಕರೆದುಕೊಂಡು ಹೋಗುತ್ತಿದ್ರು. ಅಲ್ಲಿ ನನ್ನ ಆಸಕ್ತಿ ಕಂಡು ಪಾತ್ರ ಮಾಡಲು ಅವಕಾಶ ಕೊಟ್ಟರು. ತುಂಬಾ ಉತ್ಸಾಹದಲ್ಲಿ ಕಲಿತು ವೇಷ ಮಾಡುತ್ತಿದ್ದೆ. ನಿತ್ಯವೂ ಒಂದೊಂದು ಊರಲ್ಲೂ ಒಂದೊಂದು ಹೊಸ ಪ್ರಸಂಗ, ಹೊಸ ಪಾತ್ರ.

Image
Prasad cherkady

*ನಿತ್ಯ ಒಂದೊಂದು ಪಾತ್ರವನ್ನು ಹೇಗೆ ಕಲಿಯುತ್ತಿದ್ರಿ? ಸಮಯ ಆಗ್ತಿತ್ತಾ?

ರಾತ್ರಿ ಯಕ್ಷಗಾನ ಆಟ ಮುಗಿದ ಮೇಲೆ ಅಲ್ಲಿಂದ ಬೇರೆ ರಂಗಸ್ಥಳಕ್ಕೆ ಹೋಗ್ತಾ ಇದ್ವಿ. ಅಲ್ಲಿ ಬೆಳಿಗ್ಗೆ ರೆಸ್ಟ್‌ ಮಾಡ್ತಿದ್ವಿ, ಮಧ್ಯಾಹ್ನ ಯಾವ ಪ್ರಸಂಗ, ಯಾವ ಪಾತ್ರ ಅನ್ನೋದು ಹೇಳ್ತಾ ಇದ್ರು. ಯಾರಿಗೆ ಯಾವ ಪಾತ್ರ ಕೊಟ್ಟಿದ್ದಾರೆ ಅನ್ನೋ ಲಿಸ್ಟ್‌ ನೋಡೊಕೆ ಎಕ್ಸೈಟ್‌ ಆಗಿರುತ್ತಿದ್ವಿ. ಒಮ್ಮೆ ಒಂದು ಪಾತ್ರ ಕೊಟ್ಟರೆ ಹಿರಿಯರ ಸಲಹೆ ಕೂಡ ಕೇಳುತ್ತಿದ್ದೆ. ಪದ್ಯಗಳು ಇರುತ್ತಿದ್ದವು ಅವನ್ನು ಕಲಿಯುತ್ತಿದ್ದೆ. ಒಮ್ಮೆ ಹೇಳಿಕೊಟ್ಟದ್ದನ್ನ ಬೇಗ ಕಲಿತುಕೊಂಡು ಪಾತ್ರ ಮಾಡುತ್ತಿದ್ದೆ. ನನಗೆ ಕೊಡುತ್ತಿದ್ದ ಪಾತ್ರಗಳು ಹಾಗೆಯೇ ಎಲ್ಲವೂ ಇಷ್ಟವಾಗುತ್ತಿದ್ವು. ಆ ವಯಸ್ಸಿನಲ್ಲಿ ಬೇರೆ ಏನು ಗಮನ ಇರಲಿಲ್ಲ ಮತ್ತು ಪೂರ್ಣವಾಗಿ ನಟನೆಯಲ್ಲೇ ಇರುತ್ತಿನಿ ಅನ್ನೋದು ನನಗೆ ಗೊತ್ತಿತ್ತು.

* ನಿಮ್ಮ ನಟನೆಗೆ ಕುಟುಂಬದವರ ಪ್ರೋತ್ಸಾಹ ಹೇಗಿತ್ತು?
ಬಾಲ್ಯದಲ್ಲೇ ತಂದೆಯವರು ನಿಧನರಾದ್ರು. ನಂತರ ತಾಯಿ ಕುಟುಂಬದ ಜವಾಬ್ದಾರಿ ಜೊತೆಗೆ ನನ್ನನ್ನ ಆಸಕ್ತಿದಾಯಕ ಕ್ಷೇತ್ರದಲ್ಲೇ ಬೆಳೆಯುವುದಕ್ಕೆ ಪೂರಕ ವಾತಾವರಣ ಕಟ್ಟಿಕೊಟ್ರು. ಕಷ್ಟ ಇತ್ತು, ನನ್ನ ಖರ್ಚಿನ ಹಣವನ್ನು ನಾನೇ ದುಡಿದುಕೊ‍‍ಳ್ಳುತ್ತಿದ್ದೆ. ಆದ್ರೂ ನನ್ನ ಮಾವ ಓದಿಗೆ, ಖರ್ಚಿಗೆ ಹಣ ಕಳುಹಿಸುತ್ತಿದ್ರು. ಓದಿನ ಜೊತೆಗೆ ನನ್ನ ಬದುಕಿನ ನಿರ್ವಹಣೆ ನಾನು ಮಾಡ್ತಾ ಇದ್ದಿದ್ರಿಂದ ಮನೆಯವರು ನಿಶ್ಚಿಂತೆಯಿಂದ ಸರ್ಪೋರ್ಟ್‌ ಮಾಡುತ್ತಿದ್ರು.

ನಾನು ಓದುತ್ತಿದ್ದ ಕಾಲೇಜಿನಲ್ಲಿ ಜೀವನ್‌ ರಾಮ್‌ ಸುಳ್ಯ ಅಂತ ಇದ್ರು. ನೀನಾಸಂ ರಂಗಭೂಮಿಯ ಕಲಾವಿದರಾಗಿದ್ದವ್ರು. ಅವ್ರು ನಾಟಕಗಳನ್ನು ಕಲಿಸುತ್ತಿದ್ರು. ಹಾಗಾಗಿ ಸಿಕ್ಕಿದ್ದನ್ನೆಲ್ಲ ಕಲಿತಿದ್ದೆ ಆದ್ರೆ ಅದರಿಂದ ದುಡ್ಡು ಬರಬೇಕೆಂಬ ಉದ್ದೇಶ ಇರಲಿಲ್ಲ. 30 ವರ್ಷದವರೆಗೂ ಬೇರೆಬೇರೆ ಕ್ಷೇತ್ರದ ಕಲಿಕೆಯಷ್ಟೇ ಮುಖ್ಯ ಅಂತ ನಿರ್ಧರಿಸಿದ್ದೆ.

* ನಿಮ್ಮದು ಯಕ್ಷಗಾನದ ಹಿನ್ನೆಲೆ, ರಂಗಭೂಮಿ ಈಗ ನಿಮ್ಮ ಕಾರ್ಯಭೂಮಿ, ಆದರೆ ವಿಜ್ಞಾನ ನಿಮ್ಮ ಆಸಕ್ತಿಯಂತೆ ಹೌದಾ?

ನನಗೆ ವಿಜ್ಞಾನ ತುಂಬಾ ಇಷ್ಟ. ಮಂಗಳೂರಿನಲ್ಲಿ ಎಂಎಸ್ಸಿ ಮೆಟೀರಿಯಲ್‌ ಸೈನ್ಸ್‌ನಲ್ಲಿ ಸೀಟು ಸಿಕ್ಕಿದ್ದರಿಂದ ಅದನ್ನೇ ಓದಿದೆ. ಎಲ್ಲವೂ ಅರ್ಥವಾಗದಿದ್ದರೂ ಮೂಲ ಇತಿಹಾಸದಿಂದ ಕಲಿಯುವ ಆಸಕ್ತಿ ಸಿಕ್ಕಿತು. ನಂತರ ಐಐಎಸ್ಸಿಯಲ್ಲಿ ಕಲಿಯುವ ಅವಕಾಶ ಸಿಕ್ಕಿತು, ಹಾಗಾಗಿ ಬೆಂಗಳೂರಿಗೆ ಬಂದೆ. ಯಕ್ಷಗಾನ ಮತ್ತು ರಂಗಭೂಮಿ ಕಲಿಕೆಗೆ ಹೆಚ್ಚು ಅವಕಾಶ ಸಿಗುತ್ತೆ ಅನ್ನೋ ಉದ್ದೇಶದಿಂದ ಬೆಂಗಳೂರಿಗೆ ಬಂದೆ. ಸೈಕಾಲಜಿ ಮತ್ತು ಸಿನಿಮಾ ಬಗ್ಗೆ ಹೊಸದಾಗಿ ಕಲಿತೆ. ಸಿ.ಆರ್‌. ಚಂದ್ರಶೇಖರ್‌ ಅವರ ಸೈಕಾಲಜಿ ಪುಸ್ತಕಗಳನ್ನು ಹೆಚ್ಚು ಓದ್ತಾ ಇದ್ದೆ. ರಾಜಾಜಿನಗರದ ಸ್ಪಂದನ ಹಾಸ್ಪಿಟಲ್‌ನಲ್ಲಿ ಕೆಲ ಸಮಯ ಕೌನ್ಸಿಲಿಂಗ್‌ ಕೂಡ ಮಾಡಿದ್ದೇನೆ.

Image
Prasad Cherkady

* ರಂಗಭೂಮಿಗಾಗಿ ಬಣ್ಣ ಹಚ್ಚಿದವರು ಸಿನಿಮಾರಂಗಕ್ಕೂ ಕಾಲಿಡ್ತಾರೆ. ನೀವು?
ಬಿ. ಸುರೇಶ್‌ ಅವರ ಮದರಂಗಿ ಧಾರಾವಾಹಿಯಲ್ಲಿ ನಟನೆಗೆ ಬಂದವನು ನಂತರ ಬರೆಯೋದಕ್ಕೆ ನಿಂತೆ. ಪಿ.ಶೇಷಾದ್ರಿಯವರ ಭಾರತ್‌ ಸ್ಟೋರ್ಸ್‌ನಲ್ಲಿ ಆಕ್ಟ್‌ ಮಾಡಿದೆ. ನಂತರ ಒಂದು ಶಿಕಾರಿಯ ಕಥೆಯಲ್ಲಿ ನಟನೆ ಮಾಡಿದೆ. ನಿರ್ದೇಶನದ ಮೇಲೆ ಆಸಕ್ತಿ ಹುಟ್ಟಿತು. ಸಿನಿಮಾ ಕ್ಷೇತ್ರ ಈಗಂತೂ ತುಂಬಾ ವಿಶಾಲವಾದದ್ದು, ಹಾಗಾಗಿ ಈಗ ಸಿನಿಮಾ ನಿರ್ಮಾಣದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದೇನೆ.

ನಾನು ನಟಿಸುವ ಅವಕಾಶ ಬಂದಾಗ ಕಥೆ ಆಯ್ಕೆಯಲ್ಲಿ ಸೂಕ್ಷ್ಮವಾಗಿರ್ತೀನಿ. ಮತ್ತೆ ಅವಕಾಶಕ್ಕಾಗಿ ಯಾರನ್ನು ನಾನು ಅಪ್ರೋಚ್‌ ಮಾಡುತ್ತಿಲ್ಲ. ಸಿಕ್ಕ ಅವಕಾಶಗಳಲ್ಲಿ ಕಥೆ ಚೆನ್ನಾಗಿದೆ ಅನ್ಸಿದ್ರೆ ಮಾಡ್ತಿನಿ.
 
* ಕಥೆಗಾರರು ಸಂಸ್ಥೆಯ ಬಗ್ಗೆ ಹೇಳಬಹುದಾ?

ನಾನು  ʼಕಥೆಗಾರರುʼ ಎಂಬ ನೋಂದಾಯಿತ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದೇನೆ. ಭರತನಾಟ್ಯ, ಸಂಗೀತ ಇವುಗಳನ್ನು ಆನ್‌ಲೈನ್‌ನಲ್ಲಿ ಕಲಿಸುವ ಪರಿಪಾಠ ಮುಂಚಿನಿಂದಲೂ ಇತ್ತು. ಆದ್ರೆ ಲಾಕ್‌ಡೌನ್‌ ಆದಾಗ ಯಕ್ಷಗಾನವನ್ನು ಆನ್‌ಲೈನ್‌ ಕ್ಲಾಸ್‌ ಮಾಡಲು ಆರಂಭಿಸಿದೆ. 70 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ತುಂಬಾ ಪರಿಣಾಮಕಾರಿಯಾಗಿ ಫಲ ನೀಡಿದೆ. 25 ವಿದ್ಯಾರ್ಥಿಗಳು ಕ್ಲಾಸ್‌ಗೆ ಬಂದು ಕಲಿಯುತ್ತಾರೆ. ವಿದೇಶದಲ್ಲಿರುವವರು ಕೂಡ ಯಕ್ಷಗಾನ ಕಲಿಯಲು ಆನ್‌ಲೈನ್‌ನಲ್ಲಿ ತರಗತಿಗೆ ಬರುತ್ತಾರೆ. ನಮ್ಮದೆ ಆದ ಒಂದು ಪಠ್ಯಕ್ರಮವನ್ನು ತಯಾರಿಸಿಟ್ಟುಕೊಂಡು ಈಗ ಯಕ್ಷಗಾನ ತರಬೇತಿ ನಡೆಯುತ್ತಿದೆ. ಒಂದು ವರ್ಷ ವಿದ್ಯಾರ್ಥಿಗಳು ನಮ್ಮ ಜೊತೆ ಇರುತ್ತಾರೆ. ಮುಂದೆ ಒಂದು ರಂಗಶಾಲೆಯಾಗಿ ಕಟ್ಟುವ ಆಸೆ ಇದೆ. ಶಿಸ್ತುಬದ್ದವಾಗಿ, ಪಠ್ಯವಾಗಿ ಕಲಿಸುವ ಆಲೋಚನೆ ಇದೆ.

* ನೀವು ಅಭಿನಯಿಸಿದ ನಾಟಕಗಳ ಪೈಕಿ ಅಕ್ಷಯಾಂಬರದ ಬಗ್ಗೆ ಮಾತನಾಡದಿದ್ದರೆ, ಮಾತು ಅಪೂರ್ಣ
ಅಕ್ಷಯಾಂಬರ, ದ್ರೌಪದಿ ವಸ್ತ್ರಾಪಹರಣ ಪ್ರಸಂಗವನ್ನು ಆಧರಿಸಿದ ನಾಟಕ.  ಪುರುಷ ಪಾತ್ರಧಾರಿಯೊಬ್ಬ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಈ ಪ್ರಯೋಗ ಅಪಾರ ಮೆಚ್ಚುಗೆ ಪಾತ್ರವಾಯಿತು. ಮಹಿಳಾ ಪ್ರಾತಿನಿಧ್ಯ, ಪುರುಷಾಧಿಪತ್ಯವನ್ನು ಪ್ರಶ್ನಿಸುವ ನಾಟಕ. ಶರಣ್ಯ ರಾಮ್‌ಪ್ರಕಾಶ್‌ ಬರೆದು ನಿರ್ದೇಶಿಸಿದ್ದರು. ಯಕ್ಷಗಾನವೂ, ನಾಟಕವೂ ಬೆರೆತ ಪ್ರಯೋಗದಲ್ಲಿ ನಾನು ನಟಿಸಿದ್ದೆ. ಹೆಣ್ಣು ಮತ್ತು ಗಂಡಿನ ಬೇಧವನ್ನು ಈ ಪ್ರಯೋಗ ಪ್ರಶ್ನಿಸುತ್ತದೆ ಎಂದು ಮೆಚ್ಚಿಕೊಂಡಿದ್ದರು. ರಾಷ್ಟ್ರ ಮಟ್ಟದ ಮಹೀಂದ್ರ ಎಕ್ಸಲೆನ್ಸ್‌ ಇನ್‌ ಥಿಯೇಟರ್‌ ಕಾಂಪಿಟೇಶನ್‌ನಲ್ಲಿ ಈ ನಾಟಕಕ್ಕೆ ಉತ್ತಮ ಚಿತ್ರಕಥೆ ಮತ್ತು ಉತ್ತಮ ನಟ ಎಂದು ಮೆಟಾ ಪ್ರಶಸ್ತಿ ನೀಡಿದ್ದರು.
 

Image
Akshayambara

* ನಿಮ್ಮ ಮುಂದಿನ ಯೋಜನೆಗಳೇನು? ಸವಾಲುಗಳೇನು?
ಲಾಕ್‌ಡೌನ್‌ ವೇಳೆಯಿಂದ ಗಮನಿಸಿದ್ದೀನಿ, ಪ್ರೇಕ್ಷಕರು ಹೊಸ ಬಗೆಯ ಕಂಟೆಂಟ್‌ಗಳನ್ನು ಇಷ್ಟಪಡುತ್ತಿದ್ದಾರೆ. ಒಳ್ಳೆಯ ವಸ್ತುಗಳನ್ನು ಕೊಟ್ಟಾಗ ಸ್ವೀಕರಿಸುತ್ತಾರೆ. ಹಾಗಾಗಿ ಆ ಕಡೆ ಗಮನ ನೀಡಬೇಕಿದೆ. ಕಲಿಕೆಯೊಂದಿಗೆ 150 ಕಥೆಗಳನ್ನು ಮಾಡಿಕೊಂಡಿದ್ದೇನೆ. 'ಮಹಾಕೃತಿ ಬರೆಯಬೇಕಂದ್ರೆ ಮಹಾಕಾವ್ಯವನ್ನೇ ಓದಬೇಕು' ಅಂತ ಕುವೆಂಪು ಅವರು ಹೇಳಿರುವಂತೆ ಹೆಚ್ಚೆಚ್ಚು ಕಲಿಯಲೇಬೇಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180