ಅಂಬೇಡ್ಕರ್ ಜಯಂತಿ ವಿಶೇಷ | ಉತ್ತಮ ಪ್ರಜಾಪ್ರಭುತ್ವಕ್ಕೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ನೀಡಿದ ಏಳು ಸೂತ್ರಗಳು

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಡಾ ಬಿ ಆರ್‌ ಅಂಬೇಡ್ಕರ್‌ ಆಶಿಸಿದ ಪ್ರಜಾಪ್ರಭುತ್ವವೇ ಬೇರೆ. ಇಂದು ನಾವು ನೋಡುತ್ತಿರುವ ಪ್ರಜಾಪ್ರಭುತ್ವವೇ ಬೇರೆ. ಆರ್ಥಿಕ, ಸಾಮಾಜಿಕ ಬದಲಾವಣೆಯ ನಿರೀಕ್ಷೆಯ ಅವರ ಪ್ರಜಾಪ್ರಭುತ್ವದ ಕಲ್ಪನೆಯ ಕುರಿತು ಈ ಲೇಖನ ವಿವರಿಸುತ್ತದೆ
Ambedkar 4

ಡಿಸೆಂಬರ್ 22, 1952 ರಂದು ಡಾ. ಬಿ. ಆರ್. ಅಂಬೇಡ್ಕರ್ ಅವರು ಪುಣೆಯ ಕಾನೂನು ಗ್ರಂಥಾಲಯದಲ್ಲಿ ಮಾಡಿದ ಭಾಷಣ ಇಂದಿನ ಭಾರತದ ಪ್ರಜಾಪ್ರಭುತ್ವವನ್ನು ಪರೀಕ್ಷಿಸುವಲ್ಲಿ ಅದ್ವಿತೀಯವಾಗಿ ಸಹಾಯ ಮಾಡುತ್ತದೆ. ಅಂಬೇಡ್ಕರ್ ಪ್ರಕಾರ ಪ್ರಜಾಪ್ರಭುತ್ವ ಎಂದರೆ ‘ರಕ್ತಪಾತವಿಲ್ಲದೆ, ಪ್ರಜೆಗಳ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಸರ್ಕಾರದ ಒಂದು ಸ್ವರೂಪ ಮತ್ತು ಒಂದು ವಿಧಾನ’.

ಇಂತಹ ಪ್ರಜಾಪ್ರಭುತ್ವವು ಒಂದು ದೇಶದಲ್ಲಿ ಯಶಸ್ವಿಯಾದುವುದಕ್ಕೆ ಇರಬೇಕಾದ ಏಳು ಪೂರ್ವಭಾವಿ ನಿಯಮಗಳನ್ನು ತಿಳಿಸಿದ್ದರು. ಅವುಗಳನ್ನು ಆಗು ಮಾಡಿದಾಗ ಮಾತ್ರ ಪ್ರಜಾಪ್ರಭುತ್ವವು ಆ ನೆಲದಲ್ಲಿ ಯಶಸ್ವಿಯಾಗುತ್ತದೆ ಇಲ್ಲವೇ ಸರ್ವಾಧಿಕಾರದತ್ತ ಮುಖ ಮಾಡುತ್ತದೆ ಎಂಬುದೇ ಅಂಬೇಡ್ಕರ್‌ ಅವರ ನಿಲುವಾಗಿತ್ತು. ಆ ಏಳು ನಿಯಮಗಳು ಕೆಳಗಿನಂತಿವೆ.

  1. ಕಣ್ಣು ಕಕ್ಕುವಂತಹ ಅಸಮಾನತೆ ಇರಬಾರದು.
  2. ವಿರೋಧ ಪಕ್ಷದ ಅಸ್ತಿತ್ವ ಅವಶ್ಯಕವಾಗಿರಬೇಕು.
  3. ಕಾನೂನಿನಲ್ಲಿ ಮತ್ತು ಆಡಳಿತದಲ್ಲಿ ಸಮಾನತೆ.
  4. ಸಾಂವಿಧಾನಿಕ ನೈತಿಕತೆಯ ಆಚರಣೆ.
  5. ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ದಬ್ಬಾಳಿಕೆ ಇರಲೇಬಾರದು.
  6. ಪ್ರಜಾಪ್ರಭುತ್ವಕ್ಕಾಗಿ ಸಮಾಜ ನೈತಿಕ ಶಿಸ್ತನ್ನು ಅಳವಡಿಸಿಕೊಳ್ಳಬೇಕು.
  7. ಸಾರ್ವಜನಿಕ ಆತ್ಮಸಾಕ್ಷಿ ಎಚ್ಚರವಿರಬೇಕು.

ಪ್ರಜಾಪ್ರಭುತ್ವದ ಯಶಸ್ಸಿಗೆ ಅಂಬೇಡ್ಕರ್ ವಿಧಿಸಿದ ಈ ಏಳು ನಿಯಮಗಳನ್ನು ಪ್ರಸ್ತುತ ಭಾರತದ ಸನ್ನಿವೇಶಗಳಿಗೆ ಮುಖಾಮುಖಿಯಾಗಿಸಿ ಪರೀಕ್ಷಿಸಿ ನೋಡೋಣ.

Image
parliament

1.    ಕಣ್ಣು ಕುಕ್ಕುವ ಅಸಮಾನತೆ ಇರಬಾರದು.
ಸ್ವತಂತ್ರ ಭಾರತದ ಮೊಟ್ಟ ಮೊದಲ ಸವಾಲು ಸಮಾನತೆಯೇ ಆಗಿತ್ತು. ಭಾರತದ ಸಂವಿಧಾನವು ಒಬ್ಬರಿಗೆ ಒಂದೇ ಓಟು ಒಂದೇ ಮೌಲ್ಯವೆಂಬ ರಾಜಕೀಯ ಸಮಾನತೆಯನ್ನು ಭಾರತೀಯರಿಗೆ ನೀಡಿತು. ಆದರೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಇಂದಿಗೂ ಮರೀಚಿಕೆಯಾಗಿಯೇ ಉಳಿದುಕೊಂಡು ಬಂದಿದೆ. ಪ್ರತಿ 18 ನಿಮಿಶಗಳಿಗೊಂದರಂತೆ ದಲಿತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಜಾತಿ ಅಸಮಾನತೆಯ ಕಾರಣದಿಂದಾಗಿ ಮರ್ಯಾದೆಗೇಡು ಹತ್ಯೆಗಳು, ಜಾತಿ ದೌರ್ಜನ್ಯಗಳು ಹೆಚ್ಚಾಗಿವೆ. ಎಲ್ಲಾ ಧರ್ಮದ ಮಹಿಳೆಯರ ಮೇಲಿನ ಗಂಡಾಳ್ವಿಕೆ, ಮಹಿಳೆಯರಿಗೆ ನಿರ್ಬಂಧಗಳಿಲ್ಲದೆ ಸಿಗದಿರುವ ಮಂದಿರ-ಮಸೀದಿಗಳಿಗೆ ಮುಕ್ತ ಪ್ರವೇಶ. ಉಳ್ಳವರ ಪಾಲಾಗಿರುವ  ಶಿಕ್ಷಣ. ಶ್ರೀಮಂತರ ಕೈಯಲ್ಲಿರುವ ಬಡವರ ಆರೋಗ್ಯ ಇತ್ಯಾದಿಗಳೆಲ್ಲವೂ ಇವೆಲ್ಲವೂ ಸಾಮಾಜಿಕ ಸಮಾನತೆ ಎಂಬುದು ಇನ್ನೂ ಬಹುಸಂಖ್ಯೆಯಲ್ಲಿರುವ ಸಾಮಾನ್ಯ ಭಾರತೀಯರಿಗೆ ಮರೀಚಿಕೆಯಾಗಿಯೇ ಉಳಿದಿದೆ ಎಂದು ತಿಳಿಸುತ್ತಿವೆ.

ಇಡೀ ಭಾರತದ ಜಿ.ಡಿ.ಪಿ ದರವೇ ಪಾತಾಳಕ್ಕಿಳಿದು ದೇಶಕ್ಕೆ ಸುಮಾರು 10 ರಿಂದ 30 ಲಕ್ಷ ಕೋಟಿ ನಷ್ಟವಾಗಿರುವ ಅದೇ ಸಮಯದಲ್ಲಿ ಗಂಟೆಗೆ 90 ಕೋಟಿಯಷ್ಟು ಹಣವನ್ನು ಅಂಬಾನಿ ತನ್ನ ಸಂಪತ್ತಿಗೆ ಸೇರಿಸಿಕೊಂಡಿದ್ದಾನೆ. 2020 ರಲ್ಲಿದ್ದ 102 ಶತಕೋಟ್ಯಾಧಿಪತಿಗಳು 2021 ರಷ್ಟೊತ್ತಿಗೆ 142 ಕ್ಕೆ ಏರಿಕೆಯಾಗಿದ್ದಾರೆ. ಇದೇ ಸಮಯದಲ್ಲಿ ಭಾರತ ಕೋವಿಡ್‍ನಿಂದಾಗಿ ವಿಲ ವಿಲ ಒದ್ದಾಡುತ್ತಿತ್ತು.

1990 ರ ನಂತರ ಭಾರತಕ್ಕೆ ಕಾಲಿಟ್ಟ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳು ಭಾರತದ ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಇನ್ನಿಲ್ಲದಂತೆ ಹೆಚ್ಚಿಸಿದೆ. ಇತ್ತೀಚೆಗೆ ಆಕ್ಸ್‍ಫಾಮ್ ಸಂಸ್ಥೆ ಬಿಡುಗಡೆಗೊಳಿಸಿದ ವರದಿ ದಿಗ್ಭ್ರಮೆ ಮೂಡಿಸಿದೆ. ಕೋವಿಡ್ ಕಾಲದಲ್ಲಿ ಇಡೀ ಭಾರತದ ಜಿ.ಡಿ.ಪಿ ದರವೇ ಪಾತಾಳಕ್ಕಿಳಿದು ದೇಶಕ್ಕೆ ಸುಮಾರು 10 ರಿಂದ 30 ಲಕ್ಷ ಕೋಟಿ ನಷ್ಟವಾಗಿರುವ ಅದೇ ಸಮಯದಲ್ಲಿ ಗಂಟೆಗೆ 90 ಕೋಟಿಯಷ್ಟು ಹಣವನ್ನು ಅಂಬಾನಿ ತನ್ನ ಸಂಪತ್ತಿಗೆ ಸೇರಿಸಿಕೊಂಡಿದ್ದಾನೆ. 2020 ರಲ್ಲಿದ್ದ 102 ಶತಕೋಟ್ಯಾಧಿಪತಿಗಳು 2021 ರಷ್ಟೊತ್ತಿಗೆ 142 ಕ್ಕೆ ಏರಿಕೆಯಾಗಿದ್ದಾರೆ. ಇದೇ ಸಮಯದಲ್ಲಿ ಭಾರತ ಕೋವಿಡ್‍ನಿಂದಾಗಿ ವಿಲ ವಿಲ ಒದ್ದಾಡುತ್ತಿತ್ತು. ಭಾರತದ ಶೇ. 45 ರಷ್ಟು ಸಂಪತ್ತು ಕೇವಲ 10 ಅತಿಶ್ರೀಮಂತರ ಬಳಿ ಸೇರಿಕೊಂಡಿದೆ. ಮತ್ತೊಂದೆಡೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 116 ದೇಶಗಳ ಪೈಕಿ ಭಾರತ 101 ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳಕ್ಕಿಂತಲೂ ಹಿಂದಿದೆ. ಅಂದು ‘ವರ್ಗ ವರ್ಗಗಳ ಮಧ್ಯೆ ಆಳವಾದ ಬಿರುಕುಗಳು ಪ್ರಜಾಪ್ರಭುತ್ವ ಜಯಶಾಲಿಯಾಗಲು ಇರುವ ಅತ್ಯಂತ ದೊಡ್ಡ ಅಡಚಣೆ’ ಎಂದು ಅಂಬೇಡ್ಕರ್ ಹೇಳಿದ್ದರು. ಇಂದು ಆ ಬಹುದೊಡ್ಡ ಅಡಚಣೆ ಅಪಾಯವಾಗಿ ಪರಿಣಮಿಸಿದೆ. ಕೋಮುವಾದ, ಜಾತಿವಾದ, ಅಸ್ಪøಶ್ಯತೆ, ಪುರುಷಾಧಿಪತ್ಯಗಳು ಪ್ರಜಾಪ್ರಭುತ್ವದ ಆಶಯಗಳನ್ನೇ ನುಂಗಿ ಹಾಕುತ್ತಿವೆ. ಅಂದು ಭಾರತದಲ್ಲಿ ಕಣ್ಣು ಕುಕ್ಕುವಂತಿದ್ದ ಅಸಮಾನತೆ ಇಂದು ಬಡವರ ಕಣ್ಣು ಕೆಂಪಗಾಗುವಷ್ಟು ಹೆಚ್ಚಾಗಿದೆ. ಅಂಬೇಡ್ಕರ್ ಎಚ್ಚರಿಸುವಂತೆ ಇಂತಹ ಅಸಮಾನತೆಯುಳ್ಳ ದೇಶ ತನ್ನಲ್ಲಿ ‘ರಕ್ತ ಕ್ರಾಂತಿಯ ಹುಳು’ ಗಳನ್ನು ಇಟ್ಟುಕೊಂಡಿರುತ್ತದೆ. ಆ ಹಂತ ತಲುಪಿಯಾದ ಮೇಲೆ ಪ್ರಜಾಪ್ರಭುತ್ವದಿಂದ ಅದನ್ನು ಸರಿ ಮಾಡಲು ಸಾಧ್ಯವೇ ಇಲ್ಲ.

2.    ವಿರೋಧ ಪಕ್ಷದ ಅಸ್ತಿತ್ವ ಅವಶ್ಯಕವಾಗಿರಬೇಕು.
ಈ ಮೇಲಿನ ವಾಕ್ಯವನ್ನು ಹದಿಹರೆಯದ ಯುವಕರಿಗೆ ಕೇಳಿದರೆ ಬಹುಶಃ ಹಾಗೆಂದರೇನು ಎಂದು ಪ್ರಶ್ನಿಸಿಬಿಡುತ್ತಾರೆ. ಹೌದು ರಾಜಕೀಯವಾಗಿ ಇಂದು ಸಮರ್ಥವಾದ ವಿರೋಧ ಪಕ್ಷವಿಲ್ಲ. ಅಂಬೇಡ್ಕರ್ ಹೇಳುವಂತೆ ‘ಸರ್ಕಾರಕ್ಕೆ ಸವಾಲನ್ನೆಸೆಯಬಲ್ಲ ಜನಗಳು ಪಾರ್ಲಿಮೆಂಟಿನಲ್ಲಿ ಸಿದ್ಧವಾಗಿರಬೇಕು, ಪ್ರಜಾಪ್ರಭುತ್ವವೆಂದರೆ, ಯಾರಿಗೂ ಆಳುವುದಕ್ಕೆ ನಿರಂತರ ಅಧಿಕಾರ ಇರುವುದಿಲ್ಲ. ಆ ಆಳ್ವಿಕೆ ಜನಗಳ ಮಂಜೂರಾತಿಗೆ ಒಳಪಟ್ಟಿರುತ್ತದೆ ಮತ್ತು ಸದನದಲ್ಲೇ ಅದನ್ನು ಪ್ರಶ್ನಿಸಬಹುದಾಗಿದೆ.. ..ವಿರೋಧ ಪಕ್ಷವಿದ್ದರೆ, ಸರ್ಕಾರ ಯಾವಾಗಲೂ ಬಡಿಗಲ್ಲಿನ ಮೇಲೆಯೇ ಇರುತ್ತದೆ. ತನ್ನ ಪಕ್ಷದವರಲ್ಲದ ಜನರಿಗೆ ತಾನು ಮಾಡಿದ ಕೆಲಸಗಳೆಲ್ಲಕ್ಕೂ ಸರ್ಕಾರ ಸಮರ್ಥನೆ ಕೊಡಬೇಕು’. ಆದರೆ ಇಂದಿನ ಭಾರತದ ಪಾರ್ಲಿಮೆಂಟಿನ ಸ್ಥಿತಿ ಸಂಪೂರ್ಣ ಅಪ್ರಜಾಸತ್ತಾತ್ಮಕವಾಗಿದೆ. ಸಂಸತ್ತಿನಲ್ಲಿಯೇ ಸುಳ್ಳು ಹೇಳುವ ಪ್ರಧಾನಮಂತ್ರಿಯನ್ನು ಕಾಣುತ್ತಿದ್ದೇವೆ. ಸದಾ ವಿರೋಧ ಪಕ್ಷಗಳನ್ನು ಲೇವಡಿ ಮಾಡುವ, ತನ್ನ ಆಡಳಿತ ಅವಧಿಯಲ್ಲಿ ನಡೆದ ಅಚಾತುರ್ಯಗಳಿಗೆ ಜವಾಹರಲಾಲ್ ನೆಹರೂ ಕಾರಣವೆನ್ನುವ, ನೋಟು ರದ್ಧತಿಯಂತಹ ಗಂಭೀರ ವಿಷಯವನ್ನು ಸಂಸತ್ತಿಗೆ ತಿಳಿಸದೇ ಸರ್ವಾಧಿಕಾರಿಯಂತೆ ಘೋಷಿಸುವ, ತನ್ನನ್ನು ಪ್ರಶ್ನಿಸಿದವರನ್ನು ದೇಶದ್ರೋಹಿಗಳೆನ್ನುವ ಪ್ರಧಾನಿಯನ್ನು ಭಾರತ ಮೊದಲ ಬಾರಿ ಕಂಡಿದೆ. ತಮ್ಮ ಆರಂಭಿಕ ವರ್ಷದ ಆಡಳಿತದಲ್ಲಿ ನಡೆದ ಸಂಸತ್ತಿನ ಅಧಿವೇಶನ ಸಮಯದಲ್ಲಿ ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿಗಳಿಂದ ಮತ್ತೇನನ್ನು ತಾನೇ ನಿರೀಕ್ಷಿಸಬಹುದು? ಅದಿವೇಶನದಲ್ಲಿಯೂ ಸಹ ತಮ್ಮ ಮಂತ್ರಿಮಂಡಲದ ಸದಸ್ಯರನ್ನು ಮಾತಾಡಲು ಬಿಟ್ಟು ತಾವೂ ಚುನಾವಣಾ ಸ್ಟಾರ್ ಭಾಷಣಕಾರರಂತೆ ಆಗಾಗ ಸುದೀರ್ಘ ಭಾಷಣ ನೀಡಿ ರಂಜಿಸಿಬಿಡುತ್ತಾರೆ. ಪ್ರದಾನಮಂತ್ರಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕೇವಲ ಚುನಾವಣಾ ರ್ಯಾಲಿಗಳಲ್ಲಿ ಮಾತ್ರ. ಇನ್ನುಳಿದ ದಿನಗಳಲ್ಲಿ ಸದಾ ಟಿ.ವಿ ಚಾನಲ್ಲುಗಳ ಪರದೆ ಮೇಲಿರುತ್ತಾರೆ. ಇಂತಹ ಪ್ರಧಾನಮಂತ್ರಿಗಳ ಆಡಳಿತದಲ್ಲಿ ವಿರೋಧಪಕ್ಷಗಳು ಬದುಕಲು ಸಾಧ್ಯವೇ? ಈ ವಿಚಾರದಲ್ಲಿ ಬೆಲೆಯೇರಿಕೆ ಗಗನ ಮುಟ್ಟಿದ್ದರೂ ಸಹ ಸಮರ್ಥವಾದ ಪ್ರತಿರೋಧ ಒಡ್ಡಲು ತಿಣುಕಾಡುತ್ತಿರುವ, ಚುನಾವಣೆ ಬಂದಾಗ ಮಾತ್ರ ವಿರೋಧಪಕ್ಷಗಳದ್ದೂ ಸಹ ಅಷ್ಟೇ ತಪ್ಪಿದೆ.

ಇನ್ನು ಮತ್ತೊಂದು ಸಮರ್ಥ ವಿರೋಧ ಪಕ್ಷವಿರಬೇಕಿತ್ತು. ಅದು ಮಾಧ್ಯಮ. ಪ್ರಜಾಪ್ರಭುತ್ವದ ಕಾವಲು ನಾಯಿಯಂತೆ ಕೆಲಸ ಮಾಡಬೇಕಾಗಿದ್ದ ಮಾಧ್ಯಮಗಳಲ್ಲಿ ಬಹುತೇಕ ಪ್ರಸ್ತುತ ಭಾರತದಲ್ಲಿ ಆಡಳಿತ ಪಕ್ಷ ಬಿಜೆಪಿಯ ಸಾಕು ನಾಯಿಯಂತೆ ಕೆಲಸ ಮಾಡುತ್ತಿದೆ. ‘ಮೋದಿ ಈ ದೇಶದ ತಂದೆ ಇದ್ದಂತೆ’ ಎಂಬುದನ್ನು ನಾಚಿಕೆ ಬಿಟ್ಟು ಒಪ್ಪಿಕೊಳ್ಳುತ್ತವೆ. ಅಂಬೇಡ್ಕರ್ ಅಂದು ಗುರುತಿಸಿದ್ದಕ್ಕಿಂತಲೂ ಮಾಧ್ಯಮ ಇಂದು ಹೆಚ್ಚು ಜನವಿರೋಧಿಯಾಗಿದೆ. ಅಂಬೇಡ್ಕರ್ ‘ದುರಾದೃಷ್ಟವಷಾತ್' ನಮ್ಮ ದೇಶದ ಎಲ್ಲಾ ವರ್ತಮಾನ ಪತ್ರಿಕೆಗಳೂ, ಒಂದಲ್ಲ ಒಂದು ಕಾರಣಕ್ಕೆ, ಬಹುಶಃ ಸರ್ಕಾರದ ಜಾಹಿರಾತುಗಳಿಂದ ಬರುವ ಆದಾಯಕ್ಕಾಗಿ ವಿರೋಧ ಪಕ್ಷಕ್ಕೆ ಕೊಡುವುದಕ್ಕಿಂತ ಅತೀ ಹೆಚ್ಚು ಪ್ರಚಾರವನ್ನು ಸರ್ಕಾರಕ್ಕೆ ಕೊಡುತ್ತಿವೆ. ಕಾರಣ ಇಷ್ಟೇ: ಅವರಿಗೆ ವಿರೋಧ ಪಕ್ಷದಿಂದ ಯಾವ ಆದಾಯವು ಬರುವುದಿಲ್ಲ. ಅವರಿಗೆ ಸರ್ಕಾರದಿಂದ ಆದಾಯ ಬರುತ್ತದೆ: ಹೀಗಾಗಿ, ಆಳುವ ಪಕ್ಷದ ಸದಸ್ಯರುಗಳು ಪುಂಖಾನುಪುಂಖವಾಗಿ ಮಾಡಿದ ಭಾಷಣಗಳು ಅಂಕಣಗಳಾದ ಮೇಲೆ ಅಂಕಣಗಳಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ವಿರೋಧ ಪಕ್ಷದವರು ಮಾಡಿದ ಭಾಷಣ ಕೊನೆಯ ಪುಟದಲ್ಲಿ, ಕೊನೆಯ ಅಂಕಣದಲ್ಲೆಲ್ಲೋ ಕಾಣಿಸಿಕೊಳ್ಳುತ್ತದೆ’ ಎಂದಿದ್ದರು. ಪ್ರಸ್ತುತ ಭಾರತದ ದೃಶ್ಯ ಮತ್ತು ಡಿಜಿಟಲ್ ಮಾಧ್ಯಮಗಳು ಅಂಬೇಡ್ಕರ್ ಅವರ ಊಹೆಗೂ ನಿಲುಕದಷ್ಟು ಹಿಂದಕ್ಕೆ ಪ್ರಜಾಪ್ರಭುತ್ವವನ್ನು ಎಳೆದುಕೊಂಡು ಹೋಗಿವೆ. ಜಾಹೀರಾತುಗಳಷ್ಟೇ ಮುಖ್ಯವಾಗಿದ್ದು, ಹಣ ಗಳಿಕೆ ಹಾಗೂ ಟಿ.ಆರ್.ಪಿ ದರ ಗಳಿಕೆಗೆ ಮಾತ್ರ ಸೀಮಿತವಾಗದೆ ಆಡಳಿತ ಪಕ್ಷದ ಗುಲಾಮರಂತೆ ವರ್ತಿಸುತ್ತಿವೆ. ಇದಕ್ಕೆ ಮತ್ತೊಂದು ಕಾರಣ ಮಾಧ್ಯಮರಂಗ ಹಿಂದೂ ಮೇಲ್ಜಾತಿಗಳ ಅದರಲ್ಲಿಯೂ ಬ್ರಾಹ್ಮಣ-ಬನಿಯಾಗಳ ವಶದಲ್ಲಿರುವುದಾಗಿದೆ.

3.    ಕಾನೂನಿನಲ್ಲಿ ಮತ್ತು ಆಡಳಿತದಲ್ಲಿ ಸಮಾನತೆ.
ಒಂದು ಸರ್ಕಾರದ ಕೆಲಸ ಶಾಸನ ರೂಪಿಸುವುದು. ಅಗತ್ಯವಾದ ಕಾನೂನುಗಳನ್ನು ಮಾಡುವುದು. ಆದರೆ ಸ್ವತಂತ್ರ ಭಾರತದ ಅವದಿಯಿಂದಲೂ ಸರ್ಕಾರ ಇದಿಷ್ಟಕ್ಕೆ ಸೀಮಿತವಾಗಿಲ್ಲ. ಪ್ರತಿ ಆಡಳಿತ ಹಂತದಲ್ಲಿಯೂ ತನ್ನ ಮೂಗು ತೂರಿಸಿ ಸ್ವಜನ ಪಕ್ಷಪಾತವನ್ನು ಮೆರೆಯುತ್ತಿದೆ. ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯ ಸಮಯದಲ್ಲಿ ನ್ಯಾಯಾದೀಶರನ್ನು ದುರ್ಬಳಕೆ ಮಾಡಿಕೊಂಡದ್ದನ್ನು ನಾವು ಕಂಡಿದ್ದೆವು. ಆದರೂ ಭಾರತದ ಕಾನೂನು ವ್ಯವಸ್ಥೆ ತನ್ನ ಸ್ವತಂತ್ರತೆಯನ್ನು ಉಳಿಸಿಕೊಂಡು ಬಂದಿತ್ತು. ಇಲ್ಲಿಯವರೆಗೂ ಬಹಿರಂಗವಾಗಿ ಒಂದು ಸಿದ್ಧಾಂತದ ಪರ ಮಾತನಾಡಿದ್ದಿಲ್ಲ. ಆದರೆ ಇಂದು ಭಾರತದ ಕಾನೂನು ಹಾಗೂ ಆಡಳಿತದ ಪರಿಸ್ಥಿತಿ ಹಾಗಿಲ್ಲ. ಸ್ವಜನ ಪಕ್ಷಪಾತ ಎಲ್ಲೆ ಮೀರಿ ತಾಂಡವವಾಡುತ್ತಿದೆ. ನ್ಯಾಯಾದೀಶರು ಆಢಳಿತ ಪಕ್ಷದ ಸಿದ್ಧಾಂತಗಳಿಗೆ ತಕ್ಕಂತೆ ತೀರ್ಪು ನೀಡುವಲ್ಲಿ ನಿರತರಾಗಿದ್ದಾರೆ. ಭಾರತದ ಸಂವಿಧಾನಿಕ ಹುದ್ದೆಯಲ್ಲಿ ಕುಳಿತುಕೊಂಡು ಸಂವಿಧಾನ ವಿರೋಧಿ ಮನುಸ್ಮೃತಿಯನ್ನು ಜಪಿಸುತ್ತಿದ್ದಾರೆ. ನವಿಲಿನ ಕಣ್ಣೀರಿನಿಂದ ಸಂತಾನೋತ್ಪತ್ತಿ ಮಾಡಿಸುವಷ್ಟು, ಆಕಳು ನಿಶ್ವಾಸದಲ್ಲಿ ಆಕ್ಸಿಜನ್ ಪತ್ತೆ ಹಚ್ಚುವಷ್ಟು ಅವೈಜ್ಞಾನಿಕ ಮನೋಭಾವ ಉಳ್ಳವರಾಗಿದ್ದಾರೆ. ಅಸ್ಪೃಶ್ಯಳಾದ ಕಾರಣ ಮೇಲ್ಜಾತಿಯವರು ಅತ್ಯಾಚಾರ ಮಾಡಿರುವುದಿಲ್ಲವೆಂದು ತೀರ್ಪು ನೀಡುತ್ತಿದ್ದ ನ್ಯಾಯಾಲಯ ಇಂದು ನಗು ನಗುತ್ತಾ ದ್ವೇಷ ಭಾಷಣ ಮಾಡಿದರೆ ಅದು ಶಿಕ್ಷಾರ್ಹ ಕೃತ್ಯವಲ್ಲ ಎಂಬಷ್ಟು ಮಟ್ಟಕ್ಕೆ ಇಳಿದಿದೆ. ಪೊಲೀಸ್ ವ್ಯವಸ್ಥೆ ಆಡಳಿತ ಪಕ್ಷಗಳ ಕೈಗೊಂಬೆಯಾಗಿದ್ದು ದಾರಿಹೋಕರಿಗೂ ಅವರಿಗೂ ವ್ಯತ್ಯಾಸವೇ ಇಲ್ಲದಂತಾಗಿದೆ. ಅಂಬೇಡ್ಕರ್ ‘ಸರ್ಕಾರದ ಕೆಲಸವೆಂದರೆ, ನೀತಿಯನ್ನು ಮಾಡುವುದಷ್ಟೇ ಮಾತ್ರ; ಅವರು ಆಡಳಿತದಲ್ಲಿ ತಲೆಹಾಕಬಾರದು ಮತ್ತು ಯಾವುದೇ ಪಕ್ಷಪಾತವನ್ನು ಮಾಡಬಾರದು. ಇದು ಒಂದು ಮೂಲಭೂತ ವಿಷಯವಾಗಿತ್ತು. ಆದರೆ ನಾವೀಗ ಅದರಿಂದ ಆಗಲೇ ದೂರ ಸರಿದಿದ್ದೇವೆ.’ ಎಂದು ಟೀಕಿಸಿದ್ದರು. ಇಂದು ಭಾರತದ ಸರ್ಕಾರ ಬಹಿರಂಗವಾಗಿಯೇ ಪಕ್ಷಪಾತ ಮಾಡುತ್ತಾ ಭಾರತವನ್ನು ಪ್ರಜಾಪ್ರಭುತ್ವದ ಕಣ್ಣಿಗೆ ಕಾಣದಷ್ಟು ದೂರಕ್ಕೆ ಕರೆದುಕೊಂಡು ಹೋಗುತ್ತಿದೆ. ನ್ಯಾಯಾಧೀಶರ ವಿರುದ್ಧ ನ್ಯಾಯಾಧೀಶರನ್ನು, ಪತ್ರಕರ್ತರ ವಿರುದ್ಧ ಪತ್ರಕರ್ತರನ್ನು, ವಕೀಲರ ವಿರುದ್ಧ ವಕೀಲರನ್ನು, ಪೊಲೀಸರ ವಿರುದ್ಧ ಪೊಲೀಸರನ್ನೇ ನಿಲ್ಲಿಸಿ ಆಟನೋಡುವ ಕೆಲಸಕ್ಕೆ ಸ್ವತಃ ಸರ್ಕಾರವೇ ನಿಂತಿದೆ. ನ್ಯಾಯಾಧೀಶರೊಬ್ಬರ ಖಾಸಗಿ ಮಾಹಿತಿ ಕದಿಯಲು ಪೆಗಾಸಸ್ ಬಳಸಿಕೊಂಡಿರುವಾಗ ಈ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ನಾವು ಊಹಿಸಿಕೊಳ್ಳಬಹುದಾಗಿದೆ. ಮತ್ತೊಂದು ಕಡೆ ಸರ್ಕಾರದ ಪರವಾಗಿ ಕೆಲಸ ಮಾಡಿದ ನ್ಯಾಯಾದೀಶರಿಗೆ ನಿವೃತ್ತಿಯ ನಂತರ ರಾಜ್ಯ ಸಭೆ ಸದಸ್ಯತ್ವ, ರಾಜ್ಯಪಾಲ ಹುದ್ದೆ, ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೂಡ ಲಭಿಸುತ್ತಿದೆ. ಈ ಬೆಳವಣಿಗೆ ಹೊಸದಲ್ಲವಾದರೂ ಹಿಂದಿಗಿಂತಲೂ ಅದರ ಪ್ರಮಾಣ ಹೆಚ್ಚಾಗಿದೆ ಹಾಗೂ ನಿರ್ಭೀತಿಯಿಂದ ಕೂಡಿದೆ.

ಇಂದು ಭಾರತದ ಸರ್ಕಾರ ಬಹಿರಂಗವಾಗಿಯೇ ಪಕ್ಷಪಾತ ಮಾಡುತ್ತಾ ಭಾರತವನ್ನು ಪ್ರಜಾಪ್ರಭುತ್ವದ ಕಣ್ಣಿಗೆ ಕಾಣದಷ್ಟು ದೂರಕ್ಕೆ ಕರೆದುಕೊಂಡು ಹೋಗುತ್ತಿದೆ. ನ್ಯಾಯಾಧೀಶರ ವಿರುದ್ಧ ನ್ಯಾಯಾಧೀಶರನ್ನು, ಪತ್ರಕರ್ತರ ವಿರುದ್ಧ ಪತ್ರಕರ್ತರನ್ನು, ವಕೀಲರ ವಿರುದ್ಧ ವಕೀಲರನ್ನು, ಪೊಲೀಸರ ವಿರುದ್ಧ ಪೊಲೀಸರನ್ನೇ ನಿಲ್ಲಿಸಿ ಆಟನೋಡುವ ಕೆಲಸಕ್ಕೆ ಸ್ವತಃ ಸರ್ಕಾರವೇ ನಿಂತಿದೆ.

4.    ಸಾಂವಿಧಾನಿಕ ನೈತಿಕತೆಯ ಆಚರಣೆ.
ಅಂಬೇಡ್ಕರ್ ಅಂದು ‘ನನ್ನ ಪ್ರಿಯ ಜನಗಳೇ, ಸಂವಿಧಾನವನ್ನು ಯಾವ ಉದ್ದೇಶ ಇಟ್ಟುಕೊಂಡು ಮಾಡಿದ್ದೇವೆ ಎಂಬುದನ್ನು ನೀವು ಮರೆತು ಬಿಟ್ಟಿದ್ದೀರಿ. ನಮಗೆ ಒಂದು ವಂಶಪಾರಂಪರ್ಯದ ಚಕ್ರಾಧಿಪತ್ಯವಾಗಲೀ, ಒಬ್ಬ ವಂಶಪಾರಂಪರ್ಯದ ರಾಜನಾಗಲೀ ಅಥವ ಸರ್ವಾಧಿಕಾರಿಯಾಗಲೀ ಬೇಡ ಎನ್ನುವ ಕಾರಣಕ್ಕಾಗಿ’ ಎಂದಿದ್ದರು. ಸಂವಿಧಾನ ಒಂದು ಹಂದರ ಅದರ ಮೇಲಿರಬೇಕಾದ ಮಾಂಸ ಮಜ್ಜನವೇ ‘ಸಾಂವಿಧಾನಿಕ ನೈತಿಕತೆ’ ಎಂದಿದ್ದರು. ಭಾರತ ದೇಶ ಹಿಂದೆಂದೂ ಈ ವಂಶಪಾರಂಪರ್ಯ ರಾಜಕಾರಣದಿಂದ ಹೊರತಾಗಿರಲಿಲ್ಲ. ಅದು ಇಂದು ಎಲ್ಲೆ ಮೀರಿ ಬೆಳೆದಿದೆ. ಕಾಂಗ್ರೆಸ್ಸಿನ ರಾಹುಲ್ ಗಾಂಧಿಯವರನ್ನು ‘ಯುವರಾಜ’ ಎಂದು ವ್ಯಂಗ್ಯವಾಡಿದ್ದ ಬಿಜೆಪಿಂ 45 ಮಂದಿ ಅನುವಂಶೀಯ ಸಂಸದರನ್ನು ಒಳಗೊಂಡಿದೆ.

ಬಿಜೆಪಿಯ ಸಂಸದ ಸಂವಿಧಾನವನ್ನು ಬದಲಾಯಿಸುವ ಮಾತನಾಡಿದ್ದು ಮೋದಿ ಸರ್ಕಾರದ ಸಾಂವಿಧಾನಿಕ ನೈತಿಕತೆಯನ್ನು ಅದೆಷ್ಟರ ಮಟ್ಟಿಗೆ ಉಳಿಸಿಕೊಂಡಿದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಎಲ್ಲಾ ಧರ್ಮಗಳು ಸಮಾನ ಎಂಬ ಸಾಂವಿಧಾನಿಕ ನೈತಿಕತೆಯನ್ನೇ ಹೀಯಾಳಿಸುತ್ತ ಅಧಿಕಾರ ಹಿಡಿದ ಬಿಜೆಪಿ ಇಂದು ಹಿಂದುತ್ವವೇ ಶ್ರೇಷ್ಠ ಎನ್ನುತ್ತಾ ಹಿಂದೂಗಳಲ್ಲಿನ ಬಡಮಕ್ಕಳನ್ನು ಇತರೆ ಧರ್ಮಗಳ ವಿರುದ್ಧ ಎತ್ತಿಕಟ್ಟುತ್ತಿದೆ. ತೆರೆಮರೆಯ ಭಾಷಣ ವೀರರು ತಮ್ಮ ಮಕ್ಕಳನ್ನು, ಆಪ್ತರನ್ನು ಬೃಹತ್ ಕೋಟೆಯೊಳಗೆ ಸಂರಕ್ಷಿಸಿಕೊಂಡು ಶಾಸಕರು, ಸಂಸದರನ್ನಾಗಿ ಮಾಡುತ್ತಿದ್ದಾರೆ. ಇದು ಅದೆಷ್ಟರ ಮಟ್ಟಿಗೆ ವ್ಯಾಪಿಸಿದೆ ಎಂದರೆ ಕೋಮುವಾದಕ್ಕೆ ಬಡ ದಲಿತ ಅಥವಾ ಹಿಂದುಳಿದ ಜಾತಿಯ ಯುವಕನ ಹೆಣ ಬಿದ್ದಿತೆಂದರೆ ಅಲ್ಲೊಬ್ಬ ಮೇಲ್ಜಾತಿ ಯುವಕ ಶಾಸಕನೋ ಸಂಸದನೋ ಆಗುವಷ್ಟು. ಇಂತಹವರ ಆಡಳಿತದಲ್ಲಿ ಸ್ವಾತಂತ್ರ್ಯ, ಸಮಾನತೆ ಹಾಗೂ ಬಂದುತ್ವದ ಶವಯಾತ್ರೆ ನಡೆಸುವ ಹುನ್ನಾರ ನಿಧಾನಕ್ಕೆ ರೂಪತಾಳುತ್ತಿದೆ.

ಇದನ್ನು ಓದಿದ್ದೀರಾ | ಅಂಬೇಡ್ಕರ್‌ ಜಯಂತಿ ವಿಶೇಷ | ಬೆಳಗಾವಿಯ ಮುಸ್ಲಿಮ್‌ ಕುಟುಂಬದ ಭೂ ಹಕ್ಕಿಗೆ ಹೋರಾಡಿದ್ದ ಬಾಬಾ ಸಾಹೇಬ್‌

5.    ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ದಬ್ಬಾಳಿಕೆ ಇರಲೇಬಾರದು.
ಸಂವಿಧಾನ ರಚನಾ ಸಭೆಯಲ್ಲಿ ಮುಸ್ಲೀಮರೂ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭದ್ರತೆ ಹಾಗೂ ಸುಗಮ ಬದುಕಿನ ಭರವಸೆ ನೀಡಲಾಗಿತ್ತು. ಆದರೆ ಹಿಂದೆಂದಿಗಿಂತಲೂ ಇಂದು ಮುಸಲ್ಮಾನರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಬಿಜೆಪಿಯು ಆರೆಸ್ಸೆಸ್ಸಿನ ಬಹಿರಂಗ ಅಜೆಂಡಾವಾದ ಹಿಂದೂ-ಮುಸ್ಲಿಂ ಒಡೆದು ಆಳುವ ನೀತಿಯನ್ನು ಅತ್ಯಂತ ಕ್ರೂರವಾಗಿ ಕೈಗೊಂಡಿದೆ. ಫ್ರಿಜ್ಜಿನಲ್ಲಿ ಮಾಂಸವಿರಿಸಿದ್ದಕ್ಕೆ, ರೈಲು ಪ್ರಯಾಣದಲ್ಲಿ ಸೀಟು ಬಿಡದಿದ್ದಕ್ಕೆ ಮುಸ್ಲೀಮರನ್ನು ಹಿಂದೂಗಳ ಹೆಸರಿನಲ್ಲಿ ಕೆಲವು ಭಯೋತ್ಪಾದಕರು ದೆವ್ವಗಳಂತೆ ವರ್ತಿಸಿ ಕೊಂದು ಹಾಕುವಷ್ಟು ಮಟ್ಟಿಗೆ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಿತಿ ಮೀರಿದೆ. ‘ಪ್ರಜಾಪ್ರಭುತ್ವ ಸಮರ್ಪಕವಾಗಿ ಕೆಲಸ ಮಾಡಬೇಕಾದರೆ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಇರಲೇಬಾರದು. ಬಹುಸಂಖ್ಯಾತರು ಸರ್ಕಾರ ನಡೆಸುತ್ತಿದ್ದರೂ ಅಲ್ಪಸಂಖ್ಯಾತರಿಗೆ ನಾವು ಅನ್ಯಾಯಕ್ಕೊಳಗಾಗುತ್ತಿಲ್ಲ ಅಥವಾ ನಮ್ಮನ್ನು ಮರ್ಮಾಘಾತಕ್ಕೆ ಗುರಿ ಪಡಿಸುತ್ತಿಲ್ಲ ಎಂದೆನಿಸಬೇಕು. ನಾವು ಕ್ಷೇಮವಾಗಿದ್ದೇವೆ ಎಂಬ ಭಾವನೆ ಅವರಿಗೆ ಬರಲೇಬೇಕು’ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಇಂದಿನ ಕರ್ನಾಟಕ ಸರ್ಕಾರ ಪ್ರಾಯೋಜಿತ ಮುಸ್ಲಿಂ ದ್ವೇಷವನ್ನೇ ನೋಡಿದರೂ ಸಾಕು. ಎಲ್ಲವೂ ಬೆತ್ತಲಾಗುತ್ತದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಬೊಮ್ಮಾಯಿ ಸರ್ಕಾರ ಆರೆಸ್ಸೆಸ್‍ನ ಸರ್ವಾಧಿಕಾರಿ ಫ್ಯಾಸಿಸ್ಟ್ ದೋರಣೆಯನ್ನು ಮೈಗೂಡಿಸಿಕೊಂಡಿದೆ. ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಹಲಾಲ್-ಜಟ್ಕಾ ಕಟ್ ವಿವಾದ, ನಬಿಸಾಬ್ ಕಲ್ಲಂಗಡಿ ಅಂಗಡಿ ದ್ವಂಸ ಪ್ರಕರಣ ಇತ್ಯಾದಿಗಳೆಲ್ಲವೂ ಮುಸ್ಲಿಂ ದ್ವೇಷವನ್ನು ಎತ್ತಿ ತೋರಿಸುತ್ತಿದೆ. ಕೋಮುವಾದದಿಂದ ಹಿಂದೂ ಓಟ್ ಬ್ಯಾಂಕನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ನಿರ್ಧರಿಸಿರುವ ಬಿಜೆಪಿ ಪಕ್ಷ ದಲಿತರು ಮತ್ತು ಶೂದ್ರ ಮಕ್ಕಳನ್ನು ಮುಸ್ಲೀಮರ ವಿರುದ್ಧ ನಿಲ್ಲಿಸಿ ಹಿಂದೂ ಮೇಲ್ಜಾತಿ ಮಕ್ಕಳನ್ನು ವಿಧಾನಸÀಭೆಗೆ ಕಳಿಸುವ ಉತ್ತರ ಭಾರತದ ಹಳೆಯ ಹುನ್ನಾರವನ್ನೇ ಕರ್ನಾಟಕದಲ್ಲಿ ಮುಂದುವರೆಸಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರಗಳು ಮುಸ್ಲೀಂ ಸಮುದಾಯದ ಕಣ್ಣೊರೆಸುವುದಿರಲಿ ಅವರನ್ನು ಅವರ ಪಾಡಿಗೆ ಬದುಕಲು ಬಿಟ್ಟರೆ ಸಾಕು ಎಂಬಂತಾಗಿದೆ.

ಇಂದಿನ ಕರ್ನಾಟಕ ಸರ್ಕಾರ ಪ್ರಾಯೋಜಿತ ಮುಸ್ಲಿಂ ದ್ವೇಷವನ್ನೇ ನೋಡಿದರೂ ಸಾಕು. ಎಲ್ಲವೂ ಬೆತ್ತಲಾಗುತ್ತದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಬೊಮ್ಮಾಯಿ ಸರ್ಕಾರ ಆರೆಸ್ಸೆಸ್‍ನ ಸರ್ವಾಧಿಕಾರಿ ಫ್ಯಾಸಿಸ್ಟ್ ದೋರಣೆಯನ್ನು ಮೈಗೂಡಿಸಿಕೊಂಡಿದೆ.

ತಮ್ಮ ‘ಪ್ರಭುತ್ವ ಮತ್ತು ಅಲ್ಪಸಂಖ್ಯಾತರು’ ಕೃತಿಯಲ್ಲಿ ಅಂಬೇಡ್ಕರ್‌ ಅವರು ಅಲ್ಪಸಂಖ್ಯಾತರು ಎಂಬ ಪರಿಕಲ್ಪನೆಗೆ ‘ಎಲ್ಲಾ ಶೋಷಿತರು’ ಎಂಬ ವ್ಯಾಖ್ಯಾನ ಕೊಡುತ್ತಾರೆ. ಆ ದೃಷ್ಟಿಯಲ್ಲಿ ನೋಡಿದಾಗಲೂ ಸಹ ಪ್ರಸ್ತುತ ಭಾರತ ಸರ್ಕಾರ ಅತ್ಯಂತ ಅಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿದೆ. 2005 ರಿಂದ 2020 ರವರೆಗೆ ಮಹಿಳೆಯರ ಮೇಲೆ 3,60,000 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಹಲವು ಪುಟ್ಟ ಬಾಲಕಿಯರೂ ಇದ್ದಾರೆ. 2020 ರಲ್ಲಿಯೇ 1,53,052 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020 ರಲ್ಲಿ ಪ್ರತಿದಿನ 28 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018 ರಿಂದ 2020 ರವರೆಗೆ 25,000 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2014 ರಿಂದ 787 ಭಾರತದ ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ 20 ನಿಮಿಶಗಳಿಗೊಂದು ದಲಿತರು ಮತ್ತು ಆದಿವಾಸಿಗಳ ಮೇಲೆ ದೌರ್ಜನ್ಯವಾಗುತ್ತದೆ. ಮೀಸೆ ಬಿಟ್ಟಿದ್ದಕ್ಕೆ, ಕುದುರೆ ಹತ್ತಿದ್ದಕ್ಕೆ, ಅಂಬೇಡ್ಕರ್ ರಿಂಗ್ ಟೋನ್ ಹಾಕಿಕೊಂಡದ್ದಕ್ಕೆ, ನೀರು ಮುಟ್ಟಿದ್ದಕ್ಕೆ, ನ್ಯಾಯ ಕೇಳಿದ್ದಕ್ಕೆ, ದೇಗುಲ ಪ್ರವೇಶಿದ್ದಕ್ಕೆ ಹೀಗೆ ದಲಿತರ ಸಣ್ಣ ಮಿಸುಕಾಡುವಿಕೆಯನ್ನೂ ಸಹಿಸದೆ ಹಿಂದೂ ಮೇಲ್ಜಾತಿಗಳು ಅವರನ್ನು ಹತ್ಯೆ ಮಾಡಿದೆ. ಆದಿವಾಸಿಗಳನ್ನು ಒಕ್ಕಲೆಬ್ಬಿಸುವಲ್ಲಿ ಸರ್ಕಾರವೇ ಸ್ವತಃ ಉದ್ಯಮಿಗಳೊಂದಿಗೆ ಕೈ ಜೋಡಿಸಿದೆ. ಸ್ವತಃ ಪ್ರದಾನಿಗಳೇ ಜಿಯೋ ಜಾಹೀರಾತು ನೀಡುತ್ತಾರೆಂದರೆ ಆದಿವಾಸಿಗಳ ಪರ ನಿಲ್ಲುವವರಾರು?
ಇದು ಆಳುವ ಸರ್ಕಾರ ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತ ಶೋಷಿತರನ್ನು ನಡೆಸಿಕೊಳ್ಳುತ್ತಿರುವ ರೀತಿ.

6.    ಪ್ರಜಾಪ್ರಭುತ್ವಕ್ಕಾಗಿ ಸಮಾಜ ನೈತಿಕ ಶಿಸ್ತನ್ನು ಅಳವಡಿಸಿಕೊಳ್ಳಬೇಕು.
ಸಮಾಜ ನೈತಿಕ ಶಿಸ್ತನ್ನು ಹೊಂದಬೇಕೆನ್ನುವವರು ರಾಜಕೀಯದಲ್ಲಿ ಶಿಸ್ತಿರಬೇಕು ಎಂಬುದು ಗಮನಿಸುವುದೇ ಇಲ್ಲ ಎನ್ನುವುದು ಅಂಬೇಡ್ಕರರ ಆರೋಪ. ಅದು ಯಾವಾಗಲೂ ನಿಜವೇ ಆಗಿದೆ. ಅವರೇ ಹೇಳುವಂತೆ ‘ನೈತಿಕತೆ ಎನ್ನುವುದು ರಾಜಕೀಯದಿಂದ ಹೊರತಾಗಿದೆ. ನಿಮಗೆ ರಾಜಕೀಯ ಗೊತ್ತಿರಬಹುದು ಆದರೆ ನೈತಿಕತೆ ಅಂದರೆ ಏನೇನೂ ಗೊತ್ತಿಲ್ಲದೇ ಇರಬಹುದು. ಏಕೆಂದರೆ, ನೈತಿಕತೆ ಇಲ್ಲದೆ ರಾಜಕೀಯ ಇರಬಲ್ಲುದು. ಇದೊಂದು ದಿಗ್ಬ್ರಮೆಗೊಳಿಸುವ ಪ್ರಸ್ತಾಪ’. ಆದ್ದರಿಂದ ನೈತಿಕತೆಯನ್ನು ಬಯಸುವ ಪ್ರತಿಯೊಬ್ಬ ರಾಜಕಾರಣಿಯೂ ಸಹ ತಮ್ಮ ನೈತಿಕ ಶಿಸ್ತಿನ ಬಗ್ಗೆ ಯೋಚಿಸಲಾರರು. ಪ್ರಸ್ತುತ ರಾಜಕಾರಣದಲ್ಲಿ ರಾಜಕಾರಣಿಗಳ ನೈತಿಕ ಶಿಸ್ತನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗಲಾರದು. ಶಾಸನಸಭೆಗಳಲ್ಲಿಯೇ ಅತ್ಯಾಚಾರಿ ಆರೋಪಿಗಳಿರುವಾಗ ಅವರಿಂದ ಯಾವ ನೈತಿಕತೆಯನ್ನು ನಿರೀಕ್ಷಿಸಲು ಸಾಧ್ಯ? ಸಂಸತ್ತು, ವಿಧಾನಸಭೆಗಳಲ್ಲಿಯೇ ಅತ್ಯಾಚಾರ ಆರೋಪಿಗಳಿದ್ದಾರೆ. 2019 ರಲ್ಲಿ ಎ.ಡಿ.ಆರ್ (Association for Democratic Reform) ನಡೆಸಿದ ಸಮೀಕ್ಷೆಯ ಪ್ರಕಾರ ಶೇ. 30 ರಷ್ಟು ಸಂಸದರು ಮತ್ತು ಶಾಸಕರ ವಿರುದ್ಧ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ, ಅಪಹರಣದಂತಹ ಗಂಭೀರ ದೂರು ದಾಖಲಿಸಲಾಗಿದೆ. ಬಿಜೆಪಿಯಲ್ಲಿ ಶೇ. 39, ಕಾಂಗ್ರಸ್ಸಿನ ಶೇ. 29 ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳ ಹಾಲಿ ಜನಪ್ರತಿನಿದಿಗಳ ಮೇಲೆ ಕ್ರಿಮಿನಲ್ ಕೇಸುಗಳಿವೆ. ಉತ್ತರಪ್ರದೇಶದ ಉನ್ನಾವೋ ಪ್ರಕರಣದಲ್ಲಿ ಬಿಜೆಪಿ ಮಂತ್ರಿ ನಡೆಸಿದ ಅಮಾನವೀಯ ಕೃತ್ಯಗಳನ್ನು ಹಾಗೂ ಹತ್ರಾಸ್ ಪ್ರಕರಣದಲ್ಲಿ ಆದಿತ್ಯನಾಥ್ ಸರ್ಕಾರ ನಡೆದುಕೊಂಡು ಕ್ರೂರತೆಯನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ನಿರ್ಭಯಾ ಪ್ರಕರಣದಲ್ಲಿ ಮಿಡಿದ ದೇಶ ಆಸಿಫಾ ಪ್ರಕರಣಕ್ಕೆ ಮಿಡಿಯದಿದ್ದದ್ದ ನಾಚಿಕೆಗೇಡಿನ ಸಂಗತಿಯನ್ನೂ ಸ್ಮರಿಸಬಹುದು.
ಇನ್ನು ಸಾಮಾನ್ಯ ಜನತೆಯ ಪರವಾಗಿ ಮಾತಾಡುವ, ದುಡಿಯುವ ಜನಪ್ರತಿನಿದಿಗಳು ಶಾಸನಸಭೆಯಲ್ಲಿ ಹುಡುಕಿದರೂ ಸಿಗುವುದಿಲ್ಲ. ಎ.ಡಿ.ಆರ್ ಪ್ರಕಾರ 2019 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸತ್ತು ಸೇರಿದ 539 (ಇನ್ನು ಮೂವರದ್ದು ಮಾಹಿತಿ ಸಿಕ್ಕಿಲ್ಲ) ಸಂಸದರ ಪೈಕಿ 475 ಸಂಸದರು ಕೋಟ್ಯಾಧಿಪತಿಗಳು. ಬಿಜೆಪಿಯ 301 ಸಂಸದರ ಪೈಕಿ 265 (ಶೇ.88) ಸಂಸದರು ಕೋಟ್ಯಾಧಿಪತಿಗಳು. ಕಾಂಗ್ರೆಸ್ಸಿನ 51 ಸಂಸದರಲ್ಲಿ 43 (ಶೇ96) ಸಂಸದರು ಕೋಟ್ಯಾಧಿಪತಿಗಳು. ಹೀಗೆ ಬಹುತೇಕ ಎಲ್ಲಾ ಪಕ್ಷಗಳಲ್ಲಿಯೂ ಶೇ.80 ಕ್ಕಿಂತ ಹೆಚ್ಚು ಕೋಟ್ಯಾಧಿಪತಿಗಳೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವಾಗ ಸಾಮಾನ್ಯ ಜನತೆ ಸ್ಪರ್ಧಿಸಿ ಠೇವಣಿ ಉಳಿಸಿಕೊಳ್ಳಲಾದರೂ ಸಾಧ್ಯವೇ? ಈ ಕೋಟ್ಯಾಧಿಪತಿಗಳು ನಿರುದ್ಯೋಗ, ಉಚಿತ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ಥೆ, ಆಹಾರ ಭದ್ರತೆ, ಬೆಲೆ ಏರಿಕೆ ಬಗ್ಗೆ ಮಾತಾಡಲು ಸಾಧ್ಯವೇ?  


7.    ಸಾರ್ವಜನಿಕ ಆತ್ಮಸಾಕ್ಷಿ ಎಚ್ಚರವಿರಬೇಕು.
‘ಸಾರ್ವಜನಿಕ ಆತ್ಮ ಸಾಕ್ಷಿ ಎಂದರೆ ಯಾರಿಗೆ ಆಗಲೀ ಅನ್ಯಾಯವಾದರೆ, ಅದಕ್ಕೆ ಮನಸ್ಸು ಕದಡುವುದು. ಯಾರೇ ಆಗಲೀ ಆ ನಿರ್ದಿಷ್ಟ ಅನ್ಯಾಯದಿಂದ ಒಬ್ಬರಿಗೆ ತೊಂದರೆ ಆಗಿದ್ದೇ ಆದರೆ ಅವರಿಗೆ ಪರಿಹಾರವನ್ನು ಕೊಡಿಸಲು ಅವರೊಂದಿಗೆ ಕೈ ಜೋಡಿಸುವುದು’ ಎಂದು ಅಂಬೇಡ್ಕರ್ ಬಯಸುತ್ತಾರೆ. ಕಳೆದೆರಡು ತಿಂಗಳುಗಳಿಂದ ಅಷ್ಟೇ ಏಕೆ 2014 ರಿಂದ ಮುಸಲ್ಮಾನರೆಂಬ ಕಾರಣಕ್ಕೆ ಮಾಡಬಾರದ ಪಾಪಗಳನ್ನೆಲ್ಲಾ ಹಿಂದೂ ಧರ್ಮದ ಹೆಸರಿನಲ್ಲಿ ಕೆಲವು ರಾಜಕೀಯ ಹಿತಾಸಕ್ತಿಯುಳ್ಳ ಸಂಘಟನೆಗಳು ನಡೆಸುತ್ತಿರುವಾಗ ಸಜ್ಜನ ಹಿಂದೂಗಳು ತುಟಕ್ ಪಿಟಕ್ ಎನ್ನದೆ ಕುಳಿತಿರುವುದನ್ನು ನೋಡಿದರೆ ಭಾರತೀಯ ಬಹುಸಂಖ್ಯಾತರಲ್ಲಿ ಆತ್ಮಸಾಕ್ಷಿ ಸತ್ತು ಹೋಗಿರುವಂತಿದೆ. ಒಂದು ಹೆಣ್ಣುಮಗುವಿನ ಮೇಲೆ ಅತ್ಯಾಚಾರವಾದ ನಂತರ ಆ ಮಗು ಹಿಂದೂವೋ, ಮುಸ್ಲೀಮೋ, ಕ್ರೈಸ್ತಳೋ ಇನ್ನಾವ ಜಾತಿಯವಳೋ ಎಂದು ನೋಡಿ ತುಟಿ ಬಿಚ್ಚುವ ಇಲ್ಲವೇ ತುಟಿ ಕಟ್ಟಿಕೊಳ್ಳುವ ತೀರ್ಮಾನ ಮಾಡುವ ಜನರೇ ಹೆಚ್ಚಿರುವ ಪ್ರಸ್ತುತ ಭಾರತದಲ್ಲಿ ನಿಜಕ್ಕೂ ಇನ್ನೂ ಆತ್ಮಸಾಕ್ಷಿ ಎಂಬುದಿದೆಯೇ? ಹೆಣ ಮುಂದಿಟ್ಟುಕೊಂಡು ರಾಜಕೀಯ ಮಾಡುವ ಕಿಡಿಗೇಡಿಗಳು ಕಣ್ಣ ಮುಂದೆಯೇ ತಪ್ಪು ತಪ್ಪಾಗಿ ಹಿಂದೂ ಧರ್ಮವನ್ನು ವ್ಯಾಖ್ಯಾನಿಸುತ್ತಿರುವಾಗ ಕನಿಷ್ಠ ‘ಇವರಲ್ಲ ಹಿಂದೂಗಳು’ ಎನ್ನುವಷ್ಟೂ ಧೈರ್ಯವಿಲ್ಲದವರಲ್ಲಿ ಆತ್ಮಸಾಕ್ಷಿ ಜೀವಂತವಾಗಿದೆಯೇ? ಇತ್ತೀಚಿನ ಕರ್ನಾಟಕದ ಬೆಳವಣಿಗೆ ನೋಡಿದರೆ ತಿಳಿಯುತ್ತದೆ. ಅನ್ಯಾಯದ ವಿರುದ್ಧ ನ್ಯಾಯದ ಪರ ನಿಲ್ಲುವ ಆತ್ಮಸಾಕ್ಷಿ ಸತ್ತು ಹೋಗಿದೆ ಎಂದು.

ಹಾಗಾಗಿ ಹಿಂದೂಗಳ ಹೆಸರಿನಲ್ಲಿ ಆರೆಸ್ಸೆಸ್, ಬಜರಂಗ ದಳ, ಶ್ರೀರಾಮ ಸೇನೆ ಮುಂತಾದ ಸಂಘಟನೆಗಳು ನಿರಂತರವಾಗಿ ದಲಿತರು, ಮುಸ್ಲಿಂ ಹಾಗೂ ಕ್ರೈಸ್ತರ ಮೇಲೆ ದಾಳಿ ಎಸಗುತ್ತಿರುವಾಗ ಸಜ್ಜನ ಹಿಂದೂಗಳು ಕಣ್ಮುಚ್ಚಿ, ಕಿವಿ ಮುಚ್ಚಿ, ಬಾಯಿ ಮುಚ್ಚಿಕೊಂಡಿರುವುದು ಭಯ ಹುಟ್ಟಿಸುತ್ತದೆ. ಅಂಬೇಡ್ಕರ್ ಆಶಿಸಿದ ಆ ನೈಜ ಪ್ರಜಾಪ್ರಭುತ್ವ ಮತ್ತೆಂದಿಗೂ ನಮಗೆ ದಕ್ಕುವುದಿಲ್ಲವೆಂಬ ಆತಂಕ ಉಂಟಾಗುತ್ತದೆ.

ಇಲ್ಲಿಯವರೆಗೆ ಅಂಬೇಡ್ಕರ್‌ ಅವರು ತಿಳಿಸಿದ ಪ್ರಜಾಪ್ರಭುತ್ವದ ಯಶಸ್ವಿಗೆ ಬೇಕಾದ ಪೂರ್ವಭಾವಿ ಏಳು ನಿಯಮಗಳನ್ನು ನನ್ನದೇ ಆದ ರೀತಿಯಲ್ಲಿ ವಾಸ್ತವೀಕರಿಸಿದ್ದೇನೆ. ಈ ಮೇಲಿನ ವಿವರಣೆಗಳನ್ನು ಮೇಲ್ನೋಟಕ್ಕೆ ನೋಡಿದರೂ ಸಹ ಈಗ ನಮ್ಮ ದೇಶದಲ್ಲಿರುವುದು ಪ್ರಜಾಪ್ರಭುತ್ವವಲ್ಲ ಎಂಬುದನ್ನು ನಾವು ಕಂಡುಕೊಳ್ಳಬಹುದಾಗಿದೆ. ಅಂಬೇಡ್ಕರ್ ಅವರೇ ಎಚ್ಚರಿಸಿದಂತೆ ‘ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ನಾವು ಹೇಗೋ ಒಂದು ಕಲ್ಪನೆಯನ್ನು ರೂಢಿಸಿಕೊಂಡಿದ್ದೇವೆ. ಬ್ರಿಟಿಷರು ಹೋಗಿಬಿಟ್ಟಿದ್ದಾರೆ. ನಾವು ಪಡೆದುಕೊಂಡಿರುವ ಸಂವಿಧಾನ ನಮಗೆ ಪ್ರಜಾಪ್ರಭುತ್ವವನ್ನು ಕೊಟ್ಟಿದೆ. ಹಾಗಿದ್ದರೆ, ಇದಕ್ಕಿಂತ ಹೆಚ್ಚಿಗೆ ಇನ್ನೇನು ಬೇಕು? ನಮಗೆ ವಿಶ್ರಾಂತಿ ಬೇಕೆಂದು ನಾವು ಏನನ್ನೂ ಮಾಡದೆ ಇರುವುದಕ್ಕೆ ಆಗುವುದಿಲ್ಲ. ಸಂವಿಧಾನದ ಕೆಲಸ ಮುಗಿದ ಮೇಲೆ ನಮಗೆ ಮಾಡುವುದಕ್ಕೆ ಇನ್ನೇನು ಇಲ್ಲ, ನಮ್ಮ ಕೆಲಸವೆಲ್ಲಾ ಮುಗಿದು ಹೋಗಿದೆ ಎಂದು ಸ್ವಯಂ ತೃಪ್ತಿ ಪಟ್ಟುಕೊಳ್ಳುವ ಹಾಗಿಲ್ಲ’. ಏಕೆಂದರೆ ನಮ್ಮ ಭಾರತದ ಸಂವಿಧಾನ ಸಮಸ್ತ ಭಾರತೀಯರ ಹೆಸರಿನಲ್ಲಿ ಜಾರಿಗೊಳಿಸಿಕೊಂಡು ಆಶಿಸಿದ ಪ್ರಜಾಪ್ರಭುತ್ವ ಇಂದು ಅಸ್ತಿತ್ವದಲ್ಲಿಲ್ಲ. ಇದಕ್ಕೆ ಸಾಕ್ಷಿ ಅಂಬೇಡ್ಕರರು ಹಾಕಿದ್ದ ಪೂರ್ವಭಾವಿ ಏಳು ಶರತ್ತು/ನಿಯಮಗಳಲ್ಲಿ ಒಂದನ್ನೂ ಸಹ ನಮ್ಮ ಭಾರತ ದೇಶ ಪೂರೈಸಿಲ್ಲ. ಪೂರೈಸುವುದಿರಲಿ 1952 ರಲ್ಲಿದ್ದ ಕನಸುಗಳೂ ಸಹ ನಮ್ಮನ್ನಾಳುತ್ತಿರುವ ಸರ್ಕಾರಕ್ಕಿಲ್ಲ. ಮೋದಿ ಸರ್ಕಾರಕ್ಕೆ ಬೇಕಾಗಿರುವುದು ಹಿಂದುತ್ವ ರಾಷ್ಟ್ರ (ಹಿಂದೂರಾಷ್ಟ್ರವಲ್ಲ). ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ದಲಿತ ಮತ್ತು ಮಹಿಳೆ ಎಂದು ಮೇಲಿನಿಂದ ಕೆಳಕ್ಕೆ ಉಚ್ಚ ನೀಚ ಎಂದು ಶ್ರೇಣೀಕರಣ ಮಾಡಿ ವಿಭಜಿಸುವ ರಾಷ್ಟ್ರ. ಅದಕ್ಕಾಗಿ ಇಂದು ಮೋದಿಯವರ ಬೆನ್ನಿಗೆ ನಿಂತಿರುವ ಆರೆಸ್ಸೆಸ್ ಹಿಂದುತ್ವ ಸಮಸ್ತ ಹಿಂದೂಗಳಿಗೆ ಮುಸಲ್ಮಾನರನ್ನು ವಿರೋಧಿಯಂತೆ ಬಿಂಬಿಸಿದೆ. ಅವರ ನಂತರ ಕ್ರೈಸ್ತರನ್ನೂ ತದನಂತರ ದಲಿತರು, ಹಿಂದುಳಿದ ಜಾತಿಗಳನ್ನು ಇಬ್ಬಾಗ ಮಾಡಿ ಪರಸ್ಪರ ಅವರ ನಡುವೆ ಯುದ್ಧವನ್ನು ಜಾರಿಗೊಳಿಸುವ ನೀತಿಯನ್ನು ರೂಪಿಸಿದೆ. ಅವರ ತಾಳಕ್ಕೆ ತಕ್ಕಂತೆ ದಲಿತರು ಮತ್ತು ಹಿಂದುಳಿದ ಜಾತಿಗಳೂ ಸಹ ಕುಣಿಯುತ್ತಿದ್ದಾರೆ.

ಸಂವಿಧಾನ ಸಭೆಯಲ್ಲಿಯೂ ಅಂಬೇಡ್ಕರ್ ಎಚ್ಚರಿಸಿದ್ದರು. ಸಾಮಾಜಿಕ ಸಮಾನತೆ ಹಾಗೂ ಆರ್ಥಿಕ ಸಮಾನತೆಯನ್ನು ಆದಷ್ಟು ಬೇಗ ಜಾರಿಗೊಳಿಸದಿದ್ದರೆ ನೊಂದ ಜನರು ಪ್ರಜಾಪ್ರಭುತ್ವವನ್ನೇ ದ್ವಂಸ ಮಾಡಿಬಿಡುತ್ತಾರೆ ಎಂದು. ಈಗ ದೇಶವನ್ನು ತದ್ವಿರುದ್ಧವಾಗಿ ನಡೆಸಿ ಸರ್ವಾಧಿಕಾರದ ಹೊಸ್ತಿಲಲ್ಲಿ ತಂದು ನಿಲ್ಲಿಸಿದ್ದಾರೆ. ಒಂದು ಕಾಲನ್ನು ಒಳಗೂ ಮತ್ತೊಂದನ್ನೂ ಹೊರಗೂ ಹಾಕಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೈಜ ದೇಶಪ್ರೇಮಿಗಳಾದ ಭಾರತೀಯರು ಭಾರತವನ್ನು ಸರ್ವಾಧಿಕಾರದ ಬಾಹುಳ್ಯದಿಂದ ಹಿಂದೆಳೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಕೆಲವೇ ವರ್ಷಗಳಲ್ಲಿ ಅಂಬೇಡ್ಕರ್ ಎಚ್ಚರಿಸಿದಂತೆ ಅಸಮಾನತೆಯಿಂದ ಬೇಸತ್ತು ಹೋಗಿರುವ ಜನರ ನಡುವಿಂದಲೇ ‘ರಕ್ತಕ್ರಾಂತಿಯ ಹುಳು’ ಸಿಡಿಯುತ್ತದೆ. ಆಗ ಅಳುವುದಕ್ಕೂ ನಮ್ಮೊಂದಿಗೆ ಯಾರೂ ಇರಲಾರರು. ಏಕೆಂದರೆ ಹಿಟ್ಲರ್ ತನ್ನವರನ್ನೂ ಉಳಿಸಲಿಲ್ಲ.

 

ನಿಮಗೆ ಏನು ಅನ್ನಿಸ್ತು?
1 ವೋಟ್