ಜಿಲ್ಲಾಧಿಕಾರಿ ಲಂಚ ಪ್ರಕರಣ | ಡಿಸಿ ಮಂಜುನಾಥ್‌ಗೆ ಜಾಮೀನು: ಆಕ್ಷೇಪಣೆ ಸಲ್ಲಿಸಲು ಎಸಿಬಿಗೆ ನಿರ್ದೇಶನ 

high court of karnataka
  • ಅಮಾನತುಗೊಂಡ ಜಿಲ್ಲಾಧಿಕಾರಿ ಮಂಜುನಾಥರಿಂದ ಜಾಮೀನು ಅರ್ಜಿ 
  • ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ಆಗಸ್ಟ್‌ 1ಕ್ಕೆ ವಿಚಾರಣೆ ಮುಂದೂಡಿಕೆ  

ಜಮೀನು ಒಡೆತನಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಲಂಚ ಪಡೆದ ಆರೋಪದ ಮೇಲೆ ಅಮಾನತುಗೊಂಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ಅವರು ಜಾಮೀನಿಗಾಗಿ ಮನವಿ ಮಾಡಿದ್ದು, ಈ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಕರ್ನಾಟಕ ಹೈಕೋರ್ಟ್‌ ನಿರ್ದೇಶನ ನೀಡಿದೆ. 

ಬೆಂಗಳೂರು ಜಿಲ್ಲೆಯ ಆನೇಕಲ್‌ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆದಿರುವ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ತಹಶೀಲ್ದಾರ್ ಮಹೇಶ್ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್ ಕುಮಾರ್ ಅವರನ್ನು ಸಹ ಎಸಿಬಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಜೆ. ಮಂಜುನಾಥ ಅವರು 3ನೇ ಆರೋಪಿಯಾಗಿದ್ದಾರೆ. 

ಅಮಾನತುಗೊಂಡ ಜಿಲ್ಲಾಧಿಕಾರಿ ಜೆ. ಮಂಜುನಾಥ ಅವರ ಜಾಮೀನು ಕೋರಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ಏಕ ಸದಸ್ಯ ಪೀಠ, ಈ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಎಸಿಬಿಗೆ ಸೂಚಿಸಿ, ಆಗಸ್ಟ್‌ 1ಕ್ಕೆ ವಿಚಾರಣೆಯನ್ನು ಮುಂದೂಡಿತು. ಜೆ. ಮಂಜುನಾಥ ಪರವಾಗಿ ವಕೀಲ ಚಂದ್ರಮೌಳಿ ವಾದಿಸಿದರು.  

ನಿಮಗೆ ಏನು ಅನ್ನಿಸ್ತು?
0 ವೋಟ್