ಛತ್ತೀಸಗಢ | 5 ವರ್ಷ ಜೈಲು ಶಿಕ್ಷೆ ಅನುಭವಿಸಿದ ಬಳಿಕ 121 ಆದಿವಾಸಿಗಳ ಖುಲಾಸೆ

  • 2017ರಲ್ಲಿ ಸಿಆರ್‌ಪಿಎಫ್‌ ಮತ್ತು ನಕ್ಸಲರ ನಡುವೆ ಗುಂಡಿನ ದಾಳಿ ನಡೆದಿತ್ತು
  • ನಕ್ಸಲರೊಂದಿಗಿನ ಸಂಪರ್ಕ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲ

2017ರಲ್ಲಿ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 25 ಸೈನಿಕರನ್ನು ಹತ್ಯೆ ಮಾಡಿ, ಏಳು ಮಂದಿ ಗಾಯಗೊಂಡಿದ್ದ ಪ್ರಕರಣ ಸಂಬಂಧ ಬಂಧಿತರಾಗಿದ್ದ 121 ಆದಿವಾಸಿಗಳನ್ನು ಛತ್ತೀಸಗಡ ದಾಂತೇವಾಡದ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ.

2017ರ ಏಪ್ರಿಲ್ 24 ರಂದು ಬುರ್ಕಪಾಲ್ ಮತ್ತು ಜಾಗರಗುಂದ ನಡುವಿನ ರಸ್ತೆ ನಿರ್ಮಾಣ ಕಾಮಗಾರಿಗೆ ರಕ್ಷಣೆ ನೀಡುತ್ತಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) 74ನೇ ಬೆಟಾಲಿಯನ್‌ನ ಸುಮಾರು 100 ಜನರ ತಂಡದ ಮೇಲೆ ದಾಳಿ ಮಾಡಲು ನಕ್ಸಲರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ವೇಳೆ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿತ್ತು.

ದಾಳಿಯಲ್ಲಿ 25 ಪೊಲೀಸರು ಮೃತಪಟ್ಟು, ಅನೇಕರು ಗಾಯಗೊಂಡಿದ್ದರು. ನಂತರ, ಈ ಘಟನೆ ಸಂಬಂಧ 121 ಮಂದಿ ಆದಿವಾಸಿಗಳನ್ನು ಪೊಲೀಸರು ಬಂಧಿಸಿದ್ದರು. ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಕಾಯಿದೆ, ಸ್ಫೋಟಕ ವಸ್ತುಗಳ ಕಾಯಿದೆ, ಛತ್ತೀಸಗಢ ವಿಶೇಷ ಸಾರ್ವಜನಿಕ ಭದ್ರತಾ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆದಿವಾಸಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣಗಳ ವಿಶೇಷ ನ್ಯಾಯಾಧೀಶ ದೀಪಕ್ ಕುಮಾರ್ ದೇಶ್ಲೇಹ್ರ ಅವರು ಶುಕ್ರವಾರ ಆರೋಪಿಗಳನ್ನು ಖುಲಾಸೆಗೊಳಿಸಿದರು. "ಅಪರಾಧದಲ್ಲಿ ಆದಿವಾಸಿಗಳ ಪಾಲ್ಗೊಳ್ಳುವಿಕೆ ಮತ್ತು ನಕ್ಸಲರೊಂದಿಗಿನ ಸಂಪರ್ಕವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ" ಎಂದು ವಕೀಲೆ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತೆ ಬೇಲಾ ಭಾಟಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಆದಿವಾಸಿಗಳ ಅರಣ್ಯ ಹಕ್ಕು ಕಸಿದುಕೊಳ್ಳುವ ಕೇಂದ್ರ ಸರ್ಕಾರದ ಹೊಸ ನಿಯಮ 

“121 ಆದಿವಾಸಿಗಳಿಗೆ ಕೊನೆಗೂ ನ್ಯಾಯ ಸಿಕ್ಕಿದೆ, ಆದರೆ ಅವರು ಮಾಡದ ಅಪರಾಧಕ್ಕಾಗಿ ಇಷ್ಟು ವರ್ಷ ಜೈಲಿನಲ್ಲಿ ಏಕೆ ಇಡಬೇಕಾಗಿತ್ತು? ಇದಕ್ಕಾಗಿ ಅವರಿಗೆ ಯಾರು ಪರಿಹಾರ ನೀಡುತ್ತಾರೆ?" ಎಂದು ಭಾಟಿಯಾ ಪ್ರಶ್ನಿಸಿದ್ದಾರೆ.

ಈ ಕುರಿತು ‘ನ್ಯೂಸ್ 18’ ಇಂಗ್ಲಿಷ್ ವೆಬ್‌ಸೈಟ್‌ ವರದಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್