ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ. 58ರಷ್ಟು ಮೀಸಲಾತಿ ರದ್ದುಗೊಳಿಸಿದ ಛತ್ತೀಸ್‌ಗಢ ಹೈಕೋರ್ಟ್

  • ಸರ್ಕಾರಿ ವೃತ್ತಿಪರ ಮತ್ತು ಇತರ ಕಾಲೇಜುಗಳ ಪ್ರವೇಶಕ್ಕೆ ಶೇ. 58 ಮೀಸಲಾತಿ
  • ರಾಜ್ಯ ಸರ್ಕಾರದ ಮೀಸಲಾತಿ ಪ್ರಶ್ನಿಸಿ ಸುಮಾರು ಪ್ರತ್ಯೇಕ 21 ಅರ್ಜಿ ಸಲ್ಲಿಕೆ

ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ. 58ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ನ್ಯಾಯಾಲಯವು ಶೇ. 50ಕ್ಕಿಂತ ಹೆಚ್ಚು ಮೀಸಲಾತಿಯನ್ನು ಅಸಾಂವಿಧಾನಿಕ ಎಂದು ಘೋಷಿಸಿದೆ. ಮುಖ್ಯ ನ್ಯಾಯಮೂರ್ತಿ ಅರುಪ್ ಕುಮಾರ್ ಗೋಸ್ವಾಮಿ ಮತ್ತು ನ್ಯಾಯಮೂರ್ತಿ ಪಿ ಪಿ ಸಾಹು ಅವರ ವಿಭಾಗೀಯ ಪೀಠವು ರಾಜ್ಯ ಸರ್ಕಾರದ ಶೇ. 58ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದೆ.

2012ರಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಇತರ ಕಾಲೇಜುಗಳ ಪ್ರವೇಶದಲ್ಲಿ ಶೇ. 58ರಷ್ಟು ಮೀಸಲಾತಿ ನೀಡಿತ್ತು. ಛತ್ತೀಸ್‌ಗಢ ಸರ್ಕಾರವು ಮೀಸಲಾತಿ ನೀಡಲು ಮುಂದಾದ ನಿಯಮವನ್ನು ಪ್ರಶ್ನಿಸಿ ಸುಮಾರು 21 ಪ್ರತ್ಯೇಕ ಅರ್ಜಿಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಜುಲೈ 7ರಂದು ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿದ್ದು, ಸೋಮವಾರ (ಸೆಪ್ಟೆಂಬರ್ 19) ಹೈಕೋರ್ಟ್ ತೀರ್ಪು ನೀಡಿದೆ.

ಡಾ. ರಮಣ್ ಸಿಂಗ್ ಅವರ ಸರ್ಕಾರವು ಶೇ. 58ರಷ್ಟು ಮೀಸಲಾತಿ ನೀಡಲು ನಿರ್ಧರಿಸಿತ್ತು. ಡಾ. ಪಂಕಜ್ ಸಾಹು, ಗುರು ಘಾಸಿದಾಸ್ ಸಾಹಿತ್ಯ ಸಮಿತಿ ಹಾಗೂ ಇತರರು ಹೈಕೋರ್ಟ್‌ನಲ್ಲಿ 21 ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಶೇ. 50ಕ್ಕಿಂತ ಹೆಚ್ಚು ಮೀಸಲಾತಿಯು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳಿಗೆ ವಿರುದ್ಧ ಮತ್ತು ಅಸಾಂವಿಧಾನಿಕ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮುಖ್ಯ ನ್ಯಾಯಮೂರ್ತಿ ಅರುಪ್ ಕುಮಾರ್ ಗೋಸ್ವಾಮಿ ಮತ್ತು ನ್ಯಾಯಮೂರ್ತಿ ಪಿ ಪಿ ಸಾಹು ಅವರ ವಿಭಾಗೀಯ ಪೀಠವು ಶೇ. 50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡುವುದು ಅಸಾಂವಿಧಾನಿಕ ಎಂದು ಹೇಳಿದೆ. 

ಈ ಸುದ್ದಿ ಓದಿದ್ದೀರಾ? ವಿದೇಶಿ ವಿಶ್ವವಿದ್ಯಾಲಯಗಳ ಜೊತೆ ಒಪ್ಪಂದ ಮಾಡಿಕೊಂಡು ಜಂಟಿ ಪದವಿ ನೀಡಲಿರುವ 48 ಭಾರತೀಯ ಸಂಸ್ಥೆಗಳು

ಗುರು ಘಾಸಿದಾಸ ಸಾಹಿತ್ಯ ಸಮಿತಿಯು ಪರಿಶಿಷ್ಟ ಜಾತಿಗಳ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡುವುದನ್ನು ವಿರೋಧಿಸಿತ್ತು. 2012ರಲ್ಲಿ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ (ಎಸ್‌ಸಿ) ವರ್ಗದ ಮೀಸಲಾತಿ ಶೇಕಡಾವಾರು ಪ್ರಮಾಣವನ್ನು ಶೇ. 16 ರಿಂದ ಶೇ. 12ಕ್ಕೆ ಕಡಿಮೆ ಮಾಡಲು ಮೀಸಲಾತಿ ನಿಯಮಗಳಿಗೆ ತಿದ್ದುಪಡಿ ಮಾಡಿತ್ತು. ಜೊತೆಗೆ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿಯನ್ನು ಶೇ. 20ರಿಂದ ಶೇ. 32ಕ್ಕೆ ಹೆಚ್ಚಿಸಲಾಗಿತ್ತು. ಆದರೆ, ಇತರ ಹಿಂದುಳಿದ ವರ್ಗಗಳ ಶೇ. 14ರಷ್ಟು ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿತ್ತು.  

ಪರಿಶಿಷ್ಟ ಪಂಗಡಗಳ ಮೀಸಲಾತಿಯ ಶೇಕಡಾವಾರು ಪ್ರಮಾಣವನ್ನು ಶೇ. 12ರಷ್ಟು ಹೆಚ್ಚಿಸುವುದು ಮತ್ತು ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ. 4ರಷ್ಟು ಕಡಿಮೆ ಮಾಡಿರುವುದರ ಬಗ್ಗೆ ಹೈಕೋರ್ಟ್‌ಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಹಾಗೇ ಸರ್ಕಾರದ ಮೀಸಲಾತಿ ನಿಯಮಗಳು ಕಾನೂನು ಬಾಹಿರ ಎಂದು ಆರೋಪಿಸಿ 21 ಪ್ರತ್ಯೇಕ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್