ವಿದ್ಯಾರ್ಥಿನಿಯರು ಬಡಿಸಿದ್ದ ಊಟ ಚೆಲ್ಲಿಸಿ, ಪೊಲೀಸರ ಅತಿಥಿಯಾದ ಅಡುಗೆ ನೌಕರ

  • ರಾಜಸ್ಥಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾತಿ ನಿಂದನೆ ಘಟನೆ
  • ಲಾಲಾ ರಾಮ್ ವಿರುದ್ಧ ಗೋಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 

ಪರಿಶಿಷ್ಟ ಜಾತಿಯ ಇಬ್ಬರು ಬಾಲಕಿಯರಿಗೆ ಬಡಿಸಿದ ಅನ್ನವನ್ನು ಎಸೆಯುವಂತೆ ಇತರೆ ಮಕ್ಕಳಿಗೆ ಸೂಚಿಸಿದ್ದ ಅಡುಗೆ ನೌಕರ ಲಾಲಾ ರಾಮ್ ಗುರ್ಜರ್ ಎಂಬಾತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಈ ಘಟನೆ ರಾಜಸ್ಥಾನದ ಉದಯಪುರ ಜಿಲ್ಲೆಯ ಬರೋಡಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಈತ ತಯಾರಿಸಿದ್ದ ಮಧ್ಯಾಹ್ನದ ಬಿಸಿ ಊಟವನ್ನು ಬಾಲಕಿಯರು ಇತರ ವಿದ್ಯಾರ್ಥಿಗಳಿಗೆ ಬಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಲಾ ರಾಮ್, ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರು ಬಡಿಸಿರುವ ಊಟವನ್ನು ಬಿಸಾಡುವಂತೆ ಬೇರೆ ವಿದ್ಯಾರ್ಥಿಗಳಿಗೆ ಹೇಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಲಾಲಾ ರಾಮ್ ಮಾತನ್ನು ಕೇಳಿದ ವಿದ್ಯಾರ್ಥಿಗಳು ಊಟವನ್ನು ಎಸೆದಿದ್ದರು. ಈ ವಿಚಾರವನ್ನು ವಿದ್ಯಾರ್ಥಿನಿಯರು ಮನೆಯಲ್ಲಿ ತಿಳಿಸಿದಾಗ ಬಾಲಕಿಯರ ಸಂಬಂಧಿಕರು ಶಾಲೆಗೆ ಬಂದು ಅಡುಗೆಯವನ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಬಳಿಕ ಲಾಲಾ ರಾಮ್ ವಿರುದ್ಧ ಗೋಗುಂದ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಓದಿದ್ದೀರಾ? “ಕೊರಗರು ಕುಡಿತ-ದುಶ್ಚಟಗಳಿಂದ ಸಾಯುತ್ತಿದ್ದಾರೆ ಎಂಬ ಸರ್ಕಾರದ ಉಲ್ಲೇಖ ಖಂಡನೀಯ”

“ಪ್ರತಿ ದಿನ ಲಾಲಾ ರಾಮ್ ಊಟ ಬಡಿಸಲು ಮೇಲ್ಜಾತಿಯ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದ. ಆದರೆ, ಅವರು ಸರಿಯಾಗಿ ಬಡಿಸದ ಕಾರಣ ಶಿಕ್ಷಕರೊಬ್ಬರು ಊಟ ಬಡಿಸುವಂತೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರಿಗೆ ಹಹೇಳಿದ್ದರು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್