ಗದಗ | ಸಂಬಂಧದಲ್ಲೇ ಮದುವೆಯಾದ ಆರೋಪ; ದಲಿತ ಕುಟುಂಬಕ್ಕೆ ದಲಿತ ಸಮುದಾಯದಿಂದಲೇ ಬಹಿಷ್ಕಾರ

Dalit Lives Matter
  • 14 ವರ್ಷಗಳಿಂದ ಗ್ರಾಮ ತೊರೆದಿದ್ದ ದಲಿತ ಕುಟುಂಬ
  • ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೆ

ಪ್ರೀತಿಸಿ ವಿವಾಹವಾಗಿದ್ದ ಕಾರಣಕ್ಕೆ ದಲಿತ ಸಮುದಾಯವೇ ದಲಿತ ಕುಟುಂಬವನ್ನು ಕುಲದಿಂದ ಬಹಿಷ್ಕಾರ ಹಾಕಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ನಡೆದಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಗ್ರಾಮದ ಎಸ್ ಸಾಬಣ್ಣ ಮಾದರ ಎಂಬ ಕುಟುಂಬಕ್ಕೆ ಈಗ ಬಹಿಷ್ಕಾರ ಹಾಕಲಾಗಿದೆ. ಎಸ್ ಸಾಬಣ್ಣ ಮಾದರ ಅವರ ಪುತ್ರ ಶಿವಾನಂದ ಮಾದರ ಎಂಬಾತ ಅದೇ ಜಾತಿಯ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಸಂಬಂಧದಲ್ಲಿ ಶಿವಾನಂದ ಮತ್ತು ಯುವತಿ ತಂದೆ-ಮಗಳು ಆಗುತ್ತಾರೆ ಎಂದು ಯುವತಿ ಕುಟುಂಬದವರು ಆರೋಪಿಸಿದ್ದಾರೆ.

ಆದರೆ, ಅದನ್ನು ಮರೆತು 2009ರಲ್ಲಿ ಮದುವೆ ಆಗಿದ್ದಾರೆ. ಬಳಿಕ ಯುವತಿ ಕುಟುಂಬಸ್ಥರು ಇವರ ಮೇಲೆ ಕತ್ತಿ ಮಸಿಯಲಾರಂಬಿಸಿದ್ದಾರೆ. ಇದರಿಂದ ಶಿವಾನಂದ ಮಾದರ ಕುಟುಂಬ 2009 ರಲ್ಲಿ ಊರು ತೊರೆದು 14 ವರ್ಷದ ಬಳಿಕ ಈಗ ಊರಿಗೆ ಬಂದಿದ್ದಾರೆ.

ಊರಿನವರು ಯಾರಾದರೂ ಎಸ್ ಸಾಬಣ್ಣ ಮಾದರ ಕುಟುಂಬದವರನ್ನು ಮಾತನಾಡಿಸಿದರೆ. ಸಹಾಯ ಮಾಡಿದರೆ ಅವರಿಗೆ ಒಂದು ಸಾವಿರ ರೂ. ದಂಡ ಮತ್ತು ಶಿಕ್ಷೆ ಘೋಷಣೆ ಮಾಡಲಾಗಿದೆ. ದಲಿತರಿಂದಲೇ ದಲಿತರಿಗೆ ಬಹಿಷ್ಕಾರ ಹಾಕಿರುವುದರಿಂದ ಮನನೊಂದ ಎಸ್ ಸಾಬಣ್ಣ ಮಾದರ ಅವರ ಕುಟುಂಬದ 12 ಮಂದಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ.

ಶಿವಾನಂದ ಮತ್ತು ಯುವತಿ ಇಬ್ಬರೂ ಮಾದಿಗ ಸಮುದಾಯದವರು. ಇತ್ತೀಚೆಗೆ ಯುವತಿ ತಂದೆ ಮೃತಪಟ್ಟ ನಂತರ ಇವರನ್ನು ಊರಿಗೆ ಕರೆಸಿಕೊಂಡಿದ್ದಾರೆ. ಆಸ್ತಿ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಶಿವಾನಂದ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಇಡಬ್ಲ್ಯುಎಸ್ ಮೀಸಲಾತಿ | ಸ್ವಾಗತದ ನಿಲುವಿನ ಮರುಪರಿಶೀಲನೆಗೆ ಮುಂದಾದ ಕಾಂಗ್ರೆಸ್

ಎಸ್ ಸಾಬಣ್ಣ ಕುಟುಂಬದ 11 ಮಂದಿ ಮೂರು ದಿನದಿಂದ ರಸ್ತೆ ಬದಿ ಕಾಲ ಕಳೆಯುತ್ತಿದ್ದಾರೆ. 2009ರಲ್ಲಿ ಯುವತಿ ಕುಟುಂಬಸ್ಥರು ಎರಡು ಮನೆಗಳನ್ನು ಧ್ವಂಸ ಮಾಡಿದ್ದಾರೆ. ಕುಟುಂಬದ ಯಜಮಾನ ಸಾಬಣ್ಣ, ಶಾಂತವ್ವ, ಮಗ ಶಿವಾನಂದ, ಸೊಸೆ, ಮತ್ತೋರ್ವ ಮಗ ಮುತ್ತಣ್ಣ, ರೇಣುಕಾ, ಅಂಜನಾದೇವಿ ಸೇರಿ ಐದು ಜನ ಮಕ್ಕಳು ಬೀದಿ ಪಾಲಾಗಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್