ಉತ್ತರಾಖಂಡ | ದಲಿತ ವರನನ್ನು ಕುದುರೆಯಿಂದ ಕೆಳಗಿಳಿಸಿದ ಪ್ರಕರಣ ತನಿಖೆಗೆ ಆದೇಶ

UTTARAKAND MARRAIGE
  • ದಲಿತರೆಂಬ ಕಾರಣಕ್ಕೆ ಮದುವೆ ಮೆರವಣಿಗೆಯಿಂದ ವರನನ್ನು ಕೆಳಗಿಳಿಸಿದ ಗ್ರಾಮಸ್ಥರು
  • ಉತ್ತರಾಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯ ತಾಲಾ ತರಿಯಾಲ್ ಗ್ರಾಮದಲ್ಲಿ ಘಟನೆ 

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಮದುವೆ ಮೆರವಣಿಗೆ ವೇಳೆ ದಲಿತ ಯುವಕನನ್ನು ಕುದುರೆಯಿಂದ ಬಲವಂತವಾಗಿ ಇಳಿಸಿದ ಪ್ರಕರಣ ಪರಿಶೀಲಿಸುವಂತೆ ಹಿರಿಯ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ.

ಅಲ್ಮೋರಾ ಜಿಲ್ಲೆಯ ಸಾಲ್ಟ್ ಉಪವಿಭಾಗ ವ್ಯಾಪ್ತಿಯ ತಾಲಾ ತರಿಯಾಲ್ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಈ ಬಗ್ಗೆ ವರನ ತಂದೆ ದರ್ಶನ್ ಲಾಲ್ ಅವರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅವರಿಗೆ ಮಂಗಳವಾರ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಮಗನನ್ನು ಕುದುರೆಯಿಂದ ಕೆಳಗಿಳಿಸದಿದ್ದರೆ ಕೊಲೆ ಮಾಡುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ" ಎಂದು ವರನ ತಂದೆ ದೂರಿನಲ್ಲಿ ಹೇಳಿದ್ದಾರೆ.

"ಪುತ್ರ ವಿಕ್ರಮ್ ಕುಮಾರ್ ಮದುವೆ ಮೆರವಣಿಗೆ ತಡೆದ ಗ್ರಾಮದ ಕೆಲ ನಿವಾಸಿಗಳು, ದಲಿತ ಸಮುದಾಯಕ್ಕೆ ಸೇರಿದವರು ಮದುವೆಯಲ್ಲಿ ಕುದುರೆ ಏರಬಾರದು ಎಂದು ಕೆಳಗಿಳಿಯುವಂತೆ ಒತ್ತಾಯಿಸಿದರು" ಎಂದು ಲಾಲ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

"ಮಗನನ್ನು ಕುದುರೆಯಿಂದ ಕೆಳಗಿಳಿಸದಿದ್ದರೆ ಕೊಲೆ ಮಾಡುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ ಮತ್ತು ಜಾತಿ ನಿಂದನೆಯನ್ನೂ ಮಾಡಿದ್ದಾರೆ" ಎಂದು ಅವರು ದೂರಿನಲ್ಲಿ ಬರೆದಿದ್ದಾರೆ.

ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಆರಂಭಿಸುವುದಾಗಿ ಲಾಲ್ ಎಚ್ಚರಿಸಿದ್ದಾರೆ. ಅಲ್ಮೋರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಘಟನೆ ಕುರಿತು ತನಿಖೆಗೆ ಸೂಚಿಸಿದ್ದಾರೆ. ತನಿಖೆಗಾಗಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಸಾಲ್ಟ್‌ ಉಪ ವಿಭಾಗದ ಎಸ್‌ಡಿಎಂ ಗೌರವ್ ಪಾಂಡೆ ತಿಳಿಸಿದ್ದಾರೆ. “ಗ್ರಾಮವು ಕಂದಾಯ ಪೊಲೀಸರ ಅಧೀನದಲ್ಲಿರುವುದರಿಂದ ನಾನು ನೈಬ್ ತಹಸೀಲ್ದಾರ್ ಮತ್ತು ಇತರ ಕಂದಾಯ ಅಧಿಕಾರಿಗಳನ್ನು ವಿಚಾರಣೆಗಾಗಿ ಸ್ಥಳಕ್ಕೆ ಕಳುಹಿಸಿದ್ದೇನೆ. ತನಿಖಾ ವರದಿ ಗಮನಿಸಿ ಕ್ರಮ ಕೈಗೊಳ್ಳಲಾಗುವುದು" ಎಂದು ಪಾಂಡೆ ಹೇಳಿದರು.

ಇದನ್ನೂ ಓದಿದ್ದೀರಾ:? ಮದುವೆಗೆ ಕುದುರೆ ಮೇಲೆ ಮೆರವಣಿಗೆ ಹೋದ ಮೇಘವಾಲ್ ಸಮುದಾಯಕ್ಕೆ ಬಹಿಷ್ಕಾರ

''ಈ ವಿಚಾರದಲ್ಲಿ ತನಿಖೆ ನಡೆಸುವಂತೆ ಸಂಬಂಧಪಟ್ಟ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗೆ ಸೂಚಿಸಿದ್ದೇನೆ. ದೂರು ನಿಜವೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು'' ಎಂದು ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದೂರು ಆಧರಿಸಿ ಐವರು ಮಹಿಳೆಯರು ಸೇರಿದಂತೆ ಆರು ಮಂದಿ ವಿರುದ್ಧ  ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಪರಿಶಿಷ್ಟ ಜಾತಿ/ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಸಂಬಂಧಿತ ಸೆಕ್ಷನ್‌ಗಳಡಿ ಆರೋಪಿಗಳ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ ಎಂದು ಎಸ್‌ಡಿಎಂ ತಿಳಿಸಿದೆ.

ಆರೋಪ ನಿರಾಕರಿಸಿದ ಗ್ರಾಮಸ್ಥರು

“ಭೂಮಿಯ ದೇವತೆ (ಸ್ಥಳೀಯ ದೇವತೆ) ದೇವಸ್ಥಾನದ ಸಮೀಪ ನಿರ್ದಿಷ್ಟ ಸ್ಥಳದಲ್ಲಿ ಯಾರೂ (ಜಾತಿ ಯಾವುದೇ ಇರಲಿ) ಕುದುರೆ ಮೇಲೆ ಕುಳಿತುಕೊಳ್ಳಬಾರದೆಂಬ ಹಳೆಯ ಸಂಪ್ರದಾಯ ಇದೆ. ಗ್ರಾಮಸ್ಥರು ಈ ಸಂಪ್ರದಾಯ ಅನುಸರಿಸುವಂತೆ ವರನ ಕುಟುಂಬಕ್ಕೆ ಮನವಿ ಮಾಡಿದರು. ಆದರೆ ಅವರು ಇದನ್ನು ನಿರಾಕರಿಸಿದರು. ಕೆಲವರು ಗ್ರಾಮದ ವಾತಾವರಣ ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ” ಎಂದು ಥಾಲ್ ತರಿಯಾಲ್ ಗ್ರಾಮದ ಮುಖ್ಯಸ್ಥ ವಿಜಯ್ ಧ್ಯಾನಿ ಹೇಳಿದರು.  

ರಾಜಸ್ಥಾನದಲ್ಲೂ ಬಹಿಷ್ಕಾರದ ವರದಿ

ಇತ್ತೀಚೆಗಷ್ಟೇ ರಾಜಸ್ಥಾನದ ಗ್ರಾಮವೊಂದರಲ್ಲಿ ಇಂಥದ್ದೇ ಪ್ರಕರಣ ವರದಿಯಾಗಿತ್ತು. ಮದುವೆಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮೇಘವಾಲ್ ಸಮುದಾಯದ ವರನೊಬ್ಬ ಕುದುರೆ ಸವಾರಿ ಮಾಡಿ ದೇಗುಲ ಪ್ರವೇಶ ಮಾಡಿದ ಕಾರಣಕ್ಕೆ ಇಡೀ ಸಮುದಾಯವನ್ನು ಬಹಿಷ್ಕರಿಸಲಾಗಿತ್ತು.

ಚಿತ್ತೋರ್‌ಗಢ್ ಜಿಲ್ಲೆಯ ಡುಂಗ್ಲಾದಲ್ಲಿರುವ ಅಲೋಡ್ ಗ್ರಾಮದಲ್ಲಿ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಕ್ಕೆ ಸೇರಿದ ಮೇಘವಾಲ್ ಸಮುದಾಯದವರಿಗೆ ಪಡಿತರ ಮತ್ತು ನೀರು ಪೂರೈಕೆಯಲ್ಲಿ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಲಾಗಿತ್ತು. ಈ ವಿಚಾರವಾಗಿ ಮಾತನಾಡಿದ ಮೂಕ್ನಾಯಕ್ ವರ ಭೇರೂಲಾಲ್, “ಏಪ್ರಿಲ್ 19ರಂದು ನನ್ನ ಮದುವೆ ಮೆರವಣಿಗೆಯಲ್ಲಿ (ಬಿಂದೋರಿ) ಕುದುರೆ ಸವಾರಿ ಮಾಡುವುದಾಗಿ ಆಡಳಿತಕ್ಕೆ ಮನವಿ ಮಾಡಿದ್ದೆವು. ಆಗ ಇದರಿಂದ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ ಗ್ರಾಮಸ್ಥರು ಸಡಗರದಿಂದ ಮದುವೆ ಮೆರವಣಿಗೆ ನಡೆಸೋಣ ಎಂದು ತಿಳಿಸಿದ್ದರು" ಎಂದು ವಿವರಿಸಿದ್ದಾರೆ.  ಆದರೆ ನಂತರದ ದಿನಗಳಲ್ಲಿ ಗ್ರಾಮಸ್ಥರು ಸಮುದಾಯದವರನ್ನು ಬಹಿಷ್ಕರಿಸಿದ್ದರು. ಈ ವಿಚಾರ ಜಿಲ್ಲಾಡಳಿತಕ್ಕೆ ತಿಳಿದು ಅಧಿಕಾರಿಗಳ ಮಧ್ಯಸ್ಥಿಕೆಯೊಂದಿಗೆ ರಾಜಿ ಮಾಡಿಸಲಾದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. 

ನಿಮಗೆ ಏನು ಅನ್ನಿಸ್ತು?
0 ವೋಟ್