ಮೋಕ್ಷಮ್ಮ ಸಂದರ್ಶನ | ಇವತ್ತು ದೇವದಾಸಿಯರ ಮಕ್ಕಳು ಎಂಜಿನಿಯರ್‌, ಡಾಕ್ಟರ್‌, ಪಿಡಿಓ, ಕಂಡಕ್ಟರ್, ಟೀಚರ್‌ಗಳಾಗಿದಾರೆ

Mokshamma

ನಲವತ್ತ ಮೂರು ವರ್ಷದ ದಲಿತ ಮಹಿಳೆ ಮೋಕ್ಷಮ್ಮ ರಾಯಚೂರು ಜಿಲ್ಲೆ ಮಸ್ಕಿ ಗ್ರಾಮದವರು. ಮದ್ಯ ನಿಷೇಧ ಆಂದೋಲನದ ಮುಂದಾಳು. ನವಜೀವನ ಮಹಿಳಾ ಒಕ್ಕೂಟದ ಮೂಲಕ ಹೋರಾಟದ ಹೆಜ್ಜೆಗಳನ್ನು ಹಾಕಿದ ಇವರು ದಲಿತ, ಶೋಷಿತ ಮಹಿಳೆಯರ ಹಕ್ಕುಗಳಿಗೆ ಹೋರಾಡುತ್ತಿದ್ದಾರೆ. ಬಹುಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿರುವ ದೇವದಾಸಿ ಪದ್ಧತಿಯ ವಿರುದ್ಧ ಹೋರಾಡುತ್ತಿದ್ದಾರೆ. ದೇವದಾಸಿ ಮಹಿಳೆಯರು, ಅವರ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ನ್ಯಾಯ ಮತ್ತು ಹಕ್ಕಿಗಾಗಿ ನಡೆಸುತ್ತಿರುವ ಹೋರಾಟ ನಮ್ಮ ಶಕ್ತಿಯನ್ನು ಇಮ್ಮಡಿಸುತ್ತಲೇ ಇದೆ ಎಂದು ನಂಬಿರುವ ಮೋಕ್ಷಮ್ಮ ಅವರೊಂದಿಗೆ ಅಂಬೇಡ್ಕರ್‌ ಜಯಂತಿಯ ಹಿನ್ನೆಲೆಯಲ್ಲಿ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ

  • ನೀವು ಹೋರಾಟದ ಹಾದಿ ತುಳಿದಿದ್ದು ಹೇಗೆ?

2000ನೆಯ ಇಸ್ವಿಯಲ್ಲಿ ಅಭಯ್‌ ಸರ್‌ ಅನ್ನೋರು ನವಜೀವನ ಮಹಿಳಾ ಒಕ್ಕೂಟ ಅನ್ನೋದನ್ನ ಶುರು ಮಾಡಿದ್ರು. ಅವರು ವೃತ್ತಿಯಲ್ಲಿ ಎಂಜಿನಿಯರ್‌ ಆಗಿದ್ರು. ಬೆಂಗಳೂರಿನಲ್ಲಿ ಬಿಪಿಎಲ್‌ ಕಂಪನಿಯಲ್ಲಿ ಮ್ಯಾನೇಜರ್‌ ಕೂಡ ಆಗಿದ್ರು.  ಅಭಯ್‌ ಸರ್‌ ಮೂಲತಃ ಬಿಹಾರ್‌ನವ್ರು. ಹೈದರಾಬಾದ್‌ನಲ್ಲಿ ಓದಿ, ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ರು. ನಾನು ಈ ಕೆಲ್ಸದಲ್ಲಿದ್ರೆ, ಬಡವರಿಗೆ ಏನೂ ಒಳ್ಳೆಯದನ್ನ ಮಾಡೋಕೆ ಆಗಲ್ಲ ಅಂತಾ ಮ್ಯಾನೇಜರ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದ್ರು. ಉತ್ತರ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ತಿರುಗಾಡಿ, ಸಮಸ್ಯೆಗಳ ಮಾಹಿತಿಯನ್ನು ಕಲೆ ಹಾಕಿದ್ರು. ಬಳಿಕ ಅವರು ರಾಯಚೂರಿನಿಂದ ಕೆಲಸ ಶುರು ಮಾಡಿದ್ರು. ಅದ್ರಲ್ಲೂ ಅನಿಷ್ಠ ಪದ್ಧತಿಯಾದ ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಬೇಕೆಂದು ಯೋಜನೆ ರೂಪಿಸಿದ್ರು. ಅದರ ಭಾಗವಾಗಿ, ಅವರು ರಾಯಚೂರಿನಿಂದ ನನ್ನನ್ನು, ಚಿಕ್ಕಮಗಳೂರಿನಿಂದ ಮಂಜುಳ,  ವಿರೂಪಮ್ಮ, ಮಲ್ಲಮ್ಮ, ಯಲ್ಲಮ್ಮಳನ್ನ ಸಂಪರ್ಕಿಸಿದ್ರು. ನಮ್ಮ ಬಳಿ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ರು. ಇದು ಒಳ್ಳೆಯ ಕೆಲಸ ಅಂತಾ ಅನ್ಸಿ, ನಾವು ಕೂಡ ಒಪ್ಪಿಕೊಂಡ್ವಿ. ಆಮೇಲೆ, ನಾವು ಐದೂ ಜನ ದೇವದಾಸಿ ಮಹಿಳೆಯರು ಎಷ್ಟಿದ್ದಾರೆ, ಯಾರು ಸಂಕಷ್ಟದಲ್ಲಿದ್ದಾರೆ ಅನ್ನೋ ಸರ್ವೆ ನಡೆಸಿ, ಮಾಹಿತಿ ಸಂಗ್ರಹಿಸಿದ್ವಿ.

  • ಈಗಾಗಲೇ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅನಿಷ್ಠ ಪದ್ಧತಿ ವಿರುದ್ಧ ಹೋರಾಡಬೇಕಾದರೆ ನಿಮಗೆ ಎದುರಾದ ಸಮಸ್ಯೆಗಳೇನು? ಅದನ್ನ ಹೇಗೆ ನಿಭಾಯಿಸಿದ್ರಿ?

ಮೊದಲು ನಾವು ಎಲ್ಲ ದೇವದಾಸಿಯವ್ರನ್ನ ಒಂದ್ಕಡೆ ಸೇರ್ಸಿ ಮೀಟಿಂಗ್‌ ಮಾಡಿದ್ವಿ. ನಾವು ನಿಮ್ಮ ಪರ ಕೆಲ್ಸ ಮಾಡ್ತೀವಿ ಅಂತಾ ಹೇಳಿದ್ವಿ. ಆಗ ಅವ್ರು, ನೀವು ನಮ್ಮ ಪರ ಕೆಲ್ಸ ಮಾಡ್ಬ್ಯಾಡ್ರಿ. ನಮ್ಮ ಮನೆಗೂ ಬರ್ಬೇಡಿ. ನಿಮ್ಮಂಗೆ ಸಾಕಷ್ಟು ಜನ ಸಹಾಯ ಮಾಡ್ತಿವಿ ಅಂತಾ ಬಂದವ್ರೆ. ಸರ್ಕಾರದ ಕಡೆಯಿಂದ ನಮ್ಗೆ ಮನೆಗಳು ಬಂದ್ವು, ದೇವದಾಸಿಯರಿಗೆ ಪೆನ್ಷನ್‌ ಬರ್ತಿತ್ತು. ಸಹಾಯ ಮಾಡ್ತಿವಿ ಅಂತಾ ಬಂದವ್ರೆಲ್ಲ ಅದನ್ನ ತಿಂದು ಹೋದ್ರು, ನೀವು ಸಹ ಹಂಗೆ ಮಾಡ್ತಿರಿ. ನೀವು ಬೇಡ, ನಿಮ್‌ ಸಹಾಯಾನೂ ಬೇಡ ಹೋಗ್ರಿ ಅಂದ್ರು. ಅವ್ರು ಅಷ್ಟೆಲ್ಲಾ ಹೇಳಿದ್ರು, ನಾವು ಹಿಂದೇಟು ಹಾಕ್ಲಿಲ್ಲ. ಅವ್ರಿಗೆ ಅನ್ಯಾಯ ಆಗಿದೆ. ಅದ್ಕೆ ಹಂಗೆ ಮಾತಾಡ್ತಾವ್ರೆ ಅಂತಾ ಸುಮ್ನಾದ್ವಿ. ಆಮೇಲೆ, ಅವ್ರನ್ನೆಲ್ಲ ಕೂರ್ಸಿ, ನಾವು ಬೇರೆಯವ್ರಂತೆ ಮಾಡಲ್ಲ. ನಿಮ್‌ ಜತೆಲೇ ಇದ್ದು, ನಿಮ್ಗಾಗಿ ಕೆಲ್ಸ ಮಾಡ್ತಿವಿ ಅಂತಾ ಭರವಸೆ ನೀಡಿದ್ವಿ

  • ನಿಮ್ಮ ಭರವಸೆಯನ್ನ ಅವ್ರು ನಂಬಿದ್ರಾ?

ಮೊದ್ಲಿಗೆ ನಂಬ್ಲಿಲ್ಲ. ನಿಮ್‌ ಸಮಸ್ಯೆಗಳೇನು ಅಂತಾ ಹೇಳ್ಕೊಳಿ, ನಾವು ನಿಮ್ಗೆ ಒಳ್ಳೆ ಕೆಲ್ಸ ಮಾಡ್ತೀವಿ ಅಂತಾ ಹೇಳಿದ್ವಿ. ಆಮೇಲೆ ಅವ್ರು, ನಮ್ಗೆ 10 ರೂಪಾಯಿ ಕೂಲಿ ಐತೆ. ಬರೋ 10 ರೂಪಾಯೀಲಿ ಮಕ್ಳನ್ನ ಓದ್ಸೋದಾ? ಜೀವ್ನ ಸಾಗ್ಸೋದಾ? ಏನೊಂದು ತಿಳಿವಲ್ದು. ನಮ್ಮೂರಲ್ಲಿರದು 7 ನೇ ಕ್ಲಾಸ್‌ವರೆಗೆ. ಅಲ್ಲಿವರೆಗೂ ನಮ್ಮ ಮಕ್ಳು ಓದ್ಲಿ. ಆಮೇಲೆ ಓದೋಕೆ ಬೇರೆ ಊರುಗಳಿಗೆ ಹೋಗ್ಬೇಕು, ಬಸ್‌ಚಾರ್ಜಿಗೆ ದುಡ್ಡಿಲ್ಲ. ಅಲ್ಲೇ ಬಿಟ್ಟು ಓದ್ಸೋಕೆ ಹಾಸ್ಟೆಲ್‌ ವ್ಯವಸ್ಥೆ ಇಲ್ಲ ಅಂತಾ ಹೇಳಿದ್ರು. ಹುಡುಗ್ರುಗಾದ್ರೂ ಉಳ್ಕಳಕೆ ಅಂಬೇಡ್ಕರ್‌ ಹಾಸ್ಟೆಲ್‌ ವ್ಯವಸ್ಥೆ ಐತೆ. ಹುಡ್ಗಿರ್ಗೆ ಆ ವ್ಯವಸ್ಥೆನೂ ಇಲ್ಲ ಅಂದ್ರು. ಆಗ ನಾವು ನಿಮ್ಮ ಮಕ್ಳುಗೆ ಓದ್ಸೋಕೆ ಏನ್‌ ಬೇಕೋ, ಆ ವ್ಯವಸ್ಥೆ ಮಾಡ್ಕೊಡ್ತೀವಿ ಅಂತಾ ಹೇಳಿದ್ವಿ. ಅಲ್ದೇ, ನಿಮ್ಗೆ ಸರ್ಕಾರದಿಂದ ಮನೆ ಕೊಡಿಸ್ತೀವಿ. ಏನೆಲ್ಲಾ ಸೌಕರ್ಯಗಳಿದಾವೋ, ಅವುಗಳನ್ನೆಲ್ಲ ಕೊಡಿಸ್ತೀವಿ ಅಂದ್ವಿ.

ಇದನ್ನು ಓದಿದ್ದೀರಾ? | ಅಂಬೇಡ್ಕರ್‌ ಜಯಂತಿ ವಿಶೇಷ | ಬೆಳಗಾವಿಯ ಮುಸ್ಲಿಮ್‌ ಕುಟುಂಬದ ಭೂ ಹಕ್ಕಿಗೆ ಹೋರಾಡಿದ್ದ ಬಾಬಾ ಸಾಹೇಬ್‌

  • ನಿಮ್ಮ ಈ ಹೇಳಿಕೆಗಳಿಗೆ ಅವರ ಪ್ರತಿಕ್ರಿಯೆ ಹೇಗಿತ್ತು?

ನಮ್ಮ ಮಾತುಗಳನ್ನ ಕೇಳಿದ್ಮೇಲೆ ಅವ್ರು, ದೇವದಾಸಿ ಪದ್ಧತಿನಾ ನಿರ್ಮೂಲನೆ ಮಾಡೋಕೆ ನೀವು ಜವಾಬ್ದಾರಿ ತಗೊಳ್ಬೇಡಿ.. ನಾವು ತಗೊಳ್ತಿವಿ ಅಂದ್ರು. ನೀವು ಒಂದಿನ ಬಂದು ಹೋಗ್ಬಿಡ್ತೀರಿ. ಆದ್ರೆ, ಇಲ್ಲಿ ನಡೆಯೋ ಸಮಸ್ಯೆ ಏನೂಂತ ನಿಮ್ಗೆ ಗೊತ್ತಿರಲ್ಲ. ಅದ್ಕೆ, ನಮ್ಮೂರುಗಳಲ್ಲಿ ನಡೆಯುವ ದೇವದಾಸಿ ಪದ್ಧತಿ, ಬಾಲ್ಯವಿವಾಹಗಳನ್ನ ನಾವೇ ತಡಿತಿವಿ ಅಂತಾ ಹೇಳಿದ್ರು. ಇನ್ಮುಂದೆ ನಮ್ಮೂರಲ್ಲಿ ಯಾವ ಹೆಣ್ಮಕ್ಳಿಗೂ ಮುತ್ತು ಕಟ್ಸಲ್ಲ, ದೇವದಾಸಿ ಮಾಡೋಕೆ ಬಿಡಲ್ಲ ಅಂತಾ ಪ್ರಮಾಣ ಮಾಡಿದ್ರು.

ಎರಡು-ಮೂರು ವರ್ಷಗಳಿದ್ದಾಗಲೇ ಮುತ್ತು ಕಟ್ಟಿರುವ ಹೆಣ್ಮಕ್ಕಳನ್ನ ಗುರ್ತಿಸಿ ನಾವು ಬೆಂಗಳೂರಿಗೆ ಶಿಫ್ಟ್‌ ಮಾಡಿದ್ವಿ. ಅವ್ರಿಗೆ ಓದೋಕೆ ಏನೆಲ್ಲಾ ಸೌಲಭ್ಯ ಬೇಕೋ, ಅದನ್ನೆಲ್ಲ ಮಾಡಿಕೊಟ್ವಿ.

  • ಆಮೇಲೆ ನೀವು ಮಾಡಿದ ಕೆಲಸ ಏನು?

ಯಾವ ದೇವದಾಸಿಯರಿಗೆ ಮನೆ ಇಲ್ಲ ಅಂತಾ ಸರ್ವೆ ಮಾಡಿದ್ವಿ. ಇಂತಿಂಥವರಿಗೆ ಮನೆಯಿಲ್ಲ ಅಂತಾ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಒಂದು ಪತ್ರ ಬರೆದ್ವಿ. ಇದ್ರ ಪರಿಣಾಮ ರಾಯಚೂರು ಜಿಲ್ಲೆಗೆ 380 ಮನೆಗಳು ಸಾಂಕ್ಷನ್‌ ಆದ್ವು. ಅವ್ರಿಗೆ ಮನೆಗಳು ಸಿಕ್ಕಿದ್ಮೇಲೆ ನಮ್ಮ ಮೇಲೆ ಮತ್ತಷ್ಟು ನಂಬಿಕೆ ಬಂತು. ಶಾಲೆ ಬಿಟ್ಟ ಮಕ್ಕಳನ್ನೆಲ್ಲ ಮತ್ತೆ ಶಾಲೆಗೆ ಸೇರ್ಸಿದ್ವಿ. ಬೆಂಗಳೂರಿನಲ್ಲಿರುವ ವಿಸ್ತಾರ್‌ ಸಂಸ್ಥೆಯು ದೇವದಾಸಿ, ವಿಧವೆ ಮಕ್ಕಳಿಗೆಂದೇ 60 ಸೀಟ್‌ಗಳನ್ನು ಕೊಟ್ರು. ಇನ್ನೊಂದು ಪ್ರಮುಖ ವಿಷ್ಯ ಏನಂದ್ರೆ, ಎರಡು-ಮೂರು ವರ್ಷಗಳಿದ್ದಾಗಲೇ ಮುತ್ತು ಕಟ್ಟಿರುವ ಹೆಣ್ಮಕ್ಕಳನ್ನ ಗುರ್ತಿಸಿ ನಾವು ಬೆಂಗಳೂರಿಗೆ ಶಿಫ್ಟ್‌ ಮಾಡಿದ್ವಿ. ಅವ್ರಿಗೆ ಓದೋಕೆ ಏನೆಲ್ಲಾ ಸೌಲಭ್ಯ ಬೇಕೋ, ಅದನ್ನೆಲ್ಲ ಮಾಡಿಕೊಟ್ವಿ. ಹಾಸ್ಟೆಲ್‌ ಕಮಿಟಿ ಜತೆ ಮಾತಾಡಿ ಊರಲ್ಲಿರುವ ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಿದ್ವಿ.
    

  •  ನಿಮ್ಮ ಈ ಸಮಾಜಮುಖಿ ಕಾರ್ಯಗಳಿಂದ ಏನಾದರೂ ಬದಲಾವಣೆಗಳಾಗಿವೆಯೇ?

 ಇವತ್ತು ದೇವದಾಸಿಯರ ಮಕ್ಕಳು ಎಂಜಿನಿಯರ್‌, ಡಾಕ್ಟರ್‌, ಪಿಡಿಓ, ಕಂಡಕ್ಟರ್, ಟೀಚರ್‌ಗಳಾಗಿದಾರೆ. ಈ ಥರ ಸುಮಾರು 200 ಕ್ಕೂ ಅಧಿಕ ಮಂದಿ ವಿವಿಧ ಕ್ಷೇತ್ರಗಳಲ್ಲಿ ದುಡಿತಿದ್ದಾರೆ. ದೇವದಾಸಿ ಮಹಿಳೆಯರಿಗಾಗಿಯೇ ನಾವು ಸಣ್ಣ ಉಳಿತಾಯದ ಸಂಘ ಮಾಡಿದ್ವಿ. ಅವ್ರು ತಿಂಗ್ಳಿಗೆ 10 ರೂಪಾಯಿ ಕಟ್ತಿದ್ರು. ಇದ್ರಿಂದ ಅವ್ರು ಕುರಿ, ಆಡು, ಹಸುಗಳನ್ನ ಖರೀದಿಸಿ ಸ್ವಾವಲಂಬಿಗಳಾಗಿ ಬದುಕೋಕೆ ಶುರು ಮಾಡಿದ್ರು. ಅದೇ ಸಮಯದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಂತು. ಈ ಸಮಯದಲ್ಲಿ ನಾವು ಕೆಲ್ಸಕ್ಕೆ ಅರ್ಜಿ ಹಾಕ್ಸಿದ್ವಿ. ಪಂಚಾಯ್ತಿ ಕಡೆಯಿಂದ ಜಾಬ್‌ ಕಾರ್ಡ್‌ ಮಾಡಿಸಿಕೊಟ್ವಿ. ಆಗ ಅವ್ರು ನಮ್ಮ ಮೇಲೆ ಸಂಪೂರ್ಣ ನಂಬಿಕೆಯಿಟ್ರು. ಇವ್ರು ನಮ್ ಸಲುವಾಗಿಯೇ ಕೆಲ್ಸ ಮಾಡ್ತಿದಾರೆ ಅಂತಾ.

  • ದೇವದಾಸಿ ಮಹಿಳೆಯರು ಈಗಲೂ ನಿಮ್ಮ ಜತೆ ಇದ್ದಾರಾ? ಅವ್ರು ನಿಮಗೆ ಹೇಗೆ ಸಹಕಾರ ನೀಡ್ತಿದ್ದಾರೆ?

ಮಹಾರಾಷ್ಟ್ರದಲ್ಲಿ ದೇವದಾಸಿಯರಿಗೆ ಪಿಂಚಣಿ ವ್ಯವಸ್ಥೆ ಇತ್ತು. ನಮ್‌ ರಾಜ್ಯದಲ್ಲಿ ಇರ್ಲಿಲ್ಲ. ಪೆನ್ಷನ್‌ಗಾಗಿ 2005 ರಲ್ಲಿ 5 ಸಾವಿರ ದೇವದಾಸಿಯರನ್ನ ಸೇರ್ಸಿ, ಒಂದು ದೊಡ್ಡ ಹೋರಾಟ ಮಾಡಿದ್ವಿ. ನಮ್ಮ ಕರ್ನಾಟಕದಲ್ಲಿರುವ ಎಲ್ಲಾ ದೇವದಾಸಿಯರಿಗೆ ಪಿಂಚಣಿ ಕೊಡ್ಬೇಕು ಅಂತಾ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ವಿ. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಿತು. ದೇವದಾಸಿ ಮಹಿಳೆಯರನ್ನೇ ಸೇರಿಸಿಕೊಂಡು ನಾವು ಮತ್ತೊಂದು ಸಂಘಟನೆ ಕಟ್ಟಿದ್ವಿ. ಇಂದು ಅವರೇ ಪ್ರತಿಯೊಂದು ಗ್ರಾಮದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೌರವ ಧನ ಅಂತಾ ಇಂತಿಷ್ಟು ಕೊಡ್ತಿವಿ ಅಷ್ಟೇ.. ಆದ್ರೆ, ಅವರು ನಮ್ಮದೇ ಕೆಲ್ಸ ಅನ್ನುವಷ್ಟರ ಮಟ್ಟಿಗೆ ಕೆಲ್ಸ ಮಾಡ್ತಿದ್ದಾರೆ. ಅವ್ರಿಗೆ ಎದುರಾಗೋ ಸಮಸ್ಯೆಗಳನ್ನ ಅವರೇ ಎದುರಿಸ್ತಾರೆ.

  • ರಾಯಚೂರು ಮಾತ್ರವಲ್ಲದೇ, ಬೇರೆ ಕಡೆ ದೇವದಾಸಿ ಪದ್ಧತಿ ನಿರ್ಮೂಲನೆಗೆ ಏನು ಮಾಡಿದ್ರಿ?

ಜಾತ್ರೆಗಳಲ್ಲಿ ಹೆಚ್ಚಾಗಿ ಮುತ್ತುಗಳನ್ನ ಕಟ್ತಾರೆ. ಆ ಕಡೆ ಎಲ್ಲ ಜಾಗೃತಿ ಮೂಡಿಸ್ತೀವಿ. ಹುಲೆಗೆಮ್ಮ, ಎಲ್ಲಮ್ಮ, ವೀರ ಮಾನವಿ, ತೊಂಡ್ಯಾಳುಗಳಲ್ಲಿ ಮುತ್ತು ಕಟ್ಟುವ ಕೆಲ್ಸ ನಡೆಯುತ್ತೆ. ಅಲ್ಲಿ ನಮ್ಮ ಸಂಘಟನೆಗಳು ಹೋಗಿ, ಮುತ್ತುಕಟ್ಟುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕೆಲ್ಸ ಮಾಡ್ತೀವಿ. ಬೀದಿನಾಟಕಗಳು, ಘೋಷಣೆ, ಚಿತ್ರಗಳ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸ್ತೀವಿ. ಇಂದು ರಾಯಚೂರು ದೇವದಾಸಿ ಪದ್ಧತಿ ಮುಕ್ತವಾಗಿದೆ. ಇತರೆ ಜಿಲ್ಲೆಗಳಲ್ಲೂ ದೇವದಾಸಿ ಪದ್ಧತಿ ವಿರುದ್ಧ ಕೆಲ್ಸ ಮಾಡ್ತಿದ್ದೀವಿ.

Image
Mokshamma 1
ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮೋಕ್ಷಮ್ಮ
  •  ಈ ಹೋರಾಟದ ಜತೆ ಮತ್ತೆ ಯಾವ ಯಾವ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೀರಿ?

ಬಾಲ್ಯ ವಿವಾಹ ತಡೆಗಟ್ಟುವಿಕೆ, ಕೌಟುಂಬಿಕ ದೌರ್ಜನ್ಯ, ಮದ್ಯ ವಿರೋಧಿ ಹೋರಾಟಗಳಲ್ಲೂ ಭಾಗಿಯಾಗಿದ್ದೀವಿ. ಎಲ್ಲಿಯೇ ಇಂಥ ದುಷ್ಕೃತ್ಯಗಳು ನಡೆದರೂ ನಾವು ಅದರ ವಿರುದ್ಧ ಹೋರಾಡುತ್ತೇವೆ. ಇದಕ್ಕೆ ಅಧಿಕಾರಿಗಳ ನೆರವನ್ನೂ ಪಡೆಯುತ್ತೇವೆ. ಮುಂದಿನ ದಿನಗಳಲ್ಲೂ ನಮ್ಮ ಹೋರಾಟ ಹೀಗೆಯೇ ಇರುತ್ತೆ.. ಅದಕ್ಕೆ ನಿಮ್ಮ ಸಹಕಾರವೂ ಬೇಕು.

ನಿಮಗೆ ಏನು ಅನ್ನಿಸ್ತು?
4 ವೋಟ್