'ದೊಡ್ಡವರು' ದಯೆ ತೋರಿದರೆ ಮಾತ್ರ ದಲಿತರಿಗೆ ಕುಡಿಯುವ ನೀರು!

ತುಮಕೂರಿನ ಗುಬ್ಬಿಯ ದಲಿತ ಯುವಕರ ಕೊಲೆ ಪ್ರಕರಣ ಇನ್ನೂ ಬಗೆಹರಿದಿಲ್ಲ. ಈ ಮೊದಲಿನ ಪ್ರಕರಣಗಳೂ ಸರ್ಕಾರದ ಪ್ರತಿಷ್ಠೆಯ ಸಂದುಗೊಂದುಗಳಲ್ಲಿ, ಪೊಲೀಸರ ಫೈಲುಗಳಲ್ಲಿ, ಪ್ರಬಲ ಜಾತಿಗಳ ಕಣ್ಣ ಸನ್ನೆಗಳಲ್ಲಿ ಹೂತುಹೋಗಿವೆ. ಈ ನೆಪದಲ್ಲಿ, 'ರಾಜ್ಯದ ನಂಬರ್ 1' ಸುದ್ದಿವಾಹಿನಿಯಲ್ಲಿ ಕೊಪ್ಪಳ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಪತ್ರಕರ್ತರೊಬ್ಬರ ಅನುಭವ ಕಥನ ಇಲ್ಲಿದೆ.

ಮಲೆನಾಡಿನ ಭಾಗವಾದ ಭದ್ರಾವತಿಯಲ್ಲಿ ಬೆಳೆದು, ನೆಪಕ್ಕೂ ಉತ್ತರ ಕರ್ನಾಟಕದ ಕಡೆ ಎಂದೂ ಕಾಲಿಡದ ನನಗೆ, ಕೊಪ್ಪಳದ ಜನ, ಅಲ್ಲಿನ ವಾತಾವರಣ, ಸಂಸ್ಕೃತಿ ಎಲ್ಲವೂ ವಿಭಿನ್ನವಾಗಿ ಕಂಡಿತ್ತು. ಏಕೆಂದರೆ, ವಿಐಎಸ್‌ಎಲ್ ಮತ್ತು ಎಂಪಿಎಂ ಕಾರಣಕ್ಕೆ ಭದ್ರಾವತಿ ಎಲ್ಲ ತರದ ಜನರಿಗೂ ನೆಲೆ ನೀಡಿದೆ. ಭದ್ರಾವತಿ ತಾಲೂಕೇ ಒಂತರಾ ಮಿನಿ ಭಾರತ ಎಂದರೆ ತಪ್ಪಾಗಲಾರದು. ಹೀಗಾಗಿ, ಅಸ್ಪೃಶ್ಯತೆ ಎಂಬುದು ನನ್ನ ಪಾಲಿಗೆ ಪುಸ್ತಕದ ವಿವರಣೆಯೇ ಹೊರತು, ಅದನ್ನು ಎಂದಿಗೂ ನಾನು ಕಣ್ಣಾರೆ ಕಂಡವನಲ್ಲ, ಅನುಭವಿಸಿದವನೂ ಅಲ್ಲ. ಆದರೆ, ಜಾತಿಯತೆಯ ಘೋರ ಮುಖಗಳು ನನಗೆ ಕೊಪ್ಪಳದಲ್ಲಿ ಅನಾವರಣವಾಗಿತ್ತು.

ಈಚನಾಳ, ಕೊಪ್ಪಳದ ಕಟ್ಟಕಡೆಯ ಚಿಕ್ಕ ಗ್ರಾಮ. ಹೆಚ್ಚೆಂದರೆ, 70ರಿಂದ 80 ಕುಟುಂಬಗಳಿರುವ ಈ ಗ್ರಾಮದ ಒಳಗೆ ದಲಿತರಿಗೆ ಈಗಲೂ ಪ್ರವೇಶವಿಲ್ಲ. ಊರಿನ ಹೊರಗೆ ಸೂರ್ಯ ಮುಳುಗುವ ದಿಕ್ಕಿನಲ್ಲಿ ದಲಿತ ಕೇರಿಗೆ ಅವಕಾಶ. 30ಕ್ಕೂ ಹೆಚ್ಚು ಸಣ್ಣ-ಸಣ್ಣ ಗುಡಿಸಲು ಮತ್ತು ಶೀಟಿನ ಮನೆಗಳಲ್ಲಿ ದಲಿತರ ವಾಸ. ಇಲ್ಲಿ ವಿದ್ಯುತ್ತೇನೋ ಇದೆ. ಆದರೆ, ಕುಡಿಯುವ ನೀರಿಗೆ ಮಾತ್ರ ಭಾರೀ ಸಮಸ್ಯೆ.

ಇಡೀ ಊರಿಗೆ ಕುಡಿಯುವ ನೀರಿಗಾಗಿ ಇರುವುದು ಒಂದೇ ಒಂದು ಕೊಳವೆಬಾವಿ ಮತ್ತು ಬಾವಿ. ಅದನ್ನು ಪ್ರಬಲ ಜಾತಿ ಕೇರಿಯಲ್ಲೇ ಕೊರೆಯಲಾಗಿದೆ. ಹೀಗಾಗಿ, ದಲಿತರಿಗೆ ಕುಡಿಯುವ ನೀರು ಬೇಕೆಂದರೆ ಇಲ್ಲಿಗೇ ಬರಬೇಕು. ಅಪ್ಪಿತಪ್ಪಿಯೂ ನೀರಿನ ನಲ್ಲಿಯನ್ನು ಅವರು ಮುಟ್ಟುವಂತಿಲ್ಲ. ಹಾಗೇನಾದರೂ ಮುಟ್ಟಿದರೆ ಅವರನ್ನು ಮರಕ್ಕೆ ಕಟ್ಟಿ ಹೊಡೆಯಲಾಗುತ್ತದೆ. ಸವರ್ಣೀಯರೇ ಇವರ ಬಿಂದಿಗೆಗೆ ನೀರು ಸುರಿಯುವವರೆಗೆ ಕಾಯಬೇಕು. ನೀರು ಸುರಿಯದಿದ್ದರೆ ಇಡೀ ದಿನ ನೀರಿಲ್ಲದೆ ಕಳೆಯಬೇಕು. ಇದು ಇಲ್ಲಿನ ದಲಿತರ ಸ್ಥಿತಿ.

ಇದೆಲ್ಲ ವಿಚಾರವನ್ನು ಅದೇ ಊರಿನ ದಲಿತ ಯುವಕ ಹನುಮಂತ ನಮ್ಮ ಕಚೇರಿಗೆ ಬಂದು ಹೇಳಿಕೊಂಡಿದ್ದ. ಆತನ ಹೇಳಿಕೆಗಳು ನನ್ನನ್ನು ಅತಿ ದೊಡ್ಡ ಅಚ್ಚರಿಗೂ, ಆಘಾತಕ್ಕೂ ದೂಡಿದ್ದವು. ಅಲ್ಲದೆ, ಇದು ಖಂಡಿತವಾಗಿ ನಾವು ಮಾಡಲೇಬೇಕಾದ ಸುದ್ದಿ, ಇಡೀ ನಾಡಿಗೆ ತಿಳಿಯಬೇಕಾದ ಸುದ್ದಿ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಹೀಗಾಗಿ, ಈ ಸುದ್ದಿಯ ಬೆನ್ನತ್ತಲು ನಿರ್ಧರಿಸಿದ್ದೆ.

ಕ್ಯಾಮೆರಾಮೆನ್ ಜೊತೆ ಈಚನಾಳದತ್ತ

ಅಂದು ಸರಿಯಾಗಿ ನಡುರಾತ್ರಿ 3.30. ನಾನು ಮತ್ತು ನನ್ನ ಕ್ಯಾಮೆರಾಮೆನ್‌ ಇಬ್ಬರೂ ಈಚನಾಳದ ಕಡೆಗೆ ಬೈಕ್‌ ಸವಾರಿ ನಡೆಸಿದ್ದೆವು. 130 ಕಿಮೀ ಪ್ರಯಾಣ. 7 ಗಂಟೆಗೆ ಸರಿಯಾಗಿ ನಾವು ಅಲ್ಲಿದ್ದೆವು. ಏನೋ ಸುದ್ದಿ ಮಾಡಲು ಬಂದವರಂತೆ, ಇಡೀ ಊರಿನ ‘ವಿಶ್ಯುವಲ್ಸ್‌’ ತೆಗೆಯಲು ಆರಂಭಿಸುತ್ತ, ಹಾಗೆಯೇ ಊರಿನಲ್ಲಿದ್ದ ಏಕೈಕ ಕೊಳವೆಬಾವಿ ಕಡೆಗೆ ಹೊರಟಿದ್ದೆವು.

ಊರ ಜನ ನಮ್ಮನ್ನು ಅಷ್ಟೇನೂ ಕುತೂಹಲದಿಂದ ಗಮನಿಸಿ ಪ್ರಶ್ನೆ ಮಾಡುವ, ಮಾತಿಗೆ ಮುಂದಾಗುವ ಕೆಲಸ ಮಾಡಲಿಲ್ಲ. ಹೀಗಾಗಿ, ನಮ್ಮ ಕೆಲಸವೂ ಸಲೀಸಾಗಿ ನಡೆದಿತ್ತು. ಆ ಕೊಳವೆಬಾವಿ ಸುತ್ತಮುತ್ತಲೇ ನಾವು ಕನಿಷ್ಠ ನಾಲ್ಕು ಗಂಟೆಗೂ ಅಧಿಕ ಕಾಲ ಏನೋ ವಿಡಿಯೋ ಚಿತ್ರೀಕರಣ ಮಾಡುವಂತೆ ನಟಿಸುತ್ತಿದ್ದರೂ, ಇಡೀ ಗಮನ ಆ ಕೊಳವೆಬಾವಿ ಕಡೆಗೇ ಇತ್ತು.

ಆದರೆ, ನಾವು ಅಲ್ಲಿಗೆ ಬರುವ ಮೊದಲೇ, ಹರಿದ ಅಂಗಿ ಉಟ್ಟಿದ್ದ ಐದು ಜನ ಮಕ್ಕಳು ಎರಡೆರಡು ಬಿಂದಿಗೆ ಹಿಡಿದು ಕೊಳವೆಬಾವಿ ಸುತ್ತ ನೆರೆದಿದ್ದರು. ಈ ಪೈಕಿ ಯಾರೊಬ್ಬರೂ ಕೊಳವೆಬಾವಿಯನ್ನು ಮುಟ್ಟುವ ಧೈರ್ಯ ಮಾಡಲಿಲ್ಲ. ಊರಿನ ಪ್ರಬಲ ಜಾತಿಯವರು ಒಬ್ಬೊಬ್ಬರೇ ಬಂದರು. ತಮ್ಮ ಬಿಂದಿಗೆಗೆ ನೀರು ತುಂಬಿಸಿಕೊಂಡು ಹೋದರು. ಆದರೂ ಯಾರೂ ಅವರಿಗೆ ನೀರು ಸುರಿಯುವ ಮನಸ್ಸು ಮಾಡಲಿಲ್ಲ. ಗಂಟೆ 11 ಆಯಿತು. ಸೂರ್ಯನ ಶಾಖಕ್ಕೆ ನಮಗೇ ಬಾಯಾರಿತ್ತು. ಆದರೂ, ಆ ಮಕ್ಕಳ ಬಿಂದಿಗೆ ಮಾತ್ರ ತುಂಬಲಿಲ್ಲ.

ಸಮಸ್ಯೆ ನೀರಿನದಷ್ಟೇ ಆಗಿರಲಿಲ್ಲ. ಇಲ್ಲಿನ ಹೋಟೆಲ್‌ಗಳಿಗೂ ದಲಿತರಿಗೆ ಪ್ರವೇಶ ಇಲ್ಲ. ಹೋಟೆಲ್ ಊಟ ಬೇಕಿದ್ದರೆ ಹೊರಗೆ ನಿಂತು ಪಾರ್ಸೆಲ್ ತೆಗೆದುಕೊಂಡೇ ಹೋಗಬೇಕು. ಕುಡಿಯಲು ನೀರನ್ನೂ ನೀಡುವುದಿಲ್ಲ. ಹೊರಗೆ ನಿಂತು, ಪ್ರಬಲ ಜಾತಿಯ ಮಂದಿ ಚರಿಗೆಯಲ್ಲಿ ನೀರು ಸುರಿದರೆ ಮಾತ್ರ, ಚರಿಗೆಗೆ ಏನೂ ತಾಗದಂತೆ ಕುಡಿಯಬೇಕಷ್ಟೆ. ಇನ್ನು, ದೇವಾಲಯಗಳ ಒಳಗೆ ದಲಿತರು ಪ್ರವೇಶಿಸಿದರೆ ಅವರ ಕತೆ ಮುಗಿಯಿತೆಂದೇ ಅರ್ಥ!

Image
ದಲಿತ ಸಮುದಾಯದ ಬಾಲಕಿ ತಂದಿದ್ದ ಬಿಂದಿಗೆಗೆ ನೀರು ತುಂಬಿಸುತ್ತಿರುವ ಪ್ರಬಲ ಜಾತಿ ಬಾಲಕಿ

ಹೀಗೆ, ದಲಿತರ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದು ಕೇವಲ ಈಚನಾಳದ ಸಮಸ್ಯೆ ಮಾತ್ರವಲ್ಲ. ಮರಕುಂಬಿ, ಹಿರೇಬಗನಾಳ, ಹಿರೇ ಸಿಂಧೋಗಿ ಸೇರಿದಂತೆ ಕೊಪ್ಪಳದ ಬಹುತೇಕ ಗ್ರಾಮಗಳಲ್ಲಿ ಇಂತಹ ನೀಚ ಆಚರಣೆಗಳು ಈಗಲೂ ಚಾಲ್ತಿಯಲ್ಲಿವೆ.

'ಅಲ್ಲಿ ಅಸ್ಪೃಶ್ಯತೆ ಸಾಮಾನ್ಯ, ಬೇರೆ ಸುದ್ದಿ ಮಾಡು'

ಆ ದಲಿತ ಮಕ್ಕಳು ಅಂದು ಖಾಲಿ ಬಿಂದಿಗೆ ಹಿಡಿದೇ ಮನೆಯ ಕಡೆಗೆ ಬಾರದ ಹೆಜ್ಜೆಗಳನ್ನಿಟ್ಟ ದೃಶ್ಯ ಈಗಲೂ ನನ್ನನ್ನು ಸುಡುತ್ತಿರುತ್ತದೆ. ಆ ದಿನ ಸ್ಥಳದಲ್ಲಿದ್ದೂ ಏನೂ ಮಾಡಲಾಗಲಿಲ್ಲ ಎಂಬ ನೋವು. ಇದೇ ನೋವಿನಲ್ಲಿ ಸುದ್ದಿ ಬರೆದು, ದೃಶ್ಯಗಳ ಸಹಿತ ಟಿವಿ ಕಚೇರಿಗೆ ಕಳುಹಿಸಿದ್ದೆ. ನಂತರ, ಇನ್‌ಪುಟ್‌ ಮುಖ್ಯಸ್ಥನಿಗೆ ಕರೆ ಮಾಡಿ ತಿಳಿಸಿದ್ದೆ.

ಆದರೆ, ಆತ, “ಲೇ... ಉತ್ತರ ಕರ್ನಾಟಕದಲ್ಲಿ ಅಸ್ಪೃಶ್ಯತೆ ಎಂಬುದು ಸರ್ವೇಸಾಮಾನ್ಯ. ಅದನ್ನು ಎಂತ ನೀನು ಸುದ್ದಿ ಮಾಡೋದು? ಅದರಿಂದ ಏನೂ ಗಿಟ್ಟಲ್ಲ. ಯಾವ್ದಾದ್ರು ಕ್ರೈಂ ಸ್ಟೋರಿ ಆಗುವಂತದ್ದು ಇದ್ರೆ ಫೋಕಸ್ ಮಾಡು, ಒಳ್ಳೆ ಟಿಆರ್‌ಪಿ ಬರುತ್ತೆ,” ಎಂದಾಗ, ನನ್ನ ವೃತ್ತಿಯ ಬಗ್ಗೆ ಹೇಸಿಗೆ ಎನಿಸಿಬಿಟ್ಟಿತು. ಕೆಲಸ ಬಿಟ್ಟು ಊರಿಗೆ ಹೊರಟುಬಿಡುವ ಅಂತಲೂ ಅನ್ನಿಸಿತ್ತು.

ಚಳವಳಿಯೇ ಹುಟ್ಟಿತ್ತು

ನಾನು ಕೆಲಸ ಮಾಡುವ ಟಿವಿ ಚಾನೆಲ್‌ನಲ್ಲಿ ಸುದ್ದಿ ಹೋಗದಿದ್ದರೆ ಏನಂತೆ, ಇದಕ್ಕೆ ಬೇರೆ ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದ್ದ ನಾನು, 'ಮಾದಿಗ ದಂಡೋರಾ' ಎಂಬ ಸಂಘಟನೆಯ ಜಿಲ್ಲಾಧ್ಯಕ್ಷ ಹುಸೇನಪ್ಪ ಮಾದಿಗ ಎಂಬವರ ಗಮನಕ್ಕೆ ತಂದಿದ್ದೆ. ಅವರ ಮೂಲಕ ಜಿಲ್ಲಾಧಿಕಾರಿಗೆ ಪತ್ರವನ್ನೂ ಬರೆಸಿದ್ದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹುಸೇನಪ್ಪ, ಕೊಪ್ಪಳ ಮತ್ತು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಜಿಲ್ಲೆಯಲ್ಲಿ ಅಸ್ಪೃಶ್ಯತೆಯನ್ನು ತೊಲಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಅಲ್ಲದೆ, ಮರುದಿನವೇ ಇಡೀ ಕೊಪ್ಪಳ ಬಂದ್‌ಗೆ ಕರೆ ನೀಡಿದ್ದರು. ಬಂದ್‌ ಯಶಸ್ವಿಯೂ ಆಗಿತ್ತು. ಅದರ ಬೆನ್ನಿಗೇ ಈಚನಾಳದ ವಾತಾವರಣ ಬಿಸಿಯಾಗಿತ್ತು.

ವಿಫಲವಾದ ಸಂಧಾನ ಸಭೆ

ಬಂದ್‌ ಬೆನ್ನಲ್ಲೇ, ಪ್ರಬಲ ಜಾತಿಯ ಮಂದಿ ದಲಿತರ ವಿರುದ್ಧ ಪಂಚಾಯಿತಿ ವಿಚಾರಣೆ ಆರಂಭಿಸಿದ್ದರು. "ನಮ್ಮ ಊರಿನ ಸುದ್ದಿಯನ್ನು ಟಿವಿಗೆ ನೀಡಿದ್ದು ಯಾರು?" ಎಂದು ದಲಿತ ಯುವಕರ ವಿರುದ್ಧ ರೇಗಿದ್ದರು. ಬಹಿಷ್ಕಾರದ ಬೆದರಿಕೆ ಒಡ್ಡಿದ್ದರು. ಹೀಗಾಗಿ, ಮಾದಿಗ ದಂಡೋರಾ ಒತ್ತಾಯಕ್ಕೆ ಮಣಿದು ಅಂದಿನ ಕೊಪ್ಪಳ ಜಿಲ್ಲಾಧಿಕಾರಿ ಮೋಹನ್‌, ಈಚನಾಳದಲ್ಲಿ ಸಂಧಾನ ಸಭೆ ನಡೆಸಿದ್ದರು.

ದಲಿತರು ಮತ್ತು ಪ್ರಬಲ ಜಾತಿಯವರೆಲ್ಲ ಸೇರಿದ್ದ ಸಭೆ. ದಲಿತರಿಗೂ ಕುಡಿಯುವ ನೀರಿನ ನಲ್ಲಿಯನ್ನು ಮುಟ್ಟುವ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದರು. ಆದರೆ, ಆ ಗ್ರಾಮದ 'ದೊಡ್ಡವರು' ಈ ಬೇಡಿಕೆಗೆ ಒಪ್ಪಲೇ ಇಲ್ಲ. ಜಿಲ್ಲಾಧಿಕಾರಿಗೆ ಬೇರೆ ದಾರಿ ಕಾಣದೆ, ಸರ್ಕಾರದ ಹಣದಲ್ಲಿ ದಲಿತ ಕೇರಿಗೆ ಪ್ರತ್ಯೇಕ ಕೊಳವೆಬಾವಿ ಕೊರೆಸಿ ಕೈತೊಳೆದುಕೊಂಡರು. ಕೊನೆಗೂ, ಈಚನಾಳದ ದಲಿತರು ಅಸ್ಪೃಶ್ಯರಾಗಿಯೇ ಉಳಿದುಕೊಂಡದ್ದು ಮತ್ತೊಂದು ದುರಂತ.

ಈ ಪ್ರಕರಣ ನಡೆದು ಎಂಟು ವರ್ಷಗಳಾಗಿವೆ. ಪರಿಸ್ಥಿತಿ ಈಗಲಾದರೂ ಕಿಂಚಿತ್ತಾದರೂ ಬದಲಾಗಿದೆಯೇ ಎಂದು ತಿಳಿದುಕೊಳ್ಳುವ ಸಲುವಾಗಿ, ಅದೇ ಹುಡುಗನಿಗೆ ಮತ್ತೆ ಕರೆ ಮಾಡಿದ್ದೆ. ವಿಪರ್ಯಾಸವೆಂದರೆ, ಇಲ್ಲಿನ ಜನ ಮತ್ತು ಪರಿಸ್ಥಿತಿ ಈಗಲೂ ಯಥಾಸ್ಥಿತಿಯಲ್ಲೇ ಇದೆ.

ನಿಮಗೆ ಏನು ಅನ್ನಿಸ್ತು?
13 ವೋಟ್