'ಆಜಾದಿ' ಮೆರವಣಿಗೆ | ಶಾಸಕ ಜಿಗ್ನೇಶ್ ಮೆವಾನಿಗೆ 3 ತಿಂಗಳ ಜೈಲು ಶಿಕ್ಷೆ

JIGNESH MEVANI
  • 2017ರಲ್ಲಿ ಅನುಮತಿ ಇಲ್ಲದೆ ಮೆಹ್ಸಾನಾದಿಂದ- ಧನೇರಾಗೆ 'ಆಜಾದಿ' ಮೆರವಣಿಗೆ
  • 5 ವರ್ಷಗಳ ಬಳಿಕ ಪ್ರಕಟಿಸಿದ ತೀರ್ಪಿನಲ್ಲಿ ಒಂಭತ್ತು ಮಂದಿಗೆ ಜೈಲು ಶಿಕ್ಷೆ

ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿ ಮತ್ತು ಇತರ ಒಂಬತ್ತು ಮಂದಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗುರುವಾರ ದೋಷಿಗಳೆಂದು ಘೋಷಿಸಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಅನುಮತಿ ಇಲ್ಲದೆ 'ಆಜಾದಿ' ಮೆರವಣಿಗೆ ನಡೆಸಿದ ಐದು ವರ್ಷಗಳ ಹಿಂದಿನ ಪ್ರಕರಣದ ವಿಚಾರಣೆಯನ್ನು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜೆ ಎ ಪರ್ಮಾರ್ ನಡೆಸಿದ್ದಾರೆ. ಮೆವಾನಿ, ಎನ್‌ಸಿಪಿ ಕಾರ್ಯಾಧ್ಯಕ್ಷೆ ರೇಷ್ಮಾ ಪಟೇಲ್, ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಕೆಲವು ಸದಸ್ಯರು ಸೇರಿದಂತೆ ಒಂಭತ್ತು ಮಂದಿಯನ್ನು ಕಾನೂನುಬಾಹಿರ ಸಭೆಯ ಭಾಗವಾಗಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 143ರ ಅಡಿ ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ. ಎಲ್ಲ 10 ಅಪರಾಧಿಗಳಿಗೆ ನ್ಯಾಯಾಲಯ ದಂಡ ವಿಧಿಸಿದೆ.

ಉನಾ ದಲಿತ ಥಳಿತ ಘಟನೆಯ ಒಂದು ವರ್ಷವನ್ನು ಗುರುತಿಸಲು 2017ರ ಜುಲೈನಲ್ಲಿ ಅನುಮತಿ ಇಲ್ಲದೇ ಮೆಹ್ಸಾನಾದಿಂದ ಬನಸ್ಕಾಂತ ಜಿಲ್ಲೆಯ ಧನೇರಾಗೆ 'ಆಜಾದಿ' ಮೆರವಣಿಗೆ ಕೈಗೊಂಡಿದ್ದಕ್ಕಾಗಿ ಮೆಹ್ಸಾನಾ 'ಎ' ವಿಭಾಗದ ಪೊಲೀಸರು ಮೆವಾನಿ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 143ರಡಿ ಪ್ರಕರಣ ದಾಖಲಿಸಿದ್ದರು. ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ಸಿಗಬೇಕೆಂದು ಬೆಂಬಲಿಸುತ್ತಿದ್ದ ರೇಷ್ಮಾ ಪಟೇಲ್ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿದಾಗ ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಲಿಲ್ಲ.

ಇದನ್ನೂ ಓದಿದ್ದೀರಾ:? ಸುದ್ದಿ ವಿವರ| ವೈದ್ಯ ಕಾಲೇಜುಗಳಲ್ಲಿ ಹಿಪೊಕ್ರೆಟಿಸ್- ಚರಕ ವಿವಾದ; ವಿದ್ಯಾರ್ಥಿಗಳಲ್ಲಿ ಗೊಂದಲ

ಎಫ್ಐಆರ್‌ನಲ್ಲಿ ಹೆಸರಿಸಲಾದ ಒಟ್ಟು 12 ಆರೋಪಿಗಳಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಒಬ್ಬರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಅವರೂ ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರು. ಆದರೆ ಆರೋಪಗಳನ್ನು ದಾಖಲಿಸುವ ಸಮಯದಲ್ಲಿ ಅವರು ಹಾಜರಿರಲಿಲ್ಲ. ಹೀಗಾಗಿ ಅವರ ವಿರುದ್ಧ ಪ್ರತ್ಯೇಕ ವಿಚಾರಣೆಗೆ ನ್ಯಾಯಾಲಯ ಆದೇಶಿಸಿತ್ತು.

ಮೆವಾನಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಟ್ವೀಟ್ ಪ್ರಕರಣದಲ್ಲಿ ಅಸ್ಸಾಂ ಪೊಲೀಸರಿಂದ ಬಂಧನಕ್ಕೊಳಪಟ್ಟು ಕಳೆದ ವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಮಂಗಳವಾರ ತವರೂರು ಅಹಮದಾಬಾದ್‌ ತಲುಪಿದ್ದರು. ಇದಾದ ಎರಡು ದಿನಗಳಲ್ಲೇ ಹಳೆಯ ಪ್ರಕರಣದ ತೀರ್ಪು ಹೊರಬಿದ್ದಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್