ಹಾಸನದಲ್ಲಿ ಅರಣ್ಯಾಧಿಕಾರಿ ದರ್ಪ| ದಲಿತನ ಹಕ್ಕುದಾರಿ ಜಮೀನಿಗೆ ನುಗ್ಗಿ ಕಾಫಿ, ಬಾಳೆ ಕಡಿದು ನಾಶ

  • ದಲಿತ ರುದ್ರಯ್ಯ ಹಕ್ಕುಪತ್ರ ಸಹಿತ ಎಲ್ಲ ದಾಖಲೆ ಇದ್ದರೂ ತೋಟ ತೆರವು
  • ಯಸಳೂರು ವಲಯ ಅರಣ್ಯಾಧಿಕಾರಿ, ಆರ್‌ಎಫ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ

ಸರ್ಕಾರದಿಂದ ದಲಿತ ವ್ಯಕ್ತಿಯೊಬ್ಬರಿಗೆ ಮಂಜೂರಾಗಿದ್ದ ಎರಡು ಎಕರೆ ಜಮೀನಿನಲ್ಲಿ ಆತ ಬೆಳೆದಿದ್ದ ಬಾಳೆ, ಕಾಫಿ ಗಿಡಗಳು ಫಸಲು ನೀಡುತ್ತಿದ್ದವು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು, ದಲಿತನ ಹಕ್ಕುದಾರಿಕೆಯ ಆ ಜಮೀನು ಅರಣ್ಯ ಇಲಾಖೆ ಜಾಗ ಎಂದು, ಯಾವುದೇ ನೋಟಿಸ್ ನೀಡದೆ ಏಕಾಏಕಿ ಆ ರೈತ ಬೆಳೆಸಿದ್ದ ಗಿಡಗಳನ್ನೆಲ್ಲ ಕಡಿದು, ಬುಡಸಹಿತ ಕಿತ್ತು ಹಾಕಿದ್ದು, ಮತ್ತೆ ಆ ಜಾಗಕ್ಕೆ ಬರದಂತೆ ಎಚ್ಚರಿಕೆ ನೀಡಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ, ಯಸಳೂರು ಹೋಬಳಿ, ಉಚ್ಚಂಗಿ ಗ್ರಾಮದ ಪರಿಶಿಷ್ಟ ಜಾತಿಯವರಾದ ಯು ಟಿ ರುದ್ರಯ್ಯ ಅವರೇ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿಗಳ ಇಂತಹ ದೌರ್ಜನ್ಯಕ್ಕೆ ಒಳಗಾದವರು.

ರುದ್ರಯ್ಯ ಹಲವು ವರ್ಷಗಳಿಂದ ಉಚ್ಚಂಗಿ ಗ್ರಾಮದ ಸರ್ವೆ ನಂಬರ್ 2ರ ಸರ್ಕಾರಿ ಗೋಮಾಳದ ಎರಡು ಎಕರೆ ಪ್ರದೇಶದಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಕಾಫಿ, ಕಾಳು ಮೆಣಸು, ಬಾಳೆ, ಹಲಸಿನ ಮರ, ಮಾವಿನ ಮರ ಹಾಗೂ ಇತ್ಯಾದಿ ಕಾಡು ಜಾತಿಯ ಮರಗಳನ್ನು ಬೆಳೆಸಿದ್ದಾರೆ.

ಜಮೀನು ಸಕ್ರಮಕ್ಕಾಗಿ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರಿಂದ 2017ರಲ್ಲಿ ಭೂ ಮಂಜೂರಾತಿಯಾಗಿದೆ. ತಹಶೀಲ್ದಾರ್ ಮೂಲಕ ಸರ್ವೆ ಸ್ಕೆಚ್‌ನಂತೆ ಸಾಗುವಳಿ ಪತ್ರ, ಖಾತೆ, ಪಹಣಿ, ಮ್ಯುಟೇಷನ್ ಹೊಂದಿದ್ದಾರೆ. ಅಷ್ಟೇ ಅಲ್ಲದೇ ರುದ್ರಯ್ಯ ಅವರಿಗೆ ಇದೇ ಜಮೀನಿನ ಆಧಾರದ ಮೇಲೆ ಬ್ಯಾಂಕ್‌ನಿಂದ 2 ಲಕ್ಷ ರೂ. ಸಾಲ ಸಹ ಸಿಕ್ಕಿದೆ.

ಘಟನೆ ಕುರಿತು ಉಚ್ಚಂಗಿ ಗ್ರಾಮದ ರುದ್ರಯ್ಯ ಈ ದಿನ.ಕಾಮ್ ಜತೆಗೆ ಮಾತನಾಡಿ, “ಉಚ್ಚಂಗಿ ಗ್ರಾಮದ ಸರ್ವೆ ನಂಬರ್ 2ಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ಕಳೆದ 5 ವರ್ಷಗಳಿಂದ ನಮ್ಮ ಜಮೀನಲ್ಲಿ ಕಾಫಿ ಗಿಡಗಳನ್ನು ನೆಟ್ಟು ತೋಟ ಮಾಡಿದ್ದೇನೆ. ಇಷ್ಟು ವರ್ಷ ಯಾವುದೇ ತಕರಾರರು ಎತ್ತದೆ ಸುಮ್ಮನಿದ್ದ ಅರಣ್ಯ ಇಲಾಖೆಯವರು, ಯಾರದೋ ಕುಮ್ಮಕ್ಕಿನಿಂದ ಏಕಾಏಕಿ ಯಾವುದೇ ನೋಟಿಸ್ ನೀಡದೇ ಬೆಳೆದು ನಿಂತಿದ್ದ ಕಾಫಿ ಗಿಡಗಳನ್ನು ಕಡಿದು ಹಾಕಿದ್ದಾರೆ” ಎಂದು ತಮ್ಮ ಅಳಲು ತೋಡಿಕೊಂಡರು.

“ಸುಮಾರು ಎಂಟು ದಿನಗಳ ಹಿಂದೆ ನಾನು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಯಸಳೂರು ವಲಯ ಸಂರಕ್ಷಣಾಧಿಕಾರಿ ಜಗದೀಶ್ ಹಾಗೂ ಸಿಬ್ಬಂದಿ ಉಚ್ಚಂಗಿ ಗ್ರಾಮಕ್ಕೆ ಬಂದು ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ, ಫಸಲು ನೀಡುತ್ತಿದ್ದ ಕಾಫಿ, ಕಾಳು ಮೆಣಸು, ಬಾಳೆ ಗಿಡಗಳನ್ನು ಬುಡ ಸಮೇತ ಕತ್ತರಿಸಿ ಹಾಕಿದ್ದಾರೆ. ಮರುದಿನ ಈ ಬಗ್ಗೆ ಅರಣ್ಯಾಧಿಕಾರಿಗಳನ್ನು ಕೇಳಲು ಹೋದಾಗ ʼನೀನು ಏನು ಮಾಡುತ್ತಿಯೋ ಮಾಡಿಕೊ, ನಾವೇ ಗಿಡಗಳನ್ನು ಕತ್ತರಿಸಿದ್ದು, ಯಾರು ನಿನಗೆ ಜಮೀನು ಮಂಜೂರು ಮಾಡಿದ್ದರು ಅವರನ್ನೇ ಕೇಳಿಕೊʼ ಎಂದು ದರ್ಪ ತೋರಿದರು. ಅಲ್ಲದೇ ಆ ಜಮೀನಿಗೆ ಕಾಲಿಟ್ಟರೆ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ರುದ್ರಯ್ಯ ವಿವರಿಸಿದರು.

Image

ಮಲೆನಾಡು ಭೀಮ ಧ್ವನಿ ಸಂಘದ ಅಧ್ಯಕ್ಷ ನಾಗೇಶ್ ಮಾಗೇರಿ, ಈ ದಿನ.ಕಾಮ್ ಜತೆಗೆ ಮಾತನಾಡಿ, “ಆರ್ ಎಫ್ ಒ ಮೋಹನ್ ಕುಮಾರ್ ಅವರು ಅಮಾಯಕ ದಲಿತರನ್ನೇ ಗುರಿಯಾಗಿಸಿಕೊಂಡು ದೌರ್ಜನ್ಯ ಮಾಡುತ್ತಿದ್ದಾರೆ. ಇದೇ ಯಸಳೂರು ವಲಯದ ಹಲವು ಕಡೆ ದೊಡ್ಡ ಭೂ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ ದುರ್ಬಲರ ಮೇಲೆ ಮಾತ್ರ ಇವರ ಬ್ರಹ್ಮಾಸ್ತ್ರ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಸಾಮಗ್ರಿಗಳ ವಿತರಣೆ

“ಯಸಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿದ್ದ ಮನು ಎಂಬುವರು ತಹಶೀಲ್ದಾರ್ ಅವರಿಂದ ನಿಯಮಾನುಸಾರ ಯಸಳೂರು ಗ್ರಾಮದ ಸರ್ವೆ ನಂ. 316ರಲ್ಲಿ 2 ಗುಂಟೆ ನಿವೇಶನಕ್ಕೆ ಹಕ್ಕುಪತ್ರ ಪಡೆದು ವಾಸವಿದ್ದರು. ಆ ದಲಿತ ಮಹಿಳೆಯನ್ನು ಯಸಳೂರು ಅರಣ್ಯ ವಲಯ ಅಧಿಕಾರಿ ಮೋಹನ್ ಕುಮಾರ್ ಮನೆಯಿಂದ ಹೊರಗೆ ಹಾಕಿ, ಇಡೀ ಮನೆಯನ್ನು ನೆಲ ಸಮ ಮಾಡಿದ್ದರು” ಎಂದು ಅವರು ವಿವರಿಸಿದರು.

“ಉಚ್ಚಂಗಿ ಗ್ರಾಮದ ರುದ್ರಯ್ಯ ಅವರ ಆಸ್ತಿಪಾಸಿಗಳ ಹಾಗೂ ಬೆಳೆ ದ್ವಂಸ ಮಾಡಿರುವ ಯಸಳೂರು ವಲಯ ಅರಣ್ಯಾಧಿಕಾರಿ ಜಗದೀಶ್ ಹಾಗೂ ಈ ಹಿಂದೆ ಇಲ್ಲೇ ಇದ್ದ ಆರ್ ಎಫ್ ಒ ಮೋಹನ್ ಕುಮಾರ್ ವಿರುದ್ಧ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ಬೆಳೆ ನಷ್ಟ ಉಂಟಾಗಿರುವ ರುದ್ರಯ್ಯ ಅವರಿಗೆ ಪರಿಹಾರ ನೀಡಬೇಕು. ಜತೆಗೆ ದಲಿತ ಮಹಿಳೆ ಮನು ಅವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸಿಕೊಡಬೇಕು” ಎಂದು ಒತ್ತಾಯಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್