ಯುಪಿಪಿಎಸ್‌ಸಿಯಲ್ಲಿ ಮಾಜಿ ಸೈನಿಕರಿಗೆ ಶೇ.5ರಷ್ಟು ಮೀಸಲಾತಿಗೆ ಆದೇಶ ನೀಡಿದ ಹೈಕೋರ್ಟ್

  • 2021ರ ಪಿಸಿಎಸ್ ಪೂರ್ವಭಾವಿ ಪರೀಕ್ಷೆ ಫಲಿತಾಂಶ ರದ್ದು
  • ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಲ್ಲಿ ಶೇ.5ರಷ್ಟು ಮೀಸಲಾತಿ

2021ನೇ ಸಾಲಿನ ಪ್ರಾಂತೀಯ ನಾಗರಿಕ ಸೇವಾ (ಪಿಸಿಎಸ್) ಪರೀಕ್ಷೆಯ ಪೂರ್ವಭಾವಿ ಫಲಿತಾಂಶಗಳನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಲ್ಲಿ ಮಾಜಿ ಸೈನಿಕರಿಗೆ ಶೇ.5ರಷ್ಟು ಮೀಸಲಾತಿ ನೀಡಿದ ನಂತರ ಹೊಸದಾಗಿ ಫಲಿತಾಂಶ ಪ್ರಕಟಿಸಬೇಕೆಂದು ಉತ್ತರ ಪ್ರದೇಶ ಲೋಕಸೇವಾ ಆಯೋಗಕ್ಕೆ (ಯುಪಿಪಿಎಸ್‌ಸಿ) ಹೈಕೋರ್ಟ್ ಆದೇಶಿಸಿದೆ.

ಪ್ರಾಂತೀಯ ನಾಗರಿಕ ಸೇವೆಗಳಲ್ಲಿ ಮಾಜಿ ಸೈನಿಕರಿಗೆ ಮೀಸಲಾತಿ ನೀಡಬೇಕೆಂದು ಕೋರಿ ಸೇನೆಯ ನಿವೃತ್ತ ಕಿರಿಯ ನಿಯೋಜಿತ ಅಧಿಕಾರಿಗಳು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್‌ ನ್ಯಾಯಮೂರ್ತಿ ಸಂಗೀತಾ ಚಂದ್ರ ಅವರ ಪೀಠವು, "ಮಾಜಿ ಸೈನಿಕರಿಗೆ ಮೀಸಲಾತಿ ಪ್ರಯೋಜನವನ್ನು ನೀಡದೆ, ಘೋಷಿಸಲಾದ ಪಿಸಿಎಸ್ ಫಲಿತಾಂಶವನ್ನು ರದ್ದುಗೊಳಿಸಲಾಗಿದೆ" ಎಂದು ಹೇಳಿದೆ. 

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಥವಾ ವಲಯ ಅರಣ್ಯ ಅಧಿಕಾರಿಗಳ ಆಯ್ಕೆಗಾಗಿ 2021ರಲ್ಲಿ ಪಿಸಿಎಸ್ ಪರೀಕ್ಷೆಯನ್ನು ಯುಪಿಪಿಎಸ್‌ಸಿ ನಡೆಸಿತ್ತು. ಈ ಹುದ್ದೆಗಳಲ್ಲಿ ಮಾಜಿ ಸೈನಿಕರಿಗೆ ಶೇ.5ರಷ್ಟು ಮೀಸಲಾತಿ ಕೋಡುವಂತೆ ಯುಪಿಪಿಎಸ್‌ಸಿ ನಿರ್ದೇಶನ ನೀಡುಬೇಕೆಂದು ನ್ಯಾಯಾಲಕ್ಕೆ ಅರ್ಜಿದಾರರು ಮನವಿ ಸಲ್ಲಿಸಿದ್ದರು.

ಈ ಸುದ್ದಿ ಓದಿದ್ದೀರಾ? ಕೇಂದ್ರೀಯ ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಮತ್ತೊಂದು ಅವಕಾಶ

"ಪಿಸಿಎಸ್ ಪೂರ್ವಭಾವಿ ಪರೀಕ್ಷೆಗೆ 'ಆನ್ಲೈನ್' ಮೂಲಕ ಅರ್ಜಿ ಸಲ್ಲಿಸಲು 2021 ಮಾರ್ಚ್ 5ರಂದು ಕೊನೆಯ ದಿನಾಂಕವಾಗಿತ್ತು. ನಂತರ ಕೊನೆಯ ದಿನಾಂಕವನ್ನು ಮಾರ್ಚ್ 17ರವರೆಗೆ ವಿಸ್ತರಣೆ ಮಾಡಲಾಗಿತ್ತು. ಮಾಜಿ ಸೈನಿಕರಿಗೆ ಶೇ.5ರಷ್ಟು ಮೀಸಲಾತಿ ಒದಗಿಸುವ ಬಗ್ಗೆ ಹೊರಡಿಸಿದ ತಿದ್ದುಪಡಿಯನ್ನು 2021 ಮಾರ್ಚ್ 3ರಂದು ರಾಜ್ಯ ಪತ್ರದಲ್ಲಿ ಸೂಚಿಸಲಾಗಿತ್ತು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಬಗ್ಗೆ ಮೊದಲೆ ಅಧಿಸೂಚನೆ ಪ್ರಕಟಿಸಿದ್ದರೂ, ಯುಪಿಪಿಎಸ್‌ಸಿ ಮಾಜಿ ಸೈನಿಕರಿಗೆ ಮೀಸಲಾತಿ ನೀಡಲು ನಿರಾಕರಿಸಿದೆ" ಎಂದು ಅರ್ಜಿದಾರರು ಆರೋಪಿಸಿರುವುದಾಗಿ 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

“ಒಂದು ತಿಂಗಳ ಒಳಗೆ ಪೂರ್ವಭಾವಿ ಪರೀಕ್ಷೆಯ ಫಲಿತಾಂಶಗಳನ್ನು ಹೊಸದಾಗಿ ಪ್ರಕಟಿಸಬೇಕು. ನಂತರ, ಆ ಫಲಿತಾಂಶದ ಪ್ರಕಾರ ಮುಖ್ಯ ಲಿಖಿತ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ನೀಡಲಾಗುತ್ತದೆ. ಈ ಪರೀಕ್ಷೆ ಫಲಿತಾಂಶಗಳ ಆಧಾರದ ಮೇಲೆ, ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳಲ್ಲಿ ಮಾಜಿ ಸೈನಿಕರಿಗೆ ಶೇ.5ರಷ್ಟು ಮೀಸಲಾತಿ ನೀಡಿರುವುದರ ಬಗ್ಗೆ ತಿಳಿಸಬೇಕು” ಎಂದು ಆಗಸ್ಟ್ 2ರಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

2021ರ ಡಿಸೆಂಬರ್ 1ರಂದು, ಯುಪಿಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಫಲಿತಾಂಶಗಳನ್ನು ಘೋಷಿಸಿದೆ. ಹಾಗೇ ‘2021-ಮೇನ್ಸ್’ ಪರೀಕ್ಷೆಯನ್ನು 2022 ಮಾರ್ಚ್ 23ರಿಂದ 27ರಲ್ಲಿ ನಡೆಸಿದ್ದು, ಜುಲೈ 12ರಂದು ಫಲಿತಾಂಶ ಪ್ರಕಟಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್