ಮೂಲ ನಿವಾಸಿಗಳ ಮೇಲೆ ರಾಜ್ಯ, ರಾಷ್ಟ್ರ ಮತ್ತು ಜಾಗತಿಕ ಕ್ರೌರ್ಯಗಳ; ಒಂದು ಕಿರು ಚಿತ್ರಣ

ಆಗಸ್ಟ್‌ 9 ವಿಶ್ವ ಮೂಲ ನಿವಾಸಿಗಳ ದಿನ. “ಸಾಂಪ್ರದಾಯಿಕ ಜ್ಞಾನ ಸಂರಕ್ಷಣೆ ಮತ್ತು ವಿಸ್ತರಣೆಯಲ್ಲಿ ಆದಿವಾಸಿಗಳ ಮಹಿಳೆಯರ ಪಾತ್ರ” ಈ ಬಾರಿಯ ವಿಷಯ. ಇದು ಘೋಷಣೆಯಾಗಿದ್ದು 1994ರಲ್ಲಿ. ವಿಶ್ವಸಂಸ್ಥೆಯ ಇಂಥದ್ದೊಂದು ಘೋಷಣೆಯೇ, ಆ ವಿಷಯ ತೀರಾ ಅಪಾಯಕಾರಿ ಸ್ಥಿತಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಈ ಸೂಚನೆಯನ್ನು ಆಧರಿಸಿ ನಾವು ಇಂದಿಷ್ಟು ಚಾರಿತ್ರಿಕ ವಾಸ್ತವಗಳನ್ನು ಪರಿಶೀಲಿಸುವುದಾದರೆ ರಾಜ್ಯ, ರಾಷ್ಟ್ರ ಮತ್ತು ಜಾಗತಿಕ ಕ್ರೌರ್ಯಗಳ ಒಂದು ಚಿತ್ರಣ ನಮಗೆ ಸಿಗುತ್ತದೆ. ಈ ನೆಲೆಯ ಮೇಲೆ ನಿಂತು ಆದಿವಾಸಿಗಳ ಬದುಕನ್ನು ಪರಿಶೀಲಿಸುವುದಾದಲ್ಲಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯಾಗಿ ಕೂರಿಸಿರುವ “ವೈರುಧ್ಯಗಳ ನೆರಳು” ನಮಗೆ ಗೋಚರವಾಗಬಹುದು.”
International Day of the World’s Indigenous Peoples 2022: History of Destruction

1970ರ ದಶಕದ ಕತೆ. ಈಗ ಇಲ್ಲಿಂದಲೇ ಆರಂಭಿಸೋಣ ಮತ್ತು ಹಿಂದಕ್ಕೆ ನೋಡೋಣ. ಈ ದೇಶಕ್ಕೆ ಕಾಲಿಟ್ಟ ಹುಲಿ ಸಂರಕ್ಷಣಾ ಯೋಜನೆಯ ಕಾರಣದಿಂದಾಗಿ ಕರ್ನಾಟಕದ ಬಂಡೀಪುರ, ನಾಗರಹೊಳೆ ಅರಣ್ಯಗಳಲ್ಲಿ ತಲೆತಲಾಂತರಗಳಿಂದ ಬದುಕಿದ್ದ ಯರವರು, ಪಣಿಯರು, ಸೋಲಿಗರು, ಕಾಡು ಕುರುಬರು, ಜೇನು ಕುರುಬರು ಹಾಗೂ ಇನ್ನಿತರ ಎಲ್ಲಾ ಆದಿವಾಸಿಗಳನ್ನೂ ಅಲ್ಲಿಂದ ಸ್ಥಳಾಂತರಿಸಲಾಯಿತು. ಇದನ್ನು ಪ್ರತಿಭಟಿಸಿ ಅನೇಕ ಪ್ರಯತ್ನಗಳು ನಡೆದವು. ಆದರೆ ನಮ್ಮ ಅರಣ್ಯ ಮತ್ತು ಪೋಲಿಸ್ ಪ್ರಭುತ್ವ ಅದನ್ನೆಲ್ಲಾ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಿಬಿಟ್ಟಿತು. 

ಈ ಪಟ್ಟಿಯಲ್ಲಿ ಆಂಧ್ರ ಪ್ರದೇಶದ ಕೃಷ್ಣಾ ನದಿ ಕಣಿವೆಯ ಕಾಡುಗಳಲ್ಲಿ ವಾಸಿಸುವ ‘ಚಂಚು’ ಆದಿವಾಸಿಗಳೂ ಸೇರಿದ್ದಾರೆ. ಹುಲಿಗಳ ಸಂರಕ್ಷಣೆಗಾಗಿ ಇವರು ತಮ್ಮ ಬದುಕನ್ನೇ ತೆರಬೇಕಾಯಿತು. ಈ ನಮ್ಮ ಏಷ್ಯಾಟಿಕ್ ಹುಲಿಗಳ ಸೋದರ ಸಂಬಂಧಿಗಳಾದ ಸೈಬೀರಿಯಾದ ಹುಲಿಗಳನ್ನು ಸಂರಕ್ಷಿಸುವ ಯೋಜನೆಯೂ ಇದೇ ಸಂರಕ್ಷಣಾ ಯೋಜನೆಯ ಅಂತರ್ಗತ ಭಾಗವಾಗಿತ್ತು.

ಸೈಬೀರಿಯಾದಲ್ಲೂ ಈ ಪ್ರಯತ್ನ ನಡೆಯಿತು. ಅಲ್ಲಿನ 5000 ಮಂದಿ ಮೂಲನಿವಾಸಿಗಳನ್ನು ಅಲ್ಲಿಂದ ಎತ್ತಂಗಡಿ ಮಾಡಿಸುವ ಪ್ರಯತ್ನ ನಡೆಯಿತು. ಆಗ ಅಲ್ಲೆದ್ದ ಪ್ರಶ್ನೆ ಎಂದರೆ, “ನಮ್ಮ ಹೊಟ್ಟೆ ಪಾಡಿನ ಗಳಿಕೆಗೆ ಉಳಿದಿರುವುದು ಕೆಲವೇ ಕೆಲವು ಕ್ಷೀಣ ಮಾರ್ಗಗಳು, ಇವುಗಳಲ್ಲಿ ದಿನವೆಲ್ಲಾ ದುಡಿದರೂ ಹೊಟ್ಟೆಗಾದರೆ ಬಟ್ಟೆಗೆ ಸಾಲದು ಎಂಬಂತಿದೆ." ಅದೇ ಒಂದು ಹುಲಿಯನ್ನು ಹೊಡೆದರೆ ಕನಿಷ್ಟ 5000 ಡಾಲರ್ ಹಣ ಸಿಗುತ್ತದೆ!  ಆದರೆ ಆಯಾ ಪ್ರಭುತ್ವಗಳು ಈ ಯಾರನ್ನೂ ಬಿಡಲಿಲ್ಲ. ಎಲ್ಲರನ್ನೂ ಬಲಾತ್ಕಾರವಾಗಿ ಕಾಡಿನಿಂದ ಹೊರಹಾಕಿದರು. ಇವರ ಗುಂಪಿನಲ್ಲಿ ಜೀವವಿಕಾಸ ಚರಿತ್ರೆಯಲ್ಲಿ ಪ್ರಖ್ಯಾತವಾದ ಗಾಲಪೋಗಸ್ ದ್ವೀಪದ ಮೂಲನಿವಾಸಿಗಳೂ ಸೇರಿದ್ದಾರೆ.

ಆಯಾ ಪ್ರಭುತ್ವಗಳು ಇವರ ಮೇಲೆ ಅನೇಕ ಅಪಾದನೆಗಳನ್ನು ಹೊರಿಸಿವೆ. ಇದರಲ್ಲಿ ಇವರು ಕಾಡನ್ನೂ, ಕಾಡು ಪ್ರಾಣಿಗಳನ್ನೂ ನಾಶಮಾಡುತ್ತಾರೆ ಎಂಬುದು ಮುಖ್ಯವಾದದ್ದು. ಮೇಲು ನೋಟಕ್ಕೆ ಇದೆಲ್ಲಾ ಸರಿ ಎಂಬಂತೆಯೇ ಕಾಣುತ್ತದೆ. ಆದರೆ ಸತ್ಯ ಸಂಗತಿ ಏನು? ಏಕೆ ಹುಲಿ, ಆನೆಗಳನ್ನು ಸಂರಕ್ಷಿಸಬೇಕಾದ ಸ್ಥಿತಿ ಬಂದಿದೆ. ಈವರೆಗೂ ಇದ್ದ ಹುಲಿ, ಆನೆಗಳ ಆಗಾಧ ಸಮುದಾಯವನ್ನು ನಾಶಮಾಡಿದವರು ಯಾರು? ಅಲ್ಲಿನ ಆದಿವಾಸಿ, ಮೂಲ ನಿವಾಸಿಗಳೇ? ಅಥವಾ?...

ಇಲ್ಲಿ ತಮಾಷೆಗಾಗಿ ಕೆಲವು ವಿವರಗಳನ್ನು ನೋಡಬಹುದು! ಭರತಪುರದ ಮಹಾರಾಜ ತನ್ನ ಎಂಟನೆಯ ವಯಸ್ಸಿನಲ್ಲಿಯೇ ಮೊದಲ ಹುಲಿ ಶಿಕಾರಿ ಮಾಡಿದ್ದ. ಇದೇ ಮಹಾರಾಜ ತನ್ನ ಅರಮನೆಯ ದಿವಾನಖಾನೆಯ ನೆಲಕ್ಕೆ ಒಂದಿಂಚೂ ಬಿಡದಂತೆ ಹುಲಿಯ ಚರ್ಮಗಳನ್ನೇ ಹಾಸಿದ್ದ. ಇವೆಲ್ಲಾ ಅವನೇ ಕೊಂದ ಹುಲಿಯ ಚರ್ಮಗಳು. ಇವನಿಗೆ ಪ್ರತಿಸ್ಪರ್ಧೆ ಎನ್ನುವಂತೆ ಗ್ವಾಲಿಯರ್ ಮಹಾರಾಜ ತನ್ನ ಜೀವಿತದ ಅವಧಿಯಲ್ಲಿ 1400 ಹುಲಿಗಳನ್ನು ಕೊಂದಿದ್ದ. ಉತ್ತರ ಪ್ರದೇಶದ ಜಿಮ್ ಕಾರ್ಬೆಟ್ಟನ ಸಮಕಾಲೀನ ಬಲರಾಂಪುರದ ಪ್ರಸಿದ್ಧ ಹರ್ಸೆ ಮನೆತನದ ಟಾಮ್ ಇನ್ನೇಸ್ ಎಂಬುವನು ‘ಹೋಗಯ್ಯಾ..., ನಾನು ಹದಿನೈದು ವರ್ಷಗಳ ಹಿಂದೆಯೇ 100 ಹುಲಿಗಳನ್ನು ಕೊಂದಿದ್ದೆ. ಈಗ ಕೊಂದ ಹುಲಿಗಳ ಎಣಿಕೆಯನ್ನೇ ಬಿಟ್ಟುಬಿಟ್ಟಿದ್ದೇನೆ’ ಎಂದು ಹೇಳುತ್ತಿದ್ದನಂತೆ; ಇಲ್ಲಿಗೆ ಮುಕ್ಕಾಲು ಶತಮಾನ ಮುಂಚೆ.

ಇದೇ ಹೊತ್ತಿನಲ್ಲಿ ಜಗತ್ತಿನ ಯಾವುದೇ ಮೂಲನಿವಾಸಿ ಯಾ ಆದಿವಾಸಿ ಸಮುದಾಯಗಳು ಹೀಗೆ ಸಾರಾಸಗಟಾಗಿ ವನ್ಯ ಪ್ರಾಣಿಗಳನ್ನು ತೆವಲಿಗಾಗಿ ಕೊಂದ ಒಂದೇ ಒಂದು ಉಲ್ಲೇಖವಿಲ್ಲ. 

ಈಗ ನಮ್ಮ ಒಬ್ಬ ಆದಿವಾಸಿ ಒಂದು ಹುಲಿಯನ್ನೋ ಅಥವಾ ಆನೆಯನ್ನೋ ಕೊಂದನೆಂದೇ ಇಟ್ಟುಕೊಳ್ಳೋಣ?! ಆದರೆ ಅದನ್ನು ಖರೀದಿಸುವ, ಉಪಯೋಗಿಸುವ ಗ್ರಾಹಕರು ಯಾರು? ಏಕೆ ಈ ವನ್ಯ ಪ್ರಾಣಿಗಳ ಅಂಗಾಂಗಗಳಿಗೆ ಅಷ್ಟೊಂದು ಬೇಡಿಕೆ ಇದೆ. ಈ ಬೇಡಿಕೆ ಹುಟ್ಟಿಕೊಳ್ಳುವುದು ಹಾಗೂ ಅದು ವೃದ್ಧಿಯಾಗುವುದು ಯಾರಿಂದ? ಸಾವಿರಾರು ಡಾಲರ್ ಹಣಕೊಟ್ಟು ಒಂದು ಹುಲಿ ಚರ್ಮದ ಧಿಮಾಕಿನ ಚೀಲವನ್ನೋ, ಜರ್ಕೀನನ್ನೋ ಕೊಳ್ಳುವವರು ಯಾರು? ಆನೆಕಾಲಿನಿಂದ ಮಾಡಿದ ಸ್ಟೂಲುಗಳನ್ನು ತಮ್ಮ ಮನೆಯ ಬಾರುಗಳಲ್ಲಿ ಅಲಂಕಾರಕ್ಕೆ ಬಳಸುವವರು ಯಾರು? ಆನೆ ದಂತದ ಆಂಟಿಕ್‌ಗಳನ್ನೂ, ಪ್ರತಿಮೆಗಳನ್ನೂ ಖರೀದಿಸುವ ಜನ ಯಾರು? ಇವರಿಗೆ ಇಷ್ಟೊಂದು ಹಣ ಬಂದಿದ್ದು ಎಲ್ಲಿಂದ?

ಇಲ್ಲಿಂದ ಕಾಡುಗಳನ್ನಾಧರಿಸಿದ ಪರಿಸರವಾದದಲ್ಲಿ ‘ದ್ವೈತ’ ಸಮಸ್ಯೆ ಆರಂಭವಾಗುತ್ತದೆ. ತುಂಬಾ ಸ್ಪಷ್ಟವಾಗಿರುವಂತೆ ಇಲ್ಲಿ ಎರಡು ಬಗೆಯ ಪರಿಸರವಾದಗಳಿವೆ. ಒಂದು ‘ಶ್ರೀಮಂತರ ಪರಿಸರವಾದ’ ಇನ್ನೊಂದು ‘ಬಡವರ ಪರಿಸರವಾದ’. ಈಗ ಈ ಆನೆ, ಹುಲಿಗಳೇ ಮೊದಲಾದ ವನ್ಯ ಜೀವಿಗಳನ್ನು ರಕ್ಷಿಸಬೇಕೆಂದು, ಜೀವ ವೈವಿಧ್ಯಕ್ಕೆ ಇದು ಅಗತ್ಯವೆಂದು ಬೊಬ್ಬೆ ಹಾಕುವ ಶ್ರೀಮಂತ ಪರಿಸರವಾದಿಗಳು ಒಂದು ಕಡೆಯಾದರೆ, ಶತಮಾನಗಳಿಂದಲೂ ಕೇವಲ ಹೊಟ್ಟೆಗಾಗಿ ನಿರಂತರವಾಗಿ ಹೋರಾಡುತ್ತಿರುವ ಜನ ಸಮುದಾಯಗಳನ್ನು ಕಾಪಾಡುವುದು, ಅವರ ಆತ್ಮಗೌರವವನ್ನು ರಕ್ಷಿಸುವುದು ಅಷ್ಟೇ  ಮುಖ್ಯವೆಂದು ವಾದಿಸುವ ಬಡ ಪರಿಸರವಾದಿಗಳು ಇನ್ನೊಂದು ಕಡೆ. ನಿಜವಾಗಿ ಕಾಡುಗಳು ಈ ಇಬ್ಬರ ನಡುವೆ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿವೆ. 

ಈ ಎರಡೂ ವಾದಗಳನ್ನು ಬೌದ್ಧಿಕವಾಗಿ ಹಾಗೂ ಭೌಗೋಳಿಕವಾಗಿ ವಿಂಗಡಿಸುವುದಾದರೆ., ಮೊದಲು ಪ್ರಾಣಿ-ಪಕ್ಷಿ ಸಂರಕ್ಷಣೆಯು ಬೌದ್ಧಿಕವಾಗಿ ಹುಟ್ಟಿದ್ದು ಕಾಡು-ಸಂಪನ್ಮೂಲಗಳಿಂದ ಬಹುದೂರದಲ್ಲಿರುವ, ಆದರೆ ಈ ಸಂಪನ್ಮೂಲಗಳ ಲೂಟಿಯಿಂದಲೇ ಹೊಟ್ಟೆ ತುಂಬಿಸಿಕೊಂಡು, ಆಗಾಧ ಐಶ್ವರ್ಯವಂತರಾಗಿರುವ, ಈ ಎರಡು ಸವಲತ್ತುಗಳ ಕಾರಣದಿಂದಲೇ ತಾವು ನಾಗರಿಕರೆಂದು ಘೋಷಿಸಿಕೊಂಡ ಸಮುದಾಯಗಳಿಂದ. ಹಾಗೆಯೇ ಭೌಗೋಳಿಕವಾಗಿ ವಿಂಗಡಿಸುವುದಾದರೆ ಈ ಭೂಗೋಳದ ಉತ್ತರಾರ್ಧದ ದೇಶಗಳಿಂದ. ಎರಡನೆಯ ಬಡವರ ಪರಿಸರವಾದ ಹುಟ್ಟುವುದು ಮೇಲಿನ ಶ್ರೀಮಂತರ ಹಣ, ಶಿಕ್ಷಣ, ವಿeನ, ಈ ವಿeನವನ್ನೇ ಆಧರಿಸಿರುವ ತಂತ್ರeನ ಹಾಗೂ ಆಧುನಿಕ ಯುದ್ಧೋಪಕರಣಗಳಿಂದ ನಿರಂತರವಾಗಿ ಶೋಷಿಸಲ್ಪಟ್ಟ ಬಡ, ಅವಿದ್ಯಾವಂತ ಹಾಗೂ ಅವರ ಸಾಪೇಕ್ಷದಲ್ಲಿ ಅನಾಗರಿಕರಾದ ಜನರಿಂದ. ಭೌಗೋಳಿಕವಾಗಿ ದಕ್ಷಿಣಾರ್ಧಗೋಲದ ಜನರಿಂದ.

ಇಲ್ಲಿ ಉತ್ತರಾರ್ಧವೆಂದರೆ ಇಡಿಯಾಗಿ ಉತ್ತರ ಭೂಗೋಳವಲ್ಲ, ಅಲ್ಲಿ ಲ್ಯಾಟಿನ್ ಅಮೆರಿಕಾ ಇದೆ. ಇತ್ತ ದಕ್ಷಿಣಾರ್ಧವೆಂದರೆ ಪೂರ್ತಿ ದಕ್ಷಿಣ ಭಾಗವಲ್ಲ, ಇಲ್ಲಿ ಜಪಾನು ಹಾಗೂ ಭಾರತದ ಇವೆ.

ರಾಷ್ಟ್ರೀಯ ಉದ್ಯಾನಗಳು, ಸಂರಕ್ಷಿತಾರಣ್ಯಗಳ ಹೆಸರಿನಲ್ಲಿ ಕಾನೂನುಗಳನ್ನು ಮಾಡಿರುವ ಸರ್ಕಾರ ಈ ಕಾನೂನುಗಳನ್ನು ಅನ್ವಯಿಸಿಯೇ ಈ ನಾಡಿನ ಜನಸಾಮಾನ್ಯನನ್ನು ಕಾಡಿನಿಂದ ದೂರವಿಡುತ್ತದೆ ಹಾಗೂ ಕಾಡಿನ ಒಳಗಿರುವ ಆದಿವಾಸಿಗಳನ್ನು ಕಾಡಿನಿಂದ ಹೊರಹಾಕುತ್ತದೆ. ಆದರೆ ಇದೇ ಕಾನೂನನನ್ನು ಬಳಸಿಯೇ ನೂರಾರು ಕೆಲವೊಮ್ಮೆ ಸಾವಿರಾರು ಮೈಲಿ ದೂರದಲ್ಲಿರುವ ದೇಶದ ಮತ್ತು ಹೊರದೇಶದ ಕಂಪನಿ/ಕಾರ್ಖಾನೆಗಳಿಗೆ ಕಾಡನ್ನು ಗುತ್ತಿಗೆಕೊಡುತ್ತದೆ. ಈ ಕಾನೂನನ್ನು ಬಳಸಿಯೇ  ಕಾಡಿನ ಒಳಗಿರುವ ಸಾವಿರಾರು ಎಕರೆ ಕಾಫಿ, ಟೀ ತೋಟಗಳನ್ನು ಶ್ರೀಮಂತರಿಗಾಗಿ ಉಳಿಸಿಕೊಡುತ್ತದೆ. ಇವರಿಗೆ ಅರಣ್ಯಾವಲಂಬಿತರಿಂದ ತೊಂದರೆಯಾಗದಂತೆ ಈ ಕಾನೂನನ್ನು ಬಳಸಿ ಅವರನ್ನು ರಕ್ಷಿಸುತ್ತದೆ. ಹೀಗಾಗಿ ಈ ಕಾನೂನು ಎಂಬುದು ಎರಡು ಅಲಗಿನ ಕತ್ತಿಯಂತೆ ಕಾಡುಗಳಿಗೆ ಬೇಲಿಯಾಗಿ ಒಂದು ವರ್ಗವನ್ನು ರಕ್ಷಿಸುತ್ತಾ ಮತ್ತೊಂದು ವರ್ಗವನ್ನು ಅದರಿಂದ ದೂರಮಾಡುತ್ತದೆ. ಈ ಕತ್ತಿಯ ಎರಡೂ ಅಲಗುಗಳೂ ಬಡವನನ್ನೇ ಮತ್ತಷ್ಟು ಬಡತನಕ್ಕೆ ತಳ್ಳುವ ಮಾದರಿಯಲ್ಲಿ ಕಾನೂನನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನು ಕೇವಲ ಭಾರತೀಯ ಸಂದರ್ಭದಲ್ಲಿ ಮಾತ್ರ ವಿಶ್ಲೇಷಿಸಲು ಸಾಧ್ಯವಿಲ್ಲ. ಇದು ಜಾಗತಿಕವಾದದ್ದು. ಏಕೆಂದರೆ ಈ ಎಲ್ಲಾ ಕಾನೂನುಗಳ ಮೂಲ ಮಾತೃಕೆ ಇರುವುದು ಮುಂದುವರಿದ ರಾಷ್ಟ್ರಗಳ ಸಾಮ್ರಾಜ್ಯಶಾಹಿ ಭಿತ್ತಿಯಲ್ಲಿ. ನಮ್ಮ ದೇಶದ ಅರಣ್ಯ ಕಾನೂನುಗಳಂತೂ ಸಂಪೂರ್ಣವಾಗಿ ಯುರೋಪಿಯನ್ ರಾಷ್ಟ್ರಗಳ ಪಡಿಯಚ್ಚುಗಳಾಗಿವೆ ಅಥವ ಬಲಾಢ್ಯರ ಆಯ್ಕೆಯ ಮೂಲ ಸೂತ್ರಗಳಾಗಿವೆ.

ಇದಕ್ಕೆ ಉತ್ತರವಾಗಿ ಶಿವವಿಶ್ವನಾಥನ್ ಅವರ ಮಾತುಗಳನ್ನು ಗಮನಿಸಿಬೇಕು. ವೈಜ್ಞಾನಿಕ ಕಾರ್ಯಕ್ರಮದ ರೂಪದಲ್ಲಿ ಕಾಣಿಸಿಕೊಳ್ಳುವ ಆಧುನಿಕತೆಯ ಹಿಂದೆ ಇನ್ನೊಂದು ಮೂಲತತ್ವ ಅಡಗಿದೆ ಎನ್ನುತ್ತಾ, ಬಲಾಢ್ಯರ ಆಯ್ಕೆಯ ವಾದವನ್ನು ಮಂಡಿಸುತ್ತಾರೆ. ಇದಕ್ಕೆ ‘ಟ್ರಯೇಜ್’ (Triage) ಪದ-ಅರ್ಥದ ಸಮರ್ಥನೆ ನೀಡುತ್ತಾರೆ. ಈ ಟ್ರಯೇಜ್ ಪದಕ್ಕೆ ಸಾಮಾನ್ಯ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿ: ‘ಕಳಪೆ, ಚೀಕಲು-ಕಾಫಿ ಬೀಜ’ ಎನ್ನುವ ಅರ್ಥವಿದೆ. ಇದು ನಿಜ, ಈ ಫ್ರೆಂಚ್ ಮೂಲದ ಪದ ಹತ್ತೊಂಭತ್ತನೆಯ ಶತಮಾನದಲ್ಲಿ ಕಾಫಿ ಬೀಜಗಳ ಆಯ್ಕೆಗೆ ಬಳಸಲಾಗುತ್ತಿತ್ತು. 

ಆದರೆ “ಪರಿಸರ ನಿಘಂಟು"ನಲ್ಲಿ ಈ ಪದವನ್ನು ಪರಿಸರದ ವ್ಯಾಪ್ತಿಯಲ್ಲಿ ಗಮನಿಸಿದಾಗ ಆಶ್ಚರ್ಯವಾಗುತ್ತದೆ. ಇದಕ್ಕೂ ಪರಿಸರಕ್ಕೂ ಏನು ಸಂಬಂಧವೆಂದು ಅನ್ವೇಷಿಸುತ್ತಾ ಹೋದ ಹಾಗೆ ಅದು ಈಗ ಬಳಕೆಯಲ್ಲಿರುವ ವ್ಯಾಪ್ತಿ, ಉದ್ದೇಶಗಳನ್ನು ನೋಡಿ ದಿಗ್ಭ್ರಮೆಯಾಗುತ್ತದೆ. ಪರಿಸರ ನಿಘಂಟಿನಲ್ಲಿ ಇದರ ಅರ್ಥ ಹೀಗಿದೆ: “ಲಭ್ಯ ವೈದ್ಯಕೀಯ ಸೌಲಭ್ಯ ಮತ್ತು ಸೇವೆಗಳಿಗಿಂತ ಹೆಚ್ಚು ಪ್ರಳಯಕಾರಿ ವಿಧ್ವಂಸಕ ದುರಂತಕ್ಕೆ ಒಳಗಾದ ಜನಗಳಿಗೆ ನೀಡುವ ವೈದ್ಯಕೀಯ ಚಿಕಿತ್ಸೆಯ ಒಂದು ಪದ್ಧತಿ." ದುರಂತಕ್ಕೆ ಒಳಗಾದವರನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಎ. ಚಿಕಿತ್ಸೆಯ ನಂತರವೂ ಸಾಯುವವರು. ಬಿ. ಚಿಕಿತ್ಸೆಯಿಂದ ಬದುಕುಳಿಯಬಲ್ಲವರು. ಸಿ. ತುರ್ತು ಚಿಕಿತ್ಸೆಯಿಂದ ಚೇತರಿಸಿಕೊಳ್ಳುವವರು. ‘ಬಿ’, ‘ಸಿ’ ಮತ್ತು ‘ಎ’ ಕ್ರಮದಲ್ಲಿ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತದೆ."

ಶಿವವಿಶ್ವನಾಥನ್ ಇದನ್ನು ಹೀಗೆ ವಿಸ್ತರಿಸುತ್ತಾರೆ, “ ವೈದ್ಯಕೀಯ ಸೌಲಭ್ಯದ ಪೂರೈಕೆಯು ಚಿಕಿತ್ಸೆಯ ಅಗತ್ಯಕ್ಕಿಂತ ತುಂಬಾ ಕಡಿಮೆಯಾಗಿರುವ ಸಂದರ್ಭದಲ್ಲಿ, ಯಾವ ರೋಗಿಗೆ ಮೊದಲು ಚಿಕಿತ್ಸೆ ಒದಗಿಸಬೇಕು ಎಂಬುದನ್ನು ನಿರ್ಧರಿಸುವ ಮಾನದಂಡವಾಗಿ ಇದು ವೈದ್ಯಕೀಯ ನಿಘಂಟಿನಲ್ಲಿ ಸ್ಥಾನ ಪಡೆಯಿತು" ಎಂದು. 

ರಿಚರ್ಡ್ ರುಬೆನ್ಸ್ಟೀನ್ ತನ್ನ ಒಂದು ಪುಸ್ತಕದಲ್ಲಿ ಈ ಬಗ್ಗೆ ವಿವರಗಳನ್ನು ಕೊಡುತ್ತಾನೆ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ದುರ್ಲಭವಾಗಿದ್ದ ಪೆನ್ಸಿಲಿನ್ ಔಷಧವನ್ನು ಎಂಥಾ ರೋಗಿಗಳಿಗೆ ಕೊಡಬೇಕು ಎಂದು ನಿರ್ಧರಿಸುವುದಕ್ಕೆ ಈ ತತ್ವ ಸಹಾಯಮಾಡಿತು. ಕೆಲವು ಸೈನಿಕರು ಯುದ್ಧರಂಗದಲ್ಲಿ ಗಾಯಗೊಂಡಿದ್ದರು, ಇನ್ನು ಕೆಲವರು ಸೂಳೆಗೇರಿಗಳಿಂದ ರೋಗ ಹತ್ತಿಸಿ ಕೊಂಡಿದ್ದರು. ಆಗ ನಿರ್ಧರಿಸಿದ್ದು ಹೀಗೆ, ಯುದ್ಧದ ಗಾಯಾಳುಗಳನ್ನು ಉಳಿಸಿಕೊಳ್ಳಲಾಗದಿದ್ದರೂ ಪರವಾಗಿಲ್ಲ, ಮೊದಲು ಗುಹ್ಯರೋಗಿಗಳಿಗೇ ಪೆನ್ಸಿಲಿನ್ ಕೊಡಬೇಕೆಂದು.

ಇದನ್ನು ವ್ಯಾಖ್ಯಾನ ಮಾಡುತ್ತಾ ವಿಶ್ವನಾಥನ್ ಹೇಳುತ್ತಾರೆ...., “ಇದರ ಹಿಂದಿನ ತರ್ಕ ಇಷ್ಟೇ, ಅಂಗವಿಕಲ ರೋಗಿಗಳು ಚಿಕಿತ್ಸೆ ಪಡೆದರೂ ತಕ್ಷಣ ರಣರಂಗಕ್ಕೆ ಹಿಂತಿರುಗುವುದು ಅಸಾಧ್ಯ. ಆದರೆ ಗುಹ್ಯ ರೋಗಗಳಿಗೆ ಪೆನ್ಸಿಲಿನ್ ಕೊಟ್ಟರೆ ಅವರನ್ನು ಗುಣಪಡಿಸಿ, ಕೂಡಲೇ ಮುಂಚೂಣಿಗೆ ರವಾನಿಸಬಹುದು." ಹೀಗೆ ಆರಂಭವಾದ ಈ ಆಯ್ಕೆಯ ತತ್ವವು ಇವತ್ತು ಆಸ್ಪತ್ರೆಗಳ ಗಡಿಯನ್ನು ದಾಟಿ ಸಾಮಾಜಿಕ, ರಾಜಕೀಯ ವ್ಯಾಪ್ತಿಯನ್ನು ಗಳಿಸಿಕೊಂಡಿದೆ. 

ವಾಸ್ತವಿಕವಾಗಿ ಇಂದಿನ ಸಾಮಾಜಿಕ ಸ್ಥಿತಿಯಲ್ಲಿ ರಣರಂಗದಲ್ಲಿನ ಗಾಯಾಳುಗಳು ಬಹುಕೋಟಿ ಜನಸಾಮಾನ್ಯರಾದರೆ, ಗುಹ್ಯರೋಗಿಗಳ ಸ್ಥಾನವನ್ನು ಈ ಜಗತ್ತಿನ ಪ್ರಭುತ್ವ ಹಾಗು ಅವರ ಬೆಂಬಲಿಗರಾದ ಶ್ರೀಮಂತರು ಆಕ್ರಮಿಸಿದ್ದಾರೆ.

ಈ ಆಯ್ಕೆಯ ಕಲ್ಪನೆಯ ತತ್ವವು ಮತ್ತೊಮ್ಮೆ ಮೇಲೆದ್ದು ಬರುವುದರೊಂದಿಗೆ ಆಧುನಿಕ ತಾತ್ವಿಕ ಯಾತ್ರೆಯು ಒಂದು ಆವರ್ತನೆಯನ್ನು ಪೂರ್ಣಗೊಳಿಸಿದೆ. ‘ಪ್ರಗತಿಯು ಅನ್ಯರನ್ನು ತನ್ನ ವ್ಯಾಪ್ತಿಗೆ ಸೆಳೆದುಕೊಂಡು ಆಧುನಿಕ ಗೊಳಿಸಲು ಯತ್ನಿಸಿದರೆ ಈ ಆಯ್ಕೆಯ ತತ್ವವು ಹಾಗೆ ಆಧುನಿಕಗೊಳ್ಳದ ಅನ್ಯರನ್ನು ನಿವಾರಿಸಲು ಬಯಸುತ್ತದೆ’.

ಇವೆರಡೂ ಕಲ್ಪನೆಗಳ ಮೂಲ ಸ್ಮೃತಿ; ವಿಜ್ಞಾನ. ಬುಡಕಟ್ಟು ಸಮಾಜಗಳಿಗೆ ಯಾವ ಇತಿಹಾಸವೂ ಇಲ್ಲವೆಂದು ಹಿಂದೊಮ್ಮೆ ವಿಜ್ಞಾನವು ಯೋಚಿಸಿತ್ತು. ಆದರೆ ಇಂದು ವಿಜ್ಞಾನವು ಅಂಥಾ ಸಮಾಜಗಳಿಗೆ ಯಾವುದೇ ಭವಿಷ್ಯಕೂಡ ಇಲ್ಲವೆಂದು ಯೋಚಿಸತೊಡಗಿದೆ. ಆಗ ಬುಡಕಟ್ಟು ಸಮುದಾಯಗಳನ್ನು ದೌರ್ಜನ್ಯದಿಂದ ಆಧುನಿಕತೆಗೆ ಎಳೆದು ತರಲಾಗುತ್ತಿತ್ತು. ಆದರೆ ಈಗ ಅವುಗಳನ್ನು ವಿಜ್ಞಾನಕ್ಕೆ ಅನಪೇಕ್ಷಣೀಯವೆಂದು ಹೊರತಳ್ಳಲಾಗುತ್ತಿದೆ.

ಇಲ್ಲಿ ವಿಜ್ಞಾನದಲ್ಲಿ ಸೋತವರಿಗೆ ಪ್ರಯೋಗವಸ್ತುಗಳಾಗುವ ಹೊರತು ಬೇರೆ ಸ್ಥಾನವಿಲ್ಲ. ಇಂಥಾ ಗೆಲುವಿನ ಆಯ್ಕೆಯ ತತ್ವವು ತನ್ನ ಪ್ರಾಥಮಿಕ ರೂಪದಲ್ಲಿ ಹಿಂದೆ ರೂಢಿಯಲ್ಲಿತ್ತು. ಅಂದು ಈ ಆಯ್ಕೆ ತೋಳ್ಬಲಗಳನ್ನು ಆಧರಿಸಿತ್ತು. ಇಂದು ವಿಜ್ಞಾನ ತಂತ್ರಜ್ಞಾನಗಳು ಈ ತೋಳ್ಬಲದ ಸ್ಥಾನವನ್ನು ಆಕ್ರಮಿಸಿವೆ. ವಿಜ್ಞಾನದಲ್ಲಿ ಪ್ರಭುತ್ವ ಸಾಧಿಸಿದವರು ರಾಜ್ಯಪ್ರಭುತ್ವಕ್ಕೆ ಉಪಯುಕ್ತರು. ಇದಿಲ್ಲದ ಯಾರಾದರೂ ಸರಿ ನಿರ್ನಾಮಕ್ಕೆ ಅರ್ಹರಾದವರು. ಈ ತತ್ವ ಮೂಲಭೂತ ನೈಸರ್ಗಿಕ ನಿಯಮದ ಸ್ಪಷ್ಟ ತದ್ವಿರುದ್ಧ ರೂಪ. ಡಾರ್ವಿನ್ನನ ‘ಉಳಿವಿಗಾಗಿ ಹೋರಾಟ’ ಮತ್ತು ‘ಪ್ರಾಕೃತಿಯ ಆಯ್ಕೆ ಅಥವಾ ಯೋಗ್ಯ ಜೀವಿಯ ಉಳಿವು’ ಇಲ್ಲಿ ಉಲ್ಟಾಪಲ್ಟಾ ಆಗುತ್ತದೆ. ವಿಜ್ಞಾನ ಬಲದಿಂದ ಸುಜ್ಜಿತರಾದ ದುರ್ಬಲ ಜೀವಿಗಳು ನೈಸರ್ಗಿಕವಾಗಿ ಯೋಗ್ಯರಾದ ಜೀವಿಗಳನ್ನು ನಿವಾರಿಸಿ ತಾವು ಬದುಕುಳಿಯಲು ಪ್ರಯತ್ನಿಸುತ್ತಿದ್ದಾರೆ. 

ಮೂಲತಃ ‘ಅಭಿವೃದ್ದಿಗೆ’ ಆಶ್ರಿತ ಜೀವಿ ಸಮುದಾಯದೊಂದಿಗೆ ಸಾವಯವ ಸಂಬಂಧ ಇರಬೇಕಾಗುತ್ತದೆ. ಜೀವಿ ಸಮುದಾಯದ ಮೇಲೆ ವಿಜ್ಞಾನದ ವಾಸ್ತವಿಕ ಪರಿಣಾಮಗಳ ಬಗ್ಗೆ ಆಳವಾದ ನೈತಿಕ ಎಚ್ಚರವಿರಬೇಕಾಗುತ್ತದೆ. ಮನುಷ್ಯ ಜೀವಿಗೆ ಒಂದು ಕೈ, ಒಂದು ಕಾಲು, ಒಂದು ಕಣ್ಣು ಹೇಗೆ ದೈಹಿಕ  ಊನವೋ ಹಾಗೆಯೇ ಮೂರು ಕೈ, ಮೂರು ಕಾಲು, ಮೂರು ಕಣ್ಣುಗಳು ಸಹ ಊನವೇ ಆಗಿರುತ್ತದೆ. ಒಂದು ಕಾಲಿನ ಮನುಷ್ಯ ಹೇಗೆ ಅತಂತ್ರನೋ ಹಾಗೇ ಮೂರು ಕಾಲಿನ ಮನುಷ್ಯ ಸಹ ಅತಂತ್ರ ಎಂಬುದನ್ನು ನಮ್ಮ ಅಭಿವೃದ್ದಿಯ ಮೂಲವಾದ ವಿಜ್ಞಾನ ತಂತ್ರಜ್ಞಾನಗಳು ಅರ್ಥಮಾಡಿಕೊಂಡಂತಿಲ್ಲ.

ಹೀಗಾಗಿ ಭಾರತದ ಅಭಿವೃದ್ಧಿಯ ಚಿತ್ರವೆಂದರೆ ಅತಿವೆಚ್ಚ, ಕಡಿಮೆ ಗುಣಮಟ್ಟ, ಪರಿಸರಕ್ಕೆ ಹಾನಿ ಮತ್ತು ಸಾಮಾಜಿಕ ಅಸಮಾನತೆಗಳೇ ಆಗಿಬಿಟ್ಟಿವೆ. ಭಾರತ ಇಂದು ಸರ್ವಭಕ್ಷಕರಿಗಾಗಿ, ಸರ್ವಭಕ್ಷಕರಿಂದ ಆದ ಸರ್ವಭಕ್ಷಕ ಪ್ರಜಾಪ್ರಭುತ್ವವಾಗಿದೆ. ಇಲ್ಲಿ ಯಾವ ಯೋಜನೆ ಯಾರಿಗೆ ಬಂದರೂ ಅದು ಸರ್ವಭಕ್ಷಕರಿಗಾಗಿಯೇ ಇರುತ್ತದೆ. ಇದರ ಮುಂದೆ ಪರಿಸರವೂ ನಿಲ್ಲಲಾರದು, ಪರಿಸರ ಸ್ನೇಹಿ ಜನರೂ ನಿಲ್ಲುವಂತಿಲ್ಲ. ಪರಿಸರದಿಂದ ತಮಗೆ ಬೇಕಾದ ಸಂಪನ್ಮೂಲಗಳನ್ನು ಇವರು ಕಿತ್ತುಕೊಳ್ಳುತ್ತಾರೆ. ಕಿತ್ತುಕೊಳ್ಳುವ ವೆಚ್ಚ ಪರಿಸರ ಸ್ನೇಹಿ ಜನರ ಹೆಗಲಿಗೆ. ಏನನ್ನೂ ತೆರಬೇಕಾಗಿಯೂ ಇಲ್ಲ. ಯಾರಿಗೂ ಲೆಕ್ಕ ಕೊಡಬೇಕಾಗಿಯೂ ಇಲ್ಲ ಎಂದಾಗ ಜವಾಬ್ದಾರಿ ಎಲ್ಲಿಂದ ಬರಬೇಕು? 

ಹಾಗಾಗಿಯೇ ಆದಿವಾಸಿಗಳು ಮತ್ತು ಮೂಲನಿವಾಸಿಗಳ ಮೇಲಾದ ಚಾರಿತ್ರಿಕ ಅತ್ಯಾಚಾರದ ಪಾಪಪ್ರಜ್ಞೆಯಿಂದ ಹೊರಬರಲು 2006 ಅರಣ್ಯ ಹಕ್ಕು ಕಾಯಿದೆಯನ್ನು (FRA) ಜಾರಿಗೆ ತರಲಾಯಿತು. ಆದರೆ ಇಡೀ ಆಡಳಿತ ವ್ಯವಸ್ಥೆ ಅದರ ವಿರುದ್ಧವಾಗಿ ಪಿತೂರಿ ಹೂಡಿತು. ಮತ್ತು ಅದು ಕಾನೂನಿನಲ್ಲಿ ಇರುವಂತೆ ಜಾರಿಯಾಗದ ಹಾಗೆ ನೋಡಿಕೊಂಡಿತು. ಈ ಸ್ಪಷ್ಟ ಕಾನೂನನ್ನು ನಾಜೂಕಾಗಿ ಮೂಲೆಗುಂಪು ಮಾಡಲು ಹಲವು ಪರ್ಯಾಯ ಕಾನೂನುಗಳನ್ನು ರೂಪಿಸಲಾಯಿತು. ಇಂದು ಮೂಲನಿವಾಸಿಗಳ ಸ್ಥಿತಿ “ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ” ಎನ್ನುವಂತಾಗಿದೆ. ಬಹುಶಃ ದ್ರೌಪದಿ ಮುರ್ಮು ಅವರೊಬ್ಬರನ್ನು ಬಿಟ್ಟು. ಈ ದೇಶದ ಇನ್ನಾವ ಆದಿವಾಸಿಗಳೂ ಸುಖವಾಗಿಲ್ಲ ಮತ್ತು ಸುರಕ್ಷಿತರಲ್ಲ. ಇದು ಭಾರತದ ವಾಸ್ತವ. 

ಆದರೂ "ವಿಶ್ವ ಮೂಲನಿವಾಸಿಗಳಿಗೆ ಜಯವಾಗಲಿ" ಎಂದು ಹೇಳುವುದರಲ್ಲಿಯೇ ಸಂತೋಷಪಡೋಣ.
 

ನಿಮಗೆ ಏನು ಅನ್ನಿಸ್ತು?
2 ವೋಟ್