ಜಹಾಂಗೀರ್‌ಪುರಿ ಗಲಭೆ | ಮೆರವಣಿಗೆ ತಡೆಯದ ಪೊಲೀಸರಿಗೆ ನ್ಯಾಯಾಲಯದ ತರಾಟೆ

JAHANGEER PURI  HANUMA JAYANTI
  • ಜಹಾಂಗೀರ್‌ಪುರಿ ಗಲಭೆ ಪ್ರಕರಣ; ಆರೋಪಿಗಳಿಗೆ ಜಾಮೀನು ನಿರಾಕರಣೆ
  • ಮೆರವಣಿಗೆ ತಡೆಯದ ದೆಹಲಿ ಪೊಲೀಸರಿಗೆ ನ್ಯಾಯಾಲಯ ತರಾಟೆ

ನವದೆಹಲಿಯ ಜಹಾಂಗೀರ್‌ಪುರಿಯಲ್ಲಿ ಇತ್ತೀಚೆಗೆ ನಡೆದ ಹನುಮ ಜಯಂತಿ ಕೋಮು ಘರ್ಷಣೆಯ 8 ಆರೋಪಿಗಳಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಜೊತೆಗೆ ಅನಧಿಕೃತ ಹನುಮ ಜಯಂತಿ ಮೆರವಣಿಗೆ ತಡೆಯದ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಪೊಲೀಸರಿಂದ ಪೂರ್ವಾನುಮತಿ ಪಡೆಯದೆ ನಡೆಸಲಾದ ಅಕ್ರಮ ಮೆರವಣಿಗೆ ಎಂದು ಸರ್ಕಾರಿ ವಕೀಲರು ಹೇಳಿರುವುದನ್ನು ನ್ಯಾಯಾಧೀಶರು ಗಮನಿಸಿ, ಅಕ್ರಮ ಮೆರವಣಿಗೆ ತಡೆಯದ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. "ಪ್ರಾಥಮಿಕವಾಗಿ ಪ್ರಕರಣ ಪೊಲೀಸರ ವೈಫಲ್ಯವನ್ನು ಪ್ರತಿಬಿಂಬಿಸುತ್ತಿದೆ" ಎಂದು ಅಭಿಪ್ರಾಯಪಟ್ಟಿದೆ.

ಮೆರವಣಿಗೆ ತಡೆಯುವಲ್ಲಿ ದೆಹಲಿ ಪೊಲೀಸರ ಕಡೆಯಿಂದ 'ಸಂಪೂರ್ಣ ವೈಫಲ್ಯ' ಉಂಟಾಗಿದೆ. ಇದರಿಂದ ಪ್ರದೇಶದಲ್ಲಿ ಕೋಮು ಘರ್ಷಣೆಗೆ ಕಾರಣವಾಯಿತು ಎಂಬ ಅಂಶವನ್ನು ದೆಹಲಿ ನ್ಯಾಯಾಲಯ ಗಮನಿಸಿದೆ.

ಈ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳು ಸರಳವಾಗಿ ತಳ್ಳಿ ಹಾಕಿದಂತಿದೆ ಎಂದು ನ್ಯಾಯಾಲಯ ಹೇಳಿದೆ. "ಭವಿಷ್ಯದಲ್ಲಿ ಇಂಥ ಘಟನೆಗಳು ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರಿಕೆ ಸರಿಪಡಿಸಬೇಕು ಮತ್ತು ಕಾನೂನುಬಾಹಿರ ಚಟುವಟಿಕೆ ತಡೆಯುವಲ್ಲಿ ಪೊಲೀಸರು ಸುಮ್ಮನಿರುವುದಿಲ್ಲ. ತೊಡಕುಗಳಿದ್ದರೆ, ತನಿಖೆಯ ಅಗತ್ಯವಿದೆ" ಎಂದು ರೋಹಿಣಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಗಗನ್‌ದೀಪ್ ಸಿಂಗ್ ಹೇಳಿದರು.

ಮೇ 7ರಂದು ನೀಡಿರುವ ಆದೇಶ ಪ್ರತಿಯನ್ನು ಮಾಹಿತಿ ಮತ್ತು ಪರಿಹಾರ ಕ್ರಮಕ್ಕೆ ಅನುಸರಿಸಿರುವ ಬಗ್ಗೆ  ಪೊಲೀಸ್ ಆಯುಕ್ತರಿಗೆ ಕಳಿಸುವಂತೆ ನ್ಯಾಯಾಲಯ ಸೂಚಿಸಿದೆ. "ದುರಾದೃಷ್ಟಕರ ಗಲಭೆಗಳು ನಡೆದ ಸಂದರ್ಭದಲ್ಲಿ ಮೆರವಣಿಗೆಗೆ ಪೊಲೀಸರಿಂದ ಪೂರ್ವಾನುಮತಿ ಪಡೆಯದೆ ಇರುವುದು ಕಾನೂನುಬಾಹಿರ" ಎಂದು ನ್ಯಾಯಾಧೀಶರು ಹೇಳಿದರು.

ಏಪ್ರಿಲ್ 16ರಂದು ಹನುಮ ಜಯಂತಿಯಂದು ನಡೆದ ಘಟನೆಗಳ ಅನುಕ್ರಮ ಮತ್ತು ಘಟನೆಯನ್ನು ತಡೆಗಟ್ಟುವಲ್ಲಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸ್ಥಳೀಯ ಆಡಳಿತದ ಪಾತ್ರವನ್ನು ನೋಡಬೇಕಾಗಿದೆ ಎಂದು ನ್ಯಾಯಾಲಯ ಹೇಳಿದೆ.

"ಎಫ್ಐಆರ್‌ನ ವಿಷಯಗಳು ಜಹಾಂಗೀರ್‌ಪುರಿಯಲ್ಲಿನ ಪೊಲೀಸ್ ಠಾಣೆಯ ಸ್ಥಳೀಯ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳು ಮೆರವಣಿಗೆ ತಡೆಯುವ ಬದಲು ಅದರ ಮಾರ್ಗದಲ್ಲಿ ಜೊತೆಗೆ ಹೋಗುತ್ತಿದ್ದರು ಎಂದು ತೋರಿಸುತ್ತದೆ. ಸ್ಥಳೀಯ ಪೊಲೀಸರು, ಅಕ್ರಮ ಮೆರವಣಿಗೆಯನ್ನು ಆರಂಭದಲ್ಲೇ ನಿಲ್ಲಿಸುವ ಮತ್ತು ಗುಂಪು ಚದುರಿಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸುವ ಬದಲು ಇಡೀ ಮಾರ್ಗದಲ್ಲಿ ಜತೆಯಲ್ಲಿದ್ದರು. ಇದು ಎರಡು ಸಮುದಾಯಗಳ ನಡುವೆ ಗಲಭೆಗೆ ಕಾರಣವಾಯಿತು" ಎಂದು ನ್ಯಾಯಾಧೀಶರು ಹೇಳಿದರು.

ಆರೋಪಿಗಳ ಜಾಮೀನು ತಿರಸ್ಕೃತ

ಆರೋಪಿಗಳಾದ ಇಮ್ತಿಯಾಜ್, ನೂರ್ ಆಲಂ, ಶೇಖ್ ಹಮೀದ್, ಅಹ್ಮದ್ ಅಲಿ, ಶೇಖ್ ಹಮೀದ್, ಎಸ್ ಕೆ ಸಹದಾ, ಶೇಖ್ ಜಾಕಿರ್ ಮತ್ತು ಅಹಿರ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಗಗನ್‌ದೀಪ್ ಸಿಂಗ್ ಅವರು ಸೆಕ್ಷನ್ 439 ಸಿಆರ್‌ಪಿಸಿ (ಆರೋಪಿಗಳಿಗೆ ನಿಯಮಿತ ಜಾಮೀನು ಮಂಜೂರು) ಅಡಿ ಅರ್ಜಿ ವಜಾಗೊಳಿಸುವಾಗ ಆರೋಪಿಗಳು ಸಾಕ್ಷಿಗಳಿಗೆ ಬೆದರಿಕೆ ಅಥವಾ ಪ್ರಭಾವ ಬೀರಬಹುದಾದ ಆತಂಕಗಳಿವೆ ಎಂಬ ಅಂಶವನ್ನು ಪರಿಗಣಿಸಿದೆ.

“ಗಲಭೆಕೋರರು ಜಾಮೀನಿನ ಮೇಲೆ ಹೊರಗಿದ್ದರೆ ಸಾಕ್ಷಿಗಳು ಮುಂದೆ ಬಾರದಿರಬಹುದು ಎಂದು ಸರ್ಕಾರಿ ವಕೀಲರು ಆತಂಕ ವ್ಯಕ್ತಪಡಿಸಿದ್ದರು. ಆದ್ದರಿಂದ, ಸಾಕ್ಷಿಗಳಿಗೆ ಬೆದರಿಕೆ ಹಾಕುವ/ ಪ್ರಭಾವ ಬೀರುವ ಆತಂಕವನ್ನು ತಳ್ಳಿ ಹಾಕಲಾಗುವುದಿಲ್ಲ. ದೋಷಾರೋಪ ಪಟ್ಟಿ ಇನ್ನೂ ಸಲ್ಲಿಕೆಯಾಗಬೇಕಿದೆ" ಎಂದು ನ್ಯಾಯಾಲಯ ಹೇಳಿದೆ.

ಈ ಸುದ್ದಿಯನ್ನು ಓದಿದ್ದೀರಾ:? ಜಹಾಂಗೀರ್‌ಪುರಿ ಹಿಂಸಾಚಾರ| ವಾರದ ಬಳಿಕ ಹಿಂದು- ಮುಸ್ಲಿಮರಿಂದ 'ತಿರಂಗಾ ಮೆರವಣಿಗೆ'

ಆರೋಪಿಗಳ ಪರ ವಾದ ಮಂಡಿಸಿದ ವಕೀಲ ಕೆ ಪ್ರಭಾಕರ ರಾವ್ ಅವರು, "ಅರ್ಜಿದಾರರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ 2022ರ ಏಪ್ರಿಲ್ 17ರಿಂದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಕಾರ್ಮಿಕ ವರ್ಗಕ್ಕೆ ಸೇರಿದವರಾಗಿದ್ದು, ದೈಹಿಕ ಶ್ರಮದಿಂದ ಜೀವನ ಸಾಗಿಸುತ್ತಿದ್ದಾರೆ. ಘಟನೆಯ ದಿನಾಂಕದಂದು ಅವರು ಸ್ಥಳದಲ್ಲಿ ಇರಲಿಲ್ಲ" ಎಂದು ತಿಳಿಸಿದರು.

ಸರ್ಕಾರಿ ವಕೀಲರಾದ ಮಕ್ಸೂದ್ ಅಹ್ಮದ್ ಅವರು, "ಇನ್‌ಸ್ಪೆಕ್ಟರ್‌ ರಾಜೀವ್ ರಂಜನ್ ಅವರ ಹೇಳಿಕೆಯ ಮೇರೆಗೆ ಎಫ್ಐಆರ್ ದಾಖಲಿಸಲಾಗಿತ್ತು. 'ಮೆರವಣಿಗೆಯ ಸಮಯದಲ್ಲಿ ಅನ್ಸಾರ್ ಅವರು ತಮ್ಮ ಸಹಚರರ ಜೊತೆಗೂಡಿ ವಾಗ್ವಾದ ಪ್ರಾರಂಭಿಸಿದ್ದರು. ಅದೇ ಕಾಲ್ತುಳಿತ ಮತ್ತು ಕಲ್ಲು ತೂರಾಟಕ್ಕೆ ಕಾರಣವಾಯಿತು' ಎಂದು ರಾಜೀವ್ ಹೇಳಿದ್ದಾರೆ. ದಾಳಿಯ ದಿನದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಎಲ್ಲ ಎಂಟು ಆರೋಪಿಗಳನ್ನು ಗುರುತಿಸಲಾಗಿದೆ" ಎಂದು ವಾದಿಸಿದರು.

ಜಹಾಗೀರ್‌ಪುರಿ ಹಿಂಸಾಚಾರ ಘಟನೆಯ ಹಿನ್ನೆಲೆ

ಮುಸ್ಲಿಮರು ಅಧಿಕ ಜನರಿರುವ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಏಪ್ರಿಲ್ 16ರಂದು ಹಿಂದು ಸಮುದಾಯದವರು ಹನುಮ ಜಯಂತಿ ಮೆರವಣಿಗೆ ನಡೆಸಿದ್ದರು. ಮಸೀದಿ ಮುಂದೆ ಈ ಮೆರವಣಿಗೆ ಸಾಗುವಾಗ ಮಸೀದಿಯಲ್ಲಿ ಆಝಾನ್ ನೀಡಲಾಗುತ್ತಿತ್ತು. ಈ ವೇಳೆ ಎರಡೂ ಸಮುದಾಯದವರ ಮಧ್ಯೆ ವಾಗ್ವಾದ ನಡೆದು ಘರ್ಷಣೆ ಸಂಭವಿಸಿತು. ಮೆರವಣಿಗೆ ಮಾಡುತ್ತಿದ್ದವರ ಮೇಲೆ ಕಲ್ಲು ತೂರಾಟ ಮಾಡಲಾಯಿತು. ಘಟನೆಯಲ್ಲಿ ಎಂಟು ಪೊಲೀಸರು ಸೇರಿದಂತೆ ಒಂಬತ್ತು ಮಂದಿ ಗಾಯಗೊಂಡಿದ್ದರು. ಪ್ರಕರಣದ ಸಂಬಂಧ 23 ಜನರನ್ನು ಬಂಧಿಸಲಾಗಿತ್ತು. ಕೋಮು ಘರ್ಷಣೆಗೆ ಕಾರಣವಾದ ಹನುಮ ಜಯಂತಿ ಮೆರವಣಿಗೆ ನಡೆಸಿದ ಆಯೋಜಕರ ಮೇಲೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್