ಅಂಬೇಡ್ಕರ್‌ ಜಯಂತಿ ವಿಶೇಷ | ಬೆಳಗಾವಿಯ ಮುಸ್ಲಿಮ್‌ ಕುಟುಂಬದ ಭೂ ಹಕ್ಕಿಗೆ ಹೋರಾಡಿದ್ದ ಬಾಬಾ ಸಾಹೇಬ್‌

ಡಾ ಬಿ ಆರ್‌ ಅಂಬೇಡ್ಕರ್‌ ಶೋಷಣೆ, ಅನ್ಯಾಯಕ್ಕೆ ಎಲ್ಲಿದ್ದರೂ ಸ್ಪಂದಿಸಿದ್ದಾರೆ, ನೊಂದವರ ದನಿಯಾಗಿದ್ದಾರೆ. ಇಪ್ಪತ್ತರ ದಶಕದಿಂದ ಐವತ್ತರ ದಶಕದ ಅಂತ್ಯದವರೆಗೆ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದ ಬಾಬಾ ಸಾಹೇಬ್‌, ಬಿಟ್ಟು ಹೋದ ನೆನಪಿನ ಹೆಜ್ಜೆಗಳು ಇಲ್ಲಿವೆ
Ambedkar 6

ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ 131ನೇ ಜನ್ಮದಿನ. ಕರ್ನಾಟಕದೊಂದಿಗೆ ಡಾ.ಬಿ.ಆರ್‌. ಅಂಬೇಡ್ಕರ್‌ ಅವರದ್ದು ಅವಿನಾಭಾವ ಸಂಬಂಧ. ಆ ಸಂಬಂಧದ ನೆನಪು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

ಮೊಟ್ಟಮೊದಲ ಬಾರಿಗೆ ಅಂಬೇಡ್ಕರ್ ಅವರನ್ನು ಕರ್ನಾಟಕಕ್ಕೆ ಪರಿಚಯಿಸಿದವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳೆ ಗ್ರಾಮದ ದೇವರಾಯ ಇಂಗಳೆ. ಅಂಬೇಡ್ಕರ್ ಅವರಿಗಿಂತ ಎರಡು ವರ್ಷ ಹಿರಿಯ ಮತ್ತು ಅಂಬೇಡ್ಕರರ ಆತ್ಮೀಯರೂ ಆಗಿದ್ದ ಇಂಗಳೆಯವರು, 1925 ರ ನವೆಂಬರ್ 11 ಮತ್ತು 12ರಂದು ಬೆಳಗಾವಿಯಲ್ಲಿ ನಡೆದ ‘ಬಹಿಷ್ಕೃತ ಹಿತಕಾರಣಿ ಸಮ್ಮೇಳನ’ಕ್ಕೆ ಕರೆತಂದರು. ಬಳಿಕ 1929ರ ಮಾರ್ಚ್ 23ರ ಬೆಳಗಾವಿ ಜಿಲ್ಲಾ ಬಹಿಷ್ಕೃತ ಸಮಾಜದ ಪರಿಷತ್ತಿನ ಮೊದಲ ಅಧಿವೇಶನ ಹಾಗೂ 1924ರ ಡಿಸೆಂಬರ್ 24ರ ಸಮಾವೇಶಕ್ಕೆ ಅಂಬೇಡ್ಕರ್ ಅವರನ್ನು ಕರೆತಂದು ಆ ಭಾಗದ ಜನರಿಗೆ ಪರಿಚಯಿಸಿದರು. ಅಂಬೇಡ್ಕರ್ ಅವರು 1927ರಲ್ಲಿ ಕರ್ನಾಟಕ ಪ್ರಾಂತ್ಯಕ್ಕೆ ಬಂದಾಗ ಬೆಳಗಾವಿಯ ಹುಕ್ಕೇರಿ ಹಾಗೂ ಚಿಕ್ಕೋಡಿ ರಸ್ತೆಗೆ ಸಮೀಪವಿರುವ ‘ಕರೋಶಿ’ ಗ್ರಾಮದ ಮುಸ್ಲಿಂ ಕುಟುಂಬದ ಮನೆಯಲ್ಲಿ ಒಂಬತ್ತು ದಿನಗಳ ಕಾಲ ಉಳಿದುಕೊಂಡರು.  ಆಗ ಜಮೀನ್ದಾರನೊಬ್ಬನ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಆ ಮುಸ್ಲಿಂ ಕುಟುಂಬಕ್ಕೆ ಭೂಮಿ ಕೊಡಿಸಿ ನ್ಯಾಯ ಒದಗಿಸಿದರು.

Image
munni bai
ಅಂಬೇಡ್ಕರ್‌ ಕರೋಶಿ ಗ್ರಾಮಕ್ಕೆ ಭೇಟಿ ನೀಡಿದಾಗ ಸತ್ಕರಿಸಿದ 'ಮುನ್ನಿ ಬೀ' (2020ರಲ್ಲಿ ನಿಧನರಾದರು)

ಧಾರವಾಡದ ಹುಡುಗನೊಬ್ಬನಿಗೆ ಜಾತಿಯ ಕಾರಣಕ್ಕಾಗಿ ಶಾಲೆಯ ಪ್ರವೇಶ ನಿರಾಕರಿಸಲಾಯಿತು. ಈ ವಿಚಾರ ತಿಳಿದ ಅಂಬೇಡ್ಕರ್‌ ಅವರು, ಧಾರವಾಡಕ್ಕೆ ಬಂದು ಬ್ರಿಟಿಷ್‌ ಸರ್ಕಾರದ ನೆರವು ಪಡೆದು ‘ಬಹಿಷ್ಕೃತ ಹಿತಕಾರಣಿ ಸಭಾ’ ಸಂಘಟನೆಯಿಂದ 1929ರಲ್ಲಿ ಶೋಷಿತ ಸಮುದಾಯದ ಮಕ್ಕಳಿಗಾಗಿ ವಸತಿಶಾಲೆ ಸ್ಥಾಪಿಸಿದ್ದರು. ಇಂದಿಗೂ ಧಾರವಾಡದಲ್ಲಿ ಆ ಶಾಲೆ ‘ಬುದ್ಧರಕ್ಕಿತ ವಸತಿ ಶಾಲೆ’ ಎಂಬ ಹೆಸರಿನಲ್ಲಿ ಕ್ರಿಯಾಶೀಲವಾಗಿದೆ.

ಇದನ್ನು ಓದಿದ್ದೀರಾ? | ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ `ಜಾತಿ ವಿನಾಶ' | ಭಾಗ 1 | ಮಾತಾಗಿ ಬೆಳಗಬೇಕಾದ್ದು, ಅಕ್ಷರವಾಗಿ ಉಸಿರಾಯ್ತು

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್‌ ಅವರು 1937ರ ಮೇ 30ರಂದು ವಿಜಯಪುರ ಜಿಲ್ಲೆಯ ಬೀಳಗಿಯ ಸೋಮನಗೌಡ ಪಾಟೀಲನ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿ ಆತನನ್ನು ಆರೋಪ ಮುಕ್ತಗೊಳಿಸಿದ್ದರು. ವಿಜಯಪುರದ ರಾಣಿಬಗೀಚದಲ್ಲಿ (ಇಂದಿನ ಅಂಬೇಡ್ಕರ್ ಕ್ರೀಡಾಂಗಣ) ಅಸ್ಪೃಶ್ಯರ ಸಮಾವೇಶ ಉದ್ದೇಶಿಸಿ ಮಾತನಾಡಿದ್ದು, ಮರುದಿನ ಇಂಡಿ ತಾಲೂಕಿನ ಬರಡೋಲ ಗ್ರಾಮದಲ್ಲಿ ಅಸ್ಪೃಶ್ಯರ ಸಭೆಯಲ್ಲಿ ಭಾಗವಹಿಸಿದ್ದು ಈಗ ಇತಿಹಾಸ. 1954ರ ಜುಲೈ 12ರಂದು ಕೋಲಾರದ ಕೆ.ಜಿ.ಎಫ್.ಗೆ ಭೇಟಿ ಕೊಟ್ಟು ಬುದ್ಧನ ಹೆಸರಿನ ಶಾಲೆ ಉದ್ಘಾಟಿಸಿದರು. ಜತೆಗೆ ಬೆಂಗಳೂರಿನಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಕೋಲಾರದ ಟಿ. ಚೆನ್ನಯ್ಯ ಅವರನ್ನು ಭೇಟಿ ಮಾಡಿದ್ದು ಸ್ಮರಣಾರ್ಹ. ಮೈಸೂರು ಸಂಸ್ಥಾನದ ಅರಸ ಜಯಚಾಮರಾಜ ಒಡೆಯರ್ ಅವರು 1954ರ ನವೆಂಬರ್‌ನಲ್ಲಿ ಬೆಂಗಳೂರಿನ ರಾಜಮಹಲ್ (ಇಂದಿನ ಸದಾಶಿವನಗರ)ನಲ್ಲಿದ್ದ ತಮ್ಮ ಐದು ಎಕರೆ ಭೂಮಿಯನ್ನು ಅಂಬೇಡ್ಕರ್ ಅವರಿಗೆ ದಾನವಾಗಿ ನೀಡಿದ್ದು ಗಮನಾರ್ಹ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣವು ಅಂಬೇಡ್ಕರ್ ಬಂದು ಹೋದ ನೆನಪಿನ ಸಂಕೇತವಾದರೆ, ವಾಡಿಗೆ ಸಮೀಪವಿರುವ ಕನಗನಹಳ್ಳಿಯ ಸನ್ನತಿಯು ಅಶೋಕನ ಕಾಲದ ಐತಿಹಾಸಿಕ ಬೌದ್ಧ ಕೇಂದ್ರವಾಗಿದೆ. 1945ರ ಏಪ್ರಿಲ್ 28 ಹಾಗೂ 1952ರ ಏಪ್ರಿಲ್ 27ರಂದು ಅಂಬೇಡ್ಕರ್ ವಾಡಿ ಪಟ್ಟಣಕ್ಕೆ ಭೇಟಿ ಕೊಟ್ಟ ಕ್ಷಣವನ್ನು ಚಿರಸ್ಥಾಯಿಗೊಳಿಸಲು ಇಲ್ಲಿನ ದಲಿತರು ಕಳೆದ 76 ವರ್ಷಗಳಿಂದ ಈ ಎರಡು ದಿನಗಳಂದೇ ಅಂಬೇಡ್ಕರ್ ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆ.

1945ರ ಏಪ್ರಿಲ್ 28ರಂದು ಹೈದರಾಬಾದ್‍ನ ನಿಜಾಮನ ಆಹ್ವಾನದ ಮೇರೆಗೆ ವಾಡಿ ಮಾರ್ಗವಾಗಿ ಅಂಬೇಡ್ಕರ್ ಅವರು ಪಿ.ವಿ.ಮನೋಹರ ಮತ್ತು ಯಶವಂತರಾವ ಅಟೊಲೆ ಜತೆಗೆ ಮುಂಬೈ-ಚೆನ್ನೈ ಮೈಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೈದರಾಬಾದ್‍ಗೆ ಹೋಗುತ್ತಿದ್ದರು. ವಾಡಿ ರೈಲು ನಿಲ್ದಾಣದಲ್ಲಿನ ಟೀ ವ್ಯಾಪಾರಿ ದಿಲ್‍ದಾರ ಹುಸೇನ್ ಅವರಿಗೆ ಈ ವಿಷಯ ಗೊತ್ತಾಯಿತು. ಅವರು ಈ ವಿಚಾರವನ್ನು ದಲಿತ ಮುಖಂಡರಾದ ಅಮೃತರಾವ ಕೋಮಟೆ ಹಾಗೂ ಗ್ಯಾನೋಬಾ ಗಾಯಕವಾಡರಿಗೆ ತಿಳಿಸುತ್ತಾರೆ. ತಮ್ಮನ್ನು ಭೇಟಿ ಮಾಡಿದ ಅಮೃತರಾವ್‌ ಕೋಮಟೆ, ಗ್ಯಾನೋಬಾ ಗಾಯಕವಾಡರಿಗೆ ಅಂಬೇಡ್ಕರ್ ಅವರು, ರೈಲು ನಿಲ್ದಾಣದ ಪಕ್ಕದಲ್ಲಿದ್ದ ವಿಶ್ರಾಂತಿ ಗೃಹಕ್ಕೆ ಬರಲು ಹೇಳುತ್ತಾರೆ.

ಅಲ್ಲಿಗೆ ಬಂದ ಸಮುದಾಯದವರೊಟ್ಟಿಗೆ ಸುಮಾರು ಎರಡು ಗಂಟೆಗಳ ಕಾಲ ಮಾತನಾಡಿದ ಅಂಬೇಡ್ಕರ್, ಮಕ್ಕಳ ಶಿಕ್ಷಣ, ಸಮುದಾಯದ ಸಂಘಟನೆ, ಹೋರಾಟದ ಮಹತ್ವ ಹಾಗೂ ಮೌಢ್ಯಗಳಿಂದ ದೂರ ಇರಬೇಕಾದ ವಿಚಾರಗಳನ್ನು ಕುರಿತು ಚರ್ಚಿಸುತ್ತಾರೆ. ಹೈದರಾಬಾದ್‍ನಲ್ಲಿ ನಡೆಯುವ ಶೋಷಿತರ ಅಧಿವೇಶನಕ್ಕೆ ಬರುವಂತೆ ಬಾಬಾ ಸಾಹೇಬರು ನೀಡಿದ ಆಹ್ವಾನದ ಮೇರೆಗೆ ಮುಖಂಡರಾದ ಗ್ಯಾನೋಬಾ ಗಾಯಕವಾಡ, ಅಮೃತರಾವ ಕೋಮಟೆ, ಶಿವರಾಮ ಮೋಘ, ಅಣ್ಣಾರಾವ ಹುಗ್ಗೆ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಾರೆ.

ಅಂಬೇಡ್ಕರ್ ಅವರು 1952ರ ಏಪ್ರಿಲ್ 27ರಂದು ಭಾಷಾವಾರು ಪ್ರಾಂತ್ಯ ವಿಂಗಡಣೆಗೆ ಸಂಬಂಧಿಸಿದ ಸಭೆಯಲ್ಲಿ ಪಾಲ್ಗೊಳ್ಳಲು ಹೈದರಾಬಾದ್‍ಗೆ ತೆರಳುತ್ತಿರುತ್ತಾರೆ. ಈ ಸಂದರ್ಭದಲ್ಲಿ, ಇದೇ ವಾಡಿ ರೈಲು ನಿಲ್ದಾಣದಲ್ಲಿ ದಲಿತ ಮುಖಂಡರಾದ ಅಮೃತರಾವ ಕೋಮಟೆ, ಗ್ಯಾನೋಬಾ ಉಮಾಜಿ ಗಾಯಕವಾಡ, ಬಸಪ್ಪ ಬಟ್ಟರ್ಕಿ, ಚನ್ನಬಸಪ್ಪ ಜೇವರಗಿ, ರೇವಣಪ್ಪ ಕಾಂಬಳೆ, ತುಳಸಿರಾಮ ಕೋಮಟೆ, ಮೌಲಪ್ಪ ಮೋಸಲಗಿ, ರುಕ್ಕಪ್ಪ ಚಂಡರಕಿ, ಮರೇಪ್ಪ ಹಲಕರ್ಟಿ ಮುಂತಾದವರು ಅವರನ್ನು ಭೇಟಿ ಮಾಡಿ ಅವರೊಟ್ಟಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ ಅಂಬೇಡ್ಕರರಿಂದ ಪ್ರಭಾವಿತರಾದ ಅಮೃತರಾವ ಕೋಮಟೆ ಹಾಗೂ ಅಣ್ಣಾರಾವ ಹುಗ್ಗೆ ಅವರು 1956ರ ಅಕ್ಟೋಬರ್ 14ರಂದು ನಾಗಪುರದ ಬೌದ್ಧಧಮ್ಮ ದೀಕ್ಷಾ ಸಮಾರಂಭಕ್ಕೆ ಹೋಗಿ ತಾವು ದೀಕ್ಷೆ ಪಡೆಯುತ್ತಾರೆ. ಅದರ ಬೆನ್ನಲ್ಲೇ ಹಿಂದೂ ದೇವರನ್ನು ಯಾರೂ ಪೂಜಿಸಬಾರದೆಂದು ತಮ್ಮ ಬಡಾವಣೆಯ ದೇವಾಲಯಗಳಿಗೆ ಬೀಗ ಹಾಕುತ್ತಾರೆ.

ಹೀಗೆ, ಅಂಬೇಡ್ಕರ್ ಅವರು ಬಂದು ಹೋಗಿರುವ ಸ್ಥಳದಲ್ಲಿ ಸಾಕ್ಷಿಪ್ರಜ್ಞೆಯಾಗಿ ಅಂಬೇಡ್ಕರ್ ಪ್ರತಿಮೆಯೊಂದನ್ನು ಪ್ರತಿಷ್ಠಾಪಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್