ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣತೆ| ಪ್ರಧಾನಿ ಮೋದಿಗೆ ಪತ್ರ ಬರೆದ 'ಸಂವಿಧಾನ ಸಮರ್ಥನಾ ಸಮೂಹ'

  • 'ಸಂವಿಧಾನ ಸಮರ್ಥನಾ ಸಮೂಹ' (ಸಿಸಿಜೆ) ಗುಂಪಿನ ಸದಸ್ಯರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
  • ದೇಶದ ದುರ್ಬಲ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸೆ, ದ್ವೇಷದ ಬಗ್ಗೆ ಕಳವಳ

ಸಂವಿಧಾನ ಸಮರ್ಥನಾ ಸಮೂಹ (ಕಾನ್‌ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್‌) ಗುಂಪಿನ ಸುಮಾರು 108 ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳು ಸೇರಿ, ಇದೇ ಏ.26ರಂದು ಪ್ರಧಾನಿಗೆ ಪತ್ರವೊಂದನ್ನು ಬರೆದಿದ್ದು , ಭಾರತದ ರಾಜಕೀಯ ಹಿಂಸಾಚಾರ ಮತ್ತು ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನಡೆಸಿಕೊಳ್ಳುತ್ತಿರುವ ಪ್ರಭುತ್ವ ಪ್ರೇರಿತ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿ, ಕಳವಳ ವ್ಯಕ್ತಪಡಿಸಿದ್ದಾರೆ.

ಸಿಸಿಜೆಗೆ ಸೇರಿದ ಇವರೆಲ್ಲರೂ ಹಿಂದೆ ಸರ್ಕಾರದ ಅತ್ಯುನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು , ಭಾರತ ಸರ್ಕಾರದ ಮಾಜಿ ಗೃಹ ಕಾರ್ಯದರ್ಶಿ ಜಿ ಕೆ ಪಿಳ್ಳೆ, ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ಶ್ಯಾಮ್ ಶರಣ್, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಟಿ.ಕೆ ಬ್ಯಾನರ್ಜಿ, ರಾಣಾ ಬ್ಯಾನರ್ಜಿ, ಉಪ ಪೊಲೀಸ್ ಆಯುಕ್ತ ಜ್ಯೂಲಿಯೋ ರಿಬೈರೊ ಸಹಿ ಮಾಡಿದ್ದು, ಪತ್ರಕ್ಕೆ ಮೌಲ್ಯ ಹೆಚ್ಚಿಸಿದೆ. 

ಪತ್ರದಲ್ಲಿ, ಭಾರತದ ದುರ್ಬಲರ, ಅಲ್ಪಸಂಖ್ಯಾತರ ಹಾಗೂ ಏಕತೆಯ ಮೇಲೆ ನಡೆಯುತ್ತಿರುವ ಹಿಂಸೆ ಹಾಗೂ ದ್ವೇಷದ ಬಗ್ಗೆ ಕಳವಳ ವ್ಯಕ್ತಪಡಿಸಿ, ಚುನಾವಣೆಗಳಲ್ಲಿ ಸಂವಿಧಾನದ ಮೌಲ್ಯಗಳು ಹಾಗೂ ತತ್ವಗಳನ್ನು ಅಡವಿಡುತ್ತಿರುವುದರ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಬದಲಾವಣೆಯ ಹೆಸರಿನಲ್ಲಿ 1950ರ ಸಂವಿಧಾನವನ್ನು ಬದಲಿಸಿ, ಈಗಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಗನುಗುಣವಾಗಿ ಸಂವಿಧಾನವನ್ನು ಬರೆಯಲು ಹೊರಟ ಬಿಜೆಪಿ ಹಾಗೂ ಅದರ ಸಹಚರರ ನಡೆ ಆತಂಕಕಾರಿಯಾಗಿರುವುದರ ಬಗ್ಗೆ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Image
ಹಿಜಾಬ್ ಧರಿಸಿದ್ದ ಕಾರಣಕ್ಕಾಗಿ ಪ್ರವೇಶ ನಿರಾಕರಣೆ. ಉಡುಪಿ ಪದವಿ ಪೂರ್ವ ಕಾಜೇಜಿನ ಮುಂಭಾಗ ಕುಳಿತಿರುವ ಮುಸ್ಲಿಂ ವಿದ್ಯಾರ್ಥಿನಿಯರು.

"ದಲಿತ ಮತ್ತು ಮುಸ್ಲಿಂ ಬಾಂಧವರ ಮೇಲೆ ನಡೆಯುತ್ತಿರುವ ಗುಂಪು ಹಿಂಸೆ ಹಾಗೂ ಹೆಚ್ಚುತ್ತಿರುವ ದ್ವೇಷ, ಹಿಂಸಾಚಾರದ ಬಗ್ಗೆ ಸರ್ಕಾರದ ನಿಷ್ಕ್ರಿಯತೆ, ಇವೆಲ್ಲವೂ ಈ ದೇಶದ ಸಂವಿಧಾನವನ್ನು ತ್ಯಾಗದ ಬಲಿ ಪೀಠದ ಮೇಲೆ ಇಟ್ಟಿದೆ" ಎಂದು ಹೇಳಿದ್ದಾರೆ. 

"ಸರ್ಕಾರದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ನಾವು ಇದನ್ನು ಕಟುವಾಗಿ ಪ್ರಸ್ತಾಪ ಮಾಡಬೇಕಿರುವುದು ದುರ್ದೈವ. ಆದರೆ, ದೇಶದಲ್ಲಿ ನಡೆಯುತ್ತಿರುವ ದ್ವೇಷ ಭಾವನೆ, ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ನಡೆಯುತ್ತಿರುವ ಸರಣಿ ಹಿಂಸಾಚಾರ. ಇವೆಲ್ಲಾ ಸೇರಿ ನಮ್ಮ ಹಿರಿಯರು ರಚಿಸಿರುವ  ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ಈ ಆತಂಕವೇ ನಮ್ಮನ್ನು ಈ ಪತ್ರ ಬರೆಯಲು ಪ್ರೇರೇಪಿಸಿರಬಹುದು" ಎಂದು ಹೇಳಿದ್ದಾರೆ.

"ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕ, ಗುಜರಾತ್ , ಅಸ್ಸಾಂ, ಹರ್ಯಾಣ, ಉತ್ತರಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಕಳೆದ ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯದ ಮೇಲೆ ಹಲವು ರೀತಿಯ ದೌರ್ಜನ್ಯ, ಹಿಂಸಾಚಾರಗಳು ನಡೆಯುತ್ತಾ ಬಂದಿದೆ. ದೆಹಲಿಯಲ್ಲಿಯೂ ಇಂತಹ ಘಟನೆಗಳು ಸಂಭವಿಸುತ್ತಿದ್ದು, ದೆಹಲಿ ಪೋಲೀಸ್ ಇಲಾಖೆ ಇರುವುದು ಕೇಂದ್ರ ಸರ್ಕಾರದ ಅಧೀನದಲ್ಲಿ. ಮುಸ್ಲಿಂ ವಿರುದ್ಧ ದ್ವೇಷ ಭಾಷಣ ಮಾಡಿ ಅವರನ್ನು ಭಯದ ಕೋಣೆಗೆ ತಳ್ಳುತ್ತಿರುವ ಪ್ರಯತ್ನಗಳು ನಡೆಯುತ್ತಿವೆ. ಭಾರತದಲ್ಲಿ ಹಿಂದುತ್ವ ಕೇವಲ ರಾಜಕೀಯವಾಗಿ ಅಸ್ತ್ರವಾಗಿ ಉಳಿಯದೆ ಅಥವಾ ಕೋಮು ದಳ್ಳುರಿಯನ್ನು ಜೀವಂತವಾಗಿ ಇಡುವ ಸಾಧನವಾಗಿ ಇರದೇ, ಅದೊಂದು ಸಾಮಾನ್ಯ ದೈನಂದಿನ ಸಂಗತಿಯೆಂಬತೆ ಬದಲಾಗಿದೆ. ಇದಕ್ಕಿಂತ ಕೆಟ್ಟ ಪರಿಸ್ಥಿತಿ ಎಂದರೆ ಸಂವಿಧಾನ ಮತ್ತು ಕಾನೂನು ಬಹುಸಂಖ್ಯಾತರು ಪ್ರತಿಪಾದಿಸುವ ಶಕ್ತಿಗಳ ನಿಯಂತ್ರಿಸಲು ಬಳಸಲಾಗುತ್ತಿದೆ . ಇವೆಲ್ಲದಕ್ಕೂ ಪರೋಕ್ಷವಾಗಿ ಸರ್ಕಾರವೇ ಕುಮ್ಮಕ್ಕು ಕೊಡುತ್ತಿದೆ ಎಂಬ ಅನುಮಾನ ಬರುತ್ತಿದೆ".

"1984ರ ಸಿಖ್ ಹತ್ಯಾಕಾಂಡ, 2002ರ ಗುಜರಾತ್ ಗೋಧ್ರಾ ಹತ್ಯಾ ಪ್ರಕರಣ ಆಯಾ ರಾಜ್ಯದ ಜಟಿಲತೆ, ಅಸಮರ್ಥತೆ ಮತ್ತು ಆಡಳಿತ ವೈಫಲ್ಯವನ್ನು ಸೂಚಿಸುತ್ತವೆ. ಗೋಮಾಂಸ ಸಾಗಣೆ ಮಾಡಿದವರ ಹತ್ಯೆ, ಲವ್ ಜಿಹಾದ್, ದಲಿತರ ಮೇಲೆ ಆಕ್ರಮಣ, ಪ್ರಬಲ ಜಾತಿಯವನ ಕಾಲು ನೆಕ್ಕುವಂತೆ ದಲಿತ ಹುಡುಗನಿಗೆ ಒತ್ತಾಯಿಸಿರುವುದು, ಮುಸ್ಲಿಂ ಬಡವರ ಮನೆ ಮೇಲೆ ಬುಲ್ಡೋಜರ್ ಹರಿಸಿದ್ದು ಹೀಗೆ ಅನೇಕ ಘಟನೆಗಳು ನಮ್ಮನ್ನು ಬೆಚ್ಚಿ ಬೀಳುಸುತ್ತವೆ."

"ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಾನೂನನ್ನು ಮುಸ್ಲಿಂ ಸನುದಾಯವನ್ನು ಬೆದರಿಸಲು ಬಳಸಲಾಗುತ್ತಿದೆ. ಮುಸ್ಲಿಂರು ತಮ್ಮದೇ ಧರ್ಮವನ್ನು ಅನುಸರಿಸುವ, ಸಂಪ್ರದಾಯವನ್ನು ಪಾಲಿಸುವ, ವಸ್ತ್ರ ಧರಿಸುವ, ಆಹಾರ ಸೇವಿಸುವ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ವಿಷಾದನೀಯ. ಕಾನೂನು ಬಾಹಿರ ಗುಂಪನ್ನು ಮುಸ್ಲಿಂರ ವಿರುದ್ದ ಎತ್ತಿ ಕಟ್ಟುವುದಲ್ಲದೆ, ಅವರ ವಿರುದ್ದವೇ ಕಾನೂನನ್ನು ತಿರುಚಲಾಗುತ್ತಿದೆ. ಸಂವಿಧಾನ ನೀಡಿರುವ ವೈಯಕ್ತಿಕ ಕಾನೂನನ್ನು ಸಾರಾಸಗಟಾಗಿ ಮೂಲೆಗೆಸೆಯಲಾಗಿದೆ."

Image
ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಬಡವರ ಮನೆಗಳ ಮೇಲೆ ನಡೆದ ಬುಲ್ಡೋಜರ್ ಕಾರ್ಯಾಚರಣೆ.

"ಕಾನೂನು ಬಾಹಿರ ಗುಂಪುಗಳನ್ನು ಛೂ ಬಿಟ್ಟು ಒಂದು ಕಡೆ ಹಿಂಸೆ ನೀಡಿ, ಇನ್ನೊಂದು ಕಡೆ ಸರ್ಕಾರವೇ ಅವರ ಜೀವನೋಪಾಯವನ್ನು ಕಸಿದುಕೊಳ್ಳಲು ಕಾನೂನಾಬದ್ದ ಕ್ರಮವನ್ನು ಹುಡುಕುತ್ತಿದೆ. ಬಹುಸಂಖ್ಯಾತರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಸಂಪ್ರದಾಯಗಳಿಗೆ ದಲಿತರು, ಅಲ್ಪಸಂಖ್ಯಾತರು ಮತ್ತು  ಶೋಷಿತರು ತಲೆಬಾಗಬೇಕೆಂಬ ಸರ್ವಾಧಿಕಾರಿ ಧೋರಣೆಯನ್ನು ಕಾನೂನಿನ ದುರುಪಯೋಗದ ಮೂಲಕ ಪರೋಕ್ಷವಾಗಿ ನಿರೂಪಿಸಲು ಸರ್ಕಾರ ಮುಂದಡಿ ಇಟ್ಟಿದೆ. ದಲಿತರು, ಅಲ್ಪಸಂಖ್ಯಾತರು ಶೋಷಿತರರು ಸೇರಿದಂತೆ ತನ್ನದೇ ಪ್ರಜೆಗಳ ಮೂಲಭೂತ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿ, ದೇಶ ಕಟ್ಟುವ ಕಾಯಕದಲ್ಲಿ ತೊಡಗಿರುವುದು ಭೀತಿ ಹುಟ್ಟುವಂತೆ ಮಾಡಿದೆ."

"ಹಿಂಸಾಚಾರಗಳನ್ನು ಮಟ್ಟ ಹಾಕಲು ರಾಜಕೀಯ ವ್ಯವಸ್ಥೆ ಯಾವ ರೀತಿಯ ಕ್ರಮ ಕೈಗೊಂಡಿದೆ ಎನ್ನುವದು ಗೊತ್ತಿಲ್ಲವಾದರೂ, ಕಾನೂನು ಬಾಹಿರ ಗುಂಪಗಳಿಗೆ ಯಾವುದೇ ಭಯವಿಲ್ಲದೆ ತಿರುಗಾಡಲು ರಾಜ್ಯ  ಹಾಗೂ ಸ್ಥಳೀಯ ಸಂಸ್ಥೆಗಳಿಂದ ಪೂರಕ ವಾತವರಣ ಕಲ್ಪಸಿದೆ ಎನ್ನುವುದು ಸ್ಪಷ್ಟ. ಇಂಥ ಗುಂಪುಗಳಿಗೆ ಬೆಂಬಲ ಕೇವಲ ಸ್ಥಳೀಯ ಪೋಲಿಸರು ಮತ್ತು ಸರ್ಕಾರಿ ಅಧಿಕಾರಿಗಳಿಂದ ಸಿಗುವುದಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಉನ್ನತ ರಾಜಕೀಯ ಮಟ್ಟದಲ್ಲಿಯೂ ಇದಕ್ಕೆ ಪರೋಕ್ಷ ಬೆಂಬಲವಿರುವುದು ಬೆಳಕಿಗೆ ಬರುತ್ತಿದೆ."

"ಸಂವಿಧಾನದ ಜಾತ್ಯಾತೀತ ತತ್ವಕ್ಕೆ ಇಂದು ಚ್ಯುತಿ ಬಂದಿದೆ. ಜಾತ್ಯಾತೀತ ತತ್ವಗಳಿಗೆ ಹಾನಿಯಾಗದಂತೆ ವಿನ್ಯಾಸಗೊಳಿಸಿರುವ ಸಾಂವಿಧಾನಿಕ ಹಾಗೂ ಕಾನೂನಿನ ಚೌಕಟ್ಟನ್ನು ಇಂದು ತಿರುಚಲಾಗಿದೆ. ದೇಶವನ್ನು ಬಹುಸಂಖ್ಯಾತರ ನಿರಂಕುಶ ಆಡಳಿತಕ್ಕೆ ಒಳಪಡಿಸುವ ಹುನ್ನಾರ ನಡೆಯುತ್ತಿದೆ. ಬಹುಸಂಖ್ಯಾತರ ರಾಜಕೀಯ ಶಕ್ತಿಯನ್ನು ಪ್ರದರ್ಶಿಸಲು ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ. ಬುಲ್ಡೋಜರ್‌ಗಳು ರಾಜಕೀಯ ಶಕ್ತಿ ಪ್ರದರ್ಶನದ ಪ್ರತಿರೂಪವಾಗಿ ನಿಂತಿದೆ. ಭಾರತದಲ್ಲಿ ಕಾನೂನು ವ್ಯವಸ್ಥೆಗೆ ಗಂಭೀರ ಚ್ಯುತಿ ಬಂದಿದ್ದು, ಜಹಾಂಗೀಪುರ್ ಘಟನೆಯಿಂದ ಕಾರ್ಯಾಂಗವು ನ್ಯಾಯಾಂಗವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವುದರ ನಿದರ್ಶನವಾಗಿದೆ." ಎಂದು ತಮ್ಮ ಬಹಿರಂಗ ಪತ್ರದಲ್ಲಿ ಬರೆದಿದ್ದಾರೆ. 

ಭಾರತದ ಸಾಂವಿಧಾನಿಕ, ಕಾನೂನಾತ್ಮಕ ವ್ಯವಸ್ಥೆ ಕಳಚಿ ಬೀಳುತ್ತಿರುವ ಈ ಸಂದರ್ಭದಲ್ಲಿ, ಅದನ್ನು ರಕ್ಷಿಸುವ ಕೆಲಸ ಎಲ್ಲಾ ನಾಗರಿಕರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ದೇಶದ ಹಿರಿಯ ನಾಗರಿಕರ ಪತ್ರವು ಮಹತ್ವ ಪಡೆದುಕೊಂಡಿದ್ದು, ಭಾರತ ಜನತಂತ್ರ ಉಳಿಸುವ ಕೆಲಸ ತುರ್ತಾಗಿ ಜರುಗಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

ಈದಿನ ಡೆಸ್ಕ್
ನಿಮಗೆ ಏನು ಅನ್ನಿಸ್ತು?
0 ವೋಟ್