ಮಧ್ಯಪ್ರದೇಶ | ದಲಿತರ ಮೇಲೆ ಮೇಲ್ವರ್ಗದವರಿಂದ ಮಾರಣಾಂತಿಕ ಹಲ್ಲೆ

  • ಮಹಿಳೆ, ಮಕ್ಕಳು ಸೇರಿದಂತೆ ಏಳು ಮಂದಿಗೆ ಗಂಭೀರ ಗಾಯ
  • ತಲೆಮರೆಸಿರುವ ಅರೋಪಿಗಳಿಗಾಗಿ ಪೊಲೀಸರ ಹುಡುಕಾಟ

ಹಳೆ ದ್ವೇಷವೊಂದರ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗಿ ಐದು ದಿನ ಕಳೆದರೂ ಇನ್ನೂ ಆರೋಪಿಗಳನ್ನು ಬಂಧಿಸಲಾಗಿಲ್ಲ.

ಮಧ್ಯಪ್ರದೇಶದ ಹರಪಾಲ್ಪುರದ ಅಮಾ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಗುರುವಾರ ಈ ಘಟನೆ ನಡೆದಿದೆ. ರಾತ್ರಿ ಮನೆಯಲ್ಲಿದ್ದ ವೇಳೆ ಗ್ರಾಮಸ್ಥರು ಏಕಾಏಕಿ ಗುಂಪುಗಟ್ಟಿ ಮನೆಯೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಮಹಿಳೆ ಮತ್ತು ಮಕ್ಕಳು ಸೇರಿದಂತೆ ಏಳು ಮಂದಿ ದಲಿತರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

“ರಾತ್ರಿ ನಾವು ದೂರದರ್ಶನ ವೀಕ್ಷಿಸುತ್ತಿದ್ದಾಗ ಅಮಾ ಗ್ರಾಮದ ಕೆಲವರು ಮಾರಕಾಸ್ತ್ರಗಳನ್ನು ಹಿಡಿದು ನಮ್ಮ ಮನೆಗೆ ಬಲವಂತವಾಗಿ ನುಗ್ಗಿ, ಮನಬಂದಂತೆ ಜಾತಿ ನಿಂದನೆ ಮಾಡಿದರು. ಬಳಿಕ ಮಹಿಳೆಯರು ಮಕ್ಕಳೆಂದು ನೋಡದೆ ಹಲ್ಲೆ ಮಾಡಿದರು” ಎಂದು ದೂರುದಾರ ದಯಾರಾಮ್ ಅಹಿರ್ವಾರ್ ಹೇಳಿಕೆ ನೀಡಿದ್ದಾರೆ.

ಘಟನೆಯಲ್ಲಿ ಬಿಂದಿಯಾ ಬಾಯಿ, ಪೂಜಾ ಅಹಿರ್ವಾರ್, ಸರೋಜ್ ಅಹಿರ್ವಾರ್, ಪುಷ್ಪೇಂದ್ರ ಅಹಿರ್ವಾರ್, ಗೋವಿಂದ್ ಅಹಿರ್ವಾರ್, ದೀಪಚಂದ್ ಅಹಿರ್ವಾರ್, ಬ್ರಿಜೇಂದ್ರ ಅಹಿರ್ವಾರ್ ಗಾಯಗೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಛತ್ತೀಸಗಢ | 5 ವರ್ಷ ಜೈಲು ಶಿಕ್ಷೆ ಅನುಭವಿಸಿದ ಬಳಿಕ 121 ಆದಿವಾಸಿಗಳ ಖುಲಾಸೆ

ಬಳಿಕ ಸಂತ್ರಸ್ತರು ಸರಪಂಚ್ ಜೊತೆ ಹರ್ಪಾಲ್ಪುರ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 452, 323, 294, 506, 34 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್