ಮಧ್ಯಪ್ರದೇಶ | ದಲಿತ ಬಾಲಕನನ್ನು ಕಟ್ಟಿಹಾಕಿ ಥಳಿಸಿದ ಜೈನ ಬ್ರಹ್ಮಚಾರಿ

  • ದಲಿತ ಬಾಲಕನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಆರೋಪಿ
  • ಎಸ್ಸಿ, ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲು

ಜೈನ ಧರ್ಮದ ಬ್ರಹ್ಮಚಾರಿ ದಲಿತ ಬಾಲಕನನ್ನು ಹಗ್ಗದಿಂದ ಕಟ್ಟಿಹಾಕಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜೈನ ಮಂದಿರದಲ್ಲಿ ನಡೆದಿದೆ. 

ಪ್ರಕರಣದ ಆರೋಪಿ ರಾಕೇಶ್ ವಿರುದ್ಧ ಮೋತಿ ನಗರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.  

ಜೈನ ಬ್ರಹ್ಮಚಾರಿಯು ಬಾಲಕನನ್ನು ಬಲವಂತವಾಗಿ ಒತ್ತೆಯಾಳಾಗಿಟ್ಟುಕೊಂಡು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಜೈನ ಮಂದಿರದ ಗೇಟ್‌ ಬಳಿ ನಿಂತಿದ್ದ ಬಾಲಕನನ್ನು ಇಬ್ಬರು ವ್ಯಕ್ತಿಗಳು ಎಳೆದೊಯ್ದು ಹಗ್ಗದಿಂದ ಕೈಗಳನ್ನು ಮರಕ್ಕೆ ಕಟ್ಟಿಹಾಕಿ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಅಕ್ಕಪಕ್ಕದಲ್ಲಿ ನಿಂತಿದ್ದವರನ್ನು ರಕ್ಷಿಸುವಂತೆ ಬಾಲಕ ಕೂಗಿಕೊಂಡರೂ ಯಾರೂ ಆತನ ರಕ್ಷಣೆಗೆ ಬಂದಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಬಾಲಕನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಹಿಂಸೆಯೇ ಪರಮ ಧರ್ಮ ಎಂದು ಸಾರುವ ಜೈನ ಧರ್ಮದ ವ್ಯಕ್ತಿ ಬಾಲಕನನ್ನು ಈ ರೀತಿ ಥಳಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. 

ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ದಲಿತ ವಿದ್ಯಾರ್ಥಿಯಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕ!

ಮೋತಿನಗರ ಪೊಲೀಸ್ ಠಾಣೆ ಪ್ರಭಾರಿ ಸತೀಶ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, ‘‘ಮಗುವಿನ ಕುಟುಂಬಸ್ಥರು ಬಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅವರ ದೂರಿನ ಮೇರೆಗೆ ಆರೋಪಿ ರಾಕೇಶ್ ವಿರುದ್ಧ ಎಸ್ಸಿ ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ರಾಕೇಶ್ ಮಗುವನ್ನು ಒತ್ತೆಯಾಳಾಗಿಟ್ಟುಕೊಂಡು ಹಲ್ಲೆ ನಡೆಸಿದ್ದಾನೆ. ಮಗು ದೇವಸ್ಥಾನದ ಗೇಟ್ ಬಳಿ ನಿಂತಿತ್ತು, ಆರೋಪಿಗಳು ಮಗುವನ್ನು ಹಿಡಿದು ಒತ್ತೆಯಾಳಾಗಿ ಇರಿಸಿಕೊಂಡಿದ್ದರು” ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180