ಮಧ್ಯಪ್ರದೇಶ | ಪತ್ನಿಗೆ ಚಿಕಿತ್ಸೆ ಕೊಡಿಸಲು ಮೂರು ಕಿ.ಮೀ ತಳ್ಳುವ ಗಾಡಿಯಲ್ಲಿ ಕರೆದೊಯ್ದ ವೃದ್ಧ

Madhyapradesh Rewa
  • ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರೂ ಸಿಗದ ಉತ್ತಮ ಚಿಕಿತ್ಸೆ
  • ಮಧ್ಯಪ್ರದೇಶದ ಆರೋಗ್ಯ ವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖಂಡನೆ 

ಅನಾರೋಗ್ಯದಿಂದ ಅಸ್ವಸ್ಥಳಾಗಿದ್ದ ತನ್ನ ಪತ್ನಿಗೆ ಚಿಕಿತ್ಸೆ ಕೊಡಿಸಲು ವಾಹನ ಸಿಗದೆ ವೃದ್ಧರೊಬ್ಬರು ಆಕೆಯನ್ನು ತಳ್ಳುವ ಗಾಡಿಯ ಮೇಲೆ ಮಲಗಿಸಿ ಮೂರು ಕಿ.ಮೀ ಅಲೆದಾಡಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಹನುಮಾನ ಎಂಬಲ್ಲಿ ನಡೆದಿದೆ.

ವೃದ್ಧ ರಾಮಲಾಲ್ ಕೋಲ್ ಅವರ ಪತ್ನಿ 65 ವರ್ಷದ ಮಾನ್ವತಿ ಕೋಲ್ ಅಸ್ವಸ್ಥರಾಗಿದ್ದರು. ಬಳಿಕ ಪತ್ನಿಯನ್ನು ಚಿಕಿತ್ಸೆಗಾಗಿ ಹನುಮಾನದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಗೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ ಎಂದು ಬೇರೆಡೆಗೆ ಕರೆದೊಯ್ಯಲು ಮುಂದಾಗಿದ್ದರು.

ಅಸ್ವಸ್ಥಳಾಗಿರುವ ಪತ್ನಿಯನ್ನು ತಳ್ಳುವ ಗಾಡಿಯ ಮೇಲೆ ಮಲಗಿಸಿ ಖಾಸಗಿ ಆಸ್ಪತ್ರೆ ವೈದ್ಯರ ಬಳಿ ಚಿಕಿತ್ಸೆಗೆ ತೆರಳಿದ್ದರು. ಪತ್ನಿಯ ಚಿಕಿತ್ಸೆಗಾಗಿ ಕೈಗಾಡಿಯಲ್ಲಿ ಸುಮಾರು ಮೂರು ಕಿ.ಮೀ ಅಲೆದಾಡಿದ್ದರು.

ವೃದ್ಧೆಯನ್ನು ತಳ್ಳುವ ಗಾಡಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮಧ್ಯಪ್ರದೇಶದ ಆರೋಗ್ಯ ವ್ಯವಸ್ಥೆಯ ಕರಾಳ ಮುಖವನ್ನು ಬಿಚ್ಚಿಟ್ಟಿದೆ.

ರಾಜ್ಯದಲ್ಲಿರುವ ಆರೋಗ್ಯ ಸೌಲಭ್ಯಗಳ ಬಗ್ಗೆ ಸರ್ಕಾರ ದೊಡ್ಡ ಹೇಳಿಕೆಗಳನ್ನು ನೀಡುತ್ತದೆ; ಆದರೆ, ಗ್ರಾಮೀಣ ಪ್ರದೇಶದ ಬಡಜನರು ಆರೋಗ್ಯ ಸೇವೆಗಳಿಗಾಗಿ ಅಲೆದಾಡುವ ಸ್ಥಿತಿ ಇಂದಿಗೂ ಇದೆ ಎಂಬುದನ್ನು ಆಗಾಗ ಬೆಳಕಿಗೆ ಬರುವ ಈ ರೀತಿಯ ವಿಡಿಯೋಗಳು ಪುಷ್ಟೀಕರಿಸುತ್ತಿವೆ. 

ಈ ಸುದ್ದಿ ಓದಿದ್ದೀರಾ? ತಮಿಳುನಾಡು | ದಲಿತರ ನೀರಿನ ಟ್ಯಾಂಕ್‌ಗೆ ಮಲ ಸುರಿದ ಪ್ರಕರಣ: ಡಿಎಂಕೆ ಸರ್ಕಾರದ ವಿರುದ್ಧ ಪಾ. ರಂಜಿತ್ ಆಕ್ರೋಶ

ವೈರಲ್ ಆಗಿರುವ ಈ ವಿಡಿಯೋ ಮಧ್ಯಪ್ರದೇಶದ ರೇವಾ ಜಿಲ್ಲೆಯ ಆರೋಗ್ಯ ಇಲಾಖೆಯನ್ನು ಮುಜುಗರಕ್ಕೀಡುಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app