ಮಧ್ಯಪ್ರದೇಶ| ಚಿಕಿತ್ಸೆಗಾಗಿ ಬುಡಕಟ್ಟು ಮಹಿಳೆಯನ್ನು 6 ಕಿ.ಮೀ ಹೊತ್ತೊಯ್ದ ಸಂಬಂಧಿಕರು!

  • ವಿದ್ಯುತ್ ಅವಘಡದಿಂದ ಶೇ. 70ರಷ್ಟು ಸುಟ್ಟು ಗಾಯಗೊಂಡಿದ್ದ ಮಹಿಳೆ
  • ಬಕ್ರಿಮರ್ ಗ್ರಾಮಕ್ಕೆ ಸುಸಜ್ಜಿತ ರಸ್ತೆ ಇಲ್ಲದೆ ಕಾಲ್ನಡಿಗೆಯಲ್ಲಿ ಆಸ್ಪತ್ರೆಗೆ ರವಾನೆ 

ವಿದ್ಯುತ್ ಅವಘಡದಿಂದ ಸುಟ್ಟು ಗಾಯಗೊಂಡಿದ್ದ ಬುಡಕಟ್ಟು ಮಹಿಳೆಯನ್ನು ಮಂಚದ ಮೇಲೆ ಆರು ಕಿ.ಮೀ ಹೊತ್ತೊಯ್ದು ಚಿಕಿತ್ಸೆ ಕೊಡಿಸಿರುವ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಘಾನ್ಸೋರ್ ಬಕ್ರಿಮಲ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಬುಡಕಟ್ಟು ಸಮುದಾಯದ ಜನರೇ ಹೆಚ್ಚು ವಾಸಿಸುವ ಬಕ್ರಿಮಲ್ ಗ್ರಾಮದಲ್ಲಿ ಮಹಿಳೆಯೊಬ್ಬರು ವಿದ್ಯುತ್ ಅವಘಡದಿಂದ ಶೇ. 70ರಷ್ಟು ಸುಟ್ಟು ಗಾಯಗೊಂಡಿದ್ದರು. ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಸುಸಜ್ಜಿತ ರಸ್ತೆ ಇಲ್ಲದ ಕಾರಣ ವಾಹನಗಳು ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಸಂಬಂಧಿಕರು ಮಹಿಳೆಯನ್ನು ಮಂಚದ ಮೇಲೆ ಮಲಗಿಸಿಕೊಂಡು ಆರು ಕಿ.ಮೀ ಕಾಲ್ನಡಿಗೆಯಲ್ಲಿ ಆರೋಗ್ಯ ಕೇಂದ್ರಕ್ಕೆ ತಲುಪಿದ್ದಾರೆ.

Eedina App

ಗಾಯಗೊಂಡಿರುವ ಬುಡಕಟ್ಟು ಮಹಿಳೆಯನ್ನು ಮಂಚದ ಮೇಲೆ ಹೊತ್ತು ಕಾಲ್ನಡಿಗೆಯಲ್ಲಿ ಸಾಗುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಎಚ್ಚೆತ್ತುಕೊಂಡ ಸ್ಥಳೀಯ ಆಡಳಿತವು ಈ ಬಗ್ಗೆ ಗಮನ ಹರಿಸಿದ್ದು, ಗ್ರಾಮಸ್ಥರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದೆ.

ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಂತಿ ಬಿದ್ದ ಪರಿಣಾಮ ಮಹಿಳೆಗೆ ಶೇ. 70ರಷ್ಟು ಸುಟ್ಟ ಗಾಯಗಳಾಗಿವೆ. ಗ್ರಾಮಸ್ಥರು ಗಾಯಾಳು ಮಹಿಳೆಯನ್ನು ಮಂಚದ ಮೇಲೆ ಮಲಗಿಸಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಅಲ್ಲಿಂದ ಘನಸೂರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಜಬಲ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಎಸ್‌ಸಿ-ಎಸ್‌ಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಯೋಜನೆ ಹಿಂಪಡೆದಿಲ್ಲ; ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ

“ಬಕ್ರಿಮಾಲ್‌ನಿಂದ ಧುಮ್ಮಲ್‌ ಅರಣ್ಯ ಪ್ರದೇಶಕ್ಕೆ ಬರುವುದರಿಂದ ರಸ್ತೆಯೇ ಇಲ್ಲ. ಬಕ್ರಿಮಲ್ ಗ್ರಾಮವು ಬರ್ಗಿ ಅಣೆಕಟ್ಟಿನ ಮುಳುಗಡೆ ಪ್ರದೇಶ. ಆ ಭಾಗದ ಬಹುತೇಕ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಇನ್ನೂ ಕೆಲವರು ಅಲ್ಲಿಯೇ ವಾಸಿಸುತ್ತಿದ್ದಾರೆ. ಕಿರಿದಾದ ಮಣ್ಣಿನ ದಾರಿ ಇದ್ದು ಅಲ್ಲಿ ನಡೆದಾಡುವುದು ಸಹ ಕಷ್ಟ. ಬಕ್ರಿಮಲ್ ಗ್ರಾಮಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ಗ್ರಾಮಸ್ಥರಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ ಚರ್ಚಿಸಲಾಗುವುದು” ಎಂದು ಘಾನ್ಸೋರ್ ಜನಪಾದ್ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೀಶ್ ಬಗ್ರಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app