ಮಧ್ಯಪ್ರದೇಶ | ದಲಿತ ವಿದ್ಯಾರ್ಥಿಯಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕ!

  • ನಿರಾಕರಿಸಿದ ವಿದ್ಯಾರ್ಥಿಗೆ ಶಿಕ್ಷಕನಿಂದ ಥಳಿತ
  • ಜಿಲ್ಲಾ ಶಿಕ್ಷಣಾಧಿಕಾರಿಗೆ ಪೋಷಕರಿಂದ ದೂರು

ಸರ್ಕಾರಿ ಶಾಲೆಯ ದಲಿತ ವಿದ್ಯಾರ್ಥಿಯಿಂದ ಅದೇ ಶಾಲೆಯ ಶಿಕ್ಷಕನೋರ್ವ ಶೌಚಾಲಯವನ್ನು ಸ್ವಚ್ಛ ಮಾಡಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿ ಆಶಿಶ್, “ತನ್ನ ಶಿಕ್ಷಕ ರವೀಂದ್ರ ಗುಪ್ತಾ ಅವರು ನನ್ನಿಂದ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಶೌಚಾಲಯ ಸ್ವಚ್ಛಗೊಳಿಸಲು ನಿರಾಕರಿಸಿದಾಗ ಶಿಕ್ಷಕರು ನನ್ನನ್ನು ಥಳಿಸಿದ್ದಾರೆ” ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ.

ವಿದ್ಯಾರ್ಥಿ ತನ್ನ ಕುಟುಂಬ ಸದಸ್ಯರೊಂದಿಗೆ ದೂರು ನೀಡಲು ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದರು. ಆದರೆ ಕಚೇರಿಯಲ್ಲಿ ಅಧಿಕಾರಿ ಇರಲಿಲ್ಲ. ಬಳಿಕ ಕರೆ ಮಾಡಿದರೂ ಸ್ವೀಕರಿಸಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾ ಶಿಕ್ಷಣಾಧಿಕಾರಿಗೆ ನೀಡಿರುವ ಅರ್ಜಿಯಲ್ಲಿ ಪರ್ಸಾಳ ನಿವಾಸಿ ಆಶಿಶ್ ಅವರ ತಂದೆ ನಾಥೂರಾಂ, ''ನನ್ನ ಮಗ ಆಶಿಶ್ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಶಿಕ್ಷಕ ರವೀಂದ್ರ ಗುಪ್ತಾ ಅವರು ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಲು ನನ್ನ ಮಗನಿಗೆ ಹೇಳಿದ್ದಾರೆ. ಅದನ್ನು ಮಗ ನಿರಾಕರಿಸಿದಾಗ ಥಳಿಸಿದ್ದಾರೆ. ಈ ಸಂಬಂಧ ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಲಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ದಲಿತ ವಿದ್ಯಾರ್ಥಿಗೆ ಥಳಿಸಿ, ತಲೆಯನ್ನು ನೆಲಕ್ಕೆ ಬಡಿದ ಶಿಕ್ಷಕ

ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಹರ್ಭಜನ್ ಸಿಂಗ್ ತೋಮರ್ ಈ ವಿಷಯವಾಗಿ ಪ್ರತಿಕ್ರಿಯಿಸಿದ್ದು, "ಶಿಕ್ಷಕರು ವಿದ್ಯಾರ್ಥಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ದೂರಿನ ಬಗ್ಗೆ ತನಿಖೆ ನಡೆಸಲಾಗುವುದು. ತನಿಖಾ ವರದಿಯಲ್ಲಿ ಯಾವುದೇ ಸಂಗತಿಗಳು ಕಂಡುಬಂದರೂ, ಅದರಂತೆ ಕ್ರಮ ಕೈಗೊಳ್ಳಲಾಗುವುದು" ಎಂದು ಪೋಷಕರಿಗೆ ಭರವಸೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್