ಮಧ್ಯಪ್ರದೇಶ | 108 ನಿರ್ಲಕ್ಷ್ಯ; ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ ಬುಡಕಟ್ಟು ಮಹಿಳೆ

  • ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ಬಾರದ ಆಂಬ್ಯುಲೆನ್ಸ್
  • ಹೆರಿಗೆಯ ಬಳಿಕ ಬಂದ ಆಂಬ್ಯುಲೆನ್ಸ್; ತಾಯಿ-ಮಗು ಆಸ್ಪತ್ರೆಗೆ ದಾಖಲು

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದಿದ್ದರಿಂದ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ರತ್ಲಮ್ ಜಿಲ್ಲೆಯ ಸರ್ವಾನ್ ಬಳಿ ನಡೆದಿದೆ.

ರಸ್ತೆ ಬದಿಯಲ್ಲಿಯೇ ಹೆರಿಗೆ ಆದ ಬಳಿಕ ಸ್ಥಳೀಯರೊಬ್ಬರು ಘಟನೆಯ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದು ವೈರಲ್ ಆಗುತ್ತಿದ್ದಂತೆಯೇ ಮಾಹಿತಿ ಪಡೆದು ಆಂಬ್ಯುಲೆನ್ಸ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ಮೂರು ನಾಲ್ಕು ಜನ ಮಹಿಳೆಯರು ರಸ್ತೆ ಬದಿಯಲ್ಲಿ ಹೆರಿಗೆ ಮಾಡಿಸುತ್ತಿರುವುದು ದಾಖಲಾಗಿದೆ. ತಾಯಿ ಮತ್ತು ಮಗು ಇಬ್ಬರೂ ರಸ್ತೆ ಬದಿಯ ಬಯಲಿನಲ್ಲಿ ನೆಲದ ಮೇಲೆ ಮಲಗಿಕೊಂಡಿದ್ದಾರೆ. ಈ ವಿಡಿಯೊ ಮತ್ತು ಫೋಟೊ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. 

ಮೆಡಿಕಲ್ ಆಫೀಸರ್ ಜಿತೇಂದ್ರ ರೈಕ್ವಾರ್, ಮೊದಲು 108 ಜಿಲ್ಲಾ ಸಂಯೋಜಕರಿಗೆ ಕರೆ ಮಾಡಿದರು. ಆದರೆ, ತಾಯಿ ಮಗು ಬಹಳ ಸಮಯದವರೆಗೂ ಆರೋಗ್ಯ ಕೇಂದ್ರಕ್ಕೆ ಬಾರದಿದ್ದಾಗ, ಅವರೇ ಆರೋಗ್ಯ ಕಾರ್ಯಕರ್ತರು ಮತ್ತು ಆಂಬ್ಯುಲೆನ್ಸ್ ಜತೆಗೆ ಸ್ಥಳಕ್ಕೆ ಆಗಮಿಸಿ ಮಗು ಮತ್ತು ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದರು.

ಈ ಸುದ್ದಿ ಓದಿದ್ದೀರಾ? ಲೈಂಗಿಕ ದೌರ್ಜನ್ಯ | ದೂರು ದಾಖಲಿಸದ ಪೊಲೀಸರು; ಮನನೊಂದು ಸಾವಿಗೆ ಶರಣಾದ ತಾಯಿ- ಮಗಳು

ವೈದ್ಯಕೀಯ ಅಧಿಕಾರಿ ಜಿತೇಂದ್ರ ರೈಕ್ವಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ತಾಯಿ ಮಗು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಸುರಕ್ಷಿತವಾಗಿದ್ದು, ವೈದ್ಯರು ನಿಗಾ ಇರಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸಿ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್