ಮಧ್ಯಪ್ರದೇಶ | ಬುಡಕಟ್ಟು ಮಹಿಳೆ ಹೆಗಲ ಮೇಲೆ ಪತಿಯ ಕೂರಿಸಿ ಮೆರವಣಿಗೆ

  • ಎನ್‌ಡಿಎಯೇತರ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್‌ ಸಿನ್ಹಾ ಖಂಡನೆ 
  • ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿಯೇ ಒಂದರ ಹಿಂದೆ ಒಂದು ಘಟನೆ

ಮಧ್ಯಪ್ರದೇಶ ರಾಜ್ಯದ ಗುಣಾ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಗೆ ಬೆಂಕಿಹಚ್ಚಿದ ಘಟನೆ ಮಾಸುವ ಮುನ್ನವೇ, ದೇವಾಸ್ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಗೆ ಚಪ್ಪಲಿ ಹಾರ ಹಾಕಿ, ಆಕೆಯ ಪತಿಯನ್ನು ಹೆಗಲ ಮೇಲೆ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿರುವ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಒಂದೆಡೆ ಬಿಜೆಪಿಯು ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರನ್ನು ಘೋಷಣೆ ಮಾಡಿ ಬೀಗುತ್ತಿದೆ. ಮತ್ತೊಂದೆಡೆ ದೇಶದ ನಾನಾ ಭಾಗಗಳಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಹಲ್ಲೆ, ಕಿರುಕುಳ ಮುಂದುವರಿದೇ ಇದೆ. ಅದರಲ್ಲೂ ಬಿಜೆಪಿ ನೇತೃತ್ವದ ಸರ್ಕಾರವೇ ಆಡಳಿತದಲ್ಲಿರುವ ಮಧ್ಯಪ್ರದೇಶ ರಾಜ್ಯದಲ್ಲಿ ಬುಡಕಟ್ಟು ಮಹಿಳೆ ಮೇಲಿನ ದೌರ್ಜನ್ಯದ ಪ್ರಕರಣಗಳು ಒಂದರ ಹಿಂದೆ ಮತ್ತೊಂದು ಬೆಳಕಿಗೆ ಬಂದಿವೆ. ಈ ಬಗ್ಗೆ ಸ್ವತಃ ರಾಷ್ಟ್ರಪತಿ ಚುನಾವಣೆಗೆ ಎನ್ಡಿಎಯೇತರ ಪಕ್ಷಗಳ ಅಭ್ಯರ್ಥಿಯಾಗಿರುವ ಯಶವಂತ ಸಿನ್ಹಾ ಟ್ವೀಟ್ ಮಾಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಈ ಬಾರಿ ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿರುವ ಬಿಜೆಪಿಗೆ, ಆ ಸಮುದಾಯದ ಕಲ್ಯಾಣದ ಬಗ್ಗೆ ಬದ್ಧತೆಯೇ ಇಲ್ಲ” ಎಂದು ಸಿನ್ಹಾ ದೂರಿದ್ದಾರೆ.

“ಮಧ್ಯಪ್ರದೇಶದಲ್ಲಿ ಭೂ ವಿವಾದದ ಹಿನ್ನೆಲೆ ಬುಡಕಟ್ಟು ಮಹಿಳೆಗೆ ಹೊಲದಲ್ಲಿಯೇ ಬೆಂಕಿ ಹಚ್ಚಲಾಗಿತ್ತು. ದಶಕಗಳಿಂದಲೂ ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಗೆ ಬೆಂಕಿ ಹಚ್ಚಿರುವುದು ಖಂಡನೀಯ. ಈ ಪ್ರಕರಣವು ಬುಡಕಟ್ಟು ಸಮುದಾಯದ ಕಲ್ಯಾಣದ ವಿಚಾರದಲ್ಲಿ ಬಿಜೆಪಿ ಬದ್ಧತೆ ಹೊಂದಿಲ್ಲ ಎಂಬುದನ್ನು ತೋರಿಸುತ್ತದೆ” ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಬುಡಕಟ್ಟು ಮಹಿಳೆಗೆ ಕಿರುಕುಳ

ಯುವಕರ ಗುಂಪು ಬುಡಕಟ್ಟು ಮಹಿಳೆಗೆ ಥಳಿಸಿ, ಆಕೆಗೆ ಚಪ್ಪಲಿಯ ಹಾರ ಹಾಕಿ, ಪತಿಯನ್ನು ಆಕೆಯ ಹೆಗಲ ಮೇಲೆ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ರೀತಿಯ ವಿಕೃತ ಘಟನೆ ನಡೆದಿರುವುದು ಮಧ್ಯಪ್ರದೇಶ ರಾಜ್ಯದ ದೇವಾಸ್ ಜಿಲ್ಲೆಯ ಬೋರ್ಪದವ್ ಗ್ರಾಮದಲ್ಲಿ. ಬುಡಕಟ್ಟು ಮಹಿಳೆ ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತು ಸಾಗುವ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“ಮಹಿಳೆಯು ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಆಕೆಯ ಪತಿಯೇ ಗ್ರಾಮಸ್ಥರ ಎದುರು ಥಳಿಸಿದ್ದಾನೆ. ಅದಾದ ನಂತರ ಗ್ರಾಮಸ್ಥರು, ಆಕೆಗೆ ಚಪ್ಪಲಿಯ ಹಾರ ಹಾಕಿಸಿ, ಗಂಡನನ್ನು ಹೆಗಲ ಮೇಲೆ ಹೊತ್ತು ಸಾಗುವಂತೆ ಕಿರುಕುಳ ನೀಡಿದ್ದಾರೆ” ಎಂದು ಪೊಲೀಸರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

“ಮಹಿಳೆಯು ಮೂರ್ನಾಲ್ಕು ದಿನಗಳಿಂದ ಕಾಣೆಯಾಗಿದ್ದರು. ನಂತರ ಸ್ನೇಹಿತನೊಂದಿಗೆ ಕಾಣಿಸಿಕೊಂಡಿದ್ದರು. ಇದು ಆಕೆಯ ಪತಿ ಹಾಗೂ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯನ್ನು ಶಿಕ್ಷಿಸಬೇಕು ಎಂದು ಗ್ರಾಮಸ್ಥರು ಈ ರೀತಿ ಮಾಡಿದ್ದಾರೆ. ಘಟನೆ ಸಂಬಂಧ ಮಹಿಳೆಯ ಪತಿಯೂ ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ. ಅವರ ವಿರುದ್ಧ, ಹಲ್ಲೆ, ಹಿಂಸಾಚಾರ, ಮಹಿಳೆಯ ಮಾನಹಾನಿ ಮತ್ತು ಬೆದರಿಕೆ ಪ್ರಕರಣಗಳನ್ನು ದಾಖಲಿಸಲಾಗಿದೆ” ಪೊಲೀಸರು ತಿಳಿಸಿದ್ದಾರೆ.

ದೆವಾಸ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೂರ್ಯಕಾಂತ್ ಶರ್ಮಾ ಈ ಘಟನೆ ಕುರಿತು ಮಾತನಾಡಿದ್ದು, “ಮಹಿಳೆ ವಾರದ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಆಕೆಯ ಪತಿ ಉದಯ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಪತ್ನಿ ತನ್ನ ಆತ್ಮೀಯ ಸ್ನೇಹಿತ ಎಂದು ಹೇಳಿಕೊಂಡ ವ್ಯಕ್ತಿಯ ಮನೆಯಲ್ಲಿರುವುದು ನಂತರ ಗೊತ್ತಾಗಿತ್ತು. ಕೂಡಲೇ ಅಲ್ಲಿಗೆ ತೆರಳಿದ ಪತಿ, ಮಹಿಳೆಯನ್ನು ಹೊರಗೆಳೆದು ಗ್ರಾಮಸ್ಥರ ಮುಂದೆಯೇ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ” ಎಂದು ಹೇಳಿದ್ದಾರೆ.

ಮಹಿಳೆಯ ಸ್ನೇಹಿತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾನೆ. ವಿಚಾರಣೆ ವೇಳೆ ಮಹಿಳೆಯು, “ತಮಗೆ 15 ವರ್ಷವಿದ್ದಾಗಲೇ ಮದುವೆ ಮಾಡಲಾಯಿತು. ಪತಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದರಿಂದ ಮನೆಬಿಟ್ಟು ಹೋದೆ” ಎಂದು ಹೇಳಿಕೆ ನೀಡಿದ್ದಾರೆ.

ಗುಣಾದಲ್ಲಿ ಬುಡಕಟ್ಟು ಮಹಿಳೆಗೆ ಬೆಂಕಿ

ಮಧ್ಯಪ್ರದೇಶದ ಗುಣಾ ಜಿಲ್ಲೆಯ ಧನೋರಿಯಾ ಗ್ರಾಮದ ಮಹಿಳೆ ರಾಮ್ಪ್ಯಾರಿ ಬಾಯಿ (45) ಅವರಿಗೆ ಹೊಲಕ್ಕೆ ಹೋಗಿದ್ದ ವೇಳೆ ಬೆಂಕಿ ಹಚ್ಚಲಾಗಿತ್ತು. ಹೊಲದಲ್ಲಿಯೇ ಬಿದ್ದಿದ್ದ ಆಕೆಯನ್ನು ಪತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಪ್ರಕರಣ ಸಂಬಂಧ ಇಬ್ಬರು ಮಹಿಳೆಯರೂ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗವು ಈ ಪ್ರಕರಣವನ್ನು ಘೋರ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್