ಮಹಾರಾಷ್ಟ್ರ| ರಸ್ತೆ ದುರವಸ್ಥೆ: ಗರ್ಭಿಣಿಯನ್ನು ಡೋಲಿಯಲ್ಲಿ ಹೊತ್ತು ತಂದರೂ ಕಣ್ಣುಮುಚ್ಚಿದ ಅವಳಿ ಮಕ್ಕಳು!

  • ಸೂಕ್ತ ರಸ್ತೆ ಇಲ್ಲದೆ ಆಸ್ಪತ್ರೆಗೆ ಬರಲೂ ಪರದಾಡುವ ಬುಡಕಟ್ಟು ಜನರು
  • ಗರ್ಭಿಣಿಯನ್ನು ಡೋಲಿಯಲ್ಲಿ ಹೊತ್ತು ತಂದರೂ ಶಿಶು ಬದುಕುಳಿಯಲಿಲ್ಲ

ಸಮರ್ಪಕ ರಸ್ತೆ ಇಲ್ಲದೆ, ಬುಡಕಟ್ಟು ಸಮುದಾಯದ ಗರ್ಭಿಣಿಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆತರಲಾಗದ ಕಾರಣ ಗರ್ಭಿಣಿಯೊಬ್ಬರು ಹೆತ್ತ ಅವಳಿ ಶಿಶುಗಳು ಮೃತಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ, ಮೊಖಡ ತಾಲೂಕಿನ ಮರ್ಕಟವಾಡಿ ಗ್ರಾಮದ 26 ವರ್ಷದ ಗರ್ಭಿಣಿಗೆ ಏಳು ತಿಂಗಳು ಇರುವಾಗಲೇ ಅಕಾಲಿಕವಾಗಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಬುಡಕಟ್ಟು ಸಮುದಾಯದ ಮಹಿಳೆಯನ್ನು ಬಿದಿರಿನ ಕೋಲಿಗೆ ಸೀರೆ ಕಟ್ಟಿ ಡೋಲಿ ಮಾಡಿ ಕೂರಿಸಿಕೊಂಡು ಭಾರೀ ಮಳೆಯ ನಡುವೆಯೇ ನದಿ ದಾಟಿಸಿಕೊಂಡು ಕರೆತರಲಾಗಿದೆ.

ಮರ್ಕಟವಾಡಿ ಗ್ರಾಮದಿಂದ ಮುಖ್ಯ ರಸ್ತೆಗೆ 3 ಕಿ.ಮೀ. ದೂರ ಕ್ರಮಿಸಬೇಕಿತ್ತು. ಈ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದೆ ವಾಹನಗಳು ಬಾರದ ಸ್ಥಿತಿ ಇತ್ತು. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಗರ್ಭಿಣಿಯನ್ನು ತಲುಪಿಸಲು ಸಾಧ್ಯವಾಗಿಲ್ಲ. ಮಹಿಳೆಯನ್ನು ಮುಖ್ಯ ರಸ್ತೆಯಿಂದ ಅಂಬುಲೆನ್ಸ್ ಖೋಡಾಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು.

“ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಹುಟ್ಟುವಾಗಲೇ ಮೃತಪಟ್ಟಿವೆ. ಸರಿಯಾದ ರಸ್ತೆ ಇದ್ದಿದ್ದರೆ, ಮಹಿಳೆಗೆ ಬೇಗ ವೈದ್ಯಕೀಯ ಚಿಕಿತ್ಸೆ ನೀಡಿ ಶಿಶುಗಳನ್ನು ಉಳಿಸಬಹುದಿತ್ತು. ಮಹಿಳೆಯ ಆರೋಗ್ಯ ಸ್ಥಿರವಾಗಿದೆ” ಎಂದು ಡಾ. ಪುಷ್ಪಾ ಮಾಥುರೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಸರಿಯಾದ ರಸ್ತೆ ಇಲ್ಲದ ಕಾರಣ ಆಂಬ್ಯುಲೆನ್ಸ್‌ ತಲುಪಲು ಸಾಧ್ಯವಾಗದ ದೂರದ ಹಳ್ಳಿಗಳಿಂದ ರೋಗಿಗಳನ್ನು ಸಾಮಾನ್ಯವಾಗಿ ಸೀರೆ ಅಥವಾ ಉದ್ದನೆಯ ಬಿದಿರಿನ ಕೋಲಿಗೆ ಕಟ್ಟಲಾದ ತಾತ್ಕಾಲಿಕ ಡೋಲಿಗಳಲ್ಲಿ ಮುಖ್ಯ ರಸ್ತೆಗೆ ಕರೆತರಲಾಗುತ್ತದೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಿಂದೂಗಳಿಗೆ ಮೀಸಲಿಟ್ಟ ನೀರು ಕುಡಿಯಲು ನನ್ನ ತಂದೆಗೂ ನಿಷೇಧವಿತ್ತು: ಮಾಜಿ ಸ್ಪೀಕರ್ ಮೀರಾ ಕುಮಾರ್

"ನಾವು ಸಾಮಾನ್ಯವಾಗಿ ಗರ್ಭಾವಸ್ಥೆಯ ಎಂಟನೇ ಅಥವಾ ಒಂಬತ್ತನೇ ತಿಂಗಳಲ್ಲಿರುವ ಮಹಿಳೆಯರನ್ನು ಹೆರಿಗೆಗಾಗಿ ದೂರದ ಹಳ್ಳಿಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿಕೊಳ್ಳುತ್ತೇವೆ. ಆದರೆ ಇವರಿಗೆ ಏಳು ತಿಂಗಳು ನಡೆಯುತ್ತಿರುವಾಗಲೇ ಹೊಟ್ಟೆ ನೋವು ಕಾಣಿಸಿಕೊಂಡಿದೆ” ಎಂದು ವೈದ್ಯರು ತಿಳಿಸಿದ್ದಾರೆ.

ರಸ್ತೆ ಇಲ್ಲದ ಸಂದರ್ಭದಲ್ಲಿ ಡೋಲಿಗಳ ಮೂಲಕ ರೋಗಿಗಳನ್ನು ಸಾಗಿಸಿರುವ ಹಲವು ನಿದರ್ಶನಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗೋವಿಂದ್ ಬೋಡ್ಕೆ ಅವರು ಕಳೆದ ವಾರ ಈ ಪ್ರದೇಶಕ್ಕೆ ಭೇಟಿ ನೀಡಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್