ಮಗುವಿಗೆ ಮಲತಂದೆಯ ಹೆಸರು ಬಳಸುವುದು ತಾಯಿಯ ಹಕ್ಕು: ಸುಪ್ರೀಂ ಕೋರ್ಟ್

supreme court
  • ಆಂಧ್ರಪ್ರದೇಶದ ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದ ಸುಪ್ರಿಂ ಕೋರ್ಟ್
  • ಜೈವಿಕ ತಂದೆಯ ಹೆಸರನ್ನೇ ಇಡಬೇಕು ಎಂಬುದು ಕ್ರೂರ ನಿರ್ದೇಶನವಾಗುತ್ತದೆ

ಮಲತಂದೆಯ ಕೌಟುಂಬಿಕ ಹೆಸರನ್ನು ಮಗುವಿಗೆ ಇಡುವುದು ತಾಯಿಯ ಹಕ್ಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ; ಜೈವಿಕ ತಂದೆಯ ಮನೆತನದ ಹೆಸರೇ ಮಗುವಿಗೂ ಅನ್ವಯವಾಗುತ್ತದೆ ಎಂದು ನಿರ್ದೇಶಿಸಿದ್ದ ಆಂಧ್ರಪ್ರದೇಶದ ಹೈಕೋರ್ಟ್ ಆದೇಶವನ್ನು ಸುಪ್ರಿಂ ಕೋರ್ಟ್ ತಳ್ಳಿಹಾಕಿದೆ.  

ಮಗುವಿನ ತಂದೆ ತೀರಿ ಹೋಗಿ, ಆ ವಿಧವೆಯು ಮತ್ತೊಬ್ಬರೊಂದಿಗೆ ಮದುವೆಯಾದ ನಂತರ ಈ ಮೊದಲಿದ್ದ ಮಗುವಿಗೆ ಜೈವಿಕ ತಂದೆಯ ಮನೆತನದ ಹೆಸರನ್ನು ಇಡಬಹುದು. ಇಲ್ಲವೇ, ಮದುವೆ ನಂತರದ ಮಲತಂದೆಯ ಹೆಸರನ್ನು ಇಡಬಹುದು; ಅದು ತಾಯಿಯ ಹಕ್ಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಹಾಗೂ ಕೃಷ್ಣ ಮುರಾರಿ ಅವರಿದ್ದ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. 

ಜೈವಿಕವಾಗಿ ತಂದೆಯ ಹೆಸರನ್ನೇ ಮಗುವಿಗೆ ಇಡಬೇಕು ಎಂದು ಆಂಧ್ರಪ್ರದೇಶ ಹೈಕೋರ್ಟ್ ನಿರ್ದೇಶನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅಖಿಲಾ ಲಲಿತಾ ಅವರ ಅರ್ಜಿ ವಿಚಾರಣೆ ನಂತರ ಸುಪ್ರೀಂ ಕೋರ್ಟ್ ಹೀಗೆ ಅಭಿಪ್ರಾಯಪಟ್ಟಿದ್ದು, ತನ್ನ ಸ್ವಂತ ಮಗುವಿಗೆ ತಂದೆಯ ಹೆಸರನ್ನು ಇಡುವುದು ತಾಯಿಯ ಹಕ್ಕು, ಜೈವಿಕ ತಂದೆಯ ಹೆಸರನ್ನೇ ಇಡಬೇಕು ಎಂಬುದು ವಿವೇಚನಾರಹಿತ ಹಾಗೂ ಕ್ರೂರ ನಿರ್ದೇಶನವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. 

ದತ್ತು ಮಗುವಿಗೂ ಅನ್ವಯ

ಮಗುವಿಗೆ ಸ್ವಾಭಾವಿಕವಾಗಿ ತಾಯಿಯೇ ನೈಜ ಪೋಷಕಿ. ತನ್ನ ಸ್ವಂತ ಮಗುವಿಗೆ ಮಾತ್ರವಲ್ಲ, ದತ್ತು ಪಡೆದ ಮಗುವಿಗೂ ಯಾವ ತಂದೆಯ ಹೆಸರು ಇಡಬೇಕೆಂಬುದು ಅವಳ ಹಕ್ಕು. ದತ್ತು ಪಡೆದ ಮಗುವಿಗೂ ಇದು ಅನ್ವಯವಾಗುತ್ತದೆ. ಪತಿ ತೀರಿದ ಬಳಿಕ ಮದುವೆಯಾದ ವಿಧವೆಯು ಮತ್ತೊಬ್ಬ ಪುರುಷನನ್ನು ಮದುವೆಯಾದಾಗ, ಮೊದಲಿನ ಪತಿಯ ಹೆಸರನ್ನೇ ಮಗುವಿಗೆ ಇಟ್ಟರೆ ಆ ಮಗುವಿನ ಮೇಲಾಗುವ ಮಾನಸಿಕ ಆಘಾತಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಇದು ಆ ಮಗುವಿನ ಸಾಮಾಜಿಕ-ಮಾನಸಿಕ ಆರೋಗ್ಯದ ಮೇಲೆ ಅತ್ಯಂತ ಗಂಭೀರ ದುಷ್ಪರಿಣಾಮ ಬೀರುತ್ತದೆ. ಸಮಾಜದಲ್ಲಿ ಆ ಮಗುವಿನ ಸ್ಥಾನಮಾನದ ಗೌರವ-ಘನತೆಗೂ ಧಕ್ಕೆಯಾಗುತ್ತದೆ. ಸಮಾಜದ ಪ್ರಶ್ನೆಗಳಿಗೆ ಮಗುವು ಅನಗತ್ಯವಾಗಿ ಉತ್ತರಿಸಬೇಕಾಗುತ್ತದೆ. ತಂದೆ-ತಾಯಿ ಮಧ್ಯೆ ನೆಮ್ಮದಿಯಿಂದ ಇರುವ ಆ ಮಗುವಿನ ನೆಮ್ಮದಿ ಹಾಳು ಮಾಡಿದಂತಾಗುತ್ತದೆ ಎಂದೂ ಸಹ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. 

ತಮ್ಮ ಮಗ ತೀರಿದ ಬಳಿಕ ಸೊಸೆಯು ಬೇರೊಬ್ಬನೊಂದಿಗೆ ಮದುವೆಯಾಗಿದ್ದು, ಮಗುವಿಗೆ ಜೈವಿಕ ತಂದೆಯ ಹೆಸರನ್ನು ಇಟ್ಟಿಲ್ಲ ಎಂದು ಮಗುವಿನ ಜೈವಿಕ ತಂದೆಯ ಪೋಷಕರು "ಗಾರ್ಡಿಯನ್ಸ್ ಆಂಡ್ ವಾರ್ಡ್ ಆಕ್ಟ್"ನಡಿ ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.‌ 

ಮರುಮದುವೆಯಾದ ನಂತರ ಮೂರು ತಿಂಗಳ ಒಳಗಾಗಿ ತನ್ನ ಮಗುವಿನ ಹೆಸರನ್ನು ಜೈವಿಕ ತಂದೆಯ ಹೆಸರಿಗೆ ಸೇರಿಸಿ ನೋಂದಣಿ ಮಾಡಿಸಬೇಕು. ಆದರೆ, ಹಾಗೆ ಆಗಿಲ್ಲ. ಒಂದು ವೇಳೆ ಜೈವಿಕ ತಂದೆಯ ಹೆಸರನ್ನು ಮಗುವಿಗೆ ಕಾಣಿಸುವುದಾದರೆ ಮಲತಂದೆಯ ಹೆಸರನ್ನೂ ಕಾಣಿಸಬೇಕು ಎಂದು ಆಂಧ್ರಪ್ರದೇಶ ಹೈಕೋರ್ಟ್ ತನ್ನ ತೀರ್ಪಿನಲ್ಲಿ ನಿರ್ದೇಶಿಸಿತ್ತು. ಆದರೆ, ಈ ತೀಪನ್ನು ಸುಪ್ರೀಂ ಕೋರ್ಟ್‌ ಬದಿಗಿರಿಸಿದೆ. ಅರ್ಜಿದಾರಳ ಪರವಾಗಿ ರವಿ ಬಸ್ಸಿ ಹಾಗೂ ಸುರೇಂದ್ರ ಕುಮಾರ ಗುಪ್ತಾ ಅವರು ವಾದಿಸಿದ್ದರು.  

ನಿಮಗೆ ಏನು ಅನ್ನಿಸ್ತು?
0 ವೋಟ್