ಒಡಿಶಾ | ವಾಮಾಚಾರ ಶಂಕೆ ಹಿನ್ನೆಲೆ 70 ವರ್ಷದ ಬುಡಕಟ್ಟು ವೃದ್ಧೆಯ ಹತ್ಯೆ

  • ವಾಮಾಚಾರದಿಂದ ತನ್ನ ಕುಟುಂಬಕ್ಕೆ ಕಾಯಿಲೆ ಬಂದಿದೆ ಎಂದು ತಿಳಿದಿದ್ದ ವ್ಯಕ್ತಿ
  • 70 ವರ್ಷದ ವೃದ್ಧೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಗ್ರಾಮಸ್ಥ

ವಾಮಾಚಾರ ಮಾಡಿದ ಶಂಕೆಯ ಹಿನ್ನೆಲೆ ಗ್ರಾಮಸ್ಥನೊಬ್ಬ 70 ವರ್ಷದ ಬುಡಕಟ್ಟು ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಮಯೂರ್‌ಭಂಜ್‌ ಜಿಲ್ಲೆಯ ಬ್ಯಾಂಗ್ರಿಪೋಸಿ ಬ್ಲಾಕ್‌ನ ಜಾಮ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಬದಮ್ತೋಲಿಯಾ ಗ್ರಾಮದ ‘ಗಂಗಿ ಜಮುದಾ’ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಅದೇ ಗ್ರಾಮದ 60 ವರ್ಷದ ‘ಮದನ್ ಪಿಂಗುವಾ’ ಎಂದು ಗುರುತಿಸಲಾಗಿದೆ.

ಗಂಗಿ ಜಮುದಾ ವಾಮಾಚಾರ ಮಾಡುತ್ತಿದ್ದಾಳೆ ಎಂದು ಮದನ್ ಪಿಂಗುವಾ ಶಂಕಿಸಿದ್ದಾನೆ. ಇದರಿಂದಾಗಿ ಅವರ ಕುಟುಂಬ ಸದಸ್ಯರು ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ನಂಬಿದ್ದರು. ಹೀಗಾಗಿ ಶನಿವಾರ ರಾತ್ರಿ ಬುಡಕಟ್ಟು ಸಮುದಾಯದ ವೃದ್ಧ ಮಹಿಳೆ ಮೇಲೆ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದ. 

ತೀವ್ರವಾಗಿ ಗಾಯಗೊಂಡ ಜಮುದಾ ಅವರನ್ನು ರಾಯರಂಗಪುರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಗಾಯಗೊಂಡ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ದಲಿತರ ಮೇಲೆ ಮೇಲ್ವರ್ಗದವರಿಂದ ಮಾರಣಾಂತಿಕ ಹಲ್ಲೆ

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮದನ್ ಪಿಂಗುವಾ ಎಂಬಾತನನ್ನು ಬಂಧಿಸಿದ್ದಾರೆ. ಈ ಕುರಿತು ಜಾಮ್ಡಾ ಪೊಲೀಸ್ ಠಾಣೆಯ ಪ್ರಭಾರಿ ಇನ್‌ಸ್ಪೆಕ್ಟರ್‌ ಕಮಲಾಕಾಂತ ದಾಸ್ ತಿಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು ತನಿಖೆ ಮುಂದುವರಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್