ಒಡಿಶಾ | ಆದಿವಾಸಿಗಳ ಗುಡಿಸಲುಗಳಿಗೆ ಬೆಂಕಿ ಇಟ್ಟ ಅರಣ್ಯ ಸಿಬ್ಬಂದಿ

  • 30 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಬೆಳೆ ಸಂಪೂರ್ಣ ನಾಶ
  • ಬೆಂಕಿ ನಂದಿಸಲು ಹರಸಾಹಸ; ಮುಗಿಲುಮುಟ್ಟಿದ ಆದಿವಾಸಿಗಳ ಆಕ್ರಂದನ

ಒಡಿಶಾದಲ್ಲಿ ಆದಿವಾಸಿಗಳ ಜೀವನಾಧಾರವಾಗಿದ್ದ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ಕಿತ್ತುಕೊಂಡಿದೆ. ಅಷ್ಟಕ್ಕೆ ಸುಮ್ಮನಾಗದ ಅರಣ್ಯ ಇಲಾಖೆ ಸಿಬ್ಬಂದಿ, ಬುಡಕಟ್ಟು ಸಮುದಾಯದ ಜನರು ವಾಸಿಸುವ ಗುಡಿಸಲುಗಳಿಗೂ ಬೆಂಕಿ ಹಚ್ಚಿ ಸಂಪೂರ್ಣ ಸುಟ್ಟುಹಾಕಿದ್ದಾರೆ.

ಒಡಿಶಾದ ನಬರಂಗಪುರ ಜಿಲ್ಲೆಯ ಉಮರ್ಕೋಟ್ ಉಪವಿಭಾಗದ ಬುರ್ಜಾ ಗ್ರಾಮದಲ್ಲಿ ಶನಿವಾರ ಈ ಅಮಾನವೀಯ ಘಟನೆ ನಡೆದಿದೆ. ಅರಣ್ಯ ಇಲಾಖೆ ವಿರುದ್ಧ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದೆ. 

ಬುರ್ಜಾ ಗ್ರಾಮದಲ್ಲಿ ವಾಸವಿರುವ 20 ಬುಡಕಟ್ಟು ಕುಟುಂಬಗಳು ತಮಗೆ ಸೇರಿದ 30 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಕೃಷಿ ಮಾಡಿದ್ದರು. ಜೋಳದ ಬೆಳೆಯು ನಳನಳಿಸುವಂತೆ ಬೆಳೆದಿತ್ತು. ಆದರೆ, ಈ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಆದಿವಾಸಿಗಳಿಗೆ ಯಾವುದೇ ನೋಟಿಸ್ ನೀಡದೆ ಶನಿವಾರ ಏಕಾಏಕಿ ಅರಣ್ಯ ಇಲಾಖೆ ಸಿಬ್ಬಂದಿ ಹೊಲಕ್ಕೆ ಬಂದು ಮೆಕ್ಕೆಜೋಳದ ಬೆಳೆಯನ್ನು ಕಡಿದು ನಾಶ ಮಾಡಿದ್ದಾರೆ.

ಬಳಿಕ ಹೊಲದ ಸಮೀಪವೇ ಇದ್ದ ಅವರ ಗುಡಿಸಲುಗಳಿಗೂ ಬೆಂಕಿ ಹಚ್ಚಿದ್ದಾರೆ. ಗುಡಿಸಲಿಗೆ ಹೊತ್ತಿದ ಬೆಂಕಿ ಆರಿಸಲು ಆದಿವಾಸಿ ಯುವಕರು ಹರಸಾಹಸ ಪಟ್ಟರಾದರೂ ಗುಡಿಸಲುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಗುಡಿಸಲುಗಳೆಲ್ಲ ಸುಟ್ಟು ಬೂದಿಯಾಗಿವೆ.

ಮೆಕ್ಕೆಜೋಳದ ಬೆಳೆಯನ್ನು ನಾಶ ಮಾಡುವ ಮೂಲಕ ಬುಡಕಟ್ಟು ಜನರ ಆಹಾರವನ್ನು ಕಿತ್ತುಕೊಳ್ಳಲಾಗಿದೆ. ಆದಿವಾಸಿಗಳು ಅರಣ್ಯ ಇಲಾಖೆಯ ನಡೆಯನ್ನು ವಿರೋಧ ಮಾಡಿದರೆ ಅವರಿಗೆ ನಕ್ಸಲ್ ಪಟ್ಟ ಕಟ್ಟಲಾಗುತ್ತಿದೆ. ಅಸಹಾಯಕತೆಯಿಂದ ಕಣ್ಣೀರು ಹಾಕುವುದನ್ನು ಬಿಟ್ಟರೆ ಬೇರೆ ಏನು ಮಾಡಬೇಕು ಎಂಬುದೇ ಅವರಿಗೆ ತಿಳಿಯುತ್ತಿಲ್ಲ. ಒಡಿಶಾದ ಬುಡಕಟ್ಟು ಸಮುದಾಯದ ಅಧ್ಯಕ್ಷ ಮೌನವಾಗಿದ್ದಾರೆ. ಘಟನೆ ಬಗ್ಗೆ ರಾಷ್ಟ್ರಪತಿ ಮುರ್ಮು ಮೌನ ವಹಿಸಿದ್ದಾರೆ. ಬಿಜೆಡಿ, ಬಿಜೆಪಿ ಯ ಮೌನ ನಾಚಿಕೆಗೇಡಿನ ಸಂಗತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ| ಕುಡಿಯುವ ನೀರಿನ ಕೊಡ ಮುಟ್ಟಿದ್ದಕ್ಕೆ ಶಿಕ್ಷಕನಿಂದ ಹಲ್ಲೆ; ದಲಿತ ವಿದ್ಯಾರ್ಥಿ ಸಾವು

ಕೂಡಲೇ ತಪ್ಪಿತಸ್ಥ ಅರಣ್ಯ ಸಿಬ್ಬಂದಿಗಳ ವಿರುದ್ಧ ಅಲ್ಲಿನ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಆದಿವಾಸಿಗಳಿಗೆ ಭೂಮಿಯನ್ನು ಹಿಂತಿರುಗಿಸಿ ಅಗತ್ಯ ದಾಖಲೆ, ಹಕ್ಕುಪತ್ರಗಳನ್ನು ವಿತರಿಸಬೇಕು. ಜತೆಗೆ ಗುಡಿಸಲುಗಳನ್ನು ಬೆಂಕಿ ಹಚ್ಚಿ ಸುಟ್ಟಿರುವುದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್