ಒಂದು ನಿಮಿಷದ ಓದು | ಜುಲೈ 15ಕ್ಕೆ ಅಗ್ನಿಪಥ ಯೋಜನೆ ವಿರುದ್ಧದ ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌

Soldiers

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮತ್ತು ಎಲ್ಲೆಡೆ ಹೋರಾಟದ ಕಿಡಿ ಹೊತ್ತಿಸಿರುವ ಕೇಂದ್ರ ಸರ್ಕಾರದ ನೂತನ ಸೇನಾ ನೇಮಕಾತಿಯ ಅಗ್ನಿಪಥ ಯೋಜನೆ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. 

ಜುಲೈ 15ರಂದು (ಶುಕ್ರವಾರ) ಇವುಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಒಪ್ಪಿಗೆ ನೀಡಿದೆ. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎ ಎಸ್‌ ಬೋಪಣ್ಣ ಅವರ ಏಕಸದಸ್ಯ ಪೀಠವು ಈ ವಿಷಯ ಪರಿಗಣಿಸಲು ಬುಧವಾರ ತೀರ್ಮಾನಿಸಿದೆ. 

ಅಲ್ಪಾವಧಿಗೆ ಸಶಸ್ತ್ರ ಪಡೆಗೆ ಸೇನಾಧಿಕಾರಿಗಳನ್ನು ನೇಮಿಸುವ ನೂತನ ಸೇನಾ ನೇಮಕಾತಿಯಾದ ಅಗ್ನಿಪಥ ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜೂನ್‌ನಲ್ಲಿ ಪ್ರಕಟಿಸಿದೆ. 

ಯೋಜನೆಯ ಪ್ರಕಾರ ನಾಲ್ಕು ವರ್ಷಗಳ ಅವಧಿಗೆ ಮಹಿಳೆಯರು ಸೇರಿದಂತೆ ಸೇನಾಧಿಕಾರಿಗಳನ್ನು ನೇಮಿಸಲಾಗುತ್ತದೆ. ನಾಲ್ಕು ವರ್ಷಗಳ ನಂತರ ಶೇ. 25ರಷ್ಟು ಅಭ್ಯರ್ಥಿಗಳನ್ನು ಮತ್ತೊಂದು ಹಂತದ ಪರೀಕ್ಷೆಯ ನಂತರ ಸೇನೆಯ ನಿಯಮಿತ ಸ್ಥಾನಗಳಿಗೆ 15 ವರ್ಷಗಳ ಅವಧಿಗೆ ನೇಮಿಸಲಾಗುತ್ತದೆ. 

ಕೇಂದ್ರದ ಈ ನೂತನ ಸೇನಾ ನೇಮಕಾತಿ ಪ್ರಕಟಣೆಯು ದೇಶಾದ್ಯಂತ ಪ್ರತಿಭಟನೆಯ ಕಿಡಿ ಹೊತ್ತಿಸಿದೆ. ಹಲವು ರಾಜ್ಯಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾದವು. 
ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳು, ಖಾಸಗಿ ಕಂಪನಿಗಳು ಅಗ್ನಿವೀರರಿಗೆ ತಮ್ಮ ಇಲಾಖೆಗಳಲ್ಲಿ ಮೀಸಲಾತಿ ಪ್ರಕಟಿಸಿದ್ದವು. 

ಈ ಸುದ್ದಿ ಓದಿದ್ದೀರಾ? ನೀಟ್‌ಗೆ ಹೊಸ ವಸ್ತ್ರಸಂಹಿತೆ ಜಾರಿ: ಉದ್ದ ತೋಳಿನ ಬಟ್ಟೆಗಿಲ್ಲ ಅನುಮತಿ

ಅಗ್ನಿವೀರರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವುದು ಪೂರ್ವಯೋಜಿತವಾಗಿತ್ತು ಎಂದು ರಕ್ಷಣಾ ಇಲಾಖೆ ಹೇಳಿದೆ. 

ಜುಲೈ 20ಕ್ಕೆ ದೆಹಲಿ ಹೈಕೋರ್ಟ್ ವಿಚಾರಣೆ

ಕೇಂದ್ರ ಅಗ್ನಿಪಥ ಯೋಜನೆ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲೂ ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಜುಲೈ 20ರಂದು ಅವುಗಳ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ. 

ಜುಲೈ 11ರಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಅವರ ಪೀಠ ನೌಕಾಪಡೆಗೆ ಸಂಬಂಧಿತ ಅರ್ಜಿ ವಿಚಾರಣೆ ನಡೆಸುವ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇದೇ ಮಾದರಿಯ ಅಗ್ನಿಪಥ ಯೋಜನೆ ಪ್ರಶ್ನಿಸಿರುವ ಅರ್ಜಿಗಳು ಬಾಕಿ ಇರುವುದಾಗಿ ಮಾಹಿತಿ ನೀಡಿದರು. 

ಆ ರೀತಿಯ ಎಲ್ಲಾ ಅರ್ಜಿಗಳನ್ನು ಜುಲೈ 20ರಂದು ವಿಚಾರಣೆ ನಡೆಸಲು ಪಟ್ಟಿ ಮಾಡುವಂತೆ ಪೀಠ ನಿರ್ದೇಶನ ನೀಡಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್