ರಾಜಿ ಒಪ್ಪಂದದ ಕಾರಣಕ್ಕೆ ಹೇಯ ಪ್ರಕರಣಗಳ ವಿಚಾರಣೆ ಕೈಬಿಡುವಂತಿಲ್ಲ: ಸುಪ್ರೀಂಕೋರ್ಟ್ ಎಚ್ಚರಿಕೆ 

supreme court
  • ಗಂಭೀರ ಪ್ರಕರಣಗಳ ವಿಚಾರಣೆ ಕೈಬಿಟ್ಟರೆ ಹೇಯ ಕೃತ್ಯ ಎಸಗಿದಂತೆ
  • ಗುಜರಾತ್‌ ಹೈಕೋರ್ಟ್‌ ನಿರ್ಧಾರದ ಹಿನ್ನೆಲೆ ಸುಪ್ರೀಂಕೋರ್ಟ್‌ ಎಚ್ಚರಿಕೆ

ದೂರುದಾರರು ಮತ್ತು ಆರೋಪಿಗಳು ರಾಜಿಮಾಡಿಕೊಂಡ ಮಾತ್ರಕ್ಕೆ ಸಾಮಾಜಿಕವಾಗಿ ಘೋರ ಹಾಗೂ ಗಂಭೀರ ಸ್ವರೂಪದ ಪ್ರಕರಣಗಳ ವಿಚಾರಣೆಯನ್ನು ಕೈಬಿಡುವಂತಿಲ್ಲ. ಒಂದು ವೇಳೆ ಹೀಗಾದರೆ, ಅದು ಸಾಮಾಜಿಕವಾಗಿ ಹೇಯ ಕೃತ್ಯಕ್ಕೆ ಸಮನಾದ ಲೋಪವಾಗುತ್ತದೆ ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ. 

ವ್ಯಕ್ತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡುವುದೂ ಸೇರಿದಂತೆ ಭಾರತೀಯ ಅಪರಾಧ ದಂಡ ಸಂಹಿತೆಯಡಿ ಸೆಕ್ಷನ್ 482 ಮತ್ತು ಸೆಕ್ಷನ್‌ 306ರ ಅಡಿ ಎಫ್‌ ಐಆರ್ ದಾಖಲಿಸಿದ ಹಾಗೂ ಸಾಮಾಜಿಕವಾಗಿ ಘೋರ-ಗಂಭೀರ ಸ್ವರೂಪದವು ಎನ್ನಬಹುದಾದ ಪ್ರಕರಣಗಳಲ್ಲಿ, ದೂರುದಾರರು ಹಾಗೂ ಆರೋಪಿಗಳು ಪರಸ್ಪರ ರಾಜಿ ಮಾಡಿಕೊಂಡ ಮಾತ್ರಕ್ಕೆ ವಿಚಾರಣೆಯನ್ನು ಅರ್ಧದಲ್ಲೇ ಕೈಬಿಡುವಂತಿಲ್ಲ. ಇದರಿಂದ, ಸಮಾಜಕ್ಕೂ ಅಪಾಯ ಉಂಟಾಗುತ್ತದೆ. ಮಾತ್ರವಲ್ಲ ಹಾಗೇ ವಿಚಾರಣೆ ಕೈಬಿಡುವುದು ಹೇಯ ಕೃತ್ಯಕ್ಕೂ ಸಮ ಎಂದು ಎಚ್ಚರಿಸಿದೆ. 

ʻತಮಗೆ ಸುಮಾರು ಎರಡು ಕೋಟಿ ರೂಪಾಯಿ ವಂಚಿಸಿದ್ದು, ಜೀವ ಬೆದರಿಕೆ ಹಾಕಿದ್ದಾರೆ. ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆʼ ಎಂದು ವ್ಯಕ್ತಿಯೊಬ್ಬರು ಅಪರಾಧ ದಂಡ ಸಂಹಿತೆಯ ಸೆಕ್ಷನ್ 482ರಡಿ ದೂರು ದಾಖಲಿಸಿದ್ದರು. ಆದರೆ, ದೂರುದಾರರು ಹಾಗೂ ಆರೋಪಿಗಳ ಮಧ್ಯೆ ರಾಜಿ ಒಪ್ಪಂದ ಏರ್ಪಟ್ಟಿದೆ ಎಂಬ ಹಿನ್ನೆಲೆಯಲ್ಲಿ ಗುಜರಾತ್‌ ಹೈಕೋರ್ಟ್, ಈ ಪ್ರಕರಣದ ವಿಚಾರಣೆಯನ್ನು ಅರ್ಧಕ್ಕೆ ಕೈಬಿಟ್ಟಿತ್ತು. ಹೈಕೋರ್ಟಿನ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ದೂರುದಾರನ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನೂ ಸಹ ಗುಜರಾತ್‌ ಹೈಕೋರ್ಟ್‌ ತಳ್ಳಿ ಹಾಕಿತ್ತು.  

ಸುಪ್ರೀಂಕೋರ್ಟ್‌ ಗಮನ 

ಆದರೆ, ದೂರುದಾರರು ಹಾಗೂ ಆರೋಪಿಗಳು ಪರಸ್ಪರ ರಾಜಿಮಾಡಿಕೊಂಡ ಮಾತ್ರಕ್ಕೆ ಸಾಮಾಜಿಕವಾಗಿ ಘೋರ ಹಾಗೂ ಗಂಭೀರ ಸ್ವರೂಪದ ಪ್ರಕರಣಗಳನ್ನು ಅರ್ಧಕ್ಕೆ ಕೈಬಿಡಬಹುದೆ? ಎಂಬ ಪ್ರಶ್ನೆಯ ಈ ಪ್ರಕರಣವು, ನ್ಯಾಯಾಂಗ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದು, ಸುಪ್ರೀಂಕೋರ್ಟ್‌ ಗಮನ ಸೆಳೆದಿತ್ತು. 

ನ್ಯಾಯಾಂಗದ ಮೇಲೆ ಅವಿಶ್ವಾಸ ಮೂಡಿಸುವ ಈ ಪ್ರಕರಣದ ಗಂಭೀರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ವಿ. ರಾಮಸುಬ್ರಮಣಿಯನ್‌ ಅವರಿದ್ದ ದ್ವಿಸದಸ್ಯ ಪೀಠ, ವ್ಯಕ್ತಿಗತ ಹಾಗೂ ಸಾಮಾಜಿಕವಾಗಿ ಹೇಯ ಎನಿಸುವ ಯಾವುದೇ ಪ್ರಕರಣಗಳನ್ನು ಕೈಬಿಡಲು, ದೂರುದಾರ ಮತ್ತು ಆರೋಪಿ ಮಧ್ಯೆ ಏರ್ಪಡುವ ಒಪ್ಪಂದ ಸಾಕಾಗದು. ಅವರಿಬ್ಬರು ಒಪ್ಪಿದ್ದಾರೆಂದು ತಿಳಿದು ಪ್ರಕರಣದ ವಿಚಾರಣೆ ಅರ್ಧಕ್ಕೆ ಕೈಬಿಡುವುದು ಹೇಯ ಕೃತ್ಯಕ್ಕೆ ಸಮವಾಗುತ್ತದೆ. ಸಮಾಜಕ್ಕೂ ಅಪಾಯವನ್ನುಂಟು ಮಾಡುತ್ತವೆ ಎಂದು ಎಚ್ಚರಿಸಿದೆ. 

ವ್ಯಕ್ತಿಗೆ ಜೀವ ಬೆದರಿಕೆ ಹಾಕುವುದು, ಆತ್ಮಹತ್ಯೆಗೆ ಪ್ರಚೋದಿಸುವುದು ಇತ್ಯಾದಿ… ಸಾಮಾಜಿಕವಾಗಿ ಗಂಭೀರ ಸ್ವರೂಪದ ಪ್ರಕರಣಗಳಾಗಿರುತ್ತವೆ. ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ ಇಂತಹ ಸಮಾಜ ವಿರೋಧಿ ಚಟುವಟಿಕೆಗಳನ್ನು ಕೇವಲ ದೂರುದಾರರು ಹಾಗೂ ಆರೋಪಿಗಳ ಪರಸ್ಪರ ಒಪ್ಪಂದಕ್ಕೆ ಸೀಮಿತಗೊಳಿಸಿ ಪ್ರಕರಣದ ವಿಚಾರಣೆಯನ್ನು ಕೈ ಬಿಡುವಂತಿಲ್ಲ. ತಾವು ದಾಖಲಿಸಿದ ದೂರನ್ನು ದೂರುದಾರರೂ ಸಹ ಹಿಂಪಡೆಯುವಂತಿಲ್ಲ ಎಂದೂ ಕೋರ್ಟ್‌ ಹೇಳಿದೆ.

ಒಂದು ಬಾರಿ ದೂರು ದಾಖಲಾದರೆ ಅಲ್ಲಿ ಸರ್ಕಾರದ ಜವಾಬ್ದಾರಿಯೂ ಬರುತ್ತದೆ. ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವುದು ಹಾಗೂ ಜನರಲ್ಲಿ ಜೀವ ಭಯ ಇಲ್ಲದಂತೆ ಅಭಯ ನೀಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ವಿಚಾರಣೆಯ ಪ್ರತಿ ಹಂತವನ್ನು ಗಮನಿಸುವುದಷ್ಟೇ ದೂರುದಾರನ ಕೆಲಸವೇ ಹೊರತು, ಬೇಕೆಂದಾಗ ಪ್ರಕರಣವನ್ನು ಹಿಂಪಡೆಯುವಂತಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.   

ನಿಮಗೆ ಏನು ಅನ್ನಿಸ್ತು?
0 ವೋಟ್