ರಾಜಸ್ಥಾನ| ಕುಡಿಯುವ ನೀರಿನ ಕೊಡ ಮುಟ್ಟಿದ್ದಕ್ಕೆ ಶಿಕ್ಷಕನಿಂದ ಹಲ್ಲೆ; ದಲಿತ ವಿದ್ಯಾರ್ಥಿ ಸಾವು

  • ಶಿಕ್ಷಕನ ಬಂಧನ; ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲು
  • ಜುಲೈ 20ರಂದು ನೀರಿನ ಕೊಡ ಮುಟ್ಟಿದ್ದಕ್ಕಾಗಿ ವಿದ್ಯಾರ್ಥಿಯನ್ನು ಥಳಿಸಿದ್ದ ಶಿಕ್ಷಕ

ದೇಶ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲಿ, ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿ ಅಮಾನುಷ ಕೃತ್ಯವೊಂದು ಜರುಗಿದೆ. ಸಂವಿಧಾನ, ಕಾನೂನುಗಳನ್ನು ಮೀರಿ ಇಂದಿಗೂ ಎಂಥ ಹೇಯ ಅಸ್ಪೃಶ್ಯತೆ ಆಚರಣೆಯಲ್ಲಿದೆ ಎಂಬುದನ್ನು ಆ ಘಟನೆ ಜಗಜ್ಜಾಹೀರು ಮಾಡಿದೆ.

ಕುಡಿಯುವ ನೀರಿನ ಕೊಡ ಮುಟ್ಟಿದ ಎಂಬ ಕಾರಣಕ್ಕೆ ರಾಜಸ್ಥಾನದ ಜಾಲೋರ್ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಿಂದ ತೀವ್ರವಾಗಿ ಥಳಿತಕ್ಕೆ ಒಳಗಾಗಿದ್ದ 9 ವರ್ಷದ ದಲಿತ ಬಾಲಕ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಶಿಕ್ಷಕ ಚೈಲ್ ಸಿಂಗ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಕೊಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜುಲೈ 20ರಂದು ಸುರಾನಾ ಗ್ರಾಮದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಇಂದ್ರ ಮೇಘವಾಲ್ ಕುಡಿಯುವ ನೀರಿನ ಕೊಡ ಮುಟ್ಟಿದ್ದಕ್ಕಾಗಿ ಆತನ ಮೇಲೆ ಅದೇ ಶಾಲೆಯ ಶಿಕ್ಷಕ ಚೈಲ್ ಸಿಂಗ್ ತೀವ್ರವಾಗಿ ಹಲ್ಲೆ ನಡೆಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವಿದ್ಯಾರ್ಥಿ ಮೇಘವಾಲ್ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಕೊನೆಯುಸಿರೆಳೆದಿದ್ದಾನೆ.

“ಬಾಲಕ ತೀವ್ರ ಥಳಿತಕ್ಕೊಳಗಾಗಿದ್ದ. ನೀರಿನ ಪಾತ್ರೆ ಮುಟ್ಟಿದ್ದೇ ಹಲ್ಲೆಗೆ ಕಾರಣವೇ ಎಂಬುದನ್ನು ತನಿಖೆ ನಡೆಸಬೇಕಾಗಿದೆ” ಎಂದು ಜಾಲೋರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರ್ವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ನಾವು ಶಿಕ್ಷಕ ಚೈಲ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಾಲಕನ ತಂದೆ ಕಣ್ಣೀರು

“ಹಲ್ಲೆಗೊಳಗಾಗಿದ್ದ ಬಾಲಕ ಮೇಘವಾಲ್‌ನ ಮುಖ ಮತ್ತು ಕಿವಿಯಲ್ಲಿ ಗಾಯಗಳಾಗಿತ್ತು. ಬಹುತೇಕ ಪ್ರಜ್ಞಾಹೀನನಾಗಿದ್ದ. ಆತನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಉದಯಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇಘವಾಲ್ ಸುಮಾರು ಒಂದು ವಾರದವರೆಗೆ ಉದಯಪುರದ ಆಸ್ಪತ್ರೆಯಲ್ಲಿದ್ದ. ಆದರೆ ಯಾವುದೇ ಚೇತರಿಕೆ ಕಾಣದ್ದರಿಂದ ನಾವು ಅಹಮದಾಬಾದ್‌ಗೆ ಕರೆದೊಯ್ದಿದ್ದೆವು. ಆದರೆ ಅಲ್ಲಿಯೂ ಅವನ ಸ್ಥಿತಿ ಸುಧಾರಿಸಲಿಲ್ಲ. ಅಂತಿಮವಾಗಿ ಶನಿವಾರ ಕೊನೆಯುಸಿರೆಳೆದಿದ್ದಾನೆ” ಎಂದು ಬಾಲಕನ ತಂದೆ ದೇವರಾಮ್ ಮೇಘವಾಲ್ ಕಣ್ಣೀರು ಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಅಪೌಷ್ಟಿಕತೆಗೆ ಬಲಿಯಾದ ಬುಡಕಟ್ಟು ಸಮುದಾಯದ ಬಾಲಕಿ

ವಿಚಾರಣಾ ಸಮಿತಿ ರಚನೆ

ಘಟನೆ ಕುರಿತು ತನಿಖೆ ನಡೆಸಿ ಬ್ಲಾಕ್ ಶಿಕ್ಷಣಾಧಿಕಾರಿಗೆ ವರದಿ ಸಲ್ಲಿಸುವಂತೆ ರಾಜ್ಯ ಶಿಕ್ಷಣ ಇಲಾಖೆಯು ಇಬ್ಬರು ಅಧಿಕಾರಿಗಳ ಸಮಿತಿ ರಚಿಸಿದೆ. ಜತೆಗೆ ಶಿಕ್ಷಣ ಇಲಾಖೆಯು ಪ್ರಕರಣದ ತನಿಖೆ ಪ್ರಾರಂಭಿಸಿದೆ. ರಾಜಸ್ಥಾನ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಖಿಲಾಡಿ ಲಾಲ್ ಬೈರ್ವಾ ಅವರು ತ್ವರಿತ ತನಿಖೆಗೆ ಆದೇಶಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್