ರಾಜಸ್ಥಾನ | ಮೇಲ್ಜಾತಿಯವರಿಗೆ ಮೀಸಲಿಟ್ಟ ನೀರು ಕುಡಿದಿದ್ದಕ್ಕೆ ದಲಿತ ವ್ಯಕ್ತಿಗೆ ರಾಡ್‌ನಿಂದ ಥಳಿತ

Dalit
  • ಕಿರಾಣಿ ಅಂಗಡಿ ಮುಂದೆ ಪಾತ್ರೆಯಲ್ಲಿ ಕುಡಿಯುವ ನೀರು ಇಡಲಾಗಿತ್ತು
  • ನಾಲ್ವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು; ಇಬ್ಬರು ಆರೋಪಿಗಳ ಬಂಧನ

ಮೇಲ್ವರ್ಗದ ಜನರಿಗೆ ಮೀಸಲಿಟ್ಟಿದ್ದ ಪಾತ್ರೆಯಲ್ಲಿ ನೀರು ಕುಡಿದಿದ್ದಕ್ಕಾಗಿ ದಲಿತ ವ್ಯಕ್ತಿಯನ್ನು ಯುವಕರ ಗುಂಪು ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಅಮಾನುಷವಾಗಿ ಥಳಿಸಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದಿದೆ.

ದಿಗ್ಗಾ ಗ್ರಾಮದಲ್ಲಿ ಈ ಅಸ್ಪೃಶ್ಯತಾ ಆಚರಣೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ ಎಂದು ಪೊಲೀಸ್ವರಿಷ್ಠಾಧಿಕಾರಿ ಭನ್ವರ್ ಸಿಂಗ್ ನಥಾವತ್ ತಿಳಿಸಿದ್ದಾರೆ.

ಮಂಗಳವಾರ ಸಂಜೆ ಚತುರ ರಾಮ್ ತನ್ನ ಪತ್ನಿಯೊಂದಿಗೆ ದಿಗ್ಗಾ ಗ್ರಾಮಕ್ಕೆ ಹೋಗುತ್ತಿದ್ದಾಗ ಕಿರಾಣಿ ಅಂಗಡಿಯೊಂದರ ಬಳಿ ಅಂಗಡಿಯ ಹೊರಗೆ ಇಟ್ಟಿದ್ದ ಪಾತ್ರೆಯಲ್ಲಿದ್ದ ನೀರು ಕುಡಿದಿದ್ದಾನೆ. ಬಳಿಕ ನಾಲ್ಕೈದು ಮಂದಿ ಆತನನ್ನು ನಿಂದಿಸಿದ್ದಾರೆ. ನೀರು ಕುಡಿದ ಕಾರಣಕ್ಕೆ ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಅದು ಮೇಲ್ಜಾತಿಯ ಜನರಿಗೆ ಮೀಸಲಿಟ್ಟಿರುವ ನೀರು ಅಲ್ಲಿ ಯಾಕೆ ನೀರು ಕುಡಿದೆ ಎಂದು ಹೇಳಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಘಟನೆಯಿಂದ ಚತುರ ರಾಮ್ ಅವರ ಒಂದು ಕಿವಿಯ ಹಿಂಭಾಗ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತ ವ್ಯಕ್ತಿಯ ದೂರು ಆಧಾರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಪೊನ್ನಂಪೇಟೆ: ವಸತಿ ಸೌಲಭ್ಯಕ್ಕಾಗಿ ಕೂಲಿ ಕಾರ್ಮಿಕರ ಒತ್ತಾಯ; ಪ್ರತಿಭಟನಾಕಾರರ ಮೇಲೆ ಕಾರ್ಯನಿರ್ವಾಹಕ ಅಧಿಕಾರಿ ದರ್ಪ

“ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಯುತ ತನಿಖೆ ಮಾಡಲಾಗುತ್ತಿದೆ. ಈಗಾಗಲೇ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ" ಎಂದಿದ್ದಾರೆ.

ಸಂತ್ರಸ್ತ ಚತುರ ರಾಮ್ ಮಾತನಾಡಿ, "ನೀರು ಕುಡಿಯುತ್ತಿದ್ದಂತೆ ಏಕಾಏಕಿ ಕೆಲವರು ಬಂದು ನನ್ನನ್ನು ಥಳಿಸಲು ಆರಂಭಿಸಿದರು. ನಾನು ಓಡಿಹೋಗಲು ಪ್ರಯತ್ನಿಸಿದೆ. ಆದರೆ, ಅವರು ನನ್ನನ್ನು ರಾಡಿನಿಂದ ಹೊಡೆದರು. ಇದರಿಂದಾಗಿ ನಾನು ಕೆಳಗೆ ಬಿದ್ದೆ. ದಾಳಿ ಮಾಡಿದವರು ಜಾತಿ ನಿಂದನೆ ಮಾಡಿದರು. ನನ್ನ ಕೂಗು ಕೇಳಿದ ನನ್ನ ಪತ್ನಿ ನನ್ನನ್ನು ರಕ್ಷಿಸಲು ಧಾವಿಸಿದಳು. ನಂತರ, ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ” ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್