ರಾಜಸ್ಥಾನ| ದಲಿತ ಶಿಕ್ಷಕಿಯ ಸಜೀವ ದಹನ ಪ್ರಕರಣ: ತನಿಖೆ ಆರಂಭಿಸಿದ ಪರಿಶಿಷ್ಟ ಜಾತಿಗಳ ಆಯೋಗ

  • ರಾಜಸ್ಥಾನದಲ್ಲಿ ನಡೆಯುತ್ತಿರುವ ಜಾತಿ ದೌರ್ಜನ್ಯಗಳ ಬಗ್ಗೆ ಆಯೋಗಕ್ಕೆ ನಿರಂತರ ದೂರು
  • ಶಿಕ್ಷಕನಿಂದ ಹತ್ಯೆಯಾದ ದಲಿತ ಬಾಲಕ ಇಂದ್ರ ಮೇಘವಾಲ್ ಪ್ರಕರಣದ ಬಗ್ಗೆಯೂ ತನಿಖೆ

ರಾಜಸ್ಥಾನದ ಜೈಪುರ ಜಿಲ್ಲೆಯ ರೈಸರ್ ಗ್ರಾಮದಲ್ಲಿ 32 ವರ್ಷದ ದಲಿತ ಶಿಕ್ಷಕಿಯನ್ನು ಸಜೀವ ದಹನ ಮಾಡಿದ ಘಟನೆಯ ಕುರಿತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು (ಎನ್‌ಸಿಎಸ್‌ಸಿ) ಶನಿವಾರದಿಂದ ತನಿಖೆ ಪ್ರಾರಂಭಿಸಿದೆ.

ಆಯೋಗದ ಮುಖ್ಯಸ್ಥ ವಿಜಯ್ ಸಂಪ್ಲಾ ರೈಸರ್ ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಕುರಿತು ಎನ್ಸಿಎಸ್ಸಿಯ ತನಿಖೆಯನ್ನು ಅಧಿಕೃತವಾಗಿ ಪ್ರಾರಂಭಿಸಿದರು. ಸಂಪ್ಲಾ ಅವರು ವಿಭಾಗೀಯ ಆಯುಕ್ತರು, ಜಿಲ್ಲಾ ಡೆಪ್ಯುಟಿ ಕಮಿಷನರ್ ಮತ್ತು ರಾಜಸ್ಥಾನ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಏಳು ಮಂದಿಯನ್ನು ಬಂಧಿಸಿದ್ದಾರೆ. 32 ವರ್ಷದ ಅನಿತಾ ರೇಗರ್ ಎಂಬಾಕೆ ಸುಮಾರು 2.5 ಲಕ್ಷ ಸಾಲ ನೀಡಿದ್ದರು. ಸಾಲ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಆಕೆಯ ಮೇಲೆ ಆಗಸ್ಟ್ 10 ರಂದು ಹಲ್ಲೆ ನಡೆಸಿ ಪೆಟ್ರೊಲ್ ಸುರಿದು ಬೆಂಕಿ ಹಾಕಲಾಗಿತ್ತು. ಶೇ. 70ರಷ್ಟು ಸುಟ್ಟುಹೋಗಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಆಗಸ್ಟ್ 16 ರಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

ಆಗಸ್ಟ್ 18ರಂದು ಆಯೋಗವು ರಾಜಸ್ಥಾನ ಪೊಲೀಸರು, ಜೈಪುರ ಪೊಲೀಸರು, ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಘಟನೆಯ ಬಗ್ಗೆ ಏಳು ದಿನಗಳಲ್ಲಿ ಕ್ರಮ ತೆಗೆದುಕೊಂಡ ವರದಿಯನ್ನು ನೀಡುವಂತೆ ಕೋರಿತ್ತು. ಘಟನೆಯ ಮಾಧ್ಯಮ ವರದಿಗಳನ್ನು ಆಯೋಗವು ಸ್ವಯಂಪ್ರೇರಿತವಾಗಿ ಸ್ವೀಕರಿಸಿದೆ ಮತ್ತು ಈ ವಿಷಯದ ಬಗ್ಗೆ ತನಿಖೆ, ವಿಚಾರಣೆ ಮಾಡಲು ನಿರ್ಧರಿಸಿದೆ ಎಂದು ನೋಟಿಸ್ ತಿಳಿಸಿದೆ.

ಕಳೆದ ವಾರದಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ದಲಿತರ ಮೇಲಿನ ಅಪರಾಧಗಳು ಅಥವಾ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ರಾಜಸ್ಥಾನದ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿತ್ತು. ಅದರಲ್ಲಿ ಮಡಕೆ ಮುಟ್ಟಿ ನೀರು ಕುಡಿದ ಕಾರಣಕ್ಕೆ ಶಿಕ್ಷಕನಿಂದ ಹತ್ಯೆಯಾದ ಒಂಬತ್ತು ವರ್ಷದ ದಲಿತ ಬಾಲಕನ ಪ್ರಕರಣವೂ ಸೇರಿತ್ತು.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ| ದಲಿತ ಯುವಕನಿಗೆ ಚಪ್ಪಲಿಯಿಂದ ಥಳಿಸಿದ ಗ್ರಾಮ ಪ್ರಧಾನ್‌

“ರಾಜಸ್ಥಾನದಲ್ಲಿ ನಡೆಯುತ್ತಿರುವ ಜಾತಿ ದೌರ್ಜನ್ಯಗಳ ಕುರಿತು ಆಯೋಗಕ್ಕೆ ದೂರವಾಣಿ ಮೂಲಕ ಸಾಕಷ್ಟು ದೂರುಗಳು ಬರುತ್ತಿವೆ. ಆಯೋಗವು ರಾಜಸ್ಥಾನ ರಾಜ್ಯಾದ್ಯಂತ ಸಮೀಕ್ಷೆ ನಡೆಸಲು ತಯಾರಿ ನಡೆಸುತ್ತಿದೆ. ಇದು ದೌರ್ಜನ್ಯ ತಡೆ, ದೌರ್ಜನ್ಯಕ್ಕೆ ಒಳಗಾದವರಿಗೆ ಪರಿಹಾರ ಪಾವತಿ, ಸಫಾಯಿ ಕರ್ಮಾಚಾರಿ ನಿರ್ಮೂಲನೆ ಬಗ್ಗೆ ತೆಗೆದುಕೊಂಡ ಕ್ರಮ ಇತ್ಯಾದಿಗಳ ಬಗ್ಗೆ ವಿವರವಾದ ವಿಚಾರಣೆಯನ್ನು ಒಳಗೊಂಡಿದೆ. ಪರಿಶಿಷ್ಟ ಜಾತಿಯವರ ಕಲ್ಯಾಣಕ್ಕಾಗಿ ಉದ್ದೇಶಿಸಿರುವ ಯೋಜನೆಗಳ ಒಳಹೊಕ್ಕು ನೋಡಲಾಗುತ್ತದೆ. ಆಗಸ್ಟ್ 24 ಮತ್ತು 25ರವರೆಗೆ ಪರಿಶೀಲನೆ ನಡೆಸಲಾಗುವುದು” ಎಂದು ವಿಜಯ್ ಸಂಪ್ಲಾ ಹೇಳಿದ್ದಾರೆ.

ದಿ ಹಿಂದೂ ಪತ್ರಿಕೆ ಮಾಹಿತಿ ಆಧಾರಿತ ವರದಿ.
ನಿಮಗೆ ಏನು ಅನ್ನಿಸ್ತು?
0 ವೋಟ್