ರಾಜಸ್ಥಾನ | ಹಲ್ಲೆಗೆ ಒಳಗಾಗಿ ರಸ್ತೆ ಬದಿ ನರಳಾಡಿದ ಬುಡಕಟ್ಟು ಯುವಕ

  • ಕಾಲುಗಳ ಮೇಲೆ ಕಾರು ಹತ್ತಿಸಿದ ದುಷ್ಕರ್ಮಿಗಳು
  • ಆರೋಪಿಗಳ ವಿರುದ್ಧ ಎಸ್‌ಸಿ-ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ 

ಬುಡಕಟ್ಟು ಸಮುದಾಯದ ಯುವಕನ ಮೇಲೆ ಕೊಡಲಿ, ಕತ್ತಿ ಹಾಗೂ ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಳಿಕ ಆತನ ಎರಡು ಕಾಲುಗಳ ಮೇಲೆ ಕಾರು ಹತ್ತಿಸಿರುವ ಹೃದಯ ವಿದ್ರಾವಕ ಘಟನೆ ರಾಜಸ್ತಾನದಲ್ಲಿ ನಡೆದಿದೆ.

ರಾಜಸ್ತಾನದ ಉದಯಪುರ ಜಿಲ್ಲೆಯ ಬದ್ಗಾಂವ್ ಪ್ರದೇಶದ ನಿವಾಸಿ ಪ್ರಕಾಶ ಗಮೇಟಿ ಹಲ್ಲೆಗೆ ಒಳಗಾದ ಬುಡಕಟ್ಟು ವ್ಯಕ್ತಿ. ನೆಲದ ಮೇಲೆಯೇ ಯುವಕ ಬಿದ್ದು ನರಳಾಡುವ ದೃಶ್ಯಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬುಡಕಟ್ಟು ಯುವಕ ಪ್ರಕಾಶ್‌ನನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು, ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆಯಿಂದ ಪ್ರಕಾಶ್ ಅವರ ಎರಡೂ ಕಾಲುಗಳಿಗೆ ಗಂಭೀರವಾಗಿ ಪೆಟ್ಟಾಗಿದ್ದು, ಉದಯಪುರದ ಮೇವಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಆರೋಪಿಗಳ ವಿರುದ್ಧ ಉದಯಪುರದ ಸುಖೇರ್ ಪೊಲೀಸ್ ಠಾಣೆಯಲ್ಲಿ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಹಾಸನ| ಭಜರಂಗದಳದಿಂದ ಅಂಬೇಡ್ಕರ್ ಅವಹೇಳನ; ಸೆ.15ಕ್ಕೆ ಬೃಹತ್ ಪ್ರತಿಭಟನೆ

ಘಟನೆ ಕುರಿತು ಮಾತನಾಡಿರುವ ಸುಖೇರ್ ಪೊಲೀಸ್ ಠಾಣೆಯ ಎಸ್ಐ ರೋಷನ್ ಲಾಲ್, “ಪ್ರಕಾಶ್ ಗಮೇಟಿ ಮತ್ತು ವಿಜಯ್ ಸಿಂಗ್-ನರೇಂದ್ರ ಸಿಂಗ್ ನಡುವೆ ಹಳೆಯ ವಿವಾದವಿತ್ತು. ಜಮೀನಿನ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಹಳೆ ದ್ವೇಷವಿತ್ತು. ಈ ಹಿನ್ನೆಲೆ ಬಿಎಸ್ಎಫ್ ಶಿಬಿರದ ಬಳಿ ಪ್ರಕಾಶ್ ಕಾಣಿಸಿಕೊಂಡಿದ್ದಾನೆ. ಆಗ ಪ್ರಕಾಶ್ ಮೇಲೆ ಹಲ್ಲೆ ನಡೆಸಿ ಗಾಯಾಳುವನ್ನು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ” ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180