ಮದುವೆಗೆ ಕುದುರೆ ಮೇಲೆ ಮೆರವಣಿಗೆ ಹೋದ ಮೇಘವಾಲ್ ಸಮುದಾಯಕ್ಕೆ ಬಹಿಷ್ಕಾರ

Rajasthan
  • ಪಡಿತರ, ನೀರು ನೀಡದೇ ಬಹಿಷ್ಕರಿಸಿದ ಅಲೋಡ್‌ ಗ್ರಾಮಸ್ಥರು
  • ಅಧಿಕಾರಿಗಳ ಮಧ್ಯಸ್ಥಿಕೆ ಬಳಿಕ ಯಥಾ ಸ್ಥಿತಿಗೆ ಮರಳಿದೆ ಎನ್ನುವ ವರದಿ

ಮದುವೆಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮೇಘವಾಲ್ ಸಮುದಾಯದ ವರನೊಬ್ಬ ಕುದುರೆ ಸವಾರಿ ಮಾಡಿ ದೇಗುಲ ಪ್ರವೇಶ ಮಾಡಿದ ಕಾರಣಕ್ಕೆ ಇಡೀ ಸಮುದಾಯವನ್ನು ಬಹಿಷ್ಕರಿಸಿದ ಘಟನೆ ರಾಜಸ್ಥಾನದ ಗ್ರಾಮವೊಂದರಲ್ಲಿ ನಡೆದಿದೆ. 

ಚಿತ್ತೋರ್‌ಗಢ್ ಜಿಲ್ಲೆಯ ಡುಂಗ್ಲಾದಲ್ಲಿರುವ ಅಲೋಡ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಕ್ಕೆ ಸೇರಿದ ಮೇಘವಾಲ್ ಸಮುದಾಯದವರಿಗೆ ಪಡಿತರ ಮತ್ತು ನೀರು ಪೂರೈಕೆಯಲ್ಲಿ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಲಾಗಿದೆ.

ಈ ವಿಚಾರವಾಗಿ ಮಾತನಾಡಿದ ಮೂಕ್ನಾಯಕ್ ವರ ಭೇರೂಲಾಲ್, “ಏಪ್ರಿಲ್ 19ರಂದು ನನ್ನ ಮದುವೆ ಮೆರವಣಿಗೆಯಲ್ಲಿ (ಬಿಂದೋರಿ) ಕುದುರೆ ಸವಾರಿ ಮಾಡುವುದಾಗಿ ನಾವು ಆಡಳಿತಕ್ಕೆ ಮನವಿ ಮಾಡಿದ್ದೆವು. ಆಗ ಇದರಿಂದ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ ಗ್ರಾಮಸ್ಥರು ಸಡಗರದಿಂದ ಮದುವೆ ಮೆರವಣಿಗೆ ನಡೆಸೋಣ ಎಂದು ಆಡಳಿತಕ್ಕೆ ತಿಳಿಸಿದ್ದರು" ಎಂದು ವಿವರಿಸಿದ್ದಾರೆ. 

ಇದಾದ ನಂತರ, ಬಿಂದೋರಿಯು ಯಾವುದೇ ಅಡ್ಡಿಯಿಲ್ಲದೆ ಸಾಗಿತು ಮತ್ತು ವಿವಾಹ ಸಹ ವಿಜೃಂಭಣೆಯಿಂದ ಮತ್ತು ವಿಧಿವತ್ತಾಗಿ ಆಚರಿಸಲಾಯಿತು. ಆದರೆ ಏಪ್ರಿಲ್ 22ರ ರಾತ್ರಿ, ಮೇಘವಾಲ್ ಸಮುದಾಯವನ್ನು ಹೊರತುಪಡಿಸಿ ಗ್ರಾಮದ ಜನರು ಸ್ಥಳವೊಂದರಲ್ಲಿ ರಹಸ್ಯ ಸಭೆ ನಡೆಸಿ, ಸಂಪೂರ್ಣ ಗ್ರಾಮದ ಮೇಘವಾಲ್ ಸಮುದಾಯವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಯಾರಾದರೂ ಆ ಸಮುದಾಯದವರೊಂದಿಗೆ ಮಾತನಾಡಿದರೆ ಅಥವಾ ಅವರಿಗೆ ಪಡಿತರ, ನೀರು ಅಥವಾ ಹಾಲು ನೀಡುವುದು ಕಂಡು ಬಂದರೆ ಅವರು 51,000 ದಂಡ ಪಾವತಿಸಬೇಕಾಗುತ್ತದೆ ಎಂದು ನಿರ್ಣಯಿಸಿದ್ದಾರೆ.

"ನಾವು ಕಿರಾಣಿ [ದಿನಸಿ] ಅಂಗಡಿಗೆ ಹೋದಾಗ, ಅವರು ವಸ್ತುಗಳಿಲ್ಲ ಎಂದು ನಮಗೆ ಹೇಳುತ್ತಾರೆ" ಎಂದು ಭೇರೂಲಾಲ್ ಚಿಂತೆ ವ್ಯಕ್ತಪಡಿಸಿದ್ದಾರೆ.

“ಸಹಕಾರಿ ಹಾಲಿನ ಡೈರಿಯಲ್ಲಿ  ನಮಗೆ ಹಾಲು ಕೊಡುವುದಿಲ್ಲ ಅಥವಾ ನಮ್ಮಿಂದ ಹಾಲು ತೆಗೆದುಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಆಡಳಿತ ಮಂಡಳಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿದ್ದೀರಾ:? ಸ್ಟಾರ್‌ 9 ಮೊಬಿಲಿಟಿಗೆ ಪವನ್ ಹ್ಯಾನ್ಸ್ ಮಾರಾಟ; ಅನುಮಾನಾಸ್ಪದ ಎಂದ ವಿಪಕ್ಷ 

ನಂತರ ಮೂಕ್ನಾಯಕ್ ಭೇರೂಲಾಲ್ ಅವರು ಡುಂಗ್ಲಾ ಉಪ ವಿಭಾಗಾಧಿಕಾರಿ ಮೊಹರ್ ಸಿಂಗ್ ಮೀನಾ ಅವರನ್ನು ಸಂಪರ್ಕಿಸಿದರು. "ಅಲೋಡ್ ಗ್ರಾಮದ ಜನರು ನಮ್ಮ ಸಮುದಾಯವನ್ನು ಬಹಿಷ್ಕರಿಸಿದ್ದಾರೆ. ಪಡಿತರ ಮತ್ತು ನೀರು ನೀಡದೇ ಸತಾಯಿಸುತ್ತಿದ್ದಾರೆ" ಎಂದು ಆಡಳಿತಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ತಕ್ಷಣ ಗ್ರಾಮದ ಜನರೊಂದಿಗೆ ಆಡಳಿತ ಸಿಬ್ಬಂದಿ ಮಾತನಾಡಿದ್ದಾರೆ.

"ನಾವು ಅಹಿರ್ ಸಮುದಾಯದ ಪ್ರತಿನಿಧಿಯೊಂದಿಗೆ ಮಾತನಾಡಿದಾಗ, ಅವರು ಇಂಥ ಯಾವುದೇ ಬಹಿಷ್ಕಾರ ಹಾಕಿರುವುದನ್ನು ನಿರಾಕರಿಸಿದರು. ನಾವು ಇಡೀ ಗ್ರಾಮದ ಜನರನ್ನು ಒಂದಾಗಿರುವಂತೆ ಕೇಳಿಕೊಂಡಿದ್ದೇವೆ. ಗ್ರಾಮದ ವಾತಾವರಣ ಹಾಳು ಮಾಡಬಾರದು ಎಂದು ಅವರಿಗೆ ತಿಳಿಸಿದ್ದೇವೆ" ಎಂದು ಜಿಲ್ಲಾಡಳಿತ ಹೇಳಿದೆ.

"ಇಂಥ ಘಟನೆಗಳಿಂದ ಗ್ರಾಮಕ್ಕೆ ಕೆಟ್ಟ ಹೆಸರು ಬರುತ್ತದೆ. ಜನರು [ನಿಲ್ಲಿಸಲು] ಒಪ್ಪದಿದ್ದರೆ ಎಫ್ಐಆರ್ ದಾಖಲಿಸಬೇಕಾಗುತ್ತದೆ" ಎಂದರು.

ಈ ವಿಷಯದ ಬಗ್ಗೆ ಜಿಲ್ಲಾಡಳಿತದ ದೃಢವಾದ ನಿಲುವು ಗಮನಿಸಿದ ಗ್ರಾಮಸ್ಥರು, ಭವಿಷ್ಯದಲ್ಲಿ ಇಂತಹ ಘಟನೆ ನಡೆಯದೆಂದು ಆಡಳಿತಕ್ಕೆ ಭರವಸೆ ನೀಡಿದ್ದಾರೆ. ನಂತರ ಗ್ರಾಮ ಹಿಂದಿನಂತೆಯೇ ನಡೆದುಕೊಳ್ಳಲು ಆರಂಭಿಸಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿದೆ. 

ಸಾಮಾಜಿಕ ಸಂಘಟನೆಗಳು ಗ್ರಾಮಕ್ಕೆ ಭೇಟಿ ನೀಡಿವೆ. ಸೋಮವಾರ ಭೀಮ್ ಆರ್ಮಿ ರಾಜ್ಯ ಮುಖಂಡರು ಭೇಟಿ ನೀಡಿ ಮೇಘವಾಲ್ ಸಮುದಾಯದವರೊಂದಿಗೆ ಮಾತುಕತೆ ನಡೆಸಿವೆ.  

ಉಪ ಪೊಲೀಸ್ ವರಿಷ್ಠಾಧಿಕಾರಿ ಬದಿ ಸದ್ರಿ, ಉಪ ವಿಭಾಗಾಧಿಕಾರಿ ಡಂಗ್ಲಾನ್ ಅವರನ್ನು ಭೇಟಿಯಾದ ಸಾಮಾಜಿಕ ಕಾರ್ಯಕರ್ತರು ಮೇಘವಾಲ್ ಸಮುದಾಯದ ಸಮಸ್ಯೆಯ ಬಗ್ಗೆ ಸೂಕ್ತ ಕ್ರಮಕ್ಕಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್