ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಲ್ಲೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಇಲ್ಲ ಕಡಿವಾಣ!

dalit atrocity cases

ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿ ಕಳೆದ ವಾರ ಸವರ್ಣೀಯ ಶಿಕ್ಷಕನಿಗೆ ಮೀಸಲಿರಿಸಿದ್ದ ಪಾತ್ರೆಯಿಂದ ನೀರು ಕುಡಿದ ಕಾರಣಕ್ಕೆ 9 ವರ್ಷದ ಬಾಲಕನನ್ನು ಅಮಾನುಷವಾಗಿ ಥಳಿಸಿ ಕೊಲ್ಲಲಾಗಿತ್ತು. ಈ ಘಟನೆ ಬೆಳಕಿಗೆ ಬಂದ ಎರಡೇ ದಿನಕ್ಕೆ ಅದೇ ರಾಜಸ್ಥಾನದಲ್ಲಿ ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ದಲಿತ ಶಿಕ್ಷಕಿಯನ್ನು ಸಜೀವ ದಹನ ಮಾಡಲಾಗಿದೆ.

ದೂರದ ರಾಜಸ್ಥಾನ ಕಥೆ ಬಿಡಿ. ಕರ್ನಾಟಕದಲ್ಲೇ ಇಂತಹ ಸಾಲು- ಸಾಲು ದಲಿತ ಹತ್ಯೆಗಳು ಸಾಮಾನ್ಯವೆಂಬಂತೆ ನಡೆದುಬಿಡುತ್ತಿವೆ. 27 ಆಗಸ್ಟ್ 2020ರಂದು ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೂದಿಗಾಳ ಗ್ರಾಮದ ಪರಿಶಿಷ್ಟ ಜಾತಿಯ ಯುವಕ ಅನಿಲ ಇಂಗಳಗಿಯನ್ನು ಅಮಾನುಷವಾಗಿ ಕೊಲ್ಲಲಾಗಿತ್ತು. ಇಷ್ಟಕ್ಕೂ ಅನಿಲ ಕೊಲೆಗೀಡಾಗುವಷ್ಟರ ಮಟ್ಟಿಗೆ ಮಾಡಿದ ತಪ್ಪಾದರೂ ಏನು ಗೊತ್ತಾ? ದೇವಾಲಯದ ಕಟ್ಟೆಯ ಮೇಲೆ ಮೇಲ್ಜಾತಿ ಜನರಿಗೆ ಸರಿಸಮಾನವಾಗಿ ಕುಳಿತದ್ದು.

ತೀರಾ ಇತ್ತೀಚೆಗೆ 2022 ಏಪ್ರಿಲ್ 21ರಂದು ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಬೈಕ್ ಕದ್ದ ಆರೋಪದಲ್ಲಿ ಇಬ್ಬರು ದಲಿತ ಯುವಕರನ್ನು ಕೊಲ್ಲಲಾಗಿತ್ತು. ತಡರಾತ್ರಿ ದಲಿತ ಯುವಕರನ್ನು ಮನೆಯಿಂದ ಕರೆದುಕೊಂಡು ಹೋಗಿದ್ದ ಸವರ್ಣೀಯರು ಅವರನ್ನು ಅಮಾನುಷವಾಗಿ ಕೊಂದು ಕೆರೆಗೆ ಎಸೆದಿದ್ದರು. 

ಅಸಲಿಗೆ ದಲಿತರು ಎಂಬ ಕಾರಣಕ್ಕೆ ದೇಶ-ರಾಜ್ಯದಲ್ಲಿ ಹೀಗೆ ನಿರ್ದಯವಾಗಿ ಕೊಲೆಗೀಡಾಗುತ್ತಿರುವ ಮೊದಲ ಜೀವ ಇದಲ್ಲ. ಭಾಗಶಃ ಇದೇ ಕೊನೆಯೂ ಅಲ್ಲವೇನೋ?

Image
dalit atrocity cases ncrb 1

ಇನ್ನು ಕೊಪ್ಪಳದ ʼವಿನಯʼ ಎಂಬ ದಲಿತ ಬಾಲಕನನ್ನು ದಲಿತ ಎಂಬ ಕಾರಣಕ್ಕೆ ದೇವಾಲಯದಿಂದ ಹೊರದಬ್ಬಲಾಗಿತ್ತು. ಈ ವಿಚಾರ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದು ಮತ್ತು ಅಸ್ಪೃಶ್ಯತೆ ನಿವಾರಣೆಗಾಗಿ ಸರ್ಕಾರ ನೆಪ ಮಾತ್ರಕ್ಕೆ ʼವಿನಯ ಸಾಮರಸ್ಯʼ ಎಂಬ ಯೋಜನೆಯನ್ನು ಜಾರಿಗೆ ತಂದು ಕೈತೊಳೆದುಕೊಂಡದ್ದು ಇಂದು ಇತಿಹಾಸ.

ಭಾರತದಲ್ಲಿ ಹೀಗೆ ದಲಿತರ ಹತ್ಯೆಗಳಾಗುವುದು ಮತ್ತು ದಲಿತ ಎಂಬ ಕಾರಣಕ್ಕೆ ಸಮಾಜದ ಎದುರು ಅವಮಾನಿತನಾಗುವುದು ಸಹಜ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರತಿವರ್ಷ ದಲಿತರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಹತ್ಯೆ ಪ್ರಮಾಣವೆಷ್ಟು? ದಲಿತ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಅತ್ಯಾಚಾರ ಪ್ರಕರಣಗಳೆಷ್ಟು? ಯಾವ-ಯಾವ ರಾಜ್ಯದಲ್ಲಿ ದಲಿತರ ಮೇಲೆ ಅತಿಹೆಚ್ಚು ದೌರ್ಜನ್ಯಗಳಾಗುತ್ತಿವೆ? ಈ ಪೈಕಿ ಎಷ್ಟು ಪ್ರಕರಣಗಳು ದಾಖಲಾಗಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ? ತನಿಖೆಯೇ ನಡೆಯದೆ ಹಾದಿ ತಪ್ಪಿದ ಪ್ರಕರಣಗಳ ಸಂಖ್ಯೆ ಎಷ್ಟು? ಎಂಬ ವಿವರಗಳನ್ನು ಕೆದಕುತ್ತಾ ಹೋದಂತೆ ಸರ್ಕಾರದ ಸಂಸ್ಥೆಯೇ ನೀಡುವ ಅಂಕಿಅಂಶಗಳು ಬೆಚ್ಚಿಬೀಳಿಸುತ್ತವೆ.

ವರ್ಷವೊಂದಕ್ಕೆ ದಲಿತರ ಮೇಲಾಗುವ ದೌರ್ಜನ್ಯ ಎಷ್ಟು ಗೊತ್ತಾ?

ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್‌ಸಿಆರ್‍‌ಬಿ ) ನೀಡುವ ಅಂಕಿಅಂಶಗಳ ಪ್ರಕಾರ 2017-18ರಲ್ಲಿ ದಲಿತರ ಮೇಲೆ ಎಸಗಲಾಗಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಭಾರತದಾದ್ಯಂತ ದಾಖಲಾಗಿರುವ ಅಪರಾಧ ಪ್ರಕರಣಗಳ ಸಂಖ್ಯೆ 5,775. ಈ ಪೈಕಿ 3,172 (ಶೇ.55) ರಷ್ಟು ಪ್ರಕರಣಗಳು ಉದ್ದೇಶಪೂರ್ವಕವಾಗಿ ಅವಮಾನಿಸಿದ ಹಾಗೂ ಬೆದರಿಸಿ ದೈಹಿಕವಾಗಿ ಹಲ್ಲೆ ನಡೆಸಿದ ಪ್ರಕರಣಗಳಾಗಿವೆ.

ಇದಲ್ಲದೆ, 47 ಭೂ ಕಬಳಿಕೆ, 63 ಸಾಮಾಜಿಕ ಬಹಿಷ್ಕಾರ ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕ ಸ್ಥಳಗಳನ್ನು ಬಳಸಬಾರದು ಎಂಬ ಕಾರಣಕ್ಕೆ ಹಲ್ಲೆಯಾದ ಸುಮಾರು 12 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಕರ್ನಾಟಕದಲ್ಲೇ. ರಾಜ್ಯದಲ್ಲಿ 1,175 ಪ್ರಕರಣಗಳು ದಾಖಲಾಗಿದ್ದರೆ, ಎರಡನೇ ಸ್ಥಾನದಲ್ಲಿರುವ ಉತ್ತರಪ್ರದೇಶದಲ್ಲಿ 804 ಪ್ರಕರಣಗಳು ದಾಖಲಾಗಿವೆ.

ಇದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯಾದರೆ, ಇನ್ನೂ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಬರೋಬ್ಬರಿ 43,203. ಈ ಸಂಖ್ಯೆ 2016-17ಕ್ಕಿಂತ ಶೇ.6ರಷ್ಟು ಅಧಿಕ.

ಇನ್ನೂ 2018-19ರಲ್ಲಿ ಪರಿಶಿಷ್ಟ ಜಾತಿಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ಒಟ್ಟು 45,935 ಪ್ರಕರಣಗಳು ದಾಖಲಾಗಿದೆ. ಆದರೆ, ಇಷ್ಟು ಪ್ರಮಾಣದ ಪ್ರಕರಣಗಳ ಪೈಕಿ ತನಿಖೆಗೆ ಒಳಗಾಗಿರುವ ಮತ್ತು ಶಿಕ್ಷೆಯಾಗಿರುವ ಪ್ರಕರಣಗಳ ಸಂಖ್ಯೆ ಕೇವಲ ಶೇ.23ರಷ್ಟು ಮಾತ್ರ ಎನ್ನುತ್ತಿವೆ ಅಂಕಿಅಂಶಗಳು.

ಕೊಲೆ-ಅತ್ಯಾಚಾರಕ್ಕೀಡಾಗುವ ದಲಿತರ ಸಂಖ್ಯೆ ಎಷ್ಟು ಗೊತ್ತಾ?

ಭಾರತ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಕಳೆದ ದಶಕದಲ್ಲಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ 2007-17ರ ನಡುವಣ ಹತ್ತು ವರ್ಷಗಳ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಪ್ರಮಾಣ ಶೇ.66ರಷ್ಟು ಹೆಚ್ಚಾಗಿದೆ. ಪ್ರತಿನಿತ್ಯ 16 ನಿಮಿಷಕ್ಕೊಮ್ಮೆ ದಲಿತರ ವಿರುದ್ಧ ದೌರ್ಜನ್ಯ ನಡೆಸಲಾಗುತ್ತಿದೆ. ಪ್ರತೀ ವಾರಕ್ಕೆ 13 ದಲಿತರು ಮೇಲ್ಜಾತಿಯವರಿಂದ ಕೊಲೆಗೀಡಾಗುತ್ತಿದ್ದಾರೆ.

Image
ncrb  2

ದೇಶದಲ್ಲಿ ನಿತ್ಯ ಸರಾಸರಿ ಆರು ಮಂದಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. 2012ರ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣ ಇಡೀ ಭಾರತದ ಗಮನ ಸೆಳೆದಿತ್ತು. ದೊಡ್ಡ ಮಟ್ಟದ ಹೋರಾಟಕ್ಕೆ ಕಾರಣವಾಗಿ ಕೊನೆಗೆ ಅಪರಾಧಿಗಳನ್ನು ಪತ್ತೆಹಚ್ಚಿ ಅವರಿಗೆ ಗಲ್ಲುಶಿಕ್ಷೆಯನ್ನೂ ನೀಡಲಾಗಿತ್ತು.

ಆದರೆ, ಅದೇ ವರ್ಷ ಭಾರತದಲ್ಲಿ ಸುಮಾರು 1,574 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿತ್ತು. 651 ದಲಿತರ ಕೊಲೆಯಾಗಿತ್ತು. ಇದಲ್ಲದೆ ದಲಿತರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದಂತಹ ಹೇಯ ಕೃತ್ಯಗಳೂ ಸಹ ದಾಖಲಾಗಿವೆ. ಆದರೆ, ಇಂತಹ ಹೀನ ಅಪರಾಧಗಳಲ್ಲಿ ಭಾಗಿಯಾದ ಎಷ್ಟು ಜನರಿಗೆ ಶಿಕ್ಷೆಯಾಗಿದೆ ಎಂದು ಹುಡುಕುತ್ತಾ ಹೊರಟರೆ ಫಲಿತಾಂಶ ಮಾತ್ರ ಕಡಿಮೆಯಲ್ಲಿ ಕಡಿಮೆ.

ಕರ್ನಾಟಕದ ಅಂಕಿಸಂಖ್ಯೆ ಏನು?

‘ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯಿದೆ’ ಅನುಷ್ಠಾನದ 2019ರ ವಾರ್ಷಿಕ ರಾಜ್ಯ ವರದಿ ಪ್ರಕಾರ ಕರ್ನಾಟಕದಲ್ಲಿ ಪ್ರತಿ ಐದು ದಿನಕ್ಕೊಬ್ಬ ದಲಿತ ವ್ಯಕ್ತಿಯ ಕೊಲೆಯಾದರೆ, ಎರಡು ದಿನಕ್ಕೊಂದು ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಆದರೆ ಶಿಕ್ಷೆಯಾಗುತ್ತಿರುವ ಆರೋಪಿಗಳ ಪ್ರಮಾಣ ಬೆರಳೆಣಿಕೆ ಮಾತ್ರ ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣ ಶೇ.11.92ರಷ್ಟು ಹೆಚ್ಚಾಗಿವೆ. ಆದರೆ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕೇವಲ ಶೇ.3.79ರಷ್ಟು ಮಾತ್ರ. ಇತ್ತೀಚಿನ ವರ್ಷಗಳಲ್ಲಿ ಕೊಲೆ ಯತ್ನದ ಪ್ರಕರಣಗಳು ಕಡಿಮೆಯಾದರೂ, ಅತ್ಯಾಚಾರದ ಪ್ರಕರಣಗಳು ಮಾತ್ರ ಹೆಚ್ಚಾಗುತ್ತಲೇ ಇವೆ.

ಕಳೆದ ವರ್ಷ 2,140 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಕೇವಲ 121 ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ. ಉಳಿದವು ಇತ್ಯರ್ಥವಾಗಿಲ್ಲ. 375 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ.29.57ರಷ್ಟು ಹೆಚ್ಚಾಗಿವೆ. ಬೆಂಗಳೂರು ನಗರದಲ್ಲಿಯೇ ಹೆಚ್ಚು ದೌರ್ಜನ್ಯಗಳು ದಾಖಲಾಗಿವೆ ಎನ್ನುತ್ತಿವೆ ಅಂಕಿಅಂಶಗಳು.

ಈ ಎಲ್ಲವೂ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳ ಮಾಹಿತಿಯನ್ನು ಆಧರಿಸಿ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ನೀಡುವ ಅಂಕಿಅಂಶಗಳು. ಇನ್ನು ಈ ದೇಶ ಹಲವು ರಾಜ್ಯಗಳ ಅನೇಕ ಕುಗ್ರಾಮಗಳಲ್ಲಿ ಹೆಣ್ಣುಮಕ್ಕಳ ಮೇಲಾಗುವ ಅತ್ಯಾಚಾರ ಕೊಲೆಗಳು ಅಲ್ಲಲ್ಲಿ ಪಂಚಾಯಿತಿ ಕಟ್ಟೆಗಳಲ್ಲೇ ಸದ್ದಿಲ್ಲದೆ ಬಗೆಹರಿದುಬಿಡುತ್ತವೆ. ಅಂದರೆ ಸಂತ್ರಸ್ತರ ದನಿಯನ್ನು ಅಡಗಿಸಿ ಮೌನವಾಗಿಸಲಾಗುತ್ತಿದೆ. ದಾಖಲಾಗುವ ಪ್ರಕರಣಗಳ ಸಂಖ್ಯೆಗಿಂತ ಹೀಗೆ ದಾಖಲಾಗದೆ ಉಳಿದ ಸಂಖ್ಯೆಯೇ ಹೆಚ್ಚು ಎನ್ನಲಾಗುತ್ತಿದೆ.

ಇದಕ್ಕೆ ಪೂರಕ ಎಂಬಂತೆ ನ್ಯಾಷನಲ್ ಕ್ಯಾಂಪೇನ್ ಫಾರ್ ದಲಿತ್ ಹ್ಯೂಮನ್ (ಎನ್ಸಿಡಿಎಚ್ಆರ್) ಪ್ರಕಟಿಸಿರುವ ‘Access to Justice for Dalits in India’ ಎಂಬ ಶೀರ್ಷಿಕೆಯ ವರದಿಯಲ್ಲಿ ಅನೇಕ ಆಘಾತಕಾರಿ ಅಂಶಗಳನ್ನು ಹೊರಗೆಡಹಲಾಗಿದೆ. “ತಳಸಮುದಾಯಗಳ ಸಂತ್ರಸ್ತರು ತಮ್ಮ ವಿರುದ್ಧ ನಡೆಯುವ ದೌರ್ಜನ್ಯಗಳ ದೂರುಗಳು ಪೊಲೀಸರವರೆಗೂ ಬರುವುದಿಲ್ಲ. ಬದಲಾಗಿ ದೂರು ಕೊಡದಂತೆ ಬೆದರಿಕೆ ಹಾಕುವುದು, ರಾಜಿ ಮಾಡಿಸಲಾಗುತ್ತಿದೆ” ಎಂದು ಈ ವರದಿಯಲ್ಲಿ ಉಲ್ಲೇಖಿಸಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಒಂದು ಕಡೆ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಾ ಜನ ನಾಯಕರು ನಾರಿಶಕ್ತಿ ಮತ್ತು ದುರ್ಬಲ ವರ್ಗಗಳ ಪರ ಭಾಷಣ ಬಿಗಿಯುತ್ತಿದ್ದರೆ, ದಲಿತರು ಮತ್ತು ದಲಿತ ಮಹಿಳೆಯರ ಮೇಲಿನ ದಬ್ಬಾಳಿಕೆ ಮತ್ತು ದೌರ್ಜನ್ಯಗಳು ಮಾತ್ರ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇವೆ ಎನ್ನುತ್ತವೆ ಎನ್‌ ಸಿಆರ್‌ ಬಿ ಸೇರಿದಂತೆ ವಿವಿಧ ಮೂಲಗಳ ಅಂಕಿಅಂಶಗಳು. 

ನಿಮಗೆ ಏನು ಅನ್ನಿಸ್ತು?
3 ವೋಟ್