ತಮಿಳುನಾಡು | ತೇವರ್ ಜಯಂತಿ ಬ್ಯಾನರ್ ಹರಿದ ಆರೋಪ: ದಲಿತ ವ್ಯಕ್ತಿಯ ಹತ್ಯೆ

Dalit Lives Matter
  • ಪರಿಹಾರವಾಗಿ ಪೊಲೀಸ್ ಠಾಣೆಯಲ್ಲಿ ದಂಡ ಕಟ್ಟಿದ್ದರೂ ಹಲ್ಲೆ
  • ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 15 ವರ್ಷದ ಬಾಲಕ 

ತೇವರ್ ಜಯಂತಿ ಹಿನ್ನೆಲೆ ಹಾಕಿದ್ದ ಬ್ಯಾನರ್ ಹರಿದಿದ್ದಾನೆ ಎಂದು ಆರೋಪಿಸಿ ದಲಿತ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ.

ತೂತುಕುಡಿಯ ಮಾರಿಮುತ್ತು (38) ಹತ್ಯೆಯಾದ ವ್ಯಕ್ತಿ. ಮುಗೇಶ್, ಪತಿರಕಾಳಿಮುತ್ತು, ಜಯಮುತ್ತುಲಿಂಗಂ, ಷಣ್ಮುಗವೇಲ್, ಮೀರನ್ ಮತ್ತು ಮುರಳಿ ಎಂಬ ಆರು ಮಂದಿ ಕೊಲೆ ಮಾಡಿದ ಆರೋಪಿಗಳು.

ತೇವರ್ ಜಯಂತಿ ದಿನದಂದು ಮಾರಿಮುತ್ತು ನಿವಾಸದ ಬಳಿ ಬ್ಯಾನರ್ ಹಾಕಲಾಗಿತ್ತು. ಈ ಬ್ಯಾನರ್‌ ಅನ್ನು ಮಾರಿಮುತ್ತು ಅವರ 15 ವರ್ಷದ ಪುತ್ರ ಕರುಣಾಕರನ್ ಹರಿದಿದ್ದಾನೆ ಎಂದು ಆರೋಪಿಸಿ ಜಾತಿ ನಿಂದನೆ ಮಾಡಲಾಗಿತ್ತು. ಬಳಿಕ ಈ ವಿಷಯವಾಗಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿತ್ತು. ನಂತರ ಮಾರಿಮುತ್ತು ಅವರು ತಪ್ಪು ಒಪ್ಪಿಕೊಂಡು ಬ್ಯಾನರ್‌ಗೆ ಪರಿಹಾರವಾಗಿ 1,500 ರೂ. ನೀಡಿ ಸಮಸ್ಯೆಯನ್ನು ಪರಿಹರಿಸಲಾಗಿತ್ತು.

ಆದರೂ ಮಾರನೇ ದಿನ ಪತಿರಕಾಳಿಮುತ್ತು, ಮುಗೇಶ್ ಮತ್ತು ಜಯಮುತ್ತುಲಿಂಗಂ ಅವರು ಕರುಣಾಕರನ್‌ನನ್ನು ಥಳಿಸಿದ್ದಾರೆ. ಮಾರಿಮುತ್ತು ಅದನ್ನು ತಡೆಯಲು ಬಂದಿದ್ದಾನೆ. ಬಳಿಕ ಕರುಣಾಕರನ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ನಂತರ ಮಾರಿಮುತ್ತು ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿ ಮುಗೇಶನನ್ನು ಮಾರಿಮುತ್ತು ಅವರ ಪತ್ನಿ ಮತ್ತು ತಾಯಿ ತಡೆದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪತಿರಕಾಳಿಮುತ್ತು ತಾನು ಮಚ್ಚು ತೆಗೆದುಕೊಂಡು ಮಾರಿಮುತ್ತು ಮೇಲೆ ಹಲ್ಲೆ ನಡೆಸಿದ್ದಾನೆ.

ಗಾಯಗೊಂಡಿದ್ದ ತಂದೆ ಮತ್ತು ಮಗನನ್ನು ತೂತುಕುಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರಿಮುತ್ತು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಕರುಣಾಕರನ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾರಿಮುತ್ತು ಅವರ ಪತ್ನಿ ರಾಧಾ ನೀಡಿದ ದೂರು ಆಧರಿಸಿ ಆರು ಮಂದಿ ವಿರುದ್ಧ ದೂರು ದಾಖಲಾಗಿದೆ. ಆರು ಮಂದಿ ಸಂಚು ರೂಪಿಸಿ ತನ್ನ ಪತಿಯನ್ನು ಕೊಲೆ ಮಾಡಿದ್ದಾರೆ. ತನಗೆ ಮತ್ತು ತನ್ನ ಕುಟುಂಬಕ್ಕೆ ಜೀವ ಭಯವಿದ್ದು, ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ದಲಿತ ಮಹಿಳೆ ನೀರು ಕುಡಿದ ಕಾರಣಕ್ಕೆ ಗೋಮೂತ್ರ ಹಾಕಿ ಟ್ಯಾಂಕ್‌ ಶುದ್ಧೀಕರಣ; ವಿಡಿಯೋ ವೈರಲ್

ಆರು ಮಂದಿ ಆರೋಪಿಗಳ ಪೈಕಿ ಮೂವರನ್ನು ತೂತುಕುಡಿ ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 147, 148, 294 (ಬಿ), 324, 307, 302, 506(2), 109, 120 ಬಿ, 3(1)(ಆರ್), 3(1), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ, 3(2)(ವಿ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180