ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ `ಜಾತಿ ವಿನಾಶ' | ಭಾಗ 1 | ಮಾತಾಗಿ ಬೆಳಗಬೇಕಾದ್ದು, ಅಕ್ಷರವಾಗಿ ಉಸಿರಾಯ್ತು

ಜಾತಿ ವಿನಾಶ (Annihilation of Caste) ಕುರಿತು ಎಂಬತ್ತೈದು ವರ್ಷಗಳ ಹಿಂದೆ ಬಾಬಾಸಾಹೇಬ ಡಾ. ಭೀಮರಾವ್ ಅಂಬೇಡ್ಕರ್ ಅವರು ನಡೆಸಿದ ಚಿಂತನೆಗಳು ಇಂದಿಗೂ ಪ್ರಖರ ಪ್ರಸ್ತುತ. ಲಾಹೋರಿನಲ್ಲಿ ಮಾತನಾಡಲೆಂದು ಬರೆದ ಈ ಭಾಷಣದ ಬರಹ ರೂಪವಿದು. ಈ ಮಹತ್ವಪೂರ್ಣ ಬರಹದ ಕನ್ನಡ ಅವತರಣಿಕೆಯ ಮೊದಲ ಭಾಗ ಇಲ್ಲಿದೆ.
Ambedkar-annihilation

1936ನೆಯ ಇಸವಿ. ಬೇಸಿಗೆ ಬಲಿಯುವ ಮುನ್ನ ಈಗ ಪಾಕಿಸ್ತಾನದ ಭಾಗವಾದ ಲಾಹೋರಿನಲ್ಲಿ ತನ್ನ ವಾರ್ಷಿಕ ಸಮ್ಮೇಳನ ಸಂಘಟಿಸುವ ಹವಣಿಕೆಯಲ್ಲಿತ್ತು  ಜಾತ್ ಪಾತ್ ತೋಡಕ್ ಮಂಡಲ ಎಂಬ ಉದಾರವಾದಿ ಹಿಂದು ಸಂಘಟನೆ.  ಈ ಸಮ್ಮೇಳನದ ಅಧ್ಯಕ್ಷತೆ ವಹಿಸುವಂತೆ ಅಂಬೇಡ್ಕರ್ ಅವರನ್ನು ಆಹ್ವಾನಿಸಿತ್ತು.  ಜಾತಿ ವ್ಯವಸ್ಥೆಯು ಯಾವ ಧಾರ್ಮಿಕ ಭಾವನೆಗಳ ಆಧಾರದ ಮೇಲೆ ಸ್ಥಾಪಿತ ಆಗಿದೆಯೋ, ಅಂತಹ ಧಾರ್ಮಿಕ ಭಾವನೆಗಳನ್ನು ನಾಶ ಮಾಡುವ ತನಕ ಜಾತಿ ವ್ಯವಸ್ಥೆಯನ್ನು ಒಡೆಯುವುದು ಸಾಧ್ಯವಿಲ್ಲ ಎಂಬುದು ಅಂಬೇಡ್ಕರ್ ಅವರ ಪ್ರತಿಪಾದನೆಯಾಗಿತ್ತು. ಇದೇ ಪ್ರತಿಪಾದನೆಯನ್ನು ಸಮ್ಮೇಳನದಲ್ಲಿ ವಿವರವಾಗಿ ಮಂಡಿಸುವಂತೆ ಅವರನ್ನು ಕೋರಲಾಗಿತ್ತು.

ವೇದಗಳು ಮತ್ತು ಹಿಂದೂ ಧಾರ್ಮಿಕ ಗ್ರಂಥಗಳನ್ನು ಕಠೋರ ಪ್ರಶ್ನೆಗಳಿಗೆ ಗುರಿ ಮಾಡಿದ್ದ ಅಂಬೇಡ್ಕರ್ ಭಾಷಣದ ಪ್ರತಿಯಲ್ಲಿನ ವಿಚಾರಗಳು ಮಂಡಲಕ್ಕೆ ರುಚಿಸಲಿಲ್ಲ. ಸಮ್ಮೇಳನವನ್ನು ''ಅನಿರ್ದಿಷ್ಟ ಕಾಲ ದೂಡಿತು''.  ಅರ್ಥಾತ್ ರದ್ದು ಮಾಡಿಬಿಟ್ಟಿತು!

ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುವುದಿರಲಿ, ಭಾಷಣದಲ್ಲಿನ ಒಂದೇ ಒಂದು ಅಲ್ಪವಿರಾಮ
ಚಿಹ್ನೆಯನ್ನು ಕೂಡ ಕೈಬಿಡೆನು ಎಂದು ಗಟ್ಟಿಯಾಗಿ ನಿಂತರು ಅಂಬೇಡ್ಕರ್. ತಮ್ಮ ಈ  ಭಾಷಣವನ್ನು ಪುಸ್ತಕ ರೂಪದಲ್ಲಿ ತಾವೇ ಅಚ್ಚು ಹಾಕಿಸಿದರು. ಮಾಡಲಾಗದೆ ಉಳಿದ ಈ ಭಾಷಣವೇ- Annihilation of Caste ಎಂಬ ಪುಸ್ತಿಕೆಯಾಗಿ ಪ್ರಸಿದ್ಧವಾಯಿತು. ಸಾಮಾಜಿಕ ವಿಮೋಚನೆಯ ಪ್ರಣಾಳಿಕೆಯೆಂದೂ ಮಹಾನ್ ಕೃತಿಯೆಂದೂ ಹೆಸರುವಾಸಿ ಆಯಿತು. ಪೆರಿಯಾರ್ ನೆರವಿನಿಂದ 1937ರಲ್ಲಿ ತಮಿಳಿಗೆ ಅನುವಾದಗೊಂಡಿತು. ಮಾಡದೆ ಉಳಿದ ಈ ಭಾಷಣದಲ್ಲಿನ ಚಿಂತನೆಗಳು ಹಿಂದೂ ಧರ್ಮ ಬದಲಾವಣೆಯ ಗಾಳಿಗೆ ತೆರೆದುಕೊಳ್ಳುವ ತನಕ ಪ್ರಸ್ತುತವಾಗಿ ಉಳಿಯುತ್ತವೆ.

ಐವತ್ತು ಪುಟಗಳ ಈ ಪುಸ್ತಿಕೆಯ ಕನ್ನಡ ಅನುವಾದವನ್ನು ಈದಿನ.ಕಾಂ ಕಂತುಗಳಲ್ಲಿ ಕನ್ನಡ ಓದುಗರ ಮುಂದೆ ಪ್ರಸ್ತುತಪಡಿಸುತ್ತಿದೆ

ಜಾತಿ ವಿನಾಶ  (Annihilation of Caste)          


- ಬಿ.ಆರ್.ಅಂಬೇಡ್ಕರ್
M.A., Ph.D., D.Sc., Barrister-at-Law
M.I.A.J.P. Principal Govt Law College, Bombay


" ಸತ್ಯವನ್ನು ಸತ್ಯವನ್ನಾಗಿಯೂ, ಅಸತ್ಯವನ್ನು ಅಸತ್ಯವನ್ನಾಗಿಯೂ ಗ್ರಹಿಸು"

-ಬುದ್ಧ

"ಯಾವನು ತರ್ಕಿಸುವುದಿಲ್ಲವೋ ಅವನು ಧರ್ಮಾಂಧ
ಯಾವನು ತರ್ಕಿಸಲಾರನೋ ಅವನು ಮೂರ್ಖ
ಯಾವನಿಗೆ ತರ್ಕಿಸುವ ಧೈರ್ಯವಿಲ್ಲವೋ ಅವನು ಗುಲಾಮ"
                                                       
 -ಎಚ್.ಡ್ರಮಂಡ್

Image
Ambedkar 3

ಮೊದಲ ಮಾತು

ಜಾತ್ ಪಾತ್ ತೋಡಕ್ ಮಂಡಲದ ಕಾರ್ಯದರ್ಶಿ ಸಂತ್ ರಾಮ್ ಅವರಿಂದ 1935ರ ಡಿಸೆಂಬರ್ 12ರಂದು ಈ ಕೆಳಕಂಡ ಪತ್ರ ನನಗೆ ಬಂದಿತ್ತು:-

ಪ್ರೀತಿಯ ಡಾಕ್ಟರ್ ಸಾಹೇಬ್,

ಡಿಸೆಂಬರ್ ಐದರ ನಿಮ್ಮ ಪತ್ರಕ್ಕೆ ಬಹಳ ಧನ್ಯವಾದಗಳು. ನಿಮ್ಮ ಅನುಮತಿಯಲ್ಲದೆ ಅದನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದೇನೆ. ಕ್ಷಮಿಸಿ. ಆ ಪತ್ರಕ್ಕೆ ಪ್ರಚಾರ ನೀಡುವುದರಿಂದ ಹಾನಿಯೇನೂ ಇಲ್ಲ ಎಂಬುದು ನನ್ನ ಅನಿಸಿಕೆ. ನೀವೊಬ್ಬ ಮಹಾನ್ ಚಿಂತಕ. ಜಾತಿ ಸಮಸ್ಯೆ ಕುರಿತು ನಿಮ್ಮಷ್ಟು ಆಳವಾಗಿ ಅಧ್ಯಯನ ಮಾಡಿರುವವರು ಮತ್ತೊಬ್ಬರಿಲ್ಲ ಎಂಬುದು ನನ್ನ ಅಳೆದು ತೂಗಿದ ಅಭಿಮತ. ನಿಮ್ಮ ವಿಚಾರಗಳಿಂದ ನನಗೂ ಮತ್ತು ನಮ್ಮ ಮಂಡಲಕ್ಕೂ ಸದಾ ತಿಳಿವಳಿಕೆ ಲಭಿಸಿದೆ. ಹಲವಾರು ಸಮ್ಮೇಳನಗಳಲ್ಲಿ ಈ ವಿಚಾರಗಳನ್ನು ವಿವರಿಸಿ ಬೋಧಿಸಿದ್ದೇನೆ. ನೀವೊಂದು ಹೊಸ ಸೂತ್ರವನ್ನು ಮಂಡಿಸಿದ್ದೀರಿ- “ಜಾತಿ ವ್ಯವಸ್ಥೆಯು ಯಾವ ಧಾರ್ಮಿಕ ಅನಿಸಿಕೆ- ಅಭಿಮತಗಳ ಮೇಲೆ ಸ್ಥಾಪಿತಗೊಂಡಿದೆಯೋ, ಅವುಗಳನ್ನು ನಾಶ ಮಾಡದೆ ಜಾತಿಯನ್ನು ಮುರಿಯುವುದು ಸಾಧ್ಯವಿಲ್ಲ" ಎಂಬ ಈ ಸೂತ್ರ ಕುರಿತು ಓದುವ ತೀವ್ರ ಕುತೂಹಲ ನನಗಿದೆ.  ದಯಮಾಡಿ ಈ ಸಂಬಂಧವಾಗಿ ಆದಷ್ಟು ಶೀಘ್ರ ದೀರ್ಘ ವಿವರಣೆ ನೀಡಬೇಕೆಂದು ಕೋರುತ್ತೇನೆ. ಈ ವಿವರಣೆಯನ್ನು ನಾವು ಪತ್ರಿಕೆಗಳು ಮತ್ತು ವೇದಿಕೆಗಳ ಮೂಲಕ ಒತ್ತಿ ಹೇಳಬಹುದು. ಸದ್ಯದ ಸ್ಥಿತಿಯಲ್ಲಿ ಈ ಸೂತ್ರ ನನಗೆ ನಿಚ್ಚಳವಾಗಿ ಅರ್ಥವಾಗಿಲ್ಲ.

…….................................................................................

ನಮ್ಮ ವಾರ್ಷಿಕ ಸಮ್ಮೇಳನಕ್ಕೆ ನೀವೇ ಅಧ್ಯಕ್ಷರಾಗಬೇಕೆಂಬುದು ನಮ್ಮ ಕಾರ್ಯಕಾರಿ ಸಮಿತಿಯ ಒತ್ತಾಸೆ. ಸಮ್ಮೇಳನದ ದಿನಾಂಕಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಲ್ಲೆವು. ನಿಮ್ಮನ್ನು ಭೇಟಿಯಾಗಿ ತಮ್ಮ ಯೋಜನೆಗಳು ಉದ್ದೇಶಗಳ ಕುರಿತು ನಿಮ್ಮೊಂದಿಗೆ ಚರ್ಚಿಸಲು ಉತ್ಸುಕರಾಗಿದ್ದಾರೆ. ನಮ್ಮ ಕೋರಿಕೆಯನ್ನು ಮನ್ನಿಸಿ ತಾವು ಲಾಹೋರಿಗೆ ಬಂದು ಸಮ್ಮೇಳನದ ಅಧ್ಯಕ್ಷತೆ ವಹಿಸಿದರೆ ಅದರಿಂದ ಜೋಡಿ ಉದ್ದೇಶಗಳು ಈಡೇರುತ್ತವೆ. ಎಲ್ಲ ಬಗೆಯ ಅಭಿಪ್ರಾಯಗಳನ್ನು ಹೊಂದಿದ ಹರಿಜನ ನಾಯಕರನ್ನು ಆಹ್ವಾನಿಸುತ್ತೇವೆ. ನಿಮ್ಮ ಆಲೋಚನೆಗಳನ್ನು ಅವರಿಗೆ ದಾಟಿಸುವ ಅವಕಾಶ ನಿಮ್ಮದಾಗುತ್ತದೆ.

ನಮ್ಮ ವಿನಂತಿಯನ್ನು ದಯವಿಟ್ಟು ಒಪ್ಪಿಕೊಳ್ಳುವಂತೆ ನಿಮ್ಮ ಮನ ಒಲಿಸಲು ಮಂಡಲದ ಸಹಾಯಕ ಕಾರ್ಯದರ್ಶಿ ಇಂದ್ರ ಸಿಂಗ್ ಅವರನ್ನು ಕ್ರಿಸ್ಮಸ್ ಹೊತ್ತಿಗೆ ಮುಂಬಯಿಗೆ ಕಳಿಸುತ್ತೇವೆ.
…….....................................................................................

ನನಗೆ ತಿಳಿಸಿ ಹೇಳಲಾದ ಪ್ರಕಾರ ಜಾತ್ ಪಾತ್ ತೋಡಕ್ ಮಂಡಲವು ಸವರ್ಣೀಯ ಹಿಂದೂ ಸಮಾಜ ಸುಧಾರಕರ ಸಂಘಟನೆ. ಹಿಂದೂಗಳ ನಡುವೆ ನೆಲೆಸಿರುವ ಜಾತಿ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತೆಸೆವುದು ಅದರ ಏಕೈಕ ಗುರಿ. ಸವರ್ಣೀಯ ಹಿಂದೂಗಳು ನಡೆಸುವ ಯಾವುದೇ ಆಂದೋಲನದ ಭಾಗ ಆಗುವುದು ನನಗೆ ಒಗ್ಗದ ಸಂಗತಿ. ಸಾಮಾಜಿಕ ಸುಧಾರಣೆ ಕುರಿತ ಅವರ ಧೋರಣೆ ನನ್ನ ಧೋರಣೆಗಿಂತ ಭಿನ್ನವಾದದ್ದು. ಹೀಗಾಗಿ ಅವರೊಂದಿಗೆ ಬೆರೆತು ಕೆಲಸ ಮಾಡುವುದು ಕಠಿಣ ಎಂಬುದನ್ನು ಕಂಡುಕೊಂಡಿದ್ದೇನೆ. ಈ ಭಿನ್ನಾಭಿಪ್ರಾಯದಿಂದಾಗಿ ಅವರ ಸಹವಾಸ ನನಗೆ ಒಗ್ಗುವುದಿಲ್ಲ. ಮಂಡಲ ನನ್ನನ್ನು ಮೊದಲ ಸಲ ಸಂಪರ್ಕಿಸಿದಾಗ ಅಧ್ಯಕ್ಷತೆ ವಹಿಸಲು ಈ ಕಾರಣಕ್ಕಾಗಿಯೇ ಒಪ್ಪಿರಲಿಲ್ಲ. ಆದರೆ ಮಂಡಲ ತನ್ನ ಪ್ರಯತ್ನ ಕೈಬಿಡಲಿಲ್ಲ. ಆಹ್ವಾನ ಒಪ್ಪಿಕೊಳ್ಳುವಂತೆ ನನ್ನನ್ನು ಭೇಟಿ ಮಾಡಿ ಒತ್ತಾಯಿಸಲು ತನ್ನ ಸದಸ್ಯರೊಬ್ಬರನ್ನು ಮುಂಬಯಿಗೆ ಕಳಿಸಿತು. ಕಡೆಗೆ ಅಧ್ಯಕ್ಷತೆ ವಹಿಸಲು ಒಪ್ಪಿಕೊಂಡೆ. ಮಂಡಲದ ಕೇಂದ್ರಸ್ಥಾನ ಲಾಹೋರ್. ಸಮ್ಮೇಳನ ಅಲ್ಲಿಯೇ ನಡೆಯಲಿತ್ತು.  ಮಾರ್ಚ್-ಏಪ್ರಿಲ್ ಅವಧಿಯ ಈಸ್ಟರ್ ಉತ್ಸವದ ವೇಳೆಗೆ ಜರುಗಬೇಕಿತ್ತು. ಆದರೆ 1936ರ ಮೇ ಮಧ್ಯಭಾಗದ ತನಕ ಮುಂದಕ್ಕೆ ಹೋಯಿತು. ಮಂಡಲದ ಸ್ವಾಗತ ಸಮಿತಿ ಇದೀಗ ಸಮ್ಮೇಳನವನ್ನೇ ರದ್ದು ಮಾಡಿದೆ. ರದ್ದು ಮಾಡಿರುವ ಸೂಚನೆಯು ನನ್ನ ಅಧ್ಯಕ್ಷ ಭಾಷಣ ಅಚ್ಚಾದ ನಂತರ ಹೊರಬಿತ್ತು. ಭಾಷಣದ ಪ್ರತಿಗಳು ನನ್ನ ಬಳಿ ಬಿದ್ದಿವೆ. ಅಧ್ಯಕ್ಷ ಭಾಷಣ ಜರುಗದ ಕಾರಣ, ಜಾತಿವ್ಯವಸ್ಥೆ ಹುಟ್ಟಿ ಹಾಕಿರುವ ಸಮಸ್ಯೆಗಳ ಕುರಿತು ನನ್ನ ವಿಚಾರಗಳೇನು ಎಂಬುದನ್ನು ತಿಳಿಯುವ ಅವಕಾಶ ಸಾರ್ವಜನಿಕರಿಗೆ ಇಲ್ಲವಾಯಿತು. ಈ ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸಬೇಕಿತ್ತು ಮತ್ತು ಅಚ್ಚಾಗಿರುವ ಭಾಷಣದ ಪ್ರತಿಗಳ ವಿಲೇವಾರಿ ಆಗಬೇಕಿತ್ತು. ಈ ದಿಸೆಯಲ್ಲಿ ಭಾಷಣದ ಪ್ರತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತೀರ್ಮಾನಿಸಿದ್ದೇನೆ. ಮುಂಬರುವ ಪುಟಗಳು ಭಾಷಣದ ಪಠ್ಯವನ್ನು ಹೊಂದಿರುತ್ತವೆ.

ನನಗೆ ವಹಿಸಿಕೊಡಲಾಗಿದ್ದ ಸಮ್ಮೇಳನದ ಅಧ್ಯಕ್ಷತೆ ರದ್ದಾದ ಕಾರಣವಾದರೂ ಏನೆಂದು ತಳಿಯುವ ಕುತೂಹಲ ಸಾರ್ವಜನಿಕರಿಗೆ ಇದ್ದೇ ಇರುತ್ತದೆ. ಮೊದಲು ಎದ್ದ ವಿವಾದ ಭಾಷಣವನ್ನು ಅಚ್ಚು ಮಾಡುವ ಕುರಿತದ್ದು. ಅದನ್ನು ಬಾಂಬೆಯಲ್ಲೇ ಅಚ್ಚು ಮಾಡಬೇಕೆಂಬುದು ನನ್ನ ಬಯಕೆಯಾಗಿತ್ತು. ವೆಚ್ಚ ತಗ್ಗಿಸುವ ಉದ್ದೇಶದಿಂದ ಮುದ್ರಣದ ಕೆಲಸ ಲಾಹೋರಿನಲ್ಲೇ ಆಗಬೇಕೆಂಬುದು ಮಂಡಲದ ಒತ್ತಾಯವಾಗಿತ್ತು. ನಾನು ಒಪ್ಪಲಿಲ್ಲ. ಮುಂಬಯಿಯಲ್ಲೇ ಆಗಬೇಕೆಂದೆ. ನನ್ನ ಪ್ರಸ್ತಾವ ಮಂಡಲಕ್ಕೆ ಒಪ್ಪಿಗೆಯಾಗಲಿಲ್ಲ. ಮಂಡಲದ ಅನೇಕ ಸದಸ್ಯರು ಸಹಿ ಮಾಡಿ ಬರೆದ ಪತ್ರವೊಂದು ನನಗೆ ಬಂದಿತು. ಅದರ ಕೆಲವು ಉಧೃತ ಭಾಗಗಳನ್ನು ಇಲ್ಲಿ ನೀಡುತ್ತಿದ್ದೇನೆ:-

ಆದರಣೀಯ ಡಾಕ್ಟರ್ ಜೀ, 

27.03.1936

ತಾವು ಸಂತರಾಮ್ ಅವರನ್ನು ಉದ್ದೇಶಿಸಿ ಇದೇ 24ರಂದು ಬರೆದ ಪತ್ರ ಬಂದು ಸೇರಿತು. ಅದನ್ನು ಓದಿ ನಮಗೆ ತುಸು ನಿರಾಶೆಯೇ ಆಯಿತು. ಇಲ್ಲಿ ಉದ್ಭವಿಸಿರುವ ಪರಿಸ್ಥಿತಿಯ ಪೂರ್ಣ ಅರಿವು ಪ್ರಾಯಶಃ ನಿಮಗೆ ಇಲ್ಲವೆಂದು ಕಾಣುತ್ತದೆ. ಪಂಜಾಬಿನ ಬಹುತೇಕ ಹಿಂದೂಗಳು ನಿಮ್ಮನ್ನು ಈ ಪ್ರಾಂತ್ಯಕ್ಕೆ ಆಹ್ವಾನಿಸುವುದರ ವಿರುದ್ಧವಿದ್ದಾರೆ. ಜಾತ್ ಪಾತ್ ತೋಡಕ್ ಮಂಡಲವು ಎಲ್ಲ ವಲಯಗಳಿಂದ ಅತ್ಯಂತ ಕಹಿ ಟೀಕೆಗೆ ತುತ್ತಾಗಿದೆ.  ಆ ಬೈಗುಳಗಳನ್ನು ಇಲ್ಲಿ ಬರೆಯುವುದು ಕೂಡ ಸಾಧ್ಯವಿಲ್ಲ. ಭಾಯಿ ಪರಮಾನಂದ ಶಾಸಕರು (ಹಿಂದೂ ಮಹಾಸಭಾದ ಮಾಜಿ ಅಧ್ಯಕ್ಷರು), ಮಹಾತ್ಮಾ ಹನ್ಸ್ ರಾಜ್, ಸ್ಥಳೀಯ  ಸಂಸ್ಥೆಗಳ ಆಡಳಿತ ಸರ್ಕಾರದ ಮಂತ್ರಿ ಡಾ.ಗೋಕಲ್ ಚಂದ್ ನಾರಂಗ್, ಎಂ.ಎಲ್.ಸಿ. ರಾಜೇಂದ್ರನಾಥ್ ಮುಂತಾದವರು ಮಂಡಲದ ಈ ನಡೆಯಿಂದ ದೂರ ಸರಿದಿದ್ದಾರೆ.

ಆದಾಗ್ಯೂ ಜಾತ್ ಪಾತ್ ತೋಡಕ್ ಮಂಡಲವನ್ನು ಮುನ್ನಡೆಸುವ (ಮುಖ್ಯವ್ಯಕ್ತಿಯಾದ ಸಂತ ರಾಮ್ ಅವರೂ ಸೇರಿದಂತೆ) ಎಲ್ಲ ವ್ಯಕ್ತಿಗಳೂ ಈ ಏರಿಳಿತಗಳನ್ನು ಹಾದು ಮುಂದುವರೆಯಲು ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲ, ನಿಮ್ಮ ಅಧ್ಯಕ್ಷತೆಯನ್ನು ಕೂಡ ಬಿಟ್ಟುಕೊಡಲು ತಯಾರಿಲ್ಲ. ಮಂಡಲಕ್ಕೆ ಕೆಟ್ಟ ಹೆಸರು ಬಂದಿದೆ.

*               *                    *                    *  

Image
Ambedkar 1

ಇಂತಹ ಸಂದರ್ಭಗಳಲ್ಲಿ ಮಂಡಲದ ಜೊತೆ ಸಹಕರಿಸುವುದು ನಿಮ್ಮ ಕರ್ತವ್ಯವೇ ಆಗಿರುತ್ತದೆ. ಒಂದೆಡೆ ಹಿಂದೂಗಳು ಮಂಡಲವನ್ನು ಭಾರೀ ಕಷ್ಟಕೋಟಲೆಗಳಿಗೆ ಗುರಿ ಮಾಡುತ್ತಿದ್ದಾರೆ. ಮತ್ತೊಂದೆಡೆ ಅವರ ತಾಪತ್ರಯಗಳನ್ನು ನೀವೂ ಹೆಚ್ಚಿಸಿದರೆ  ಅವರ ಪಾಲಿಗೆ ಅದೊಂದು ವ್ಯಥೆ ಮತ್ತು ದುರದೃಷ್ಟ ಬೆರೆಯುವ ಕಾಕತಾಳೀಯವೇ ಸರಿ. ಈ ಕುರಿತು ನೀವು ಆಲೋಚಿಸುತ್ತೀರಿ ಮತ್ತು ಎಲ್ಲರಿಗೂ ಒಳಿತಾಗುವುದನ್ನೇ ಮಾಡುತ್ತೀರಿ ಎಂದು ನಾವು ಆಶಿಸುತ್ತಿದ್ದೇವೆ.

ಈ ಪತ್ರ ನನ್ನನ್ನು ಬಹುವಾಗಿ ಚಕಿತಗೊಳಿಸಿತು.ಭಾಷಣದ ಮುದ್ರಣದ ಸಂಬಂಧ ಕೆಲವೇ ರೂಪಾಯಿಗಳನ್ನು ಉಳಿಸಲಿಕ್ಕಾಗಿ ಮಂಡಲವು ನನ್ನನ್ನು ಈ ಪರಿ ಅಸಂತೋಷಪಡಿಸುವುದು ಯಾಕೆಂದು ನನಗೆ ಅರ್ಥವೇ ಆಗಲಿಲ್ಲ. ಎರಡನೆಯದಾಗಿ ಸರ್ ಗೋಕಲ್ ಚಂದ್ ನಾರಂಗ್ ಅವರಂತಹ ವ್ಯಕ್ತಿಗಳು ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ನನ್ನ ಆಯ್ಕೆಯನ್ನು ಪ್ರತಿಭಟಿಸಲು ರಾಜೀನಾಮೆ ನೀಡಿದ್ದನ್ನು ನಂಬಲಾಗಲಿಲ್ಲ. ಯಾಕೆಂದರೆ ಗೋಕಲ್ ಚಂದ್ ಅವರಿಂದ ನನಗೆ ಈ ಕೆಳಕಂಡ ಪತ್ರ ಬಂದಿತ್ತು.

5, ಮಾಂಟ್ಗೋಮರಿ ಮಾರ್ಗ
ಲಾಹೋರ್, 7.2.1936

ಪ್ರೀತಿಯ ಡಾಕ್ಟರ್ ಅಂಬೇಡ್ಕರ್,

ಇದೇ ಈಸ್ಟರ್ ರಜೆಗಳಲ್ಲಿ ಲಾಹೋರಿನಲ್ಲಿ ಜರುಗಲಿರುವ ಜಾತ್ ಪಾತ್ ತೋಡಕ್ ಮಂಡಲದ ಮುಂದಿನ ಸಮ್ಮೇಳನದ ಅಧ್ಯಕ್ಷತೆ ವಹಿಸಲು ನೀವು ಒಪ್ಪಿಕೊಂಡಿರುವುದಾಗಿ ಆ ಸಂಘಟನೆಯ ಕಾರ್ಯಕರ್ತರಿಂದ ತಿಳಿದು ನನಗೆ ಸಂತೋಷವೆನಿಸಿತು. ನೀವು ಲಾಹೋರಿನಲ್ಲಿದ್ದಾಗ ನನ್ನ ಜೊತೆಯಲ್ಲಿ ತಂಗಿದರೆ ನನಗೆ ಬಹಳ ಖುಷಿಯಾಗುತ್ತದೆ.
ಉಳಿದದ್ದು ಮೊಖ್ತಾ ಭೇಟಿಯಾದಾಗ,

ನಿಮ್ಮ ವಿಶ್ವಾಸಿ
ಜಿ.ಸಿ.ನಾರಂಗ್

ನಿಜಾಂಶ ಏನೇ ಇರಲಿ, ನಾನಂತೂ ಈ ಒತ್ತಡಕ್ಕೆ ಬಗ್ಗಲಿಲ್ಲ. ನನ್ನ ಭಾಷಣದ ಮುದ್ರಣ ಬಾಂಬೆಯಲ್ಲೇ ಆಗಬೇಕೆಂದು ಪಟ್ಟು ಹಿಡಿದೆ. ಮಂಡಲ ಒಪ್ಪಲಿಲ್ಲ. ''ಮುಖತಃ ನನ್ನನ್ನು ಕಂಡು ಮಾತಾಡಲು'’ ಹರಭಗವಾನ್ ಎಂಬುವರನ್ನು ಕಳಿಸಿಕೊಡುವುದಾಗಿ ತಂತಿ ಸಂದೇಶ ಕಳಿಸಿತು. ಹರಭಗವಾನ್ ಏಪ್ರಿಲ್ ಒಂಬತ್ತರಂದು ಬಾಂಬೆಗೆ ಬಂದಿಳಿದರು. ಆದರೆ ಮುದ್ರಣ ಕಾರ್ಯದ ಕುರಿತು ಹೇಳಲು ಅವರ ಬಳಿ ಏನೂ ಇರಲಿಲ್ಲ ಮತ್ತು ಅವರು ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ ಎಂಬುದು ಅವರಿಂದ ತಿಳಿಯಿತು. ಮುದ್ರಣದ ವಿಷಯ ಅವರ ಮಾತುಕತೆಯಲ್ಲಿ ಸುಳಿಯಲೇ ಇಲ್ಲ.

ಭಾಷಣದಲ್ಲಿ ಏನೇನಿದೆ ಎಂಬುದನ್ನು ತಿಳಿದುಕೊಳ್ಳುವುದಷ್ಟೇ ಅವರ ಮುಖ್ಯ ಕಾಳಜಿಯಾಗಿತ್ತು. ಭಾಷಣದಲ್ಲಿನ ಅಂಶಗಳನ್ನು ತಮಗೆ ಬೇಕಾದಂತೆ ಬದಲಾಯಿಸುವ ಕೈಬಿಡುವುದೇ ಅದನ್ನು ಲಾಹೋರಿನಲ್ಲಿ ಮಾಡುವುದರ ಹಿಂದಿನ ಅಸಲಿ ಉದ್ದೇಶವೇ ವಿನಾ ಹಣ ಉಳಿಸುವುದಲ್ಲ ಎಂಬುದು ನನಗೆ ಮನವರಿಕೆಯಾಯಿತು. ಹರಭಗವಾನ್ ಅವರಿಗೆ ಪ್ರತಿಯೊಂದನ್ನು ನೀಡಿದೆ. ಭಾಷಣದ ಕೆಲವು ಭಾಗಗಳು ಅವರಿಗೆ ಹಿಡಿಸಲಿಲ್ಲ. ಅವರು ಲಾಹೋರಿಗೆ ವಾಪಸಾದರು. ಅಲ್ಲಿಂದ ಕೆಳಕಂಡ ಪತ್ರವನ್ನು ನನಗೆ ಬರೆದರು.

ಲಾಹೋರ್, ಏಪ್ರಿಲ್ 14, 1956
ನನ್ನ ಪ್ರೀತಿಯ ಡಾಕ್ಟರ್ ಸಾಹೀಬ್,

ರೈಲುಗಾಡಿಯಲ್ಲಿ ಪ್ರಯಾಣ ಮಾಡಿದ ಸತತ ಐದಾರು ರಾತ್ರಿಗಳ ಕಾಲ ನಿದ್ರೆಯೇ ಬಾರದ ಕಾರಣ, ಬಾಂಬೆಯಿಂದ ಬಂದಾಗಿನಿಂದ ನಾನು ಕಾಯಿಲೆ ಬಿದ್ದಿದ್ದೇನೆ. ನೀವು ಅಮೃತಸರಕ್ಕೆ ಬಂದಿದ್ದ ವಿಷಯ ನಾನು ಇಲ್ಲಿ ತಲುಪಿದ ನಂತರ ತಿಳಿಯಿತು. ಓಡಾಡುವ ಪರಿಸ್ಥಿತಿ ಇದ್ದಿದ್ದರೆ ನಿಮ್ಮನ್ನು ಭೇಟಿಗೆ ಬರುತ್ತಿದ್ದೆ. ನಿಮ್ಮ ಭಾಷಣವನ್ನು ಅನುವಾದಕ್ಕೆಂದು ಸಂತರಾಮ್ ಅವರಿಗೆ ತಲುಪಿಸಿದ್ದೇನೆ. ಅವರು ಅದನ್ನು ಬಹುವಾಗಿ ಇಷ್ಟಪಟ್ಟಿದ್ದಾರೆ. ಆದರೆ 25ರ ಒಳಗಾಗಿ ಅದನ್ನು ಅನುವಾದಿಸುವ ಖಾತ್ರಿ ಅವರಿಗೆ ಇಲ್ಲ. ಏನೇ ಆದರೂ, ಭಾಷಣಕ್ಕೆ ವ್ಯಾಪಕ ಪ್ರಚಾರ ಸಿಗಲಿದ್ದು ಅದು ಹಿಂದೂಗಳನ್ನು ನಿದ್ರೆಯಿಂದ ಎಚ್ಚರಿಸಲಿದೆ ಎಂಬ ನಂಬಿಕೆ ನಮಗಿದೆ.

ಇದನ್ನು ಓದಿದ್ದೀರಾ? | ಅಂಬೇಡ್ಕರ್ ಜಯಂತಿ ವಿಶೇಷ | ಉತ್ತಮ ಪ್ರಜಾಪ್ರಭುತ್ವಕ್ಕೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ನೀಡಿದ ಏಳು ಸೂತ್ರಗಳು

ಬಾಂಬೆಯಲ್ಲಿ ನಿಮಗೆ ತೋರಿಸಿದ ಪ್ಯಾರಾ ಕುರಿತು ನಮ್ಮ ಕೆಲವು ಗೆಳೆಯರಲ್ಲಿ ತಪ್ಪು ಅಭಿಪ್ರಾಯ ಉಂಟಾಗಿದೆ. ಈ ಸಮ್ಮೇಳನವು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಕ್ತಾಯಗೊಳ್ಳಬೇಕೆಂದು ಬಯಸುವ ನಾವು ಕನಿಷ್ಠ ಪಕ್ಷ 'ವೇದ' ಎಂಬ ಪದವನ್ನಾದರೂ ನಿಮ್ಮ ಭಾಷಣದಿಂದ ಸದ್ಯಕ್ಕೆ ಕೈಬಿಡಬೇಕೆಂದು ಬಯಸುತ್ತೇವೆ. ಈ ವಿಚಾರವನ್ನು ನಿಮ್ಮ ವಿವೇಚನಗೆ ಬಿಡುತ್ತೇನೆ. ಈ ಭಾಷಣದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ನಿಮ್ಮವೇ ಆಗಿದ್ದು ಅವುಗಳಿಗೆ ಮಂಡಲ ಜವಾಬ್ದಾರ ಅಲ್ಲ ಎಂಬುದನ್ನು ಕಡೆಯ ಪ್ಯಾರಾಗಳಲ್ಲಿ ನಿಚ್ಚಳವಾಗಿ ಹೇಳುವಿರೆಂದು ಆಶಿಸುತ್ತೇನೆ.  ಈ ನನ್ನ ಹೇಳಿಕೆಗೆ ನಿಮ್ಮದೇನೂ ಅಭ್ಯಂತರ ಇಲ್ಲವೆಂದೂ, ಭಾಷಣದ ಸಾವಿರ ಪ್ರತಿಗಳನ್ನು ನಮಗೆ ನೀಡುವಿರೆಂದು ಆಶಿಸುವೆ.ಸಾವಿರ ಪ್ರತಿಗಳಿಗೆ ತಗಲುವ ಹಣವನ್ನು ನಾವು ಪಾವತಿ ಮಾಡುತ್ತೇವೆ. ಈ ದಿಸೆಯಲ್ಲಿ ಇಂದು ನಿಮಗೊಂದು ಟೆಲಿಗ್ರಾಮ್ ಕಳಿಸಿರುವೆ. ನೂರು ರೂಪಾಯಿಗಳ ಮೊತ್ತದ ಚೆಕ್ ಒಂದನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದೇನೆ. ದಯವಿಟ್ಟು ಸ್ವೀಕೃತಿಯನ್ನು ತಿಳಿಯಪಡಿಸಿರಿ. ನಿಮ್ಮ ಬಿಲ್ ಗಳನ್ನು ಅವಧಿಯೊಳಗಾಗಿ ನಮಗೆ ಕಳುಹಿಸಿರಿ.

ಸಮ್ಮೇಳನದ ಸ್ವಾಗತ ಸಮಿತಿಯ ಸಭ ಕರೆದಿದ್ದೇನೆ. ಅವರ ತೀರ್ಮಾನವನ್ನು ತಕ್ಷಣವೇ ನಿಮಗೆ ತಿಳಿಯಪಡಿಸುವೆ.ಈ ನಡುವೆ ನನ್ನ ಕುರಿತು ನೀವು ತೋರಿದ ಕಕ್ಕುಲತೆ ಮತ್ತು ಭಾಷಣವನ್ನು ಸಿದ್ಧಪಡಿಸಲು ನೀವು ತೆಗೆದುಕೊಂಡ ಅಪಾರ ಶ್ರಮಕ್ಕೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸ್ವೀಕರಿಸಿರಿ. ಕೃತಜ್ಞತೆಯ ಬಹುದೊಡ್ಡ ಋಣಭಾರವನ್ನೇ ನಮ್ಮ ಮೇಲೆ ಹೊರಿಸಿರುವಿರಿ.
ನಿಮ್ಮ ವಿಶ್ವಾಸಿ
ಹರ್ ಭಗವಾನ್

ಬರೆಯಲು ಮರೆತದ್ದು- ದಯವಿಟ್ಟು ಅಚ್ಚಾದ ಕೂಡಲೆ ಭಾಷಣದ ಪ್ರತಿಗಳನ್ನು ಪ್ಯಾಸೆಂಜರ್ ರೈಲುಗಾಡಿಯಲ್ಲಿ ಕಳಿಸಿಕೊಡಿರಿ. ಅವುಗಳನ್ನು ಪ್ರಕಟಣೆಗಾಗಿ ಪತ್ರಿಕೆಗಳಿಗೆ ಹಂಚಬೇಕಿದೆ.

Image
Ambedkar 2

ಅಂತೆಯೇ ಸಾವಿರ ಪ್ರತಿಗಳನ್ನು ಮುದ್ರಿಸಲು ಕೋರಿ ಭಾಷಣದ ಹಸ್ತಪ್ರತಿಯನ್ನು ಮುದ್ರಕರಿಗೆ ಒಪ್ಪಿಸಿದೆ. ಎಂಟು ದಿನಗಳ ನಂತರ ಹರ ಭಗವಾನ್ ಅವರಿಂದ ನನಗೆ ಮತ್ತೊಂದು ಪತ್ರ ಬಂತು. ಅದು ಈ ಕೆಳಕಂಡಂತಿತ್ತು:-

ಪ್ರೀತಿಯ ಡಾ.ಅಂಬೇಡ್ಕರ್,                                                                            

ಲಾಹೋರ್, 22.4.1936

ನಿಮ್ಮ ಟೆಲಿಗ್ರಾಮ್ ಪತ್ರ ನಮಗೆ ತಲುಪಿದೆ. ಅದಕ್ಕಾಗಿ ನಮ್ಮ ಧನ್ಯವಾದಗಳನ್ನು ಒಪ್ಪಿಸಿಕೊಳ್ಳಿರಿ. ನಿಮ್ಮ ಇಚ್ಛೆಯ ಪ್ರಕಾರವೇ ಸಮ್ಮೇಳನವನ್ನು ಮತ್ತೊಮ್ಮೆ ಮುಂದಕ್ಕೆ ಹಾಕಿದ್ದೇವೆ. ಆದರೆ ಅದನ್ನು 25 ಮತ್ತು 26ರಂದು ನಡೆಸಿದ್ದರೆ ಬಹಳ ಒಳ್ಳೆಯದಿತ್ತು ಎಂಬುದು ನಮ್ಮ ಭಾವನೆ. ಪಂಜಾಬಿನಲ್ಲಿ ಧಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಮೇ ಮಧ್ಯಭಾಗದ ಹೊತ್ತಿಗೆ ಮಧ್ಯಾಹ್ನಗಳಲ್ಲಿ ಸಭೆಗಳಲ್ಲಿ ಕುಳಿತುಕೊಳ್ಳುವುದು ಅಸಹನೀಯ ಎನಿಸಲಿದೆ. ಸಮ್ಮೇಳನ ಮೇ ಮಧ್ಯಭಾಗದಲ್ಲೇ ನಡೆಯುವುದಾದರೆ ಅದನ್ನು ಎಷ್ಟು ಸಾಧ್ಯವೋ ಅಷ್ಟು ಅನುಕೂಲ ಆಗಿಸಲು ಶಕ್ತಿ ಮೀರಿ ಶ್ರಮಿಸುತ್ತೇವೆ.

 ಆದರೂ ನಿಮ್ಮ ಗಮನಕ್ಕೆ ತರಲೇಬೇಕಾದ ಸಂಗತಿಯೊಂದಿದೆ. ಧರ್ಮ ಪರಿವರ್ತನೆ ಕುರಿತ ಸಾರಿ ಹೇಳುವ ನಿಮ್ಮ ಘೋಷಣೆ ಕುರಿತು ನಮ್ಮಲ್ಲಿ ಕೆಲವರು ಹೊಂದಿದ್ದ ಆಕ್ಷೇಪವನ್ನು ನಿಮ್ಮ ಗಮನಕ್ಕೆ ತಂದಿದ್ದೆ. ಈ ವಿಚಾರವು ಜಾತ್ ಪಾತ್ ತೋಡಕ್ ಮಂಡಲದ ವ್ಯಾಪ್ತಿಯ ಹೊರಗಿನದಾಗಿರುವ ಕಾರಣ ಅದರ ವೇದಿಕೆಯಲ್ಲಿ ಈ ಕುರಿತು ಯಾವುದೇ ಪ್ರಸ್ತಾಪ ಮಾಡುವ ಉದ್ದೇಶ ನಿಮಗಿಲ್ಲವೆಂದು ಸ್ಪಷ್ಟಪಡಿಸಿದ್ದಿರಿ. ಹಸ್ತಪ್ರತಿಯನ್ನು ನನ್ನ ಕೈಗಿತ್ತಾಗ ಅದೇ ನಿಮ್ಮ ಭಾಷಣದ ಮುಖ್ಯ ಭಾಗವೆಂದೂ, ಮುಕ್ತಾಯದ ಒಂದೆರಡು ಪ್ಯಾರಾಗಳನ್ನು ಮಾತ್ರವೇ ಸೇರಿಸಲಿದ್ದೀರೆಂದೂ ತಿಳಿಸಿದ್ದಿರಿ. ನಿಮ್ಮ ಭಾಷಣದ ಹಸ್ತಪ್ರತಿಯ ಎರಡನೆಯ ಕಂತು ತಲುಪಿದಾಗ ನಮಗೆಲ್ಲ ಅಚ್ಚರಿ ಕಾದಿತ್ತು. ಎರಡನೆಯ ಕಂತು ಭಾಷಣವನ್ನು ಬಲು ಉದ್ದವಾಗಿಸಿ, ಅದನ್ನು ಪೂರ್ಣವಾಗಿ ಬಹಳ ಮಂದಿ ಓದಲಾರರು ಎಂಬ ಸಂದೇಹ ನಮ್ಮನ್ನು ಕಾಡಿತು. ಹಿಂದೂ ಧರ್ಮದಿಂದ ಹೊರನಡೆಯುವುದಾಗಿಯೂ, ಹಿಂದೂವಾಗಿ ಇದೇ ನಿಮ್ಮ ಕಟ್ಟಕಡೆಯ ಭಾಷಣವೆಂದೂ ಹಸ್ತಪ್ರತಿಯಲ್ಲಿ ಒಂದಕ್ಕಿಂತ ಹೆಚ್ಚು ಸಲ  ಸಾರಿದ್ದೀರಿ. ವೇದಗಳು ಮತ್ತು ಹಿಂದೂ ಧರ್ಮದ ಇತರೆ ಗ್ರಂಥಗಳ ನೈತಿಕತೆ ಮತ್ತು ವಿವೇಚನೆಯ ಮೇಲೆ ಅನಗತ್ಯ ದಾಳಿ ನಡೆಸಿದ್ದೀರಿ. ಹಿಂದೂ ಧರ್ಮದ ತಾಂತ್ರಿಕ ಬದಿಯ ಮೇಲೆ ಸುದೀರ್ಘ ವ್ಯಾಖ್ಯಾನ ಮಾಡಿದ್ದೀರಿ. ನೀವು ಪ್ರಸ್ತಾಪಿಸುವ ಸಮಸ್ಯೆಗೂ ಈ ವ್ಯಾಖ್ಯಾನಕ್ಕೂ ಸಂಬಂಧವೇ ಇಲ್ಲ. ಹೀಗಾಗಿ ಕೆಲವು ಪ್ಯಾರಾಗಳು ಅಪ್ರಸ್ತುತ ಎನಿಸುತ್ತವೆ. ವಿಷಯವಸ್ತುವಿನ ಆಚೆಗೇ ಉಳಿಯುತ್ತವೆ. ನನ್ನ ಕೈಗಿತ್ತ ಹಸ್ತಪ್ರತಿಯ ಭಾಗಕ್ಕಷ್ಟೇ ನಿಮ್ಮ ಭಾಷಣವನ್ನು ಸೀಮಿತಗೊಳಿಸಿದ್ದಲ್ಲಿ ನಮಗೆ ಬಹಳ ಸಂತೋಷ ಆಗುತ್ತಿತ್ತು. ಅಥವಾ ಸೇರಿಸಲೇಬೇಕೆಂದಿದ್ದರೆ ಬ್ರಾಹ್ಮಣವಾದ ಮುಂತಾದವುಗಳ ಕುರಿತ ಪ್ರಸ್ತಾಪಕ್ಕಷ್ಟೇ ಅದನ್ನು ಸೀಮಿತಗೊಳಿಸಬಹುದಿತ್ತು. ಹಿಂದೂ ಧರ್ಮದ ಸಂಪೂರ್ಣ ವಿನಾಶ ಮತ್ತು ಹಿಂದೂಗಳ ಪವಿತ್ರ ಗ್ರಂಥಗಳ ನೈತಿಕತೆ ಕುರಿತ ಸಂದೇಹಗಳು ಹಾಗೂ ಹಿಂದೂ ಧರ್ಮವನ್ನು ತ್ಯಜಿಸುವ ನಿಮ್ಮ ಇರಾದೆಯ ಭಾಗಗಳು ಅಪ್ರಸ್ತುತವೆಂದು ನನಗೆ ತೋರುತ್ತವೆ.

ಹೀಗಾಗಿ ಈ ಪ್ಯಾರಾಗಳನ್ನು ಕೈಬಿಟ್ಟು ಬ್ರಾಹ್ಮಣವಾದ ಕುರಿತ ಪ್ಯಾರಾಗಳಿಗೇ ನಿಮ್ಮ ಭಾಷಣವನ್ನು ಮುಕ್ತಾಯಗೊಳಿಸುವಂತೆ  ಸಮ್ಮೇಳನದ ಸಂಘಟಕರ ಪರವಾಗಿ ನಿಮ್ಮನ್ನು ವಿನಯಪೂರ್ವಕವಾಗಿ ಕೋರುತ್ತಿದ್ದೇನೆ. ಭಾಷಣವನ್ನು ಅನಗತ್ಯವಾಗಿ ಪ್ರಚೋದನಕಾರಿ ಆಗಿಸುವುದು ವಿವೇಕ ಅಲ್ಲವೆಂಬುದು ನಮ್ಮ ಅನಿಸಿಕೆ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಮತ್ತು ಹಿಂದೂ ಧರ್ಮವನ್ನು ಮರು ರೂಪಿಸುವ ನಿಮ್ಮ 'ಬ್ಯಾನರ್' ಕೆಳಗೆ ಇರಬಯಸುವವರು ನಾವು ಅನೇಕರಿದ್ದೇವೆ. ಸುಧಾರಣೆಯ ಉದ್ದೇಶ ನಿಮ್ಮದಾಗಿದ್ದಿದ್ದರೆ ಪಂಜಾಬಿನ ಸುಧಾರಣವಾದಿಗಳ ಬಹುದೊಡ್ಡ ಸೇನೆಯೇ ನಿಮ್ಮ ಹಿಂದೆ ಬರುತ್ತಿದ್ದರೆಂಬ ಭರವಸೆಯನ್ನು ನೀಡಬಯಸುವೆ.

ಜಾತಿವ್ಯವಸ್ಥೆಯ ಆಳ ಅಧ್ಯಯನ ಮಾಡಿರುವ ನೀವು ಈ ಅನಿಷ್ಟದ ವಿನಾಶ ಕಾರ್ಯದಲ್ಲಿ ಮುಂದೆ ನಿಂತು ನಮಗೆಲ್ಲ ದಾರಿ ತೋರುವಿರಿ ಎಂದು ಭಾವಿಸಿದ್ದೆವು. ಈ ಬೃಹತ್ ಪ್ರಯತ್ನದ ಕೇಂದ್ರ ನೆಲೆಯಲ್ಲಿ ನಿಂತು ನಮ್ಮ ಕೈಗಳನ್ನು ಬಲಪಡಿಸುವಿರಿ ಎಂದುಕೊಂಡಿದ್ದೆವು. ಆದರೆ ನಿಮ್ಮ ಘೋಷಣೆಯನ್ನು ಪುನರುಚ್ಚರಿಸಿದಾಗ ಅದರ ಶಕ್ತಿಯನ್ನು ಕಳೆದುಕೊಂಡು ಸವಕಲು ಪದವಾಗಿಬಿಡುತ್ತದೆ. ಇಂತಹ ಸನ್ನಿವೇಶಗಳಲ್ಲಿ ಹಿಂದೂಗಳು ತಮ್ಮ ಧಾರ್ಮಿಕ ಭಾವನೆಗಳನ್ನು ತೊರೆದಾದರೂ, ಬಂಧು ಬಾಂಧವರನ್ನು ತ್ಯಜಿಸಿಯಾದರೂ ನಿಮ್ಮ ಜೊತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಒಪ್ಪಿದರೆ,  ಜಾತಿವ್ಯವಸ್ಥೆಯ ವಿನಾಶ ಆಂದೋಲನದ ನಾಯಕತ್ವವನ್ನು ಸಂತೋಷದಿಂದ ಒಪ್ಪಿಕೊಳ್ಳುವುದಾಗಿ ಘೋಷಿಸಿರಿ. ಈ ದಿಸೆಯಲ್ಲಿ ನಿಮ್ಮ ಭಾಷಣವನ್ನು ಬದಲಾಯಿಸಿ ಹೆಚ್ಚು ಪರಿಣಾಮಕಾರಿ ಆಗಿಸಬೇಕೆಂಬುದು ನನ್ನ ಕೋರಿಕೆ. ಹೀಗೆ ಮಾಡಿದರೆ ಅಂತಹ ಪ್ರಯತ್ನಕ್ಕೆ ಪಂಜಾಬು ನಿಮ್ಮೊಂದಿಗೆ ಸ್ಪಂದಿಸುವುದೆಂಬ ಆಶಾಭಾವನೆ ನನಗಿದೆ.

ಈಗಾಗಲೆ ಸಾಕಷ್ಟು ವೆಚ್ಚವನ್ನು ಭರಿಸಿದ್ದು ಅನಿಶ್ಚಯತೆಗೆ ಸಿಲುಕಿರುವ ನಮ್ಮ ನೆರವಿಗೆ ಬರುವುದಾದರೆ ನಾನು ನಿಮಗೆ ಋಣಿಯಾಗಿರುತ್ತೇನೆ. ನಿಮ್ಮ ಬಾಷಣವನ್ನು ಸೀಮಿತಗೊಳಿಸುವ ದೊಡ್ಡತನವನ್ನು ತೋರುವುದಾಗಿ ಮಾರೋಲೆಯಲ್ಲಿ ತಿಳಿಸಬೇಕಾಗಿ ಕೋರುತ್ತೇನೆ. ಒಂದು ವೇಳೆ ಭಾಷಣವನ್ನು ಇಡಿಯಾಗಿ ಮುದ್ರಿಸಬೇಕೆಂದು ನೀವು ಒತ್ತಾಯ ಮಾಡಿದಲ್ಲಿ ಈ ಸಮ್ಮೇಳನ ನಡೆಸುವುದು ಸಾಧ್ಯವಿಲ್ಲವೆಂದೂ, ಸಮ್ಮೇಳನವನ್ನು ಅನಿರ್ದಿಷ್ಟಕಾಲ ಮುಂದೂಡಬಯಸುತ್ತೇವೆಂದೂ ನಿಮಗೆ ತಿಳಿಸಲು ವಿಷಾದವೆನಿಸುತ್ತದೆ. ಮತ್ತೆ ಮತ್ತೆ ಮುಂದೂಡುವ ಇಂತಹ ನಡೆಯಿಂದ ನಾವು ಜನತೆಯ ಸದ್ಭಾವನೆಯನ್ನು ಕಳೆದುಕೊಳ್ಥುತ್ತೇವೆ. ಆದರೂ ಈ ತೀರ್ಮಾನ ನಮಗೆ ಅನಿವಾರ್ಯ. ಆದೇನೇ ಇದ್ದರೂ, ಜಾತಿ ವ್ಯವಸ್ಥೆಯ ಕುರಿತು ಈವರೆಗೆ ಬರೆಯಲಾಗಿರುವ ಎಲ್ಲ ಗ್ರಂಥಗಳಿಗೂ ಮಿಗಿಲೆನಿಸುವ ಇಂತಹ ಅದ್ಭುತ ಗ್ರಂಥವನ್ನು ರಚಿಸಿರುವ ಮೂಲಕ ನಮ್ಮೆಲ್ಲರ ಹೃದಯಗಳೊಳಗೆ ನೀವು ಗಣ್ಯ ಸ್ಥಾನ ಗಳಿಸಿದ್ದೀರಿ. ಈ ಗ್ರಂಥವೊಂದು ಅಮೂಲ್ಯ ಪರಂಪರೆ ಎನಿಸಲಿದೆ. ಈ ಕೃತಿಯನ್ನು ಸಿದ್ಧಪಡಿಸುವಲ್ಲಿ ವಹಿಸಿದ ಅಪಾರ ಶ್ರಮಕ್ಕಾಗಿ ನಿಮಗೆ ನಾವು ಸದಾ ಋಣಿಯಾಗಿರುತ್ತೇವೆ.

ನಿಮ್ಮ ದಯಾಶೀಲತೆಗೆ ಬಹು ಧನ್ಯವಾದಗಳು.
ವಿಶ್ವಾಸಪೂರ್ವಕವಾಗಿ ನಿಮ್ಮವನೇ ಆದ ನಾನು,
ಹರ್ ಭಗವಾನ್

ಮುಂದುವರೆಯುವುದು
ನಿಮಗೆ ಏನು ಅನ್ನಿಸ್ತು?
12 ವೋಟ್