ಅಂಬೇಡ್ಕರ್‌ ಜಯಂತಿ ವಿಶೇಷ | ಕಲೇಕೂರಿ ಪ್ರಸಾದ್ ಅವರ ಕವಿತೆ, 'ಅಮ್ಮಾ, ಅಂಬೇಡ್ಕರ್‌'

Kalekuri Prasad

ಅಮ್ಮಾ…..ಅಂಬೇಡ್ಕರಾ…

ಕಾಗದಗಳ ಮೇಲಷ್ಟೇ ಅಲ್ಲ
ಪುಸ್ತಕಗಳ ಒಳಗಷ್ಟೇ ಅಲ್ಲ
ಪಕ್ಕೆಲುಬುಗಳ ಕೆಳಗೆ ಪ್ರವಹಿಸುವ
ಜೀವನದಿಗಳ ಮೇಲೆಯೂ
ನಿನ್ನ ಹೆಸರು ಬರೆದುಕೊಳ್ಳುತ್ತೇವೆ

ಕಣ್ಣರೆಪ್ಪೆಗಳ ಕೆಳಗೆ ತೆರೆದುಕೊಳ್ಳುವ
ಹೂಗಳಂತಹ ಆಕಾಂಕ್ಷೆಗಳ ಮೇಲೆ
ನಿನ್ನ ಹೆಸರು ಬರೆದುಕೊಳ್ಳುತ್ತೇವೆ
ಸಜೀವ ದಹನವಾದ ದಲಿತಕೇರಿಗಳ
ಬೂದಿಯೊಳಗಿಂದ ಹಾರಿ ಬರುವ ಫೀನೀಕ್ಸ್ ಪಕ್ಷಿ
ಕೊರಳ ದನಿಯ ಮೇಲೆ ನಿನ್ನ ಹೆಸರೇ ಬರೆದುಕೊಳ್ಳುತ್ತೇವೆ
ನಿನ್ನ ಪ್ರಸವ ವೇದನೆಯಿಂದ ಸಂವಿಧಾನವನ್ನಷ್ಟೇ ಅಲ್ಲ
ತಲೆಮಾರುಗಳ ಕನಸುಗಳನ್ನು ಪ್ರಸವಿಸಿದೆ
ದೇಶಕ್ಕೆ ನೀನು ತಂದೆಯಾ! ತಾಯಿಯಾ!
ಕೋಟಿ ಕೋಟಿ ಜನ ದುಃಖಿತರಾದ ಜನ
ಅನಾಥರಾದ ಜನ ಅಂಗಲಾಚುವ ಜನ
ತುಳಿತಕ್ಕೊಳಗಾದ ಜನ ದಮನಿತ ಜನ
ಆಕಾಶದಲ್ಲಿ ಹಾರುವ ಹಕ್ಕಿಗಳ ರೆಕ್ಕೆಯ ಮೇಲೆ
ಯಾವಾಗಲೂ ನಿನ್ನ ಹೆಸರೇ ಓದಿಕೊಳ್ಳುತ್ತಿದ್ದಾರೆ…

Image
Ambedkar poem

ನಿನ್ನಲ್ಲಿ ತಾಯ್ತನವನ್ನು ನೋಡಿಕೊಳ್ಳುತ್ತಿದ್ದಾರೆ
ತೆರೆದ ಕಿಟಕಿಯ ಸರಳುಗಳೊಳಗಿಂದ ಪ್ರಸರಿಸಿದ
ಫಳ ಫಳ ಹೊಳೆಯುವ ಸೂರ್ಯಕಿರಣ
ಒಡೆದು ಹಾಕಿದೆ
ಕಣ್ಣೀರ ಕಟ್ಟೆಯನ್ನೋ ಮಂಜಿನ ಇಬ್ಬನಿಯನ್ನೋ
ಹೊರಹೊಮ್ಮಿದ ಏಳುರಂಗುಗಳ ಕಾಮನಬಿಲ್ಲಿನ ರೆಕ್ಕೆಗಳ ಮೇಲೆ
ನಿನ್ನ ಕಿರುನಗೆಯ ರೂಪ
ತುಟಿಗಳ ಮೇಲೆ ಹಕ್ಕುಗಳ ಅಭಯ ನೀಡಿದ
ನಿನ್ನ ಮುಗುಳು ನಗೆಯ ಸಹಿ
ತಂದೆಯೇ! ತಾಯಿಯೇ ! ದೈವವೇ!
ದೇಶವೆಲ್ಲ ನಿದ್ರೆ ಹೋಗುವ ಹೊತ್ತು
ನೀನು ಕಣ್ಣು ತೆರೆದು ಕನಸುಗಳೇಕೆ ಕಂಡೆ
ತಲೆಮಾರಿನಿಂದ ತಲೆಮಾರಿಗೆ ಸಾಗಿ ಬರುತ್ತಿರುವ
ಅವಮಾನಗಳ ದುಃಖದ ನದಿಗಳನ್ನು ನಿನ್ನಲ್ಲೆ ಇಂಗಿಸಿಕೊಂಡು
ದೇಹವನೆಲ್ಲವನು ಚಂಡಮಾರುತವನು ಬಸಿವ ಕಣಿವೆಯಾಗಿಸಿ
ಒಳಗೊಳಗೆ  ಯಾಕಷ್ಟು ಬೆಂದುಹೋದೆ
ಕನಲಿಹೋದೆ, ಯಾಕಷ್ಟು ಕಣ್ಣೀರಾದೆ?
ಎದೆಯಲ್ಲಿ ಚಂಡಮಾರುಗಳೇ ಚಲಿಸುತ್ತಿದ್ದರೂ
ಕಣ್ಣೇಕೆ ರಣ ರಣ ಕೆಂಡಕಾರಿವೆ?
ನಿನ್ನ ಅರೆಮುಚ್ಚಿದ ನೇತ್ರಗಳ ಮುಂದೆ ಮಲಗಿ
ಹಿಡಿ ಹೃದಯದಷ್ಟು ಬದುಕನ್ನು ಕೋರಿಕೊಂಡೆವು
ನಗರದ ನಡುಮಧ್ಯದಿಂದ ಮೇಲೆದ್ದುಬಂದ
ಧವಳಕಾಂತಿಯ ಮಹಾವೃಕ್ಷದಂತೆ ಸಾಕ್ಷಾತ್ಕರಿಸಿ
ಒಂದು ತೋರು ಬೆರಳನು ನೀಡಿದೆ
ಅದು ತೋರುವದೊದು ಸೂರ್ಯೋದಯವನ್ನು ನೀಡಿದೆ
ಪಾರ್ಲಿಮೆಂಟಲ್ಲಿ, ಅಸೆಂಬ್ಲಿಯಲ್ಲಷ್ಟೇ ಅಲ್ಲ
ಮನುಷ್ಯರ ಹೃದಯಗಳನೇ ಗೆದ್ದು, ಆಳಿ
ಒಂದು ಸಂದೇಶವನ್ನು ನೀಡಿದೆ
ಒಂದು ಹೊಳೆವ ಖಡ್ಗವನ್ನು ನೀಡಿದೆ…
ಹೌದೂ
ನಿನ್ನ ಹೆಸರು ಸ್ವಾತಂತ್ರ್ಯವಾ? ಸಮಾನತೆಯಾ? ಭ್ರಾತೃತ್ವವಾ?
ತಾಯಿ!
ಈ ಭೂಗರ್ಭದ ಮೇಲೆ ನಿನ್ನ ಹೆಸರೆ ಬರೆದುಕೊಳ್ಳುತ್ತೇವೆ
ಅದು ಜನ್ಮನೀಡುವ ಮತ್ತೊಂದು ತಲೆಮಾರು
ನಿನ್ನ ಹೆಸರನ್ನೇ ಹೊತ್ತು ಆಗಸದುದ್ದಕ್ಕೆ ಬೆಳೆಯುತ್ತದೆ.
 

* ಕಲೇಕೂರಿ ಪ್ರಸಾದ್

ಅನುವಾದ: ಅನಿಲ್‌ ಕುಮಾರ್‌ ಚಿಕ್ಕದಾಳವಟ್ಟ

ನಿಮಗೆ ಏನು ಅನ್ನಿಸ್ತು?
22 ವೋಟ್