ಬಾಬಾ ಸಾಹೇಬರ ಚಿಂತನೆಗಳನ್ನು ಕನ್ನಡಿಗರ ಮನಸ್ಸಿನಾಳಕ್ಕೆ ಇಳಿಸಿದ 'ಅಂಬೇಡ್ಕರ್‌ ಓದು'

ಡಾ ಬಿ ಆರ್‌ ಅಂಬೇಡ್ಕರ್‌ ಅವರ ಭಾಷಣ ಮತ್ತು ಬರಹಗಳಿಗೆ ಆಡಿಯೋ ರೂಪ ನೀಡಿದ್ದು 'ಅಂಬೇಡ್ಕರ್‌ ಓದು'. ಕನ್ನಡದ ಮನಸ್ಸುಗಳಿಗೆ ಆಪ್ತವಾಗಿ ಹಾಗೂ ಅರಿವಿನ ಬೆಳಕಾಗಿ ತಲುಪಿದ ಈ ಆಡಿಯೋ ಸರಣಿಯ ಹಿಂದಿರುವವರು ಅರುಣ್‌ ಜೋಳದ ಕೂಡ್ಲಿಗಿ
Arunjold Kudligi

''ಇದೆಲ್ಲಾ ಶುರುವಾಗಿದ್ದು ಅಂಬೇಡ್ಕರ್‌ ಜೀವನ ಆಧರಿಸಿದ 'ಮಹಾನಾಯಕ' ಹೆಸರಿನ ಧಾರವಾಹಿಯೊಂದು ಸದ್ದು ಮಾಡಿದಾಗ. ಆಗ ಬಹಳ ಜನ ಆನ್‌ಲೈನ್‌ನಲ್ಲಿ ಅಂಬೇಡ್ಕರ್‌ ಕುರಿತು ಮಾಹಿತಿ ಹುಡುಕುತ್ತಿದ್ದಾರೆ ಎಂದು ಗೂಗಲ್‌ ಒಂದು ಮಾಹಿತಿ ಹೊರಹಾಕಿತು. ನನಗೂ ಅದು ಕುತೂಹಲ ಅನ್ನಿಸಿತು. ಕನ್ನಡದಲ್ಲಿ ಏನು ಸಿಗುತ್ತಿರಬಹುದು ಎಂದು ಹುಡುಕಿದೆ. ಎಂಟು ಹತ್ತು ಭಾಷಣಗಳು, ಜನಪ್ರಿಯ ಹಾಡುಗಳು; ಅದನ್ನು ಬಿಟ್ಟರೆ ಕರ್ನಾಟಕ ಸರ್ಕಾರ ತಂದ ಅಂಬೇಡ್ಕರ್ ಅವರ ಸಮಗ್ರ ಕೃತಿಗಳು ಲಭ್ಯವಿದ್ದವು. ಆ ಕೃತಿಗಳನ್ನಂತೂ ಸಾಮಾನ್ಯ ಓದುಗ ಡೌನ್‌ಲೋಡ್‌ ಮಾಡಿಕೊಂಡು ಓದುವುದು ಸಾಧ್ಯವಿರಲಿಲ್ಲ. ಅಂಬೇಡ್ಕರ್‌ ಅವರನ್ನು ತಿಳಿದುಕೊಳ್ಳಲು ಬಯಸುವ ಆಸಕ್ತರಿಗೆ, ಅಂಬೇಡ್ಕರ್‌ ಅವರದ್ದೇ ಸಾಹಿತ್ಯ ಸುಲಭವಾಗಿ ಎಟುಕುವಂತೆ ಇರಬೇಕು ಎಂಬ ಆಲೋಚನೆ ಬಂತು''

ಕಳೆದ ಒಂದೂವರೆ ವರ್ಷದಿಂದ ಅಂಬೇಡ್ಕರ್‌ ಅವರ ಚಿಂತನೆಗಳನ್ನು 'ಅಂಬೇಡ್ಕರ್ ಓದು' ಹೆಸರಿನಲ್ಲಿ ಆಡಿಯೋ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ ಲೇಖಕ, ಸಂಶೋಧಕ ಅರುಣ್‌ ಜೋಳದ ಕೂಡ್ಲಿಗಿ, ತಮ್ಮ ಕೆಲಸಕ್ಕೆ ಪ್ರೇರಣೆಯಾದ ಸಂಗತಿಯ ಬಗ್ಗೆ ಹಂಚಿಕೊಂಡಿದ್ದು ಹೀಗೆ; ಕನ್ನಡದಲ್ಲಿ ಅಂಬೇಡ್ಕರ್‌ ಅವರ ಭಾಷಣ ಮತ್ತು ಬರಹಗಳು ಲಭ್ಯ ಇವೆ. ಆಸಕ್ತರು, ಅಧ್ಯಯನ ನಿರತರ ಹೊರತಾಗಿ ಸಾಮಾನ್ಯರಿಗೂ ಈ ಸಾಹಿತ್ಯ ತಲುಪಿದ್ದು ಅಲ್ಪ. ಆದರೆ ಅಕ್ಷರ ಬಾರದವರೂ ಅಂಬೇಡ್ಕರ್‌ ಚಿಂತನೆಗಳಿಗೆ ಕಿವಿಯಾಗುವಂತೆ ಮಾಡಿದ್ದು ಈ 'ಅಂಬೇಡ್ಕರ್ ಓದು' ಸರಣಿ.

Eedina App

ಇದುವರೆಗೆ 470 ಕಂತುಗಳಲ್ಲಿ ಅಂಬೇಡ್ಕರ್‌ ಅವರ ವೈವಿಧ್ಯಮಯ ವಿಚಾರಗಳನ್ನು ಆಡಿಯೋ ರೂಪದಲ್ಲಿ ತಂದಿರುವ ಈ ಸರಣಿ, ಕನ್ನಡ ಡಿಜಿಟಿಲ್‌ ವಲಯದ ವಿಶೇಷ ಪ್ರಯೋಗ. ವಿವಿಧ ಹಿನ್ನೆಲೆಯ 300ಕ್ಕೂ ಹೆಚ್ಚು ಮಂದಿ ಅಂಬೇಡ್ಕರ್‌ ಅವರ ಆಯ್ದ ಬರಹಗಳನ್ನು, ಭಾಷಣಗಳನ್ನು ಓದಿ, ಧ್ವನಿ ಮುದ್ರಿಸಿ, ನಿರಂತರವಾಗಿ ಹಂಚಿಕೊಳ್ಳುತ್ತಾ ಬಂದಿರುವುದು ವಿಶೇಷ.

ಇದನ್ನು ಓದಿದ್ದೀರಾ? |  ಅಂಬೇಡ್ಕರ್ ಜಯಂತಿ ವಿಶೇಷ | ಉತ್ತಮ ಪ್ರಜಾಪ್ರಭುತ್ವಕ್ಕೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ನೀಡಿದ ಏಳು ಸೂತ್ರಗಳು

AV Eye Hospital ad

''100 ಕಂತುಗಳವರೆಗೆ ತಾಂತ್ರಿಕ ಸವಾಲು, ಓದುವವರ ಕೊರತೆ ಇತ್ಯಾದಿಗಳ ನಡುವೆ ನಿಧಾನಗತಿಯಲ್ಲಿ ಸಾಗಿತು. 100ರ ನಂತರ ಕೆಲವರು ತಾವಾಗಿಯೇ ಓದುವುದಕ್ಕೆ ಮುಂದಾದರು. ಹೆಚ್ಚು ಹೆಚ್ಚು ಜನರು ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದೆನಿಸಲಾರಂಭಿಸಿತು. 200ನೇ ಕಂತನ್ನು ಓದಿದವರು ಸಂಗೀತ ನಿರ್ದೇಶಕ ಹಂಸಲೇಖ. ಅವರು 'ಸ್ತ್ರೀಧನ ಮತ್ತು ಆಸ್ತಿ ಹಕ್ಕು' ಕುರಿತು ಅಂಬೇಡ್ಕರ್ ಅವರ ವಿಚಾರಗಳ ಆಯ್ದ ಭಾಗ ಓದಿದರು. ಅದು ಇನ್ನಷ್ಟು ಜನರ ಗಮನ ಸೆಳೆಯಿತು' ಎಂದು ಈ ವಿಶೇಷ ಸರಣಿಯ ಬೆಳವಣಿಗೆಯನ್ನು ಅರುಣ್‌ ವಿವರಿಸಿದರು. 100 ಗಂಟೆಗಳ ಅವಧಿಯ ಆಡಿಯೋ ರೆಕಾರ್ಡ್‌ ಮಾಡಿರುವ ಈ ಸರಣಿಯಲ್ಲಿ 150ಕ್ಕೂ ಹೆಚ್ಚು ಮಹಿಳೆಯರು ದನಿ ಕೊಟ್ಟಿದ್ದಾರೆ ಎಂಬುದು ಮತ್ತೊಂದು ವಿಶೇಷ ಸಂಗತಿ.

ನಾಡಿನ ಹಿರಿಯ ಸಾಹಿತಿ ದೇವನೂರ ಮಹಾದೇವ, ನಟರಾದ ರಮೇಶ್‌ ಅರವಿಂದ್‌, ಅಚ್ಯುತ್‌ ಕುಮಾರ್‌, ರಾಜಕಾರಣಿಗಳಾದ ಮೋಟಮ್ಮ, ಎಲ್ ಹನುಮಂತಯ್ಯ, ನಿರ್ದೇಶಕರಾದ ಬಿ ಎಂ ಗಿರಿರಾಜ್‌ ಸೇರಿದಂತೆ ಸಾಹಿತಿಗಳು, ಪತ್ರಕರ್ತರು, ರಂಗಕರ್ಮಿಗಳು, ವಿದ್ಯಾರ್ಥಿಗಳು 'ಅಂಬೇಡ್ಕರ್‌ ಓದು' ಸರಣಿಯಲ್ಲಿ ಭಾಗಿಯಾಗಿದ್ದಾರೆ.

''ಅಂಬೇಡ್ಕರ್‌ ಓದಿಕೊಂಡವರಿಗಿಂತ, ಅಂಬೇಡ್ಕರ್ ಸಾಹಿತ್ಯ ಮತ್ತು ವಿಚಾರ ಲೋಕವನ್ನು ಪ್ರವೇಶ ಮಾಡದಿದ್ದ ಅನೇಕರು ಇದರಲ್ಲಿ ಭಾಗಿಯಾದರು ಎಂಬುದು ನನಗೆ ಖುಷಿಯ ಸಂಗತಿ. ಈ ಸರಣಿಯನ್ನು ಕೇಳುವವರೆಗೂ ಅಂಬೇಡ್ಕರ್‌ ಬಗ್ಗೆ ಓದದೇ ಇದ್ದವರೂ, ಈ ಆಡಿಯೋ ಕೇಳುತ್ತಾ, ಅಂಬೇಡ್ಕರ್‌ ಅವರನ್ನು ಓದಲಾರಂಭಿಸಿದರು ಎಂಬುವುದೇ ನನ್ನ ಪ್ರಯತ್ನಕ್ಕೆ ಸಾರ್ಥಕ್ಯ ತಂದುಕೊಟ್ಟಿತು'' ಎಂದು ಅರುಣ್‌ ಸಂತಸದಿಂದ ಹೇಳುತ್ತಾರೆ. 

"ಡಿಜಿಟಲ್‌ ಯುಗದಲ್ಲಿ ಸಂವಹನದ ಹೊಸ ಮಾದರಿಗಳು ಬರುತ್ತಲೇ ಇರುತ್ತವೆ. ಜನಪ್ರಿಯವಾದ ಸಂಗತಿಗಳು ಸಂವಹನವಾಗುತ್ತವೆ. ಈ ತರಹದ ಚಿಂತನೆ, ವೈಚಾರಿಕತೆ ಇದರ ಭಾಗವಾಗದೆ ಹಿಂದೆ ಉಳಿದು ಬಿಡುತ್ತವೆ. ಅಂಬೇಡ್ಕರ್‌ ಹಾಡುಗಳು ಅದೇ ಡಿಜಿಟಲ್‌ ಮಾಧ್ಯಮದಲ್ಲಿ ಜನಪ್ರಿಯವಾಗುತ್ತವೆ. ಆದರೆ ಅವರ ಚಿಂತನೆಗಳು ಹಿಂದೆ ಉಳಿದು ಬಿಡುತ್ತವೆ. ಅಂಬೇಡ್ಕರ್ ಅವರ ಚಿಂತನೆಗಳನ್ನು ವಿಸ್ತರಿಸಲು ಅವಕ್ಕೆ ಡಿಜಿಟಲ್ ರೂಪ ನೀಡುವುದೇ ಮಾರ್ಗ ಎಂದುಕೊಂಡು 'ಓದು ಸರಣಿ' ಪ್ರಯತ್ನ ಆರಂಭಿಸಿದೆ''.

ಹಲವು ಸಮಕಾಲೀನ ಸಾಮಾಜಿಕ, ಆರ್ಥಿಕ, ರಾಜಕೀಯ ಬೆಳವಣಿಗೆಗಳನ್ನು ಗಮನಿಸಿ, ಅದಕ್ಕೆ ಸಂವಾದಿಯಾಗಿ ಅಂಬೇಡ್ಕರ್‌ ಚಿಂತನೆಗಳನ್ನು ಓದಿಸಿದ್ದು, ಈ ಸರಣಿಯ ಮತ್ತೊಂದು ವೈಶಿಷ್ಟ್ಯತೆ. ಭಗವದ್ಗೀತೆ, ಸಂಸ್ಕೃತ ಭಾಷೆ, ಬಸವಣ್ಣ ಹೀಗೆ ಹಲವು ವಿಷಯಗಳು ಈ ಸರಣಿಯಲ್ಲಿ ಬಂದಿವೆ. ಅಂಬೇಡ್ಕರ್‌ ಚಿಂತನಾ ಕ್ರಮದ ಎಲ್ಲ ವಿನ್ಯಾಸಗಳನ್ನು ಈ ಓದು ಸರಣಿ ದಾಖಲಿಸುವ ಪ್ರಯತ್ನ ಮಾಡಿದೆ ಎನ್ನಬಹುದು.

ಇದನ್ನು ಓದಿದ್ದೀರಾ? | ಮೋಕ್ಷಮ್ಮ ಸಂದರ್ಶನ | ಇವತ್ತು ದೇವದಾಸಿಯರ ಮಕ್ಕಳು ಎಂಜಿನಿಯರ್‌, ಡಾಕ್ಟರ್‌, ಪಿಡಿಓ, ಕಂಡಕ್ಟರ್, ಟೀಚರ್‌ಗಳಾಗಿದಾರೆ

ಈ ಸರಣಿಯಲ್ಲಿ 'ಪ್ರಜ್ಞೆ ಮತ್ತು ಶೀಲ'ದ ಭಾಗವನ್ನು ಓದಿರುವ ಕೃಷಿಕ ಮಂಜುನಾಥಸ್ವಾಮಿ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುವುದು ಹೀಗೆ: ''ಅಂಬೇಡ್ಕರ್‌ ಓದು' ಸರಣಿಯ ಭಾಗವನ್ನು ಅಂಬೇಡ್ಕರ್‌ ಅವರನ್ನು ತಿಳಿದುಕೊಳ್ಳುವುದಕ್ಕಾಗಿಯೇ ಓದಲು ಆರಂಭಿಸಿದವನು ನಾನು. ಇಷ್ಟು ನಿರಂತರವಾಗಿ ಒಂದು ವಿಷಯದ ಮೇಲೆ ಕೆಲಸ ಮಾಡುವುದು ಮತ್ತು ಒಂದು ಸಂಸ್ಥೆ ಮಾಡಬೇಕಿದ್ದ ಕೆಲಸವನ್ನು ಅರುಣ್‌ ಒಬ್ಬರೇ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.'' 

ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಬಿ ಯು ಸುಮಾ, ಅಂಬೇಡ್ಕರ್‌ ಕುರಿತ ಐಚ್ಛಿಕ ವಿಷಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಈ ಓದು ಸರಣಿಯನ್ನು ಪೂರಕ ಪಠ್ಯವಾಗಿ ಗಮನಿಸುವಂತೆ ಸೂಚಿಸಿದ್ದಾರೆ.

''ಆಡಿಯೋ ಮತ್ತು ವಿಡಿಯೋ ಮಕ್ಕಳ ನಡುವೆ ಜನಪ್ರಿಯವಾಗಿರುವ ಮಾಧ್ಯಮಗಳು. ಓದುವ ವ್ಯವಧಾನವಿಲ್ಲದ ಕಾಲದಲ್ಲಿ ಮಕ್ಕಳನ್ನು ಸುಲಭವಾಗಿ ತಲುಪುವ ವಿಧಾನವಿದು. ಕೋವಿಡ್‌ನ ಕಾಲದಲ್ಲಿ ಲೈಬ್ರರಿಯನ್ನು ಅವಲಂಬಿಸಿದ ಸಂಶೋಧನಾ ವಿದ್ಯಾರ್ಥಿಗಳಿಗೆ 'ಅಂಬೇಡ್ಕರ್‌ ಓದು' ನಿಜಕ್ಕೂ ನೆರವಾಗಿದೆ. ಸಾಮಾಜಿಕ, ರಾಜಕೀಯ ಚಿಂತನೆಗಳನ್ನು ಓದಿ ಅರಗಿಸಿಕೊಳ್ಳುವುದು ಸುಲಭವಲ್ಲ. 'ಅಂಬೇಡ್ಕರ್‌ ಓದು'ನಲ್ಲಿ ತಾತ್ವಿಕ ಸಂಗತಿಗಳನ್ನು ಕೇಳುವ ಮೂಲಕ ಮಕ್ಕಳೂ ಕೂಡ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಎಲ್ಲವೂ ರಾಜಕೀಯ ಬಣ್ಣ ಪಡೆಯುವ ಈ ಕಾಲದಲ್ಲಿ, ಯಾವುದೇ ರಾಜಕೀಯದ ಸೋಂಕಿಲ್ಲದೆ, ಜ್ಞಾನವಾಗಿ, ಅಷ್ಟೇ ಅಲ್ಲ, ತಿಳಿವಳಿಕೆಯಾಗಿ ಅರುಣ್‌ ಅವರು ಮಾಡಿದ 'ಅಂಬೇಡ್ಕರ್‌ ಓದು' ಬಹಳ ದೊಡ್ಡ ಕೆಲಸ" ಎಂದು ಬಿ ಯು ಸುಮಾ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

ಡಿಜಿಟಲ್‌ ಲೋಕದಲ್ಲಿ ಅಂಬೇಡ್ಕರ್‌ ದನಿ ದಾಖಲಿಸುವುದು ವಿಶೇಷ ಪ್ರಯತ್ನ. ಇದನ್ನು ಮತ್ತಷ್ಟು ಹೊಸತನ, ಹೊಸ ಆಯಾಮ ಪಡೆದುಕೊಳ್ಳುವಂತೆ ವಿಸ್ತರಿಸುವ ಆಶಯ ಅರುಣ್‌ ಜೋಳದ ಕೂಡ್ಲಿಗಿಯವರದ್ದು.

ಅರುಣ್‌ ಅವರ 'ಅಂಬೇಡ್ಕರ್‌ ಓದು' ಸರಣಿಯಿಂದ ಆಯ್ದ ಕೆಲವು ಓದುಗಳ ಲಿಂಕ್‌ ಇಲ್ಲಿವೆ:

 

 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app