ಉತ್ತರ ಪ್ರದೇಶ| ಸಮವಸ್ತ್ರ ಧರಿಸದ ದಲಿತ ಬಾಲಕಿ ಮೇಲೆ ಹಲ್ಲೆ, ಶಾಲೆಯಿಂದ ಹೊರದಬ್ಬಿದ ಮಾಜಿ ಗ್ರಾಮ ಪ್ರಧಾನ್!

  • ಗ್ರಾಮದ ಮಾಜಿ ಪ್ರಧಾನ್ ಮನೋಜ್ ಕುಮಾರ್ ದುಬೆ ವಿರುದ್ಧ ಪ್ರಕರಣ ದಾಖಲು
  • ಶಾಲೆಗೆ ಹೋಗಿ ಶಿಕ್ಷಕರು, ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಆರೋಪಿ

ಸಮವಸ್ತ್ರ ಧರಿಸಿ ಶಾಲೆಗೆ ಬಂದಿಲ್ಲ ಎಂಬ ಕಾರಣಕ್ಕೆ ಗ್ರಾಮದ ಮಾಜಿ ಪ್ರಧಾನ್ ಓರ್ವ ದಲಿತ ಸಮುದಾಯದ ಬಾಲಕಿಯನ್ನು ಥಳಿಸಿ, ಶಾಲೆಯಿಂದ ಹೊರಗೆ ಹಾಕಿರುವ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ಮಂಗಳವಾರ ನಡೆದಿದೆ.

ಆರೋಪಿ ಗ್ರಾಮದ ಮಾಜಿ ಪ್ರಧಾನ್ ಮನೋಜ್ ಕುಮಾರ್ ದುಬೆ ಎಂದು ಗುರುತಿಸಲಾಗಿದೆ. ಆತ ಅಧಿಕಾರಿಯೂ ಅಲ್ಲ, ಶಿಕ್ಷಕನೂ ಅಲ್ಲ, ಆದರೂ ಪ್ರತಿದಿನ ಶಾಲೆಗೆ ಹೋಗಿ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ ಎಂದು ಚೌರಿ ಪೊಲೀಸ್ ಠಾಣೆಯ ಗಿರಿಜಾ ಶಂಕರ್ ಯಾದವ್ ತಿಳಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಬಾಲಕಿಯು ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಸೋಮವಾರ ಆಕೆ ಸಮವಸ್ತ್ರ ಧರಿಸಿರಲಿಲ್ಲ. ಇದನ್ನು ಆರೋಪಿಯು ಪ್ರಶ್ನಿಸಿದ್ದ. ತನ್ನ ತಂದೆ ಸಮವಸ್ತ್ರ ತಂದುಕೊಟ್ಟಿಲ್ಲ, ತಂದುಕೊಟ್ಟ ಮೇಲೆ ಅದನ್ನು ಹಾಕಿಕೊಂಡು ಬರುತ್ತೇನೆ ಎಂದು ಬಾಲಕಿ ತಿಳಿಸಿದ್ದಾಳೆ. ಆಕೆಯ ಮಾತಿನಿಂದ ಕೆರಳಿದ ದುಬೆ ತರಗತಿ ಕೊಠಡಿಯಲ್ಲೇ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ತರಗತಿಯಿಂದ ಹೊರಗೆ ತಳ್ಳಿದ್ದಾನೆ” ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಾಸನ| ಕರು ಸಾಗಿಸುತ್ತಿದ್ದ ದಲಿತರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ಆಕ್ರೋಶ

ಬಾಲಕಿಯ ತಾಯಿ ನೀಡಿದ ದೂರು ಆಧರಿಸಿ ಆರೋಪಿಯ ವಿರುದ್ಧ ಹಲ್ಲೆ, ಬೆದರಿಕೆ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಯಾದವ್‌ ತಿಳಿಸಿದ್ದಾರೆ.

ದಿ ಹಿಂದೂ ಪತ್ರಿಕೆಯ ಮಾಹಿತಿ ಆಧಾರಿತ ವರದಿ
ನಿಮಗೆ ಏನು ಅನ್ನಿಸ್ತು?
2 ವೋಟ್