ಉತ್ತರಪ್ರದೇಶ| ಒಂದು ಲಕ್ಷ ರೂ. ಸಾಲಕ್ಕೆ 10 ಲಕ್ಷ ರೂ. ಬಡ್ಡಿ ಕೊಡಲು ಒಪ್ಪದ ದಲಿತನ ಹತ್ಯೆ !

  • 11 ಲಕ್ಷ ರೂ. ಬದಲಾಗಿ ಕೃಷಿ ಜಮೀನು ಬಿಟ್ಟುಕೊಡುವಂತೆ ಒತ್ತಡ
  • ದಲಿತ ವ್ಯಕ್ತಿ ಅಪಹರಿಸಿ ತಲೆಗೆ ಗುಂಡಿಕ್ಕಿ ಹತ್ಯೆ; ಎಫ್ಐಆರ್ ದಾಖಲು 

ಸಾಲಕ್ಕೆ ಅಧಿಕ ಬಡ್ಡಿ ನೀಡದ ಕಾರಣಕ್ಕೆ ಮೇಲ್ಜಾತಿಯ ವ್ಯಕ್ತಿಯೊಬ್ಬ ದಲಿತ ಯುವಕನನ್ನು ಅಪಹರಿಸಿ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಭೀಕರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮೈನ್ಪುರಿ ಜಿಲ್ಲೆಯ ಬಜೇರಾ ಗ್ರಾಮದ ಮನೋಜ್ ಕುಮಾರ್(33) ಕೊಲೆಯಾದ ವ್ಯಕ್ತಿ. ಮನೋಜ್ ಕುಮಾರ್ ಕಳೆದ ವರ್ಷ ಮೇಲ್ವರ್ಗದ ಶಿವೇಂದ್ರ ಸಿಂಗ್ ಎಂಬುವನಿಂದ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಆದರೆ, ಬಡ್ಡಿ ಮತ್ತು ಸಾಲದ ಮೊತ್ತವನ್ನು ಹಿಂತಿರುಗಿಸಿರಲಿಲ್ಲ. ಹಾಗಾಗಿ ಸಾಲ ನೀಡಿದ ಶಿವೇಂದ್ರ ಸಿಂಗ್, 10 ಲಕ್ಷ ರೂಪಾಯಿ ಬಡ್ಡಿ ಮತ್ತು ಒಂದು ಲಕ್ಷ ರೂ. ಅಸಲು ಸೇರಿ ಒಟ್ಟು 11 ಲಕ್ಷ ರೂ. ನೀಡು ಇಲ್ಲವೆ, ಆ ಹಣದ ಬದಲಿಗೆ ಕೃಷಿ ಭೂಮಿ ಬಿಟ್ಟುಕೊಡು ಎಂದು ಒತ್ತಡ ಹಾಕಿದ್ದಾನೆ.

ಆದರೆ, ತಾನು ಜಮೀನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಮನೋಜ್ ಕುಮಾರ್ ಹೇಳಿದ್ದು, ಇಬ್ಬರ ನಡುವೆ ಈ ವಿಷಯದಲ್ಲಿ ವಾಗ್ವಾದ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ.

ಮನೋಜ್ ಕುಮಾರ್‌ಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಮನೋಜ್ ಕುಮಾರ್ ಅವರ ಸಹೋದರ ಸತೀಶ್ ಎಂಬುವರನ್ನು 2015ರಲ್ಲಿ ಇದೇ ರೀತಿ ಹತ್ಯೆ ಮಾಡಲಾಗಿತ್ತು. 

ಮನೋಜ್ ಕುಮಾರ್ ಹತ್ಯೆಯ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಕುಟುಂಬಸ್ಥರು ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು. ಬಳಿಕ ಹಿರಿಯ ಅಧಿಕಾರಿಗಳ ಭರವಸೆ ಮೇರೆಗೆ ಅಂತ್ಯಕ್ರಿಯೆ ನೆರವೇರಿಸಲು ಒಪ್ಪಿದರು.

“ಮೇಲ್ಜಾತಿಯವರು ನಮ್ಮ ಜಮೀನು ಕಬಳಿಸಲು ಯತ್ನಿಸುತ್ತಿದ್ದರಿಂದ ನನ್ನ ಪತಿ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಕೊಲೆಯಾದ ಹಿಂದಿನ ರಾತ್ರಿ ಸ್ವಲ್ಪ ಹೊತ್ತಿನಲ್ಲಿ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ತಡರಾತ್ರಿಯಾದರೂ ವಾಪಸ್ ಬಾರದೆ ಇದ್ದಾಗ ಹುಡುಕಾಟ ಆರಂಭಿಸಿದೆವು. ಬಳಿಕ ಕೊಲೆ ಬೆದರಿಕೆ ಹಾಕುತ್ತಿದ್ದ ನಾಲ್ವರ ವಿರುದ್ಧ ದೂರು ನೀಡಲಾಗಿತ್ತು. ಆದರೆ, ಪೊಲೀಸರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ಪತಿಯ ಶವ ಗ್ರಾಮದ ಸಮೀಪದ ಜೋಳದ ಹೊಲದಲ್ಲಿ ಪತ್ತೆಯಾಗಿದೆ” ಎಂದು ಮನೋಜ್ ಕುಮಾರ್ ಅವರ ಪತ್ನಿ ಪೂಜಾ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ| ಹಣ ಕೊಡದಿದ್ದಕ್ಕೆ ಗರ್ಭಿಣಿಯನ್ನು ನಡುರಸ್ತೆಯಲ್ಲಿ ಇಳಿಸಿಹೋದ ಆಂಬುಲೆನ್ಸ್ ಚಾಲಕ

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಾದ ಬಜೇರಾ ಗ್ರಾಮದ ಶಿವೇಂದ್ರ ಸಿಂಗ್, ವಿಷ್ಣು ಠಾಕೂರ್, ಅತುಲ್ ಠಾಕೂರ್ ಮತ್ತು ಸುದೀಪ್ ಕುಮಾರ್ ಎಂಬುವರ ವಿರುದ್ಧ ಐಪಿಸಿ ಸೆಕ್ಷನ್ 384 (ಸುಲಿಗೆ), 364 (ಕೊಲೆಗಾಗಿ ಅಪಹರಣ ಅಥವಾ ಅಪಹರಣ) ಮತ್ತು ಸೆಕ್ಷನ್ 3(2) (ವಿ) ಅಡಿಯಲ್ಲಿ  ಹಾಗೂ ಎಸ್ಸಿ ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಬೇವಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. 

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕೇಶ್ ಸಿಂಗ್, "ನಾವು ಸಾಕ್ಷ್ಯ ಮತ್ತು ಫೋನ್ ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಮರಣೋತ್ತರ ಪರೀಕ್ಷೆಯ ನಂತರ ಶವ ಸಂಸ್ಕಾರ ನಡೆಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಗ್ರಾಮದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಎಸ್ಎಸ್ಪಿ ಕಮಲೇಶ್ ಕುಮಾರ್ ದೀಕ್ಷಿತ್ ವಿಶೇಷ ತಂಡ ರಚಿಸಲಾಗಿದೆ” ಎಂದು ತಿಳಿಸಿದ್ದಾರೆ.

'ಟೈಮ್ಸ್‌ ಆಫ್‌ ಇಂಡಿಯಾ' ಮಾಹಿತಿ ಆಧರಿತ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180