ಉತ್ತರ ಪ್ರದೇಶ | ದಲಿತ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ

  • ಠಾಕೂರ್ ಸಮುದಾಯದ ಪತಿಯ ಕುಟುಂಬದವರಿಂದಲೇ ಚಾಕು ಇರಿತ
  • ಯುವತಿಯ ಖಾಸಗಿ ಭಾಗಗಳಿಗೆ ಕೋಲಿನಿಂದ ಚುಚ್ಚಿ ವಿಕೃತಿ; ಆಸ್ಪತ್ರೆಗೆ ದಾಖಲು

ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ದಲಿತ ಯುವತಿಯನ್ನು ಠಾಕೂರ್ ಸಮುದಾಯದ ಪತಿಯ ಕುಟುಂಬದವರು ಅಮಾನುಷವಾಗಿ ಥಳಿಸಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿರುವುದು ಮಾತ್ರವಲ್ಲದೇ ಯುವತಿಯ ಖಾಸಗಿ ಭಾಗಗಳಿಗೆ ಕೋಲಿನಿಂದ ತೀವ್ರವಾಗಿ ಗಾಯಗೊಳಿಸಿರುವ ವಿಕೃತ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ.

ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಪೋಷಕರ ವಿರೋಧದ ನಡುವೆಯೂ ಅಂತರ್‌ಜಾತಿ ವಿವಾಹವಾಗಿದ್ದರು. ಇದರಿಂದ ಯುವಕನ ಕುಟುಂಬಸ್ಥರು ಕೋಪಗೊಂಡಿದ್ದರು. ವಿವಾಹವಾಗಿ ಎಂಟು ವರ್ಷದ ಬಳಿಕ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಮದನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯುವಕ ಬೇಲೂರಘಟ್ಟ ಗ್ರಾಮದ ನಿವಾಸಿಯಾಗಿದ್ದು, ಠಾಕೂರ್ ಜಾತಿಗೆ ಸೇರಿದವನು. ಈತ ದೆಹಲಿಯಲ್ಲಿ ವಾಸಿಸುತ್ತಿದ್ದ. ಸುಮಾರು 8 ವರ್ಷಗಳ ಹಿಂದೆ ದೆಹಲಿಯ ಗುರ್ಗಾಂವ್‌ನ ದಲಿತ ಸಮುದಾಯದ ಹುಡುಗಿಯನ್ನು ಮದುವೆಯಾಗಿದ್ದ. ಮದುವೆಯಾದ ಕೆಲವು ವರ್ಷಗಳವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ, ಮದುವೆಯಾಗಿ 8 ವರ್ಷಗಳ ನಂತರ, ಹುಡುಗಿಯ ಅತ್ತೆ ತುಂಬಾ ಕೋಪಗೊಂಡಿದ್ದರು.

ಇತ್ತೀಚೆಗೆ ಯುವತಿ ತನ್ನ ಪತಿಯೊಂದಿಗೆ ದೆಹಲಿಯಿಂದ ಎಲ್ಲ ಸಾಮಾನುಗಳನ್ನು ತೆಗೆದುಕೊಂಡು ಡಿಯೋರಿಯಾ ಗ್ರಾಮಕ್ಕೆ ಹಿಂತಿರುಗಿದ್ದರು. ಈ ವೇಳೆ ಯುವಕನ ಮನೆಯವರ ಜತೆಗೆ ತೀವ್ರ ವಾಗ್ವಾದ ನಡೆದಿತ್ತು. ವಿವಾದದ ನಂತರ, ಯುವಕನ ಕುಟುಂಬದವರು ಮನೆಯಲ್ಲಿ ಇರಲು ಅವಕಾಶ ನೀಡದ ಹಿನ್ನೆಲೆಯಲ್ಲಿ ದಂಪತಿ ಪುಟ್ಟ ಮಗಳೊಂದಿಗೆ ಅದೇ ಗ್ರಾಮದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಿದ್ದರು. ಆದರೂ ಕಿರುಕುಳ ತಪ್ಪಿರಲಿಲ್ಲ.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ| ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ

ಒಂದು ರಾತ್ರಿ ಅತ್ತೆ, ಮಾವ ಸೇರಿದಂತೆ ಹಲವರು ಬಂದು ಯುವಕ ಹಾಗೂ ಯುವತಿಯ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಯುವತಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಲಾಗಿದೆ. ಯುವಕ ಕೂಡ ಗಾಯಗೊಂಡಿದ್ದು, ಆತ ಹೇಗೋ ಛಾವಣಿಯಿಂದ ಜಿಗಿದು ತನ್ನ ಮಗಳೊಂದಿಗೆ ಓಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ಮಧ್ಯೆ ಯುವತಿ ಹೋರಾಡುತ್ತಿದ್ದಾಳೆ.

ಈ ಕುರಿತು 'ನ್ಯೂಸ್ -18' ಹಿಂದಿ ವೆಬ್‌ಸೈಟ್‌ ವರದಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್