ಉತ್ತರ ಪ್ರದೇಶ | ದಲಿತ ವಿಶೇಷಚೇತನ ಬಾಲಕಿಯ ಕೈ ಮೇಲೆ ಕುದಿಯುವ ಸಾಂಬರ್ ಸುರಿದ ಮುಖ್ಯ ಶಿಕ್ಷಕ

  • ಎರಡನೇ ತರಗತಿ ಓದುತ್ತಿರುವ ಬಾಲಕಿಗೆ ಇರುವುದು ಬಲಗೈ ಮಾತ್ರ
  • ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸುತ್ತಿಲ್ಲವೆಂದು ಪೋಷಕರ ಆರೋಪ 

ದಲಿತ ವಿಶೇಷಚೇತನ ಬಾಲಕಿಯ ಕೈ ಮೇಲೆ ಮುಖ್ಯ ಶಿಕ್ಷಕನೊಬ್ಬ ಕುದಿಯುತ್ತಿರುವ ಸಾಂಬರ್‌ ಸುರಿದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. 

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಟಿಕಾಯತ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪುರದಲೈನ ಇಚೋಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಲಕ್ಷ್ಮೀ ರಾವತ್ ಕೈ ಮೇಲೆ ಮುಖ್ಯ ಶಿಕ್ಷಕ ಅಮೀನ್ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. 

ವಿದ್ಯಾರ್ಥಿನಿ ಮನೆಗೆ ಬಂದು ಘಟನೆ ಬಗ್ಗೆ ತಿಳಿಸಿದ್ದಾಳೆ. ಬಳಿಕ ಪೋಷಕರು ಶಾಲೆಗೆ ತೆರಳಿ ಮುಖ್ಯ ಶಿಕ್ಷಕನನ್ನು ಪ್ರಶ್ನಿಸಲು ಪ್ರಯತ್ನಿಸಿದ್ದಾರೆ. ಆದರೆ, ಪೋಷಕರಿಗೆ ಮುಖ್ಯ ಶಿಕ್ಷಕ ಜಾತಿ ನಿಂದನೆ ಮಾಡಿ ಶಾಲೆಯಿಂದ ಹೊರಗೆ ಕಳುಹಿಸಿದ್ದಾರೆ ಎಂದು ದೂರಲಾಗಿದೆ.

“ಶಾಲೆಯ ಮುಖ್ಯ ಶಿಕ್ಷಕ ತಮ್ಮ ಮಗಳು ಲಕ್ಷ್ಮೀ ರಾವತ್ ಕೈಗೆ ಕುದಿಯುವ ಸಾಂಬರ್‌ ಸುರಿದಿದ್ದಾರೆ. ಆಕೆಯ ಕೈ ಮಣಿಕಟ್ಟು ಭಾಗ ಸುಟ್ಟು ಹೋಗಿದೆ. ನಾವು ದಲಿತರೆಂಬ ಕಾರಣಕ್ಕೆ ಇಂತಹ ಕೃತ್ಯ ಎಸಗಲಾಗಿದೆ. ಈ ಬಗ್ಗೆ ಅನೇಕ ಪೊಲೀಸ್ ಠಾಣೆಗಳಿಗೆ ದೂರು ನೀಡಲು ಹೋದರೂ, ಯಾರು ನಮ್ಮ ದೂರನ್ನು ಸ್ವೀಕರಿಸುತ್ತಿಲ್ಲ” ಎಂದು ಸಂತ್ರಸ್ತ ಬಾಲಕಿಯ ತಾಯಿ ಪಾಸಿ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

“ತಮ್ಮ ಮಗಳ ಕೈಯನ್ನು ಸುಟ್ಟು ಹಾಕಲಾಗಿದೆ. ಈ ಬಗ್ಗೆ ಎಲ್ಲಿಯೂ ನಮಗೆ ನ್ಯಾಯ ಸಿಗುತ್ತಿಲ್ಲ. ನಾವು ಅಸ್ಪೃಶ್ಯರಾಗಿರುವುದರಿಂದ ಜನರು ಕೂಡ ನಮ್ಮ ಸಹಾಯಕ್ಕೆ ಬರುತ್ತಿಲ್ಲ. ಬದಲಿಗೆ ನಮ್ಮನ್ನೇ ಗೇಲಿ ಮಾಡುತ್ತಿದ್ದಾರೆ” ಎಂದು ಬಾಲಕಿಯ ತಾಯಿ ಕಂಬನಿ ಮಿಡಿದಿದ್ದಾರೆ.

ಆರೋಪ ನಿರಾಧಾರ ಎಂದ ಮುಖ್ಯ ಶಿಕ್ಷಕ 

“ನನ್ನ ಮೇಲೆ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ. ವಿದ್ಯಾರ್ಥಿಯು ವಿಶೇಷಚೇತನೆಯಾಗಿದ್ದು, ಆಕೆ ಸೇರಿದಂತೆ ಉಳಿದ ವಿಶೇಷಚೇತನ ಮಕ್ಕಳಿಗೆ ಪ್ರತ್ಯೇಕವಾಗಿ ಊಟ ನೀಡಲಾಗುತ್ತಿದೆ. ಶಾಲೆಯಲ್ಲಿ ಇಂತಹ ಘಟನೆ ನಡೆದಿಲ್ಲ. ಶಾಲೆಯಲ್ಲಿ ಅಸ್ಪೃಶ್ಯತೆ ಆಚರಿಸಲಾಗಿದೆ ಎಂಬುದು ಸುಳ್ಳು” ಎಂದು ಮುಖ್ಯ ಶಿಕ್ಷಕ ಅಮೀನ್ ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ದಲಿತ ಬಾಲಕನನ್ನು ಕಟ್ಟಿಹಾಕಿ ಥಳಿಸಿದ ಜೈನ ಬ್ರಹ್ಮಚಾರಿ

ತನಿಖೆಗೆ ಆದೇಶ

ಘಟನೆಯ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಬಾರಾಬಂಕಿಯ ಜಿಲ್ಲಾ ನ್ಯಾಯಾಧೀಶ ಆದರ್ಶ್ ಸಿಂಗ್ ಅವರು ತನಿಖೆಗೆ ಆದೇಶಿಸಿದ್ದಾರೆ. ಬಾಲಕಿ ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ್ದು, ನಂತರ ಜಿಲ್ಲಾಧಿಕಾರಿಯವರು ಬಾರಾಬಂಕಿಯ ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಸಂತೋಷ್ ಪಾಂಡೆ ಅವರಿಗೆ ಸೂಚನೆ ನೀಡಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ಬಾರಾಬಂಕಿಯ ಹೆಚ್ಚುವರಿ ಎಸ್ಪಿ ಪೂರ್ಣೇಂದು ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಬಿಎಸ್ಎ ಸಿದ್ಧಪಡಿಸಿದ ವರದಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ನಿರ್ದೇಶನದ ಮೇರೆಗೆ ಪೊಲೀಸರು ಕಾರ್ಯನಿರ್ವಹಿಸುತ್ತಾರೆ" ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್