
- ಬಿಜೆಪಿ ಯುವ ಮುಖಂಡ ಸೇರಿದಂತೆ 15 ಮಂದಿ ವಿರುದ್ಧ ಎಫ್ಐಆರ್
- ಮತ್ತೆ ದಾಳಿ ನಡೆಸುವ ಭಯವಿದ್ದು, ರಕ್ಷಣೆ ನೀಡುವಂತೆ ದಲಿತರ ಮನವಿ
ಪೌರಕಾರ್ಮಿಕ ಕೆಲಸ ಮಾಡುವ ದಲಿತ ಮಹಿಳೆಯ ಮನೆಯಲ್ಲಿ ವಿವಾಹ ಸಮಾರಂಭದ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದಕ್ಕೆ, ಆಕೆಯ ಮನೆ ಮೇಲೆ ಕಲ್ಲು ತೂರಾಟ ಮಾಡಿರುವ ಘಟನೆ ಉತ್ತರ ಪ್ರದೇಶದ ಇಟಾಹನಲ್ಲಿ ನಡೆದಿದೆ.
ಸಮಾರಂಭಕ್ಕೆ ಟೆಂಟ್ ಸಾಮಗ್ರಿ ತರುತ್ತಿದ್ದಾಗ ದಲಿತ ಯುವಕನ ಜೊತೆಗೆ ಮೇಲ್ಜಾತಿಯ ವ್ಯಕ್ತಿ ಆತನೊಂದಿಗೆ ಜಗಳವಾಡಿದ್ದ. ಈ ಕಾರಣದಿಂದಾಗಿ ದಲಿತ ಕಾಲೋನಿಗೆ ನುಗ್ಗಿ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಗಾಯಗೊಂಡ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇಟಾಹ್ ಜಿಲ್ಲೆಯ ರಾಂಪುರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿ ಯುವ ಮುಖಂಡ ಸೇರಿ 15 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಲ್ಲೆಯಿಂದ ಗಾಯಗೊಂಡ ದಲಿತ ಯುವಕ ರಾಜೇಂದ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ, “ಜನವರಿ 12 ರಂದು ರಾತ್ರಿ 7.30ರ ಸುಮಾರಿಗೆ ಟೆಂಟ್ ಸಾಮಗ್ರಿ ಹೊತ್ತುಕೊಂಡು ಮೊಹಲ್ಲಾ ಕಹರಾನ್ ಮೂಲಕ ಹೋಗುತ್ತಿದ್ದರು. ಚಂದನ್ ಎಂಬ ವ್ಯಕ್ತಿ ಆತನನ್ನು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ. ಚಂದನ್ ಕಶ್ಯಪ್ ಭಾರತೀಯ ಜನತಾ ಯುವ ಮೋರ್ಚಾದ ಸಹ-ಕಚೇರಿ ಉಸ್ತುವಾರಿ. ಈ ಚಂದನ್ ನೇತೃತ್ವದ ಗುಂಪು ದಲಿತರ ಮೇಲೆ ದಾಳಿ ಮಾಡಿದೆ” ಎಂದು ಆರೋಪಿಸಿದ್ದಾರೆ.

ಎಫ್ಐಆರ್ ದಾಖಲಾದರೂ ಈವರೆಗೂ ಯಾರನ್ನೂ ಬಂಧಿಸಿಲ್ಲ. ಪೊಲೀಸ್ ಠಾಣೆಗೆ ದೂರು ನೀಡಿರುವುದರಿಂದ ದಲಿತ ಕುಟುಂಬದ ಮೇಲೆ ಮತ್ತೆ ದಾಳಿ ಮಾಡುವ ಸಾಧ್ಯತೆ ಇದ್ದು, ಪೊಲೀಸರು ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ ? ತಮಿಳುನಾಡು | ನೀರಿನ ಟ್ಯಾಂಕ್ಗೆ ಮಲ ಸುರಿದ ಪ್ರಕರಣ ಸಿಬಿ-ಸಿಐಡಿ ತನಿಖೆಗೆ ವರ್ಗಾವಣೆ
ಇಟಾಹ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್ ಸಿಂಗ್ ಕುಶ್ವಾಹ, ಈ ಬಗ್ಗೆ ಪ್ರತಿಕ್ರಿಯಿಸಿ, "ಜನವರಿ 12 ರಂದು ರಾತ್ರಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿತ್ತು. ಈವರೆಗೂ ಯಾವುದೇ ಬಂಧನವಾಗಿಲ್ಲ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಘಟನೆ ನಡೆದ ಸ್ಥಳದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗುವುದು” ಎಂದು ತಿಳಿಸಿದ್ದಾರೆ.