ರಾಜಸ್ಥಾನ | ಅಕ್ರಮ ಸಂಬಂಧ ಶಂಕೆ; ಪತ್ನಿಯನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ಪತಿ

  • ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಖಮೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
  • ಮಹಿಳೆಗೆ ಥಳಿಸುವ ವಿಡಿಯೋ ವೈರಲ್; ಆರು ಮಂದಿ ವಿರುದ್ಧ ಎಫ್ಐಆರ್

ಮಹಿಳೆಯನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ಸ್ವಾರಾದ ಖಮೇರಾ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಜುಲೈ 29 ರಂದು ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಖಮೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತನ್ನ ಸ್ನೇಹಿತನೊಂದಿಗೆ ಪತ್ನಿ ಇದ್ದಿದ್ದನ್ನು ನೋಡಿದ ವ್ಯಕ್ತಿ ಆಕ್ರೋಶಗೊಂಡು ಆಕೆಯನ್ನು ಮರಕ್ಕೆ ಕಟ್ಟಿ ದೊಣ್ಣೆಯಿಂದ ತೀವ್ರವಾಗಿ ಥಳಿಸಿದ್ದಾನೆ. ಈ ವಿಡಿಯೋಗಳನ್ನು ಟ್ರೈಬಲ್ ಆರ್ಮಿ ಮತ್ತು ಎಎನ್ಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿವೆ. 
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪತ್ನಿ ತನ್ನ ಗಂಡನ ವಿರುದ್ಧ ಶುಕ್ರವಾರ ರಾತ್ರಿ ದೂರು ನೀಡಿ ಎಫ್ಐಆರ್ ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ಪತಿ ಸೇರಿದಂತೆ ಆರು ಮಂದಿಯನ್ನು ಶನಿವಾರ ಬೆಳಿಗ್ಗೆ ಬಂಧಿಸಲಾಗಿದೆ.

“ಮರಕ್ಕೆ ಕಟ್ಟಿಹಾಕಿದ್ದ ಮಹಿಳೆಯನ್ನು ವ್ಯಕ್ತಿಯೊಬ್ಬ ಥಳಿಸಿದ ವಿಡಿಯೋ ಶನಿವಾರ ರಾತ್ರಿ ವೈರಲ್ ಆಗಿದೆ. ಸಂತ್ರಸ್ತೆಯನ್ನು ಪತ್ತೆ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಗಳನ್ನು ಗುರುತಿಸಲಾಗಿದೆ. ಒಟ್ಟು 6 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಇಬ್ಬರು ಅಪ್ರಾಪ್ತರು. ಸಂತ್ರಸ್ತೆಯ ಪತಿ ಮತ್ತು ಅತ್ತೆಯಂದಿರ ವಿರುದ್ಧವು ಪ್ರಕರಣ ದಾಖಲಾಗಿದೆ” ಎಂದು ಬನ್ಸ್ವಾರಾ ಎಸ್ಪಿ ರಾಜೇಶ್ ರಾಜೇಶ್ ಕುಮಾರ್ ಮೀನಾ ತಿಳಿಸಿದ್ದಾರೆ.

“ಮಹಿಳೆ ತನ್ನ ಕೆಲಸದ ನಿಮಿತ್ತ ಜುಲೈ 24 ರಂದು ಘಟೋಲ್ ಗ್ರಾಮಕ್ಕೆ ಭೇಟಿ ನೀಡಿದ್ದಳು. ಆಕೆಯ ಅತ್ತೆಯಂದಿರು ಘಟೋಲ್ಗೆ ಸಮೀಪವಿರುವ ಹೀರೋ ಗ್ರಾಮದಲ್ಲಿ ನೆಲೆಸಿದ್ದಾರೆ. ಘಟೋಲ್ ಗ್ರಾಮದಲ್ಲಿ, ಆಕೆ ತನ್ನ ಹಳೆಯ ಸ್ನೇಹಿತ ದೇವಿಲಾಲ್ ಮೇಡಾ ಬಳಿ ತನ್ನ ಚಿಕ್ಕಮ್ಮನ ಮನೆಗೆ ತನ್ನನ್ನು ಬಿಡುವಂತೆ ಕೇಳಿಕೊಂಡಳು. ಅದರಂತೆ, ದೇವಿಲಾಲ್ ಆಕೆಯ ಚಿಕ್ಕಮ್ಮನ ಮನೆಗೆ ಅವಳನ್ನು ಬಿಟ್ಟದ್ದ. ಈ ವಿಷಯ ಮಹಿಳೆಯ ಪತಿ ಮಹಾವೀರ್ ಕಟಾರಾಗೆ ಗೊತ್ತಾಗಿತ್ತು. ತನ್ನ ಸ್ನೇಹಿತನೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಯನ್ನು ಮರಕ್ಕೆ ಕಟ್ಟಿ ಥಳಿಸಿದ್ದಾನೆ” ಎಂದು ಘಟೋಲ್ ಡಿವೈಎಸ್ಪಿ ಕೈಲಾಶ್ ಚಂದ್ರ ಬೋರಿವಾಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಶಾಲೆಗೆ ಹೋಗದಂತೆ ದಲಿತ ಬಾಲಕಿಯ ಬ್ಯಾಗ್ ಕಿತ್ತುಕೊಂಡು ದೌರ್ಜನ್ಯ

ಹಲ್ಲೆಯ ಮೂರು ವಿಡಿಯೋಗಳನ್ನು ಆರೋಪಿಗಳು ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಪತಿ ಮಹಾವೀರ್ ಕಟಾರಾ, ಘಟೋಲ್‌ಗೆ ಏಕೆ ಹೋದೆ? ಎಂದು ಮಹಿಳೆಯನ್ನು ಕೇಳುವುದು ಕಂಡುಬಂದಿದೆ. ಆಪಾದಿತ ಪತಿ ಮಹಿಳೆಯನ್ನು ಮರಕ್ಕೆ ಕಟ್ಟಿ ಕೋಲಿನಿಂದ ನಿರ್ದಯವಾಗಿ ಹೊಡೆಯುವುದನ್ನು ಮತ್ತೊಂದು ವಿಡಿಯೊ ತೋರಿಸಿದೆ. ಆಕೆ ಜೋರಾಗಿ ಕೂಗಿ ಕಿರುಚಿದರೂ ಯಾರೂ ಸಹಾಯಕ್ಕೆ ಮುಂದಾಗಿಲ್ಲ.

ಘಟನೆ ಕುರಿತು ತನಿಖೆ ನಡೆಸುವಂತೆ ಘಟೋಲ್ ಡಿವೈಎಸ್ಪಿ ಕೈಲಾಶ್ ಚಂದ್ರ ಮತ್ತು ಇನ್‌ಸ್ಪೆಕ್ಟರ್‌ ಕರ್ಮವೀರ್ ಸಿಂಗ್ ಅವರಿಗೆ ಎಸ್ಪಿ ರಾಜೇಶ್ ಕುಮಾರ್ ಮೀನಾ ಆದೇಶಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್