- ‘ತಾಲೂಕಿನ ಜನತೆ ತೆರಿಗೆ ಕಟ್ಟುತ್ತಿಲ್ಲವೇ?’
- ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಎಚ್ಚರಿಕೆ
ರಸ್ತೆಗುಂಡಿ ಮುಚ್ಚುವಲ್ಲಿ ನಿರ್ಲಕ್ಷ್ಯ ಧೋರಣೆ ತೋರಿದ ಅಧಿಕಾರಿಗಳ ವಿರುದ್ದ ಆಕ್ರೋಶಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೆ.ಆರ್.ಪೇಟೆಯ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಶನಿವಾರ (ಸೆ.24) ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶಾಸಕರಿಗೆ, ಸಚಿವರಿಗೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಾಲೂಕಿನ ರಸ್ತೆಗಳಲ್ಲಿ ಗುಂಡಿ ಕಾಣಿಸುತ್ತಿಲ್ಲವೇ. ರಸ್ತೆಗುಂಡಿಗಳನ್ನು ಮುಚ್ಚಲು ಆಗದಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ಅಧಿಕಾರದಲ್ಲಿರಬೇಕು ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ನಮ್ಮ ತಾಲೂಕಿನ ಜನತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಜಿಎಸ್ಟಿ ಕಟ್ಟುತ್ತಿಲ್ಲವೇ. ತಾಲೂಕಿನಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಇರುವುದು ಎದ್ದು ಕಾಣುತ್ತಿದೆ. ಶಾಸಕರಿಗೆ, ಅಧಿಕಾರಿಗಳಿಗೆ ಕಾಣುತ್ತಿಲ್ಲ. ಮೈಸೂರು, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಮಾದಪರ, ಬೀರವಳ್ಳಿ, ಶೀಳನೆರೆ, ಬೂಕನಕೆರೆ ಹೀಗೆ ಪ್ರಮುಖ ರಸ್ತೆಗಳಿಂದ ಹಿಡಿದು ಗ್ರಾಮೀಣ ಭಾಗಕ್ಕೆ ಸಂಪರ್ಕಿಸುವ ರಸ್ತೆಗಳೆಲ್ಲವೂ ಗುಂಡಿ ಬಿದ್ದಿವೆ ಎಂದು ಆಕ್ರೋಶ ಹೊರಹಾಕಿದರು.
ಈ ಸುದ್ದಿ ಓದಿದ್ದೀರಾ?: ಚಿಕ್ಕಬಳ್ಳಾಪುರ | ಎಲ್ಐಸಿ ಪ್ರತಿನಿಧಿಗಳು, ಪಾಲಿಸಿದಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ
“ಗುತ್ತಿಗೆದಾರರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಕಮಿಷನ್ ಆಸೆಗೆ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ. ಗುಂಡಿಗಳಿಂದ ಎಷ್ಟೋ ಜನರ ಜೀವಕ್ಕೆ ಹಾನಿಯಾಗಿದೆ. ಅವರ ರಕ್ಷಣೆ ಮಾಡುವವರ್ಯಾರು? ಪಕ್ಕದ ತಾಲೂಕಿನ ರಸ್ತೆಗಳು ಉತ್ತಮ ಸ್ಥಿತಿಯಲ್ಲಿವೆ. ನಮ್ಮ ತಾಲೂಕಿನ ರಸ್ತೆ ಹೀಗಿರುವುದಕ್ಕೆ ಕಾರಣವೇನು?” ಎಂದು ಪ್ರಶ್ನಿಸಿದ್ದಾರೆ.
“ಮಂಡ್ಯ, ಚನ್ನರಾಯಪಟ್ಟಣ ಭಾಗಗಳಿಗೆ ಹೋಗಬೇಕಾದರೆ ನರಕಯಾತನೆ ಪಡಬೇಕು. ರಸ್ತೆಗಳು ಅಷ್ಟೊಂದು ಹದಗೆಟ್ಟಿವೆ. ಯಾವಾಗ ಏನಾಗುವುದೋ ಎಂದು ಭಯದಿಂದಲೇ ಸಾಗಬೇಕು. ಇನ್ನು ಒಂದು ವಾರದಲ್ಲಿ ರಸ್ತೆಗುಂಡಿ ಮುಚ್ಚದಿದ್ದರೆ ಬೃಹತ್ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆ ಸಿಇಇ ಅಧಿಕಾರಿ ಅವರಿಗೆ ಪ್ರತಿಭಟನಾನಿರತರು ಮನವಿ ಪತ್ರ ಸಲ್ಲಿಸಿದರು. ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಪದವೀಧರ ಘಟಕದ ಅಧ್ಯಕ್ಷ ಸಿ.ಬಿ. ಚೇತನ್ಕುಮಾರ್, ನಗರ ಘಟಕದ ಅಧ್ಯಕ್ಷ ಮದನ್ಗೌಡ, ಯುವ ಘಟಕದ ಅಧ್ಯಕ್ಷ ಆನಂದ, ತಾಲೂಕು ಸಂಚಾಲಕ ಜಹೀರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.